Chanakya Niti: ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದರೆ ಚಾಣಕ್ಯರು ಹೇಳಿರುವ ಈ 5 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
Chanakya Niti: ಮನುಷ್ಯ ಸಮಾಜದಲ್ಲಿ ಗೌರವಯುತವಾಗಿ ಬದುಕುವುದು ಬಹಳ ಮುಖ್ಯ. ಅದು ಸಂಪತ್ತಿಗಿಂತಲೂ ಅಧಿಕವಾಗಿದೆ. ಆಚಾರ್ಯ ಚಾಣಕ್ಯರು ಈ ಸಮಾಜದಲ್ಲಿ ಗೌರವಯುತವಾಗಿ ಬದುಕಲು 5 ಸಲಹೆಗಳನ್ನು ನೀಡಿದ್ದಾರೆ.

ವ್ಯಕ್ತಿಯ ಗುಣಸ್ವಭಾವ ಮತ್ತು ನಡವಳಿಕೆ ಅವನನ್ನು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಒಳ್ಳೆಯ ಗುಣಗಳಿರುವ ವ್ಯಕ್ತಿ ಸಮಾದಲ್ಲಿ ಉತ್ತಮ ಸ್ಥಾನ ಗಳಿಸುತ್ತಾನೆ. ಅದು ಅವನಿಗೆ ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ. ಮನುಷ್ಯನಿಗೆ ಇರಬೇಕಾದ ಉತ್ತಮ ಗುಣಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ್ರ ಪ್ರಮುಖವಾಗಿದೆ. ಸರಿಯಾದ ಮಾರ್ಗದಲ್ಲಿ ನಡೆದರೆ, ಯಾವುದೇ ಸಂದರ್ಭದಲ್ಲೂ ಭಯಪಡುವ ಅವಶ್ಯಕತೆಯಿರುವುದಿಲ್ಲ. ಒಳ್ಳೆಯ ನಡವಳಿಕೆಯನ್ನು ರೂಢಿಸಿಕೊಂಡ ವ್ಯಕ್ತಿ ಎಲ್ಲರಿಂದಲೂ ಗೌರವವನ್ನು ಪಡೆಯುತ್ತಾನೆ. ಚಾಣಕ್ಯರು ಅವರ ನೀತಿಶಾಸ್ತ್ರದಲ್ಲಿ ಮನುಷ್ಯನು ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ. ಚಾಣಕ್ಯರು ಹೇಳುವಂತೆ ಮನುಷ್ಯ ಈ ಸಮಾಜದಲ್ಲಿ ಗೌರವದಿಂದ ಬಾಳಬೇಕು. ಕೆಲವು ಗುಣಗಳನ್ನು ಹೊಂದಿರುವವರು ಜೀವನದಲ್ಲಿ ಎಲ್ಲಕಡೆ ಗೌರವ ಹಾಗೂ ಉತ್ತಮ ಸ್ಥಾನ ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಪಡೆಯಲು ಚಾಣಕ್ಯರು ಹೇಳಿರುವ ನೀತಿಗಳೇನು ಎಂದು ತಿಳಿದುಕೊಳ್ಳೋಣ.
ಸಮಾಜದಲ್ಲಿ ಗೌರವದಿಂದ ಬಾಳಲು ಏನು ಮಾಡಬೇಕು?
ಚಾಣಕ್ಯರ ಪ್ರಕಾರ, ವ್ಯಕ್ತಿಯು ಮಾಡುವ ಕಾರ್ಯಗಳು ಅವನನ್ನು ಅಮೂಲ್ಯ ವ್ಯಕ್ತಿಯನ್ನಾಗಿಸುತ್ತದೆ. ಆದ್ದರಿಂದ ನಿಮ್ಮ ಕೆಲಸದಲ್ಲಿ ಎಂದಿಗೂ ಸೋಮಾರಿತನ ಬೇಡ. ಅದೇ ರೀತಿ ಕೆಲಸವನ್ನು ಎಂದಿಗೂ ಮುಂದೂಡಬೇಡಿ. ಜವಾಬ್ದಾರಿಯನ್ನು ಶ್ರದ್ಧೆಯಿಂದ ಪೂರೈಸುವ ವ್ಯಕ್ತಿ ಎಲ್ಲಡೆ ಗೌರವಕ್ಕೆ ಪಾತ್ರನಾಗುತ್ತಾನೆ. ಜೊತೆಗೆ ಅವನು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೆ. ಕಠಿಣ ಶ್ರಮ ಮತ್ತು ಕೆಲಸದ ಮೇಲಿನ ಶ್ರದ್ಧೆ ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಸಹ ನಾಯಕನನ್ನಾಗಿ ಮಾಡುತ್ತದೆ.
ನಿಮಗೆ ಗೌರವಬೇಕು ಎಂದಾದರೆ ಮೊದಲು ಇತರರನ್ನು ಗೌರವಿಸಬೇಕು. ಯಾರನ್ನೂ ಕೀಳಾಗಿ ಕಾಣಬಾರದು. ಬೇರೆಯವರನ್ನು ಅವಮಾನಿಸುವ ವ್ಯಕ್ತಿ ಗೌರವಕ್ಕೆ ಅರ್ಹನಲ್ಲ. ಆದ್ದರಿಂದ ಇತರರನ್ನು ಗೌರವಿಸುವ ಬಗ್ಗೆ ಜಾಗರೂಕರಾಗಿರಿ. ಆಗ ಮಾತ್ರ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.
ಯಶಸ್ಸು ಹಾಗೂ ಗೌರವ ಇದು ವ್ಯಕ್ತಿಯ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಧನಿಕನು ಅಪಾರ ಸಂಪತ್ತನ್ನು ಹೊಂದಿದ್ದು, ಅವನು ಕಟುವಾಗಿ ಮಾತನಾಡುತ್ತಿದ್ದರೆ ಅವನನ್ನು ಯಾರೂ ಇಷ್ಟಪಡುವುದಿಲ್ಲ. ಅದೇ ರೀತಿ ಬೆನ್ನಿಗೆ ಚೂರಿ ಹಾಕುವ ಕೆಟ್ಟ ಮನಸ್ಸಿನ ವ್ಯಕ್ತಿಯನ್ನು ಸಹ ಯಾರೂ ಗೌರವಿಸುವುದಿಲ್ಲ. ನಿಮ್ಮ ಬಳಿ ಹಣ ಇರಲಿ ಅಥವಾ ಇರದಿರಲಿ, ನೀವು ಇತರರಿಗೆ ಗೌರವ, ಕರುಣೆ ತೋರಬೇಕು. ಆಗ ನಿಮ್ಮನ್ನು ತುಂಬು ಹೃದಯಿಂದ ಎಲ್ಲರೂ ಗೌರವಿಸುತ್ತಾರೆ.
ಪ್ರಾಮಾಣಿಕತೆ ವ್ಯಕ್ತಿಯಲ್ಲಿರಬೇಕಾದ ಉತ್ತಮ ಗುಣಗಳಲ್ಲಿ ಒಂದಾಗಿದೆ. ಇದು ಉತ್ತಮ ಜೀವನಕ್ಕೆ ದಾರಿಯಾಗಿದೆ. ಆದ್ದರಿಂದ ಪ್ರಾಮಾಣಿಕವಾಗಿ ಇರುವುದನ್ನು ಮತ್ತು ಅದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಪ್ರಾಮಾಣಿಕವಾಗಿರದಿದ್ದರೆ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಸಮಾಜವು ಪ್ರಾಮಾಣಿಕ ವ್ಯಕ್ತಿಯನ್ನು ಗೌರವದಿಂದ ಕಾಣುತ್ತದೆ.
ಚಾಣಕ್ಯನ ಪ್ರಕಾರ, ತಾಳ್ಮೆಯೇ ಮನುಷ್ಯನ ಶಕ್ತಿ. ತಾಳ್ಮೆಯು ಅದೆಷ್ಟೋ ಕಠಿಣ ಸಂದರ್ಭದಲ್ಲಿ ವರವಾಗಿ ಪರಿಣಮಿಸುತ್ತದೆ. ಏಕೆಂದರೆ ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಸುಲಭವಾಗಿ ಯೋಚಿಸಬಹುದು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಅವನು ಜೀವನದಲ್ಲಿ ಜಯಶಾಲಿಯಾಗಬಹುದು. ತಾಳ್ಮೆಯಿಂದ ವ್ಯವಹರಿಸಿದರೆ, ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ದೊರಕುತ್ತದೆ. ಇದರಿಂದ ಮುಂದಾಗುವ ಅನಾಹುತಗಳನ್ನು ಸಹ ತಪ್ಪಿಸಬಹುದು.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ