Chanakya Niti: ಕಾಗೆಯಿಂದ ಈ 4 ಅದ್ಭುತ ಗುಣಗಳನ್ನು ಕಲಿಯಿರಿ; ಇವು ನಿಮ್ಮ ಯಶಸ್ಸಿಗೆ ಬಹಳ ಮುಖ್ಯ –ಚಾಣಕ್ಯ ನೀತಿ
Chanakya Niti: ವಿದ್ವಾಂಸರಾದ ಚಾಣಕ್ಯರು ಮಾನವನ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಯಶಸ್ಸು ಗಳಿಸಲು ಕಾಗೆಯಿಂದಲೂ ಕಲಿಯುವುದಿದೆ ಎಂದು ಚಾಣಕ್ಯರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪ್ರಾಣಿ–ಪಕ್ಷಿಗಳ ಗುಣಲಕ್ಷಣಗಳಿಂದಲೂ ಕಲಿಯುವುದು ಸಾಕಷ್ಟಿದೆ ಎಂದು ಬರೆದಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಉಪಾಯವನ್ನು ಕಂಡುಕೊಳ್ಳಬಹುದು. ಚಾಣಕ್ಯರು ಮನುಷ್ಯನು ಒಳ್ಳೆಯದನ್ನು ಯಾರಿಂದಲಾದರೂ ಕಲಿಯಬಹುದು ಎಂದು ಹೇಳಿದ್ದಾರೆ. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಚಾಣಕ್ಯರ ಪ್ರಕಾರ ಕೆಲವು ಗುಣಗಳನ್ನು ಪಕ್ಷಿಗಳಿಂದ ಕಲಿಯುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಗಳಿಸಿ, ಸಂತೋಷದಿಂದ ಇರಬಹುದು. ಹಾಗೆ ಪಕ್ಷಿಗಳಲ್ಲಿ ಕಾಗೆಯಿಂದ ಕಲಿಯುವುದು ಬಹಳಷ್ಟಿದೆ. ಕಾಗೆ ಬಹಳ ಚುರುಕಾಗಿರುವ ಪಕ್ಷಿ ಜೊತೆಗೆ ಅದು ಸದಾ ಎಚ್ಚರದಿಂದಿರುತ್ತದೆ. ಕಾಗೆಯಿಂದ ಯಾವೆಲ್ಲ ಗುಣಗಳನ್ನು ಕಲಿಯಬಹುದು ಎಂದು ನೋಡೋಣ.
- ಹಠಮಾರಿತನ. ಕಾಗೆ ತುಂಬಾ ಹಠಮಾರಿ ಪಕ್ಷಿ. ನೀವು ಎಷ್ಟೇ ಅಡೆತಡೆಗಳನ್ನು ಒಡ್ಡಿದರೂ, ಅಂದುಕೊಂಡಿದ್ದನ್ನು ಅದು ಸಾಧಿಸಿಯೇ ತೀರುತ್ತದೆ. ಗುರಿಯನ್ನು ತಲುಪಲು ಅದು ನಿರಂತರ ಪರಿಶ್ರಮ ಹಾಕುತ್ತದೆ. ಅದೇ ರೀತಿ, ನೀವು ಜೀವನದಲ್ಲಿ ನಿರಂತರವಾಗಿ, ನಿಮ್ಮ ಗುರಿಗಳನ್ನು ಸಾಧಿಸಲು ಹಗಲಿರುಳು ಶ್ರಮಿಸಿದರೆ, ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುತ್ತೀರಿ.
- ಕಾಗೆ ಯಾರನ್ನೂ ಸುಲಭವಾಗಿ ನಂಬದ ಪಕ್ಷಿ. ಕಾಗೆಯು ಅದರ ಪೂರ್ತಿ ಜೀವನದಲ್ಲಿ ಯಾರನ್ನು ಸಂಪೂರ್ಣವಾಗಿ ನಂಬುವುದಿಲ್ಲ. ಕಾಗೆಯು ಸುರಕ್ಷಿತವಾಗಿರಬೇಕೆಂದು ಯಾವಾಗಲೂ ತನ್ನ ಸುತ್ತಲಿನ ಪರಿಸರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಲೇ ಇರುತ್ತದೆ. ಯಾರು ಎಲ್ಲಿಂದ ದಾಳಿ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕಾಗೆಯಂತೆ ಮನುಷ್ಯರು ಕೂಡ ಯಾರನ್ನೂ ಸಂಪೂರ್ಣವಾಗಿ ನಂಬಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಸಂಪೂರ್ಣವಾಗಿ ಯೋಚಿಸಿದೆ ಯಾರನ್ನಾದರೂ ನಂಬಿದರೆ, ಮೋಸ ಹೋಗುವ ಸಾಧ್ಯತೆ ಹೆಚ್ಚು. ಯಾರನ್ನಾದರೂ ನಂಬುವ ಮೊದಲು, ಅವರನ್ನು ಕೂಲಂಕಷವಾಗಿ ಪರಿಶೀಲಿಸಬೇಕು.
- ಕಾಗೆಯು ಯಾವಾಗಲೂ ಎಚ್ಚರವಾಗಿರುತ್ತದೆ. ಅದು ಎಲ್ಲೇ ಇದ್ದರೂ ಬಹಳ ಎಚ್ಚರಿಕೆಯಿಂದ ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಕಾಗೆ ಭವಿಷ್ಯದ ಘಟನೆಗಳನ್ನು ಮುನ್ಸೂಚಿಸುವ ಹಕ್ಕಿ ಎಂದು ಹೇಳಲಾಗುತ್ತದೆ. ಕಾಗೆ ಯಾವಾಗಲೂ ಎಚ್ಚರವಾಗಿರುತ್ತದೆ ಮತ್ತು ಅಪಾಯದಿಂದ ಪಾರಾಗಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಮನುಷ್ಯನು ತನ್ನ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆಯೂ ಜಾಗೃತನಾಗಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸುತ್ತಲಿನ ಪರಿಸರದ ಬಗ್ಗೆ ತಿಳಿದಿರಬೇಕು. ಆಗ ಮಾತ್ರ ಭವಿಷ್ಯದಲ್ಲಿ ಬರುವ ಕೆಟ್ಟ ಘಟನೆಗಳನ್ನು ಮೀರಿ, ನೀವು ಯಶಸ್ವಿಯಾಗಲು ಸಾಧ್ಯ.
ಇದನ್ನೂ ಓದಿ: Parenting Tips: ಮಕ್ಕಳನ್ನು ಯಾವಾಗ ಪ್ರತ್ಯೇಕವಾಗಿ ಮಲಗಿಸಬೇಕು? ರೂಢಿ ಮಾಡಿಸುವುದು ಹೇಗೆ? ಇಲ್ಲಿದೆ ವಿವರ
- ಕಾಗೆ ಬಹಳ ದೂರದೃಷ್ಟಿಯುಳ್ಳ ಪಕ್ಷಿ. ಅದು ಬರಗಾಲದ ಸಮಯಕ್ಕಾಗಿ ಮುಂಚಿತವಾಗಿ ಆಹಾರವನ್ನು ಸಂಗ್ರಹಿಸಿಡುತ್ತದೆ. ಮಳೆ ಬಂದಾಗ ಅಥವಾ ಆಹಾರ ಲಭ್ಯವಿಲ್ಲದಿದ್ದಾಗ ಅದು ಆ ಆಹಾರವನ್ನು ಬಳಸಿಕೊಂಡು ತನ್ನ ಪ್ರಾಣ ಉಳಿಸಿಕೊಳ್ಳುತ್ತದೆ. ಪ್ರತಿಯೊಬ್ಬ ಮನುಷ್ಯನೂ ಈ ವಿಧಾನವನ್ನು ಅನುಸರಿಸಬೇಕೆಂದು ಚಾಣಕ್ಯರು ಸಲಹೆ ನೀಡುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಿ ಅದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಸಮಯಕ್ಕೆ ಅಥವಾ ಅದಕ್ಕಿಂತ ಮೊದಲು ಪೂರ್ಣಗೊಳಿಸಿದರೆ, ಕೊನೆಯ ಕ್ಷಣದವರೆಗೂ ಕಷ್ಟಪಡುವುದು ತಪ್ಪುತ್ತದೆ.
- ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ ಎಂದು ಚಾಣಕ್ಯರು ಹೇಳಿದ್ದಾರೆ. ತಾಳ್ಮೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಕಾಗೆ ಕೂಡ ಕೊನೆಯ ಕ್ಷಣದವರೆಗೂ ತಾಳ್ಮೆಯಿಂದ ಕುಳಿತು ಸಮಯ ಬಂದಾಗ ಹೋರಾಟಕ್ಕೆ ಇಳಿಯುತ್ತದೆ. ಸೃಷ್ಟಿಯಲ್ಲಿ ಕಲಿಯಲು ಹಲವು ವಿಷಯಗಳಿವೆ. ನೀವು ಮಾಡಬೇಕಾಗಿರುವುದು ಇಷ್ಟೇ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವುದು. ಅದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ