Chanakya Niti: ಇಂಥ ಗುಣ ಇರುವವರನ್ನು ಸ್ವಂತ ಕುಟುಂಬದವರೂ ದೂರವಿಡುತ್ತಾರೆ; ಆಚಾರ್ಯ ಚಾಣಕ್ಯರ ನೀತಿಯಿಂದ ಈ ವಿಷಯ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಇಂಥ ಗುಣ ಇರುವವರನ್ನು ಸ್ವಂತ ಕುಟುಂಬದವರೂ ದೂರವಿಡುತ್ತಾರೆ; ಆಚಾರ್ಯ ಚಾಣಕ್ಯರ ನೀತಿಯಿಂದ ಈ ವಿಷಯ ತಿಳಿದುಕೊಳ್ಳಿ

Chanakya Niti: ಇಂಥ ಗುಣ ಇರುವವರನ್ನು ಸ್ವಂತ ಕುಟುಂಬದವರೂ ದೂರವಿಡುತ್ತಾರೆ; ಆಚಾರ್ಯ ಚಾಣಕ್ಯರ ನೀತಿಯಿಂದ ಈ ವಿಷಯ ತಿಳಿದುಕೊಳ್ಳಿ

ಉತ್ತಮ ನಡತೆ ಮತ್ತು ಹವ್ಯಾಸಗಳಿರುವ ಜನರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಅದೇ ಈ ರೀತಿಯ ಗುಣಗಳನ್ನು ಬೆಳೆಸಿಕೊಂಡಿದ್ದರೆ ಮನೆಯವರೂ ಸಹ ಅವರನ್ನು ದೂರ ಮಾಡುತ್ತಾರೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಮನುಷ್ಯರು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಬಾಳಬೇಕು ಎನ್ನುವ ಬಗ್ಗೆಯೂ ಅವರ ಉಪದೇಶಗಳಲ್ಲಿ ವಿವರವಿದೆ. ಮನುಷ್ಯನಿಗೆ ನಡತೆ ಬಹಳ ಮುಖ್ಯ. ನಡೆ–ನುಡಿಗಳಿಂದಲೇ ಎಲ್ಲರನ್ನು ಮೆಚ್ಚಿಸಬಹುದು. ಉತ್ತಮ ನಡೆ–ನುಡಿಯಿರುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಅಂಥವರು ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ಆದರೆ ಆಚಾರ್ಯ ಚಾಣಕ್ಯರು ಹೇಳುವಂತೆ ಕೆಲವು ಜನರನ್ನು ಹೊರಗಿನ ಜನರಷ್ಟೇ ಅಲ್ಲ ಸ್ವಂತ ಕುಟುಂಬದವರೂ ಸಹ ತ್ಯಜಿಸುತ್ತಾರೆ. ಅವರನ್ನು ಎಂದಿಗೂ ನಂಬುವುದಿಲ್ಲ. ಏಕೆಂದರೆ ಅವರು ನಂಬಿಕೆಗೆ ಅರ್ಹರಾಗಿರುವುದಿಲ್ಲ. ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ ಅಂತಹ ಜನರು ಯಾರು? ಅವರ ಯಾವ ದುರ್ಗುಣ ಅವರನ್ನು ಅವರ ಸ್ವಂತ ಕುಟುಂಬದಿಂದ ದೂರಮಾಡುತ್ತದೆ ಎಂಬುದನ್ನು ಹೀಗೆ ವಿವರಿಸಿದ್ದಾರೆ.

ಪಿಶುನಃ ಶ್ರೋತಾ ಪುತ್ರದಾರೈರಪಿ ತ್ಯಜ್ಯತೇ||

ಈ ಶ್ಲೋಕದ ಅರ್ಥ ಹೀಗಿದೆ, ತನ್ನ ಸ್ವಂತ ಕುಟುಂಬಕ್ಕೆ ವಿಶ್ವಾಸಘಾತ ಬಗೆದ ವ್ಯಕ್ತಿಯನ್ನು ಅವನ ಮಕ್ಕಳು, ಪತ್ನಿ ಹಾಗೂ ಪರಿವಾರದ ಉಳಿದ ಸದಸ್ಯರು ದೂರವಿರಿಸುತ್ತಾರೆ. ಬೇರೆಯವರ ಮಾತುಗಳನ್ನು ಸತ್ಯವೆಂದು ತಿಳಿದು ಕುಟುಂಬಸ್ಥರೊಂದಿಗೆ ಜಗಳ ಮಾಡುತ್ತಾರೋ ಅವರನ್ನು ಸಹ ಕುಟುಂಬದವರು ದೂರ ಇಡುತ್ತಾರೆ.

ಮನೆಯಲ್ಲಿ ಅಶಾಂತಿ ಸೃಷ್ಟಿಸುವವರನ್ನು ದೂರವಿಡಬೇಕು

ಕುಟುಂಬದಲ್ಲಿ ಜಗಳಗಳಿಗೆ ಕಾರಣನಾಗುವ ಹಾಗೂ ಅಶಾಂತಿಯ ವಾತಾವರಣವನ್ನು ಸೃಷ್ಟಿಸುವ ವ್ಯಕ್ತಿಯನ್ನು ತ್ಯಜಿಸುವುದು ಉತ್ತಮ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಅವರು ಸದಾ ಕುಟುಂಬ ಸದಸ್ಯರ ನಡುವೆ ಜಗಳವಾಗುವಂತೆ ಮಾಡುತ್ತಾರೆ, ಮನೆಯ ಶಾಂತಿಗೆ ಭಂಗ ತರುತ್ತಾರೆ. ಆದ್ದರಿಂದ ಅಂತಹ ವ್ಯಕ್ತಿಗಳನ್ನು ದೂರವಿಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಇಂತಹ ವ್ಯಕ್ತಿಗಳು ಕೂಡಾ ಅಪಾಯಕಾರಿ

ಯಾವಾಗಲೂ ಬೇರೆಯರ ಬಗ್ಗೆ ಚಾಡಿ ಹೇಳುವ ಅಭ್ಯಾಸವಿರುವ ವ್ಯಕ್ತಿಗಳು ಕೂಡಾ ಬಹಳ ಅಪಾಯಕಾರಿ. ಇಂತಹ ಗುಣಗಳು ದೇಶದ್ರೋಹದಷ್ಟೇ ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಇತಿಹಾಸದಲ್ಲಿ ಅಂತಹ ಅನೇಕ ಉದಾಹರಣೆಗಳಿವೆ. ಬೇರೆಯವರ ಬಗ್ಗೆ ಚಾಡಿ ಹೇಳುವ ಸ್ವಭಾವದ ಜನರು ಕುಟುಂಬವನ್ನೇ ಸರ್ವನಾಶ ಮಾಡಬಹುದು. ಏಕೆಂದರೆ ಅವರು ವಿಶ್ವಾಸಘಾತುಕರಾಗಿರುತ್ತಾರೆ. ಅವರು ನಂಬಿಕೆ ಅರ್ಹರಾಗಿರುವುದಿಲ್ಲ. ಆದ್ದರಿಂದ ಈ ರೀತಿಯ ಸ್ವಭಾವ ಹೊಂದಿದವರನ್ನು ಕುಟುಂಬದ ಸದಸ್ಯರೇ ದೂರವಿಡುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾಗಿ ಮನೆಯ ನೆಮ್ಮದಿ ಕೆಡಿಸುವ ಜನರಿಂದ ನೀವೂ ಸಹ ದೂರವಿರಿ.

Whats_app_banner