Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನ ಅನುಸರಿಸಿದ್ರೆ ಎಂದಿಗೂ ಸೋಲಾಗುವುದಿಲ್ಲ, ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನ ಅನುಸರಿಸಿದ್ರೆ ಎಂದಿಗೂ ಸೋಲಾಗುವುದಿಲ್ಲ, ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ

Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನ ಅನುಸರಿಸಿದ್ರೆ ಎಂದಿಗೂ ಸೋಲಾಗುವುದಿಲ್ಲ, ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ

ಆಚಾರ್ಯ ಚಾಣಕ್ಯರು ಮನುಕುಲದ ಕಲ್ಯಾಣಕ್ಕಾಗಿ ಹಲವು ನೀತಿಗಳನ್ನು ರೂಪಿಸಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ಮೂಲಕ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಚಾಣಕ್ಯರ ಪ್ರಕಾರ ಜೀವನದಲ್ಲಿ ಈ 5 ಅಭ್ಯಾಸಗಳನ್ನು ಪಾಲಿಸಿದ್ರೆ ಲಕ್ಷ್ಮೀದೇವಿ ನಮ್ಮ ಮನೆಯಲ್ಲೇ ನೆಲೆಸುತ್ತಾಳೆ, ಇದರಿಂದ ನಮಗೆ ಎಂದಿಗೂ ಸೋಲಾಗಲು ಸಾಧ್ಯವಿಲ್ಲ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಪ್ರಪಂಚ ಕಂಡ ಮಹಾನ್ ಜ್ಞಾನಿ, ವಿದ್ವಾಂಸ ಎಂದು ಕರೆಯಲಾಗುತ್ತದೆ. ಅವರ ಜೀವಿತಾವಧಿಯಲ್ಲಿ, ಮನುಕುಲದ ಕಲ್ಯಾಣಕ್ಕಾಗಿ ಅನೇಕ ನೀತಿಗಳನ್ನು ರೂಪಿಸಿದ್ದರು. ಈ ನೀತಿಗಳು ನಂತರ ‘ಚಾಣಕ್ಯ ನೀತಿ‘ ಎಂದೇ ಪ್ರಸಿದ್ಧಿ ಪಡೆದವು. ಯಾವುದೇ ವ್ಯಕ್ತಿ ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಬಯಸಿದರೆ, ಅವರು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಅನುಸರಿಸಬೇಕು.

ಇಂದಿನ ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಅನುಸರಿಸಲು ಹೇಳಿದ 5 ಅಭ್ಯಾಸಗಳ ಬಗ್ಗೆ ತಿಳಿಯೋಣ. ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸಿರುವಂತೆ ನೋಡಿಕೊಳ್ಳಬಹುದು. ಇಂತಹ ಅಭ್ಯಾಸಗಳು ಮನುಷ್ಯನನ್ನು ಅತಿ ಕಡಿಮೆ ಸಮಯದಲ್ಲಿ ಶ್ರೀಮಂತರನ್ನಾಗಿ ಮಾಡಬಹುದು. ಅಷ್ಟೇ ಅಲ್ಲ, ಈ ಅಭ್ಯಾಸಗಳು ವ್ಯಕ್ತಿಯನ್ನು ಪ್ರತಿ ಹಂತದಲ್ಲೂ ಯಶಸ್ವಿಯಾಗುವಂತೆ ಮಾಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಅಂತಹ 5 ಅಭ್ಯಾಸಗಳು ಯಾವುವು ನೋಡಿ.

ನಿರಂತರ ಕಲಿಕೆ

ಚಾಣಕ್ಯರ ಪ್ರಕಾರ, ಕಲಿಕೆ ಮನುಕುಲಕ್ಕೆ ದೊಡ್ಡ ಅಸ್ತ್ರವಾಗಿದೆ. ನೀವು ಜೀವನದಲ್ಲಿ ಹಣ ಸಂಪಾದಿಸಲು ಬಯಸಿದರೆ, ಶಿಕ್ಷಣ ಅಥವಾ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ. ಯಶಸ್ಸಿನೊಂದಿಗೆ ಹಣ ಗಳಿಸಲು ಬಯಸುವ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಶಿಕ್ಷಣ ಮತ್ತು ಜ್ಞಾನವನ್ನು ಪಡೆದುಕೊಳ್ಳಬೇಕು. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಕಲಿಕೆಯಲ್ಲಿ ಆಸಕ್ತಿ, ಪ್ರೀತಿ ಹೊಂದಿರುವವನಿಗೆ ಎಂದಿಗೂ ಸೋಲಾಗುವುದಿಲ್ಲ, ಅಂಥವರ ಮೇಲೆ ಲಕ್ಷ್ಮೀದೇವಿಯ ಕೃಪೆ ಇದ್ದೇ ಇರುತ್ತದೆ.

ಕಠಿಣ ಪರಿಶ್ರಮ

ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ಅವನು ಕಠಿಣ ಪರಿಶ್ರಮದ ಮನೋಭಾವ ಹೊಂದಿರಬೇಕು. ಕಷ್ಟಪಟ್ಟು ದುಡಿಯಲು ಹಿಂಜರಿಯದ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುವುದು ಖಚಿತ. ಅಂತಹವರಿಗೆ ಸದಾ ಲಕ್ಷ್ಮೀದೇವಿಯ ಆಶೀರ್ವಾದವಿರುತ್ತದೆ.

ತಾಳ್ಮೆ

ಜೀವನದಲ್ಲಿ ಯಶಸ್ವಿಯಾಗಲು ಬಯಸುವ ಪ್ರತಿಯೊಬ್ಬರಿಗೂ ತಾಳ್ಮೆ ಬಹಳ ಮುಖ್ಯ. ಯಶಸ್ಸು ಸಾಧಿಸಲು ನಿಮಗೆ ಹಲವು ವರ್ಷಗಳು ಬೇಕಾಗಬಹುದು, ಆದ್ದರಿಂದ ನೀವು ತಾಳ್ಮೆಯಿಂದಿರುವುದು ಅನಿವಾರ್ಯವಾಗುತ್ತದೆ. ತಾಳ್ಮೆಯಿಂದ ಸಾಧಿಸಿದರೆ ಒಂದಲ್ಲ ಒಂದು ದಿನ ನೀವು ಹಣ ಗಳಿಸಲು ಸಾಧ್ಯವಿದೆ, ಆಗ ಯಶಸ್ಸು ನಿಮ್ಮನ್ನು ಹುಡುಕಿ ಬರುತ್ತದೆ. ಒಂದೇ ದಿನಕ್ಕೆ ಎಲ್ಲವೂ ಸಿಗಬೇಕು ಎನ್ನುವ ಆತುರ ಖಂಡಿತ ಒಳ್ಳೆಯದಲ್ಲ.

ಪ್ರಾಮಾಣಿಕತೆ

ಆಚಾರ್ಯ ಚಾಣಕ್ಯರ ಪ್ರಕಾರ ಯಾವುದೇ ಕೆಲಸ ಮಾಡಿದರೆ ಅದರಲ್ಲಿ ಪ್ರಾಮಾಣಿಕತೆ ಇರಬೇಕು. ಪ್ರಾಮಾಣಿಕತೆ ಇಲ್ಲದೇ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಮೋಸ, ಅನ್ಯಾಯದಿಂದ ಗಳಿಸಿದ ಹಣ, ಯಶಸ್ಸು ಎಂದಿಗೂ ನಿಮ್ಮದಾಗುವುದಿಲ್ಲ. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಯಶಸ್ಸಿನ ಗುಟ್ಟು ಪ್ರಾಮಾಣಿಕತೆಯಲ್ಲೂ ಅಡಗಿದೆ.

ಅಪಾಯ ತೆಗೆದುಕೊಳ್ಳಲು ಸಿದ್ಧರಿರುವುದು

ಚಾಣಕ್ಯ ನೀತಿಯ ಪ್ರಕಾರ, ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಎಂದಿಗೂ ಅಪಾಯಗಳನ್ನು ತೆಗೆದುಕೊಳ್ಳಲು ಹೆದರಬಾರದು ಮತ್ತು ಹಿಂದೆ ಸರಿಯಬಾರದು. ನೀವು ಭಯ ಪಡುತ್ತಿದ್ದರೆ ಅಥವಾ ಹಿಂಜರಿಯುತ್ತಿದ್ದರೆ ಎಂದಿಗೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಂತ ನಿಮ್ಮ ಕೈಲಾಗದ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬಾರದು. ಸಾಧಿಸುವ ಛಲವುಳ್ಳ ಮನುಷ್ಯ ಅಪಾಯವನ್ನು ಎದುರಿಸಿ ಮುನ್ನುಗುತ್ತಾನೆ. ಅವನಿಗೆ ಲಕ್ಷ್ಮೀದೇವಿಯ ಆಶೀರ್ವಾದದ ಜೊತೆ ಯಶಸ್ಸು ಸಿಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner