Chanakya Niti: ಯಶಸ್ವಿ ದಾಂಪತ್ಯದ ಹಿಂದಿನ ಗುಟ್ಟಿದು, ಸಂಸಾರ ಸುಸೂತ್ರವಾಗಿ ಸಾಗಲು ಚಾಣಕ್ಯರು ನೀಡಿದ ಈ ಸಲಹೆಗಳನ್ನು ಪಾಲಿಸಿ
ಆಚಾರ್ಯ ಚಾಣಕ್ಯರು ಜೀವನದ ಯಶಸ್ಸು ಮಾತ್ರವಲ್ಲ, ಸಾಂಸಾರಿಕ ಬದುಕಿನ ಯಶಸ್ಸಿನ ಬಗ್ಗೆಯೂ ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಸಂಸಾರ ಜೀವನ ಯಶಸ್ವಿಯಾಗಿ ಸಾಗಲು ಏನು ಮಾಡಬೇಕು ಎಂಬುದನ್ನು ಚಾಣಕ್ಯರು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಗಂಡ–ಹೆಂಡತಿ ಇಬ್ಬರೂ ಚಾಣಕ್ಯರು ನೀಡಿದ ಈ ಸಲಹೆಗಳನ್ನು ಪಾಲಿಸಿದ್ರೆ ಸುಖ ಸಂಸಾರ ನಿಮ್ಮದಾಗುವುದು ಖಚಿತ.

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಚಾಣಕ್ಯರ ಬೋಧನೆಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ, ಮಾತ್ರವಲ್ಲ ಅವರ ಮಾತುಗಳನ್ನು ಅನುಷ್ಠಾನಕ್ಕೆ ತಂದವನು ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂದು ಹೇಳಲಾಗುತ್ತದೆ.
ಚಾಣಕ್ಯ ನೀತಿಯಲ್ಲಿ ಜೀವನದ ಕುರಿತ ಬಹುತೇಕ ಎಲ್ಲಾ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಚಾಣಕ್ಯ. ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆಯೂ ನೀತಿಶಾಸ್ತ್ರ ಪುಸ್ತಕದಲ್ಲಿ ಅಡಕವಾಗಿದೆ. ಪತಿ-ಪತ್ನಿಯರ ಬಾಂಧವ್ಯ ಎಷ್ಟು ಪವಿತ್ರವಾದುದು ಎಂದರೆ ಅದು ಕೇವಲ ಒಂದು ಜನ್ಮವಲ್ಲ ಏಳೇಳು ಜನ್ಮಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
ಗಂಡ-ಹೆಂಡತಿ ಇಬ್ಬರೂ ಒಂದು ರಥದ ಎರಡು ಚಕ್ರಗಳಿದ್ದಂತೆ. ಯಾವುದಾದರೂ ಒಂದು ಚಕ್ರಕ್ಕೆ ಹಾನಿಯಾದರೆ ಇನ್ನೊಂದು ಚಕ್ರದಿಂದ ಮಾತ್ರ ರಥ ಎಂದಿಗೂ ಮುಂದೆ ಸಾಗಲಾರದು. ಅಂತೆಯೇ, ಪತಿ ಅಥವಾ ಪತ್ನಿ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದಾಗ ಕುಟುಂಬದ ವಿಘಟನೆ ಪ್ರಾರಂಭವಾಗುತ್ತದೆ. ಕುಟುಂಬದ ಸಂತೋಷ ಮತ್ತು ಶಾಂತಿಯು ಪತಿ-ಪತ್ನಿಯರ ನಡುವಿನ ತಿಳುವಳಿಕೆ ಮತ್ತು ಸೌಹಾರ್ದ ಸಂಬಂಧವನ್ನು ಅವಲಂಬಿಸಿರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ಪತಿ-ಪತ್ನಿಯರ ನಡುವಿನ ಸಂಬಂಧಗಳು ಸೌಹಾರ್ದಯುತವಾಗಿರಬೇಕು. ದಂಪತಿಗಳು ಪರಸ್ಪರ ಸಂವಹನ ನಡೆಸದ ಮತ್ತು ಸಾಮರಸ್ಯವಿಲ್ಲದ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಸಂತಸದಿಂದ ಕೂಡಿದ, ಯಶಸ್ವಿ ದಾಂಪತ್ಯ ಜೀವನಕ್ಕಾಗಿ ಚಾಣಕ್ಯರು ಹೇಳಿದ ಈ ಸಲಹೆಗಳನ್ನು ಗಂಡ ಹೆಂಡತಿ ಪಾಲಿಸಬೇಕು.
ಇಬ್ಬರೂ ಸಮಾನರು
ಗಂಡ ಹೆಂಡತಿಯ ಸಂಬಂಧದಲ್ಲಿ ಇಬ್ಬರೂ ಸಮಾನರು . ಇವರಿಬ್ಬರಲ್ಲಿ ವಯಸ್ಸಿನ ವ್ಯತ್ಯಾಸವಿದ್ದರೂ ಸಂಸಾರದ ವಿಚಾರಕ್ಕೆ ಬಂದಾಗ ಯಾರೂ ಚಿಕ್ಕವರಲ್ಲ ಅಥವಾ ದೊಡ್ಡವರಲ್ಲ. ಪತಿ-ಪತ್ನಿ ಪರಸ್ಪರ ಗೌರವಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಏಕೆಂದರೆ ಸಂಗಾತಿಗಳ ನಡುವೆ ಗೌರವವಿದ್ದರೆ ಮಾತ್ರ ಸಂಬಂಧವು ಸುಂದರವಾಗಿರುತ್ತದೆ. ಇದರಿಂದ ಬಾಂಧವ್ಯವೂ ಗಟ್ಟಿಯಾಗುತ್ತದೆ. ನೀವು ಇತರರ ದೃಷ್ಟಿಯಲ್ಲಿ ಒಳ್ಳೆಯವರಾಗಿರುತ್ತೀರಿ. ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.
ತಾಳ್ಮೆ ಮುಖ್ಯ
ಚಾಣಕ್ಯರ ಪ್ರಕಾರ, ವೈವಾಹಿಕ ಜೀವನದ ಯಶಸ್ಸಿಗೆ ಪತಿ-ಪತ್ನಿಯರ ನಡುವೆ ತಾಳ್ಮೆ ಬಹಳ ಮುಖ್ಯ. ಜೀವನದಲ್ಲಿ ಏನೇ ಆಗಲಿ ಕೆಟ್ಟ ಕಾಲವನ್ನು ಇಬ್ಬರೂ ತಾಳ್ಮೆಯಿಂದ ಎದುರಿಸಿ ಮುನ್ನಡೆಯಬೇಕು. ಪ್ರತಿಕೂಲ ಸಂದರ್ಭಗಳಲ್ಲಿ ಪತಿ-ಪತ್ನಿಯರ ನಡುವಿನ ಸಂಬಂಧಗಳು ಬೇಗನೆ ಹದಗೆಡುತ್ತವೆ, ಆ ಕಾರಣದಿಂದ ತಾಳ್ಮೆ ಕಾಯ್ದುಕೊಂಡು ಮುಂದುವರಿಯುವುದು ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ.
ಅಹಂಕಾರ ಇರಬಾರದು
ದಾಂಪತ್ಯದಲ್ಲಿ ಸಂಗಾತಿಗಳ ನಡುವೆ ಎಂದಿಗೂ ಸ್ವಾರ್ಥ ಇರಬಾರದು . ಪತಿ-ಪತ್ನಿ ಒಟ್ಟಾಗಿ ಎಲ್ಲಾ ಕೆಲಸಗಳನ್ನೂ ಮಾಡಬೇಕು. ಸಂಬಂಧದಲ್ಲಿ ಅಹಂಕಾರದ ಭಾವನೆ ಇರಬಾರದು. ಪಾಲುದಾರರ ನಡುವೆ ಅಹಂಕಾರವು ಹೆಚ್ಚಲು ಪ್ರಾರಂಭಿಸಿದಾಗ, ಸಂಬಂಧವು ಕೆಡುತ್ತದೆ. ಇದು ನಿರಂತರ ಮುಂದುವರಿದರೆ ಸರಿ ಪಡಿಸಲಾಗದಷ್ಟು ತೊಂದರೆಯಾಗಬಹುದು.
ಮೂರನೇ ವ್ಯಕ್ತಿ ತಲೆ ಹಾಕುವುದು
ಪತಿ-ಪತ್ನಿಯರ ನಡುವೆ ಅನೇಕ ಸಂಗತಿಗಳು ನಡೆಯುತ್ತವೆ. ಆದರೆ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಬಲವಾದ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ , ಪತಿ ಮತ್ತು ಹೆಂಡತಿ ತಮ್ಮ ವೈಯಕ್ತಿಕ ವಿಷಯಗಳನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದರು. ಏಕೆಂದರೆ ಮೂರನೇ ವ್ಯಕ್ತಿ ದಾಂಪತ್ಯಕ್ಕೆ ಬಂದರೆ ಅದು ನಿಮ್ಮ ದಾಂಪತ್ಯವನ್ನು ಹಾಳು ಮಾಡುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ