Chanakya Niti: ದಾಂಪತ್ಯ ಜೀವನದಲ್ಲಿ ಸದಾ ಸಂತಸ, ಮಧುರ ಬಾಂಧವ್ಯ ನಿಮ್ಮದಾಗಬೇಕು ಅಂದ್ರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ
ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ, ಅವರು ಬದುಕಿನ ಕುರಿತ ಹಲವು ವಿಚಾರಗಳನ್ನು ಅರಿತವರಾಗಿದ್ದಾರೆ. ದಾಂಪತ್ಯ ಜೀವನದ ಒಳನೋಟಗಳ ಬಗ್ಗೆಯೂ ಚಾಣಕ್ಯ ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ದಾಂಪತ್ಯ ಜೀವನ ಸುಮಧುರವಾಗಿರಬೇಕು ಎಂದರೆ ಈ ಕೆಲವು ಅಂಶಗಳನ್ನ ದಂಪತಿ ತಪ್ಪದೇ ಅನುಸರಿಸಬೇಕು, ಇದರಿಂದ ಸಂಸಾರ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ.
ಚಾಣಕ್ಯರು ಜಗತ್ತು ಕಂಡ ಮಹಾನ್ ಜ್ಞಾನಿ. ಅವರು ಮನುಷ್ಯನ ಜೀವನದ ಎಲ್ಲಾ ಅಂಶಗಳನ್ನು ಅರಿತವರಾಗಿದ್ದಾರೆ. ಮಾನವರ ಬದುಕಿಗೆ ಸಂಬಂಧಿಸಿ ಹಲವು ನೀತಿಗಳನ್ನು ಅವರು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಬರೆದಿದ್ದಾರೆ. ಈ ನೀತಿಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯು ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಮತ್ತು ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ನಂಬಲಾಗಿದೆ.
ಆ ಕಾಲದಲ್ಲಿ ಚಾಣಕ್ಯರು ರೂಪಿಸಿದ್ದ ನೀತಿಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಚಾಣಕ್ಯರು ತಮ್ಮ ನೀತಿಗಳಲ್ಲಿ ವೈವಾಹಿಕ ಜೀವನ ಹೇಗಿರಬೇಕು, ಸಾಂಸಾರಿಕ ಜೀವನದಲ್ಲಿ ಸದಾ ಸಂತೋಷ ತುಂಬಿರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ. ಚಾಣಕ್ಯರ ಈ ಸೂತ್ರಗಳನ್ನು ಅನುಸರಿಸುವ ಮೂಲಕ ದಂಪತಿ ಬದುಕಿನಲ್ಲಿ ಸದಾ ಸಂತೋಷದಿಂದ ಇರಲು ಸಾಧ್ಯವಿದೆ. ಪ್ರತಿ ಗಂಡ–ಹೆಂಡತಿಯು ಈ ಸುಲಭ ಸೂತ್ರಗಳನ್ನು ಅನುಸರಿಸುವ ಮೂಲಕ ಸಾಂಸಾರಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಕಾಪಾಡಿಕೊಳ್ಳಬಹುದು. ಹಾಗಾದರೆ ದಂಪತಿಗೆ ಚಾಣಕ್ಯರು ನೀಡಿದ ಸಲಹೆಗಳೇನು ಎಂಬುದನ್ನು ನೋಡೋಣ.
ಸಂಗಾತಿಗೆ ಪ್ರಾಮಾಣಿಕ ಪ್ರೀತಿ ನೀಡಿ
ಆಚಾರ್ಯ ಚಾಣಕ್ಯ ಪ್ರಕಾರ, ದಾಂಪತ್ಯ ಜೀವನದಲ್ಲಿ ಸಂಗಾತಿಯು ತನ್ನ ಜೊತೆಗಾರ ಅಥವಾ ಜೊತೆಗಾತಿಗೆ ಪ್ರಾಮಾಣಿಕವಾದ ಪ್ರೀತಿ ನೀಡಬೇಕು. ಸಂಪೂರ್ಣ ಮನಸ್ಸಿನಿಂದ ಸಂಗಾತಿಯನ್ನು ಇಷ್ಟಪಡಬೇಕು. ಯಾವುದೋ ಬಲವಂತಕ್ಕೋ ಅಥವಾ ಸಂದರ್ಭಕ್ಕೆ ಸಿಲುಕಿ ಮದುವೆಯಾದರೂ ನಂತರದ ದಿನಗಳಲ್ಲಿ ಸಂಗಾತಿಯನ್ನು ಪ್ರೀತಿಸಲು ಆರಂಭಿಸಬೇಕು. ಸಂಬಂಧದಲ್ಲಿ ಯಾವಾಗಲೂ ಅಂತರ ಸೃಷ್ಟಿಯಾಗಲು ಬಿಡಬಾರದು. ಅನ್ಯೋನ್ಯತೆ ಇರಬೇಕು. ಪ್ರೀತಿಗೆ ಕೊರತೆ ಬರಬಾರದು. ಆಗ ಮಾತ್ರ ಸಂಬಂಧ ಬಲವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಅಹಂಕಾರದಿಂದ ದೂರವಿರಿ
ಗಂಡ–ಹೆಂಡತಿ ನಡುವೆ ಯಾವತ್ತೂ ಅಹಂ ಪ್ರವೇಶಿಸಬಾರದು. ಅಹಂಕಾರವು ದಾಂಪತ್ಯವನ್ನು ಹಾಳು ಮಾಡುತ್ತದೆ. ತಾನೇ ಮೇಲೆ ಎನ್ನುವ ಭಾವ ಎಂದಿಗೂ ಇರಬಾರದು. ಸಂಬಂಧದಲ್ಲಿ ಅಹಂಕಾರ ಪ್ರವೇಶಿಸಿದರೆ ಅಂತಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಇದರಿಂದ ದಂಪತಿಗಳ ನಡುವೆ ಅಂತರ ಸೃಷ್ಟಿಯಾಗುತ್ತದೆ. ಹಾಗಾಗಿ ಎಂದೆಂದಿಗೂ ಅಹಂಕಾರದಿಂದ ದೂರವಿರಬೇಕು ಎಂದು ಚಾಣಕ್ಯ ಸಲಹೆ ನೀಡುತ್ತಾರೆ.
ಸತ್ಯವನ್ನು ಬೆಂಬಲಿಸಿ
ದಾಂಪತ್ಯ ಜೀವನ ಸುಮಧುರವಾಗಿರಬೇಕು ಅಂದ್ರೆ ಸಂಗಾತಿಗಳು ಸತ್ಯವಂತರಾಗಿರುವುದು ಬಹಳ ಮುಖ್ಯ. ಯಾವಾಗಲೂ ಸತ್ಯವನ್ನು ಬೆಂಬಲಿಸಬೇಕು. ಅಲ್ಲದೇ ಸಂಗಾತಿಯ ನಂಬಿಕೆಯನ್ನು ಹಾಳು ಮಾಡಬಾರದು. ಎಂತಹ ಸಂದರ್ಭದಲ್ಲೂ ಸತ್ಯವನ್ನೇ ಹೇಳುವ ಮೂಲಕ ಸಂಬಂಧವನ್ನು ಭದ್ರಪಡಿಸಿಕೊಳ್ಳಬೇಕು. ಆಗ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಂಗಾತಿಯನ್ನು ಮೆಚ್ಚಿಸುವ ಸಲುವಾಗಿ ಹೇಳುವ ಸುಳ್ಳು ನಂತರ ನಿಮ್ಮ ಬದುಕಿಗೆ ಮುಳ್ಳಾಗಬಹುದು ನೆನಪಿರಲಿ.
ಪರಸ್ಪರ ಗೌರವಿಸಿ
ವೈವಾಹಿಕ ಸಂಬಂಧ ಗಟ್ಟಿಯಾಗಿರಲು ಪತಿ–ಪತ್ನಿ ನಡುವೆ ಪರಸ್ಪರ ಗೌರವಿರಬೇಕು. ಏಕೆಂದರೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಘನತೆ ಮತ್ತು ಗೌರವವನ್ನು ಇಷ್ಟಪಡುತ್ತಾನೆ. ಈ ಕಾರಣಕ್ಕಾಗಿ, ಯಾರ ಮುಂದೆಯೂ ನಿಮ್ಮ ಸಂಗಾತಿಯನ್ನು ಅವಮಾನಿಸಬೇಡಿ. ಇದು ನಿಮ್ಮ ಸಂಬಂಧದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು. ಸಂಬಂಧದಲ್ಲಿ ಬಿರುಕು ಮೂಡುವ ಪರಿಸ್ಥಿತಿಯೂ ಬರಬಹುದು ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ