Chanakya Niti: ಜೀವನದಲ್ಲಿ ಪ್ರಗತಿ ಹೊಂದಲು ಈ 3 ವಿಷಯಗಳಿಗೆ ಅತೃಪ್ತರಾಗಿರಿ; ಬದುಕು ಇದರಿಂದಲೇ ಬದಲಾಗುತ್ತದೆ - ಚಾಣಕ್ಯ ನೀತಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನದಲ್ಲಿ ಪ್ರಗತಿ ಹೊಂದಲು ಈ 3 ವಿಷಯಗಳಿಗೆ ಅತೃಪ್ತರಾಗಿರಿ; ಬದುಕು ಇದರಿಂದಲೇ ಬದಲಾಗುತ್ತದೆ - ಚಾಣಕ್ಯ ನೀತಿ

Chanakya Niti: ಜೀವನದಲ್ಲಿ ಪ್ರಗತಿ ಹೊಂದಲು ಈ 3 ವಿಷಯಗಳಿಗೆ ಅತೃಪ್ತರಾಗಿರಿ; ಬದುಕು ಇದರಿಂದಲೇ ಬದಲಾಗುತ್ತದೆ - ಚಾಣಕ್ಯ ನೀತಿ

Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ, ಮನುಷ್ಯ ಜೀವನದಲ್ಲಿ ಕೆಲವು ವಿಷಯಗಳಿಗೆ ತೃಪ್ತಿಯನ್ನು ಹಾಗೂ ಕೆಲವು ವಿಷಯಗಳಲ್ಲಿ ಅತೃಪ್ತಿಯನ್ನು ಹೊಂದಿರಬೇಕು, ಆಗ ಜೀವನದಲ್ಲಿ ಯಶಸ್ಸು, ಗೌರವ ದೊರಕುತ್ತದೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಭಾರತದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ಅವರು ಅಂದು ನೀತಿಶಾಸ್ತ್ರದಲ್ಲಿ ಹೇಳಿದ ವಿಚಾರಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ದೈನಂದಿನ ಜೀವನಕ್ಕೆ ಉಪಯುಕ್ತವಾಗಿರುವ ಅನೇಕ ಪಾಠಗಳನ್ನು ಹೇಳಿದ್ದಾರೆ. ಅವರು ನೀತಿಶಾಸ್ತ್ರದಲ್ಲಿ ತೃಪ್ತಿ, ಅತೃಪ್ತಿ ಹಾಗೂ ಅವಶ್ಯಕತೆಗಳ ಬಗ್ಗೆಯೂ ಹೇಳಿದ್ದಾರೆ. ಅಂದರೆ ಮನುಷ್ಯನು ಯಾವುದರಲ್ಲಿ ತೃಪ್ತಿಯನ್ನು ಕಾಣಬೇಕು ಹಾಗೂ ಯಾವುದರ ಬಗ್ಗೆ ಅತೃಪ್ತನಾಗಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಅತೃಪ್ತಿಯನ್ನು ಅನುಭವಿಸುವುದು ನಿಜ. ಏಕೆಂದರೆ ಜೀವನದಲ್ಲಿ ಮುನ್ನಡೆಯಬೇಕು ಅಥವಾ ಉತ್ತಮ ಫಲಿತಾಂಶಗಳನ್ನು ಸಾಧಿಸಬೇಕಂದರೆ ಅತೃಪ್ತರಾಗಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅದೇ ಸಮಯದಲ್ಲಿ ಚಾಣಕ್ಯರು ಕೆಲವು ವಿಷಯಗಳಲ್ಲಿ ತೃಪ್ತಿಯನ್ನು ಸಹ ಹೊಂದಬೇಕು ಎಂದೂ ಹೇಳುತ್ತಾರೆ. ಆದರ್ಶ ಜೀವನ ನಡೆಸಲು ಕೆಲವು ವಿಷಯಗಳಲ್ಲಿ ತೃಪ್ತಿಯನ್ನು ಹೊಂದುವುದು ಮುಖ್ಯವಾಗಿದೆ. ಆದರೆ ಚಾಣಕ್ಯರ ತತ್ವಗಳ ಪ್ರಕಾರ ಈ ವಿಷಯಗಳಲ್ಲಿ ಅತೃಪ್ತರಾಗಿಯೇ ಇರಬೇಕು. ಅಂದಾಗ ಮಾತ್ರ ಮನುಷ್ಯ ಮುನ್ನಡೆಯಲು ಸಾಧ್ಯ ಎಂದು ಹೇಳುತ್ತಾರೆ.

ಅತೃಪ್ತಿಯನ್ನು ಹೊಂದಬೇಕಾದ ವಿಷಯಗಳು

1. ಶಿಕ್ಷಣ ಹಾಗೂ ಜ್ಞಾನದ ಬಗ್ಗೆ ಮನುಷ್ಯ ಯಾವಾಗಲೂ ಅತೃಪ್ತಿಯನ್ನು ಹೊಂದಿರಬೇಕು. ಯಾವಾಗ ನೀವು ಜ್ಞಾನಗಳಿಸುವುಲ್ಲಿ ಅತೃಪ್ತರಾಗಿರುತ್ತೀರೋ, ಆಗ ನೀವು ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಪ್ರಯತ್ನಿಸುತ್ತೀರಿ. ಅದರಿಂದ ನಿಮ್ಮ ಕೌಶಲಗಳು ಬೆಳೆಯುತ್ತವೆ. ಶಿಕ್ಷಣ ಮತ್ತು ಜ್ಞಾನವು ನಿಮ್ಮ ಭವಿಷ್ಯದಲ್ಲಿ ನಿಮಗೆ ಗೌರವ ಮತ್ತು ಸಂಪತ್ತನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

2. ದೇವರ ಧ್ಯಾನ ಮಾಡುವುದರಲ್ಲಿ ಎಂದಿಗೂ ತೃಪ್ತಿಯಾಗಬಾರದು. ದೇವರ ನಾಮ ಜಪಿಸುವುದು ಹಾಗೂ ಪೂಜೆ ಮಾಡುವುದರಿಂದ ನಿಮಗೆ ಹೆಚ್ಚಿನ ಪುಣ್ಯ ಲಭಿಸುತ್ತದೆ. ಆದ್ದರಿಂದ ಆಚಾರ್ಯ ಚಾಣಕ್ಯರು ದೇವರನ್ನು ಪೂಜಿಸುವುದರಲ್ಲಿ ಅಥವಾ ಧ್ಯಾನ ಮಾಡುವುದನ್ನು ಬಿಡಬಾರದು ಎಂದು ಹೇಳಿದ್ದಾರೆ.

3. ಚಾಣಕ್ಯರು ಹೇಳುವಂತೆ, ದಾನ ಮಾಡುವುದನ್ನು ನಿಲ್ಲಿಸಬಾರದು. ಏಕೆಂದರೆ ದಾನ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಅರ್ಹತೆ ಪಡೆಯಬಹುದಾಗಿದೆ. ಇದರಿಂದ ಇತರರಿಗೆ ಆದರ್ಶವಾಗಿ ಜೀವನ ನಡೆಸಬಹುದು. ಯಾರು ಜನರಿಗೆ ಒಳ್ಳೆಯದನ್ನು ಮಾಡುತ್ತಾರೋ ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುತ್ತಾರೋ ಅವರು ಸಮಾಜದಲ್ಲಿ ಗೌರವವನ್ನು ಸಂಪಾದಿಸಬಹುದಾಗಿದೆ.

ಯಾವುದಕ್ಕೆ ತೃಪ್ತರಾಗಿರಬೇಕು?

1. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಪುರುಷರು, ತಮ್ಮ ಹೆಂಡತಿ ಸುಂದರವಾಗಿಲ್ಲದಿದ್ದರೂ ತೃಪ್ತಿ ಹೊಂದಬೇಕು ಎಂದು ಹೇಳುತ್ತಾರೆ. ಅವರು ಪರಸ್ತ್ರೀಯರ ಸೌಂದರ್ಯಕ್ಕೆ ಆಕರ್ಷಿತರಾಗಬಾರದು. ಇಲ್ಲದಿದ್ದರೆ ಅವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

2. ಒಬ್ಬ ವ್ಯಕ್ತಿಯು ತಾನು ಗಳಿಸುವು ಆದಾಯದಲ್ಲಿ ತೃಪ್ತಿಯನ್ನು ಕಾಣಬೇಕು. ಆದಾಯಕ್ಕೆ ಅನುಗುಣವಾಗಿ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಮುಖ್ಯ. ಆದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಶ್ರಮಿಸಬೇಕು. ಬೇರೆಯವರ ಸಂಪತ್ತಿಗೆ ಎಂದೂ ಆಸೆ ಪಡಬಾರದು ಹಾಗೂ ಅಸೂಯೆಯನ್ನು ಪಡಬಾರದು. ಅವೆರಡೂ ಜೀವನ ಪ್ರಗತಿಗೆ ಒಳ್ಳೆಯದಲ್ಲಿ ಎಂದು ಚಾಣಕ್ಯರು ಹೇಳುತ್ತಾರೆ.

3. ಚಾಣಕ್ಯರ ಪ್ರಕಾರ, ಮನುಷ್ಯ ತನಗೆ ಲಭ್ಯವಿರುವ ಆಹಾರದಿಂದ ತೃಪ್ತಿಯನ್ನು ಕಾಣಬೇಕು. ಎಂತಹುದೇ ಪರಿಸ್ಥಿತಿಯಲ್ಲಿಯೂ ತನಗೆ ದೊರೆತ ಆಹಾರವನ್ನು ತೃಪ್ತಿಯಿಂದಲೇ ಆನಂದಿಸಬೇಕು. ಆಹಾರವನ್ನು ಎಂದಿಗೂ ಅವಮಾನ ಮಾಡಬಾರದು. ಊಟದ ತಟ್ಟೆಯಲ್ಲಿ ಆಹಾರವನ್ನು ಎಂದಿಗೂ ಬಿಡಬಾರದು. ಹಸಿವಿರುವಷ್ಟು ಮಾತ್ರ ಆಹಾರ ಸೇವಿಸಬೇಕು. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಬಾರದು. ದೇವರು ನಿಮಗೆ ಹೊಟ್ಟೆ ತುಂಬುವಷ್ಟು ಆಹಾರವನ್ನು ನೀಡಿದ್ದಾನೆಂದರೆ ಅದರ ಅರ್ಥ ನೀವು ಅದೃಷ್ಟವಂತರು ಎಂದು ಪರಿಗಣಿಸಬೇಕು ಎಂದು ಆಚಾರ್ಯರು ಆಹಾರದಲ್ಲಿ ತೃಪ್ತಿ ಕಾಣುವ ಬಗೆಯನ್ನು ಹೇಳಿದ್ದಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

HT Kannada Desk

Whats_app_banner