Chanakya Niti: ಇಂತಹ ಸಮಯಗಳಲ್ಲಿ ನಮ್ಮ ಜೊತೆ ಇರುವವರೇ ನಿಜವಾದ ಸ್ನೇಹಿತರು; ಸ್ನೇಹದ ಬಗ್ಗೆ ಚಾಣಕ್ಯರ ಅಭಿಮತ
ಚಾಣಕ್ಯರು ಬದುಕಿನ ಕುರಿತ ಎಲ್ಲಾ ಅಂಶಗಳ ಬಗ್ಗೆ ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾರೆ. ಸಂಬಂಧಗಳು ಹೇಗಿರಬೇಕು ಎಂಬ ಚಿತ್ರಣವನ್ನು ಅನುಭವದ ಆಧಾರದ ಮೇಲೆ ಅವರು ಬಹಳ ಸ್ವಷ್ಟವಾಗಿ ಉಲ್ಲೇಖಿಸಿದ್ದಾರೆ. ನಿಜವಾದ ಸ್ನೇಹಿತ ಎಂದರೆ ಯಾರು ಎಂಬುದನ್ನು ಚಾಣಕ್ಯ ಹೇಳಿದ್ದಾರೆ. ಅವರ ಪ್ರಕಾರ ಈ ವಿಚಾರಗಳಲ್ಲಿ ನಮ್ಮನ್ನು ಬೆಂಬಲಿಸಿ, ಜೊತೆ ಇರುವವನೇ ನಿಜವಾದ ಸ್ನೇಹಿತ.
ಚಾಣಕ್ಯ ನೀತಿ ಎಂದು ಜನಪ್ರಿಯವಾಗಿ ಜನಪ್ರಿಯವಾಗಿರುವ ನೀತಿಶಾಸ್ತ್ರ ಗ್ರಂಥವನ್ನು ಬರೆದಿದ್ದಾರೆ ಚಾಣಕ್ಯ. ಇವರ ನೀತಿ ನಮ್ಮೆಲ್ಲರ ಬದುಕಿನ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಚಾಣಕ್ಯರ ನೀತಿಗಳು ನಮ್ಮ ಬದುಕಿಗೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ನಮಗೆ ಸಲಹೆ ನೀಡುತ್ತದೆ. ಜೀವನದಲ್ಲಿ ಬರುವ ಪ್ರತಿಯೊಂದು ಸಂಬಂಧದ ವ್ಯಕ್ತಿಗಳ ಗುಣಗಳ ಬಗ್ಗೆ ಅವರು ಹೇಳಿದ್ದಾರೆ.
ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಸ್ನೇಹ ಸಂಬಂಧದ ಬಗ್ಗೆಯೂ ವಿವರಣೆ ನೀಡಿದ್ದಾರೆ. ಅವರ ಪ್ರಕಾರ ಈ ಕೆಲವು ವಿಚಾರಗಳಲ್ಲಿ ನಮಗೆ ಬೆಂಬಲ ನೀಡುವವನೇ ನಿಜವಾದ ಗೆಳೆಯ. ಹಾಗಾದರೆ ನಿಜವಾದ ಗೆಳೆಯ ನಮಗೆ ಯಾವ ವಿಚಾರದಲ್ಲಿ ಬೆಂಬಲ ನೀಡಬೇಕು ಎಂಬುದನ್ನು ತಿಳಿಯಿರಿ.
ಅನಾರೋಗ್ಯದ ಸಂದರ್ಭದಲ್ಲಿಯೂ ಬೆಂಬಲವಾಗಿರುವವನು
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಗಂಭೀರ ಕಾಯಿಲೆಯಿಂದ ಬಳಲುತ್ತಿರುವಾಗ ಅಥವಾ ಅತಿಯಾದ ದುಃಖವನ್ನು ಎದುರಿಸುತ್ತಿರುವಾಗ ಅವನ ಜೊತೆಗೆ ನಿಂತು, ಅವನಿಗೆ ಬೆಂಬಲ ಸೂಚಿಸುವವನೇ ನಿಜವಾದ ಗೆಳೆಯ. ಸಂತೋಷದಲ್ಲಿ ಮಾತ್ರ ನಿಮ್ಮನ್ನು ಬೆಂಬಲಿಸುವ, ನಿಮ್ಮ ದುಃಖದ ಸಂದರ್ಭಗಳಲ್ಲಿ ನಿಮ್ಮಿಂದ ಅಂತರ ಕಾಯ್ದುಕೊಳ್ಳುವ ಸ್ನೇಹಿತರಿಂದ ದೂರವಿರಬೇಕು ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.
ಬಡತನದಲ್ಲೂ ಜೊತೆ ಇರುವವರು
ಮನುಷ್ಯನ ಪರಿಸ್ಥಿತಿಗಳು ಯಾವಾಗಲೂ ಒಂದೇ ಆಗಿರುವುದಿಲ್ಲ. ಜೀವನದಲ್ಲಿ ಏರಿಳಿತ, ಶ್ರೀಮಂತಿಕೆ ಮತ್ತು ಬಡತನ ಸಹಜ. ಅಂತಹ ಪರಿಸ್ಥಿತಿಯಲ್ಲಿ, ಬಡತನದಲ್ಲಿಯೂ ನಮ್ಮನ್ನು ಬಿಡದೇ ನಮ್ಮ ಜೊತೆಗೆ ಇರುವವನು ನಿಜವಾದ ಸ್ನೇಹಿತ ಎಂದು ಚಾಣಕ್ಯರು ಹೇಳುತ್ತಾರೆ. ವ್ಯಕ್ತಿ ಶ್ರೀಮಂತನಾಗಿದ್ದಾಗ ಅವನ ಹಿಂದೆ ಸಾವಿರ ಜನರ ಗುಂಪಿರುತ್ತದೆ. ಆದರೆ ವ್ಯಕ್ತಿಯ ಪರಿಸ್ಥಿತಿಗಳು ಬದಲಾದಾಗ ಕೆಲವೇ ಜನರು ಒಟ್ಟಿಗೆ ಕಾಣುತ್ತಾರೆ. ಅಂತಹವರು ಮಾತ್ರ ನಿಜವಾದ ಸ್ನೇಹಿತರು.
ಶತ್ರುಗಳು ಎದುರಾದಾಗ ಜೊತೆ ನಿಲ್ಲುವವನು
ಚಾಣಕ್ಯರ ಪ್ರಕಾರ, ಶತ್ರುಗಳಿಂದ ಸುತ್ತುವರೆದಿರುವಾಗ ಅವನೊಂದಿಗೆ ನಿಲ್ಲುವವನೇ ನಿಜವಾದ ಸ್ನೇಹಿತ. ಹಲವು ಬಾರಿ ನಾವು ಯಾರನ್ನಾದರೂ ಎದುರು ಹಾಕಿಕೊಂಡಾಗ ಹಲವರು ನಮ್ಮನ್ನು ಬೆಂಬಲಿಸುವುದನ್ನು ಬಿಡುತ್ತಾರೆ. ಇದರಿಂದ ನಮಗೆ ತೊಂದರೆಯಾದರೆ ಎಂದುಕೊಂಡು ದೂರ ಉಳಿದು ಬಿಡುತ್ತಾರೆ. ಆದರೆ ನಮ್ಮನ್ನು ಶತ್ರುಗಳ ನಡುವೆ ಏಕಾಂಗಿಯಾಗಿ ಹೋರಾಡಲು ಬಿಡದೆ ನಾನು ನಿನ್ನ ಜೊತೆಗಿದ್ದೇನೆ ಎಂದು ಕೈ ಹಿಡಿದು ನಿಲ್ಲುವವನೇ ನಿಜವಾದ ಸ್ನೇಹಿತ.
ಕೆಟ್ಟ ಸಮಯದಲ್ಲಿ ಜೊತೆಯಾಗುವವನು
ಚಾಣಕ್ಯ ನೀತಿಯ ಪ್ರಕಾರ, ತನ್ನ ಕೆಟ್ಟ ಸಮಯದಲ್ಲಿ ತನ್ನ ಬಳಗ ಅಥವಾ ಸ್ನೇಹಿತರನ್ನು ಬಿಡದ ವ್ಯಕ್ತಿ ನಿಜವಾಗಿಯೂ ಸ್ನೇಹಕ್ಕೆ ಬೆಲೆ ಕೊಡುವವನು. ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಯಾವಾಗಲೂ ನಮ್ಮೊಂದಿಗೆ ನಿಲ್ಲುವವನೇ ನಿಜವಾದ ಸ್ನೇಹಿತ. ಸ್ನೇಹಿತರಂತೆ ವರ್ತಿಸಿ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಬೆಂಬಲಿಸದೆ ಬೆನ್ನು ತಿರುಗಿಸುವ ಹಲವು ಜನರಿದ್ದಾರೆ. ಅವರು ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ಎಂದಿಗೂ ನಿಮ್ಮ ಸ್ನೇಹಿತರಾಗಲು ಸಾಧ್ಯವಿಲ್ಲ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ