Chanakya Niti: ನೂರ್ಕಾಲ ಆರೋಗ್ಯವಾಗಿ ಬದುಕಲು ಚಾಣಕ್ಯರು ಹೇಳಿದ ಈ ನೀತಿ ಪಾಠಗಳನ್ನು ಅನುಸರಿಸಿ
Chanakya Niti in Kannada: ಆರೋಗ್ಯವೊಂದಿದ್ದರೆ ಅಂದುಕೊಂಡ ಕೆಲಸಗಳನ್ನು ಸಾಧಿಸಬಹುದು. ಉತ್ತಮ ಆರೋಗ್ಯ ಪಡೆಯಲು ಸಾತ್ವಿಕ ಆಹಾರ ಹಾಗೂ ಜೀವನಶೈಲಿ ಉತ್ತಮವಾಗಿರಬೇಕು. ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕೂಡಾ ಮುಖ್ಯ. ಈ ಕುರಿತು ಆಚಾರ್ಯ ಚಾಣಕ್ಯರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರ ಜೀವನ ಸೂತ್ರಗಳು ಇಂದಿಗೂ ಪ್ರಸ್ತುತ. ವಿವಿಧ ಕ್ಷೇತ್ರಗಳಲ್ಲಿ ಪರಿಣತನಾಗಿದ್ದ ಚಾಣಕ್ಯರು, ಮಾನವ ಜೀವನಕ್ಕೆ ಹಲವಾರು ನೀತಿ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಮನುಷ್ಯ ಜೀವಿಯು ಎಷ್ಟು ವರ್ಷಗಳ ಕಾಲ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕು ನಡೆಸಿದ ಎಂಬುದು ತುಂಬಾ ಮುಖ್ಯ. ಅದರಂತೆಯೇ, ಅರ್ಥಪೂರ್ಣ ಬದುಕು ನಡೆಸಲು ಚಾಣಕ್ಯ ನೀತಿ ಸಹಕಾರಿ. ನೂರಾರು ವರ್ಷ ಆರೋಗ್ಯವಾಗಿ ಬದುಕಲು ಆಚಾರ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈ ನೀತಿ ಪಾಠ ಎಲ್ಲರಿಗೂ ನೆರವಾಗಲಿದೆ.
ಬದುಕು ಸುಸೂತ್ರವಾಗಿ ಸಾಗಲು ಆರೋಗ್ಯ ತುಂಬಾ ಮುಖ್ಯ. ಆರೋಗ್ಯವಾಗಿದ್ದರೆ, ಅಂದುಕೊಂಡ ಎಲ್ಲಾ ಕೆಲಸಗಳನ್ನು ಸಾಧಿಸಬಹುದು. ಉತ್ತಮ ಆರೋಗ್ಯ ಪಡೆಯಲು ನಿಯಮಿತ ಆಹಾರ ಹಾಗೂ ಜೀವನಶೈಲಿಯ ಬಗ್ಗೆ ವಿಶೇಷ ಗಮನ ಹರಿಸಬೇಕು. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯ ಕೂಡಾ ಅಷ್ಟೇ ಮುಖ್ಯ. ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಬೇಕು. ಆರೋಗ್ಯಕರ ಆಹಾರದ ನಿಯಮಿತ ಸೇವನೆ ಖಚಿತಪಡಿಸಿಕೊಳ್ಳಬೇಕು.
ಚಾಣಕ್ಯರ ಪ್ರಕಾರ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಕೆಲವು ವಿಷಯಗಳ ಕುರಿತು ಕಾಳಜಿ ವಹಿಸಬೇಕು. ನೀರು ಜೀವಜಲ. ಕೆಲವೊಬ್ಬರು ಆಗಾಗ ನೀರು ಕುಡಿಯುವುದಿಲ್ಲ. ಇದು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತಿಂದ ಆಹಾರ ಜೀರ್ಣವಾಗದಿದ್ದಾಗ ನೀರು ಔಷಧದಂತೆ ವರ್ತಿಸುತ್ತದೆ. ಊಟದ ನಡುವೆ ನೀರು ಕುಡಿಯದೆ, ಊಟದ ನಂತರ ಅಂತರವಿಟ್ಟು ನೀರು ಕುಡಿಯುವುದು ಉತ್ತಮ. ತಿಂದ ತಕ್ಷಣ ನೀರು ಕುಡಿಯದಂತೆ ಚಾಣಕ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Chanakya Neeti: ವ್ಯಕ್ತಿಯ ಈ ವರ್ತನೆಗಳಿಂದಲೇ ಬಡತನ ಕಾಡುತ್ತದೆ, ಗೌರವ ಕಡಿಮೆಯಾಗುತ್ತದೆ; ಚಾಣಕ್ಯ ನೀತಿ
ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಪ್ರತಿನಿತ್ಯ ಹಾಲು ಕುಡಿಯಬೇಕು ಎಂದು ಚಾಣಕ್ಯರು ಹೇಳುತ್ತಾರೆ. ವೈದ್ಯರು ಕೂಡಾ ನಿತ್ಯ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ. ದೇಹದ ಆರೋಗ್ಯಕ್ಕೆ ಬೇಕಾದ ಉತ್ತಮ ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳನ್ನು ಹಾಲು ಒಳಗೊಂಡಿದೆ. ಹೀಗಾಗಿ ಆರೋಗ್ಯವೇ ಭಾಗ್ಯ ಎನ್ನಲು ನಿತ್ಯ ಹಾಲು ಕುಡಿಯಿರಿ.
ಧಾನ್ಯಗಳನ್ನು ಸೇವಿಸಿ
ಆರೋಗ್ಯಕರ ಜೀವನಕ್ಕೆ ಧಾನ್ಯಗಳನ್ನು ತಿನ್ನುವುದು ಅಗತ್ಯ ಎಂದು ಚಾಣಕ್ಯ ಸಲಹೆ ನೀಡುತ್ತಾರೆ. ಧಾನ್ಯಗಳು ಹಾಗೂ ಕಾಳುಗಳನ್ನು ತಿನ್ನುವುದರಿಂದ ಮನುಷ್ಯನು ಆರೋಗ್ಯದಿಂದ ಬಲಶಾಲಿಯಾಗಬಹುದು. ಅಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಕ್ಕಿ, ಗೋಧಿ, ರಾಗಿ, ಜೋಳದಂತಹ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಪ್ರಾಚೀನ ಕಾಲದಲ್ಲಿ, ಜನರು ಆರೋಗ್ಯಕರ ಜೀವನಕ್ಕಾಗಿ ಹೆಚ್ಚಾಗಿ ಬೆಣ್ಣೆ ಮತ್ತು ತುಪ್ಪವನ್ನು ಬಳಸುತ್ತಿದ್ದರು. ಇಂದಿಗೂ ವೈದ್ಯರು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ತುಪ್ಪ ಸೇವಿಸುವಂತೆ ಸಲಹೆ ನೀಡುತ್ತಾರೆ. ಚಾಣಕ್ಯ ಅವರ ಪ್ರಕಾರ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಪ್ಪವನ್ನು ಪ್ರತಿದಿನ ಸೇವಿಸಬೇಕಂತೆ. ಆದರೆ ಯಾವಾಗಲೂ ಶುದ್ಧ ತುಪ್ಪವನ್ನೇ ಸೇವಿಸಿ.
ಸಾತ್ವಿಕ ಆಹಾರವೇ ಆರೋಗ್ಯದ ಗುಟ್ಟು
ನಮ್ಮ ದೇಹದ ಆರೋಗ್ಯದ ಪ್ರಮುಖ ಗುಟ್ಟೇ ನಾವು ಸೇವಿಸುವ ಆಹಾರ. ಅದಕ್ಕೆ ಅನುಗುಣವಾಗಿ ನಮ್ಮ ನಡವಳಿಕೆ ಕೂಡಾ ಬದಲಾಗುತ್ತದೆ ಎಂದು ಆಚಾರ್ಯರು ಹೇಳುತ್ತಾರೆ. ಸಾತ್ವಿಕ ಆಹಾರ ಸೇವಿಸುವುದರಿಂದ ಆಲೋಚನೆಗಳು ಕೂಡಾ ಪಾರದರ್ಶಕವಾಗಿರುತ್ತದೆ. ಮನುಷ್ಯನಿಗೆ ದುರಾಸೆ ಒಂದು ಮಾರಣಾಂತಿಕ ಕಾಯಿಲೆ ಇದ್ದಂತೆ ಎಂದು ಚಾಣಕ್ಯ ಹೇಳಿದ್ದಾರೆ. ದುರಾಸೆಯು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ದುರಾಸೆ ಪಡುವುದನ್ನು ಬಿಡಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಹೀಗಾಗಿ ನೂರ್ಕಾಲ ಆರೋಗ್ಯವಾಗಿ ಬದುಕಬಹುದು.
ಇನ್ನಷ್ಟು ಚಾಣಕ್ಯ ನೀತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Chanakya Niti: ಈ 5 ಕಾರಣಗಳಿಂದಾಗಿ ತನ್ನ ಹೆಂಡತಿ ಬಿಟ್ಟು ಮತ್ತೊಬ್ಬರ ಕಡೆಗೆ ಗಂಡು ಕಣ್ಣು ಹಾಕ್ತಾನೆ ಅಂತಾರೆ ಚಾಣಕ್ಯ

ವಿಭಾಗ