Chanakya Niti: ಈ 5 ಕಾರಣಗಳಿಂದಾಗಿ ತನ್ನ ಹೆಂಡತಿ ಬಿಟ್ಟು ಮತ್ತೊಬ್ಬರ ಕಡೆಗೆ ಗಂಡು ಕಣ್ಣು ಹಾಕ್ತಾನೆ ಅಂತಾರೆ ಚಾಣಕ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಈ 5 ಕಾರಣಗಳಿಂದಾಗಿ ತನ್ನ ಹೆಂಡತಿ ಬಿಟ್ಟು ಮತ್ತೊಬ್ಬರ ಕಡೆಗೆ ಗಂಡು ಕಣ್ಣು ಹಾಕ್ತಾನೆ ಅಂತಾರೆ ಚಾಣಕ್ಯ

Chanakya Niti: ಈ 5 ಕಾರಣಗಳಿಂದಾಗಿ ತನ್ನ ಹೆಂಡತಿ ಬಿಟ್ಟು ಮತ್ತೊಬ್ಬರ ಕಡೆಗೆ ಗಂಡು ಕಣ್ಣು ಹಾಕ್ತಾನೆ ಅಂತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗಲು ಕಾರಣಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ಈ ಕೆಲವು ಅಂಶಗಳೇ ಗಂಡಸರು ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಲು ಮುಖ್ಯ ಕಾರಣವಂತೆ. ಅಂತಹ ಅಂಶಗಳು ಯಾವುವು ಗಮನಿಸಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರ ಸೂತ್ರಗಳು ಇಂದಿಗೂ ಬಹಳ ಪ್ರಸಿದ್ಧವಾಗಿವೆ. ಅವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾರು ಬೇಕಾದರೂ ಒಳ್ಳೆಯ ಜೀವನ ನಡೆಸಬಹುದು. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಧರ್ಮ, ಹಣ, ಕೆಲಸ, ಮೋಕ್ಷ, ಕುಟುಂಬ, ಸಂಬಂಧಗಳು, ಗೌರವ, ಸಮಾಜ, ರಾಷ್ಟ್ರ, ಪ್ರಪಂಚ ಮತ್ತು ಇತರ ಹಲವು ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಚಾಣಕ್ಯ ನೀತಿಯು ಮಾನವನ ಉತ್ತಮ ಜೀವನಕ್ಕೆ ಅಗತ್ಯವಾದ ಎಲ್ಲಾ ವಿಷಯಗಳ ಬಗ್ಗೆ ಹೇಳುತ್ತದೆ. ಚಾಣಕ್ಯರು ಗಂಡ ಮತ್ತು ಹೆಂಡತಿ ನಡುವಿನ ಸಂಬಂಧದ ಬಗ್ಗೆ ಕೆಲವು ಸೂತ್ರಗಳನ್ನು ತಿಳಿಸಿದ್ದಾನೆ.

ಗಂಡಾಗಲಿ, ಹೆಣ್ಣಾಗಲಿ ಮತ್ತೊಬ್ಬರೆಡೆಗೆ ಆಕರ್ಷಿತರಾಗುವುದು ಸಹಜ. ಆದರೆ ಈ ಆಕರ್ಷಣೆ ಮಿತಿ ಮೀರಿದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಹೀಗಾದರೆ ಇಬ್ಬರ ದಾಂಪತ್ಯ ಜೀವನ ಮುರಿದು ಬೀಳುವ ಸಾಧ್ಯತೆ ಇದೆ. ವಿವಾಹೇತರ ಸಂಬಂಧವನ್ನು ಯಾವಾಗಲೂ ದೊಡ್ಡ ಪಾಪವೆಂದು ಪರಿಗಣಿಸಬೇಕು. ಪುರುಷನು ತನ್ನ ಹೆಂಡತಿಯ ಹೊರತಾಗಿ ಇತರ ಮಹಿಳೆಯರತ್ತ ಆಕರ್ಷಿತನಾಗಲು ಕೆಲವು ಕಾರಣಗಳನ್ನು ಚಾಣಕ್ಯರು ಉಲ್ಲೇಖಿಸುತ್ತಾರೆ.

ಆಕರ್ಷಣೆ

ಆಕರ್ಷಣೆ ಮಾನವನ ಸಹಜ ಗುಣ. ಆದರೆ ಇದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ವಿವಾಹಿತರಲ್ಲಿ ಹಲವು ಕಾರಣಗಳಿಂದ ವಿವಾಹೇತರ ಸಂಬಂಧಗಳು ಏರ್ಪಡಬಹುದು. ಅವುಗಳಲ್ಲಿ ಒಂದು ಇನ್ನೊಬ್ಬ ಮಹಿಳೆಯತ್ತ ಆಕರ್ಷಿತರಾಗುವುದು. ಆದರೆ ಇದು ಮುಂದುವರಿದರೆ, ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳದೇ ಇದ್ದರೆ ದಾಂಪತ್ಯ ಮುರಿದು ಬೀಳಬಹುದು. ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಹೋಗಬಹುದು. ಹಾಗಾಗಿ ವಿವಾಹೇತರ ಸಂಬಂಧ ಬೇಡ. ಇದು ಸಮಾಜ, ವೈಯಕ್ತಿಕ ಬದುಕಿನ ಕಾರಣಗಳಿಂದ ಒಳ್ಳೆಯದಲ್ಲ.

ಬಾಲ್ಯವಿವಾಹ

ವಿವಾಹೇತರ ಸಂಬಂಧಗಳಿಗೆ ಕಾರಣವಾಗುವ ಅಂಶಗಳಲ್ಲಿ ಬಾಲ್ಯವಿವಾಹವೂ ಒಂದು ಎಂದು ಚಾಣಕ್ಯರು ಉಲ್ಲೇಖಿಸುತ್ತಾರೆ. ಅರ್ಥವಾಗದ ವಯಸ್ಸಿನಲ್ಲಿ ಮದುವೆ ನಡೆಯುತ್ತದೆ. ಇದರಿಂದ ತಿಳುವಳಿಕೆ ಬಂದಾಗ ಮನಸ್ಸು ಬೇರೆಡೆಗೆ ತಿರುಗಬಹುದು. ಈ ಹಂತದಲ್ಲಿ ಅನೇಕರು ವಿವಾಹೇತರ ಸಂಬಂಧಗಳ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಬಾಲ್ಯವಿವಾಹ ತಪ್ಪಿಯೂ ಮಾಡಬಾರದು, ಆಗಬಾರದು.

ದೈಹಿಕ ತೃಪ್ತಿಯ ಕೊರತೆ

ದೈಹಿಕ ತೃಪ್ತಿಯ ಕೊರತೆಯು ವಿವಾಹೇತರ ಸಂಬಂಧಗಳಿಗೆ ಕಾರಣವಾಗಲು ಚಾಣಕ್ಯರು ಹೇಳುವ ಇನ್ನೊಂದು ಅಂಶ. ಹಲವು ಸಂದರ್ಭಗಳಲ್ಲಿ, ಗಂಡ ಮತ್ತು ಹೆಂಡತಿಯ ನಡುವಿನ ಆಕರ್ಷಣೆಯ ಕೊರತೆ ಎದ್ದು ಕಾಣುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಿವಾಹೇತರ ಸಂಬಂಧಗಳನ್ನು ಅರಸಿ ಹೋಗಬಹುದು. ದೈಹಿಕ ತೃಪ್ತಿ ಎಂದರೆ ಹಾಸಿಗೆಯಲ್ಲಿ ಒಬ್ಬರನ್ನೊಬ್ಬರು ತೃಪ್ತಿಪಡಿಸುವುದು ಮಾತ್ರವಲ್ಲ, ಭಾವನಾತ್ಮಕವಾಗಿ ಮತ್ತು ಮೌಖಿಕವಾಗಿ ಪರಸ್ಪರ ಅರ್ಥಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ಆತ್ಮವಿಶ್ವಾಸದ ಕೊರತೆ

ಸಂಗಾತಿಯ ಪರಸ್ಪರ ಬದ್ಧತೆ, ಯಶಸ್ವಿ ಲೈಂಗಿಕ ಜೀವನ ದಾಂಪತ್ಯದಲ್ಲಿ ಬಹಳ ಮುಖ್ಯ. ಇಲ್ಲದಿದ್ದರೆ ನಿಮ್ಮ ಸಂಬಂಧ ಮುರಿದು ಬೀಳುತ್ತದೆ. ಪರಸ್ಪರ ನಂಬಿಕೆಯ ಕೊರತೆಯೇ ಅನೇಕ ವಿವಾಹಗಳು ವಿಫಲಗೊಳ್ಳಲು ಕಾರಣ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಿಂದ ನೀವು ತೃಪ್ತರಾದ ನಂತರವೂ ಮತ್ತೊಂದು ಸಂಬಂಧಕ್ಕಾಗಿ ಹಾತೊರೆಯುವುದು ನಿಮ್ಮ ವೈವಾಹಿಕ ಜೀವನವನ್ನು ಹಾಳುಮಾಡುವ ಕ್ರಿಯೆಯಾಗಿದೆ ಎಂದು ಚಾಣಕ್ಯ ಹೇಳುತ್ತಾರೆ.

ಸೌಂದರ್ಯದ ಬಗ್ಗೆ ಅತಿಯಾದ ನಿರೀಕ್ಷೆ

ಹಲವರು ತಮಗೆ ಸಂಗಾತಿಯಾಗಿ ಬರುವವರು ತುಂಬಾ ಚೆನ್ನಾಗಿರಬೇಕು, ಸೌಂದರ್ಯವಂತರಾಗಿರಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ. ಆದರೆ ಈ ಕನಸುಗಳು ಸುಳ್ಳಾದಾಗ ಅವರು ಬೇರೆಯವರತ್ತ ಆಕರ್ಷಿತರಾಗುತ್ತಾರೆ. ಇದು ಕೂಡ ವಿವಾಹೇತರ ಸಂಬಂಧಕ್ಕೆ ಕಾರಣವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner