Chanakya Niti: ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ನಿಮ್ಮನ್ನು ದೂಷಿಸಬಾರದೆಂದರೆ ಈ ತಪ್ಪುಗಳನ್ನು ಮಾಡಬೇಡಿ: ಪೋಷಕರಿಗೆ ಚಾಣಕ್ಯ ಸಲಹೆ
Chanakya Niti: ಪೋಷಕರು ಮಾಡುವ ಕೆಲವು ತಪ್ಪುಗಳಿಂದಾಗಿ ಮಕ್ಕಳು ದೊಡ್ಡವರಾದ ಮೇಲೆ ಸಾಕಿ ಬೆಳೆಸಿದ ಪೋಷಕರನ್ನೇ ದೂಷಿಸಲು ಮುಂದಾಗುತ್ತಾರೆ. ಅದಕ್ಕೆ ಕಾರಣವನ್ನು ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಈ ರೀತಿಯಾಗಿ ನೀಡಿದ್ದಾರೆ. (ಬರಹ: ಅರ್ಚನಾ ವಿ. ಭಟ್)

ಮಕ್ಕಳ ಜೀವನ ರೂಪಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಬೆಳವಣಿಗೆ ಬಹಳ ಸಂತೋಷದ ವಿಷಯವಾಗಿರುತ್ತದೆ. ಮಕ್ಕಳು ಜೀವನದಲ್ಲಿ ಮಾಡಿದ ಸಾಧನೆಗಳನ್ನು ಪೋಷಕರು ತಮ್ಮದೇ ಎಂದು ಸಂಭ್ರಮಿಸುತ್ತಾರೆ. ಮಕ್ಕಳು ಮಹಾನ್ ವ್ಯಕ್ತಿಗಳಾಗಿ ಬೆಳೆಯುವುದನ್ನು ನೋಡುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಇದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಚಾಣಕ್ಯರ ಪ್ರಕಾರ, ಭವಿಷ್ಯದಲ್ಲಿ ಪೋಷಕರು ತಮ್ಮ ಸ್ವಂತ ಮಕ್ಕಳ ಶತ್ರುಗಳಾಗಬಹುದು. ಅದಕ್ಕೆ ಪೋಷಕರು ಮಾಡುವ ಎರಡು ಗಂಭೀರ ತಪ್ಪುಗಳು ಇಂತಹ ಸನ್ನಿವೇಶಗಳಿಗೆ ಕಾರಣವಾಗಬಹುದು. ಪೋಷಕರು ಮಾಡುವ ತಪ್ಪುಗಳಿಂದಾಗಿ ಮಕ್ಕಳು ದೊಡ್ಡವರಾದಾಗ ತಮ್ಮನ್ನು ಬೆಳೆಸಿದ ಪೋಷಕರನ್ನೇ ದೂಷಿಸುತ್ತಾರೆ. ಇದರಿಂದ ಪೋಷಕರು ಬಹಳ ನೊಂದುಕೊಳ್ಳುವಂತಾಗುತ್ತದೆ. ಹೀಗಾಗುವುದನ್ನು ತಪ್ಪಿಸಲು ಪೋಷಕರು ಮಕ್ಕಳನ್ನು ಬೆಳೆಸುವಾಗ ಕೆಲವು ವಿಷಯಗಳಲ್ಲಿ ಜಾಗ್ರತೆವಹಿಸಬೇಕು ಎಂದು ಹೇಳುತ್ತಾರೆ. ಹಾಗಾದರೆ ಚಾಣಕ್ಯರು ಪೋಷಕರಿಗೆ ನೀಡಿರುವ ಸಲಹೆಗಳೇನು ಎಂದು ತಿಳಿಯೋಣ.
ಮಕ್ಕಳ ಶಿಕ್ಷಣವನ್ನು ನಿರ್ಲಕ್ಷಿಸುವುದು
ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ತಿಳಿಯದೇ ನಿರ್ಲಕ್ಷಿಸುತ್ತಾರೆ. ಅಂತಹವರು ಮಕ್ಕಳ ಶತ್ರುಗಳಾಗಿರುತ್ತಾರೆ ಎಂದು ಚಾಣಕ್ಯರು ಒತ್ತಿ ಹೇಳುತ್ತಾರೆ. ಮಕ್ಕಳು ಜನಿಸಿದ ನಂತರ ಅವರಿಗೆ ಶಿಕ್ಷಣ ನೀಡಿ, ಸರಿಯಾದ ಮಾರ್ಗದರ್ಶನ ನೀಡಿ, ಅವರು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಪೋಷಕರ ಜವಾಬ್ದಾರಿಯಾಗಿದೆ. ಹಾಗೆ ಪೋಷಕರು ಮಾಡಲು ಸಾಧ್ಯವಾದಾಗ ಮಾತ್ರ ಆ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಅವರ ಭವಿಷ್ಯ ಉಜ್ವಲವಾಗುತ್ತದೆ. ಆದರೆ, ಶಿಕ್ಷಣ ಪಡೆಯದ ಮಕ್ಕಳು ಜೀವನದಲ್ಲಿ ಎಂದಿಗೂ ಉನ್ನತ ಸ್ಥಾನವನ್ನು ಗಳಿಸುವುದಿಲ್ಲ. ಮಕ್ಕಳು ದೊಡ್ಡವರಾದರೂ ಸಹ, ಅವರು ಅನೇಕ ರೀತಿಯ ಅವಮಾನಗಳನ್ನು ಎದುರಿಸಬೇಕಾಗಬಹುದು. ಅವರಿಗೆ ಸಮಾಜದಲ್ಲಿ ಉತ್ತಮ ಗೌರವ ಮತ್ತು ಮನ್ನಣೆ ಸಿಗುವುದಿಲ್ಲ. ಆದ್ದರಿಂದ, ಮಕ್ಕಳು ತಮ್ಮ ಪರಿಸ್ಥಿತಿಗೆ ಕಾರಣರಾದ ಪೋಷಕರನ್ನು ತಮ್ಮ ಶತ್ರುಗಳೆಂದು ಪರಿಗಣಿಸುತ್ತಾರೆ. ಇಂದಿನ ಜಗತ್ತಿನಲ್ಲಿ ಶಿಕ್ಷಣವು ಯಶಸ್ಸಿನ ಮೂಲಾಧಾರವಾಗಿದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣವು ಅನುವು ಮಾಡಿಕೊಡುತ್ತದೆ. ಆದ್ದರಿಂದ, ಶಿಕ್ಷಣದ ಮಹತ್ವವನ್ನು ಗುರುತಿಸಿ, ಪೋಷಕರು ತಮ್ಮ ಮಕ್ಕಳ ಕಲಿಕಾ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.
ಅತಿಯಾದ ಪ್ರೀತಿ
ತಮ್ಮ ಮಕ್ಕಳನ್ನು ಮುತ್ತಿಡುವುದು ಮತ್ತು ಪ್ರೀತಿಸುವುದು ಪ್ರತಿಯೊಬ್ಬ ಪೋಷಕರು ಮಾಡುವ ಕೆಲಸ. ಆದರೆ ಚಾಣಕ್ಯರು ಅದು ಮಿತಿಯೊಳಗೆ ಇರಬೇಕು ಎಂದು ಹೇಳುತ್ತಾರೆ. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಪೋಷಕರು, ಮಕ್ಕಳು ಏನೇ ತಪ್ಪು ಮಾಡಿದರೂ ಅವರನ್ನು ಕ್ಷಮಿಸುತ್ತಾರೆ. ಆದರೆ, ಪೋಷಕರೇ ಮಕ್ಕಳ ಮೊದಲ ಶಿಕ್ಷಕರು. ತಮ್ಮ ಮಕ್ಕಳಿಗೆ ಸರಿ–ತಪ್ಪು ಮಾರ್ಗದರ್ಶನ ಮಾಡುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಮಕ್ಕಳು ಮಾಡಿದ ತಪ್ಪುಗಳನ್ನು ಹೇಳದೇ ಅಥವಾ ಸರಿಪಡಿಸದೇ ಉಳಿದರೆ, ನಂತರ ಅವರು ದೊಡ್ಡವರಾದಾಗ ಅಧರ್ಮದ ಹಾದಿಯನ್ನು ಆರಿಸಿಕೊಳ್ಳುತ್ತಾರೆ. ಅವರು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ, ಸಮಾಜದಲ್ಲಿ ಕೆಟ್ಟ ಹೆಸರು ಗಳಿಸುತ್ತಾರೆ. ಇದು ಅವರ ನಂತರದ ಜೀವನದಲ್ಲಿ ಅನೇಕ ಪರಿಣಾಮಗಳಿಗೆ ಕಾರಣವಾಗಬಹುದು. ಇದೇ ಮುಂದೆ ಮಕ್ಕಳ ಮನಸ್ಸಿನಲ್ಲಿ ತಮ್ಮ ಪೋಷಕರು ತಮ್ಮನ್ನು ಸರಿಯಾಗಿ ಬೆಳೆಸಲಿಲ್ಲ ಎಂದು ಅನಿಸುವಂತೆ ಮಾಡುತ್ತದೆ. ನಂತರ ಮಕ್ಕಳು ಪೋಷಕರನ್ನು ತಮ್ಮ ಶತ್ರುಗಳಂತೆ ನೋಡಲು ಪ್ರಾರಂಭಿಸುತ್ತಾರೆ. ಅತಿಯಾದ ಅಮೃತವೂ ವಿಷವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಆದ್ದರಿಂದ, ಮಕ್ಕಳನ್ನು ಸರಿಯಾಗಿ ಬೆಳೆಸಬೇಕು. ಪೋಷಕರು ಮಕ್ಕಳನ್ನು ಬೆಳೆಸುವ ಪ್ರತಿಹಂತದಲ್ಲೂ ಅವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಅರಿವು ಮೂಡಿಸಿಕೊಡಬೇಕು. ಜೀವನ ನಡೆಸಲು ಬೇಕಾಗುವ ಪ್ರತಿ ವಿಷಯಗಳ ಜ್ಞಾನವನ್ನು ಪೋಷಕರು ತಮ್ಮ ಮಕ್ಕಳಿಗೆ ನೀಡಬೇಕು ಎಂದು ಚಾಣಕ್ಯರು ಸಲಹೆ ನೀಡಿದ್ದಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ