Chanakya Niti: ಜೀವನದಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದು ಅಂದ್ರೆ ಚಾಣಕ್ಯರು ಹೇಳಿದ ಈ ಸಲಹೆಗಳನ್ನು ಪಾಲಿಸಿ
ಆಚಾರ್ಯ ಚಾಣಕ್ಯರು ಬದುಕಿನ ಯಶಸ್ಸಿಗೆ ಸಂಬಂಧಿಸಿ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅವರ ಪ್ರಕಾರ ಈ ಕೆಲವು ಕೆಲಸಗಳನ್ನು ಮಾಡಿದರೆ ನಾವು ಬಡತನದಲ್ಲಿ ಜನಿಸಿದ್ರೂ ಶ್ರೀಮಂತರಾಗಿ ಬದುಕಲು ಸಾಧ್ಯವಿದೆ, ನಮಗೆ ಹಣಕಾಸಿನ ಕೊರತೆ ಕಾಡುವುದಿಲ್ಲ. ಹಾಗಾದರೆ ಶ್ರೀಮಂತಿಕೆ ಗಳಿಸಲು ಚಾಣಕ್ಯರು ನೀಡಿದ ಸಲಹೆಗಳು ಯಾವುವು ನೋಡಿ.

ಆಚಾರ್ಯ ಚಾಣಕ್ಯರು ಮೌರ್ಯ ರಾಜವಂಶದ ರಾಜಕೀಯ ಗುರುಗಳಾಗಿದ್ದರು. ಇವರು ಪ್ರಸಿದ್ಧ ತತ್ವಜ್ಞಾನಿ, ರಾಜಕೀಯ ತಜ್ಞ ಮತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದರು. ಚಾಣಕ್ಯರು ‘ನೀತಿಶಾಸ್ತ್ರ‘ ಎಂಬ ಪುಸ್ತಕ ಬರೆದಿದ್ದು ಅದರಲ್ಲಿ ಜೀವನ, ವ್ಯವಹಾರ, ಸಾಮಾಜಿಕ ಜೀವನ, ಹಣಕಾಸು ಮತ್ತು ಇತರ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಚಾಣಕ್ಯ ನೀತಿಯನ್ನು ಅನುಸರಿಸುವುದರಿಂದ ವ್ಯಕ್ತಿಯ ಜೀವನವು ಸಂತೋಷದಿಂದ ಹಾಗೂ ಯಶಸ್ಸಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.
ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಬಯಸದವರು, ಹಣಕಾಸಿನ ವಿಚಾರದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವವರು ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಬೇಕು. ಚಾಣಕ್ಯರ ಚಿಂತನೆಗಳು ಮತ್ತು ತತ್ವಗಳಿಂದ, ನಾವು ಜೀವನದ ಎಲ್ಲಾ ಸವಾಲುಗಳನ್ನು ಜಯಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಿದೆ.
ಅರ್ಹರಿಗೆ ಮಾತ್ರ ಹಣ ನೀಡಿ
ನೀವು ಗಳಿಸಿದ ಹಣವನ್ನು ಅರ್ಹರಿಗೆ ಮಾತ್ರ ನೀಡಿ. ಯೋಗ್ಯರಲ್ಲದವರಿಗೆ ಎಂದಿಗೂ ಹಣ ಕೊಡಬೇಡಿ. ನೀವು ಯಾರಿಗೆ ಹಣ ಕೊಟ್ಟರೂ, ಅದು ಸದುಪಯೋಗವಾಗಬೇಕು. ಯಾಕೆಂದರೆ ಹಣ, ಸಂಪತ್ತು ನಿರ್ವಹಣೆ ಮಾಡಲು ತಿಳಿದವನಿಗೆ ಮಾತ್ರ ಶ್ರೀಮಂತಿಕೆಯ ದಾರಿ ಕಾಣಿಸಲು ಸಾಧ್ಯ. ಇದರೊಂದಿಗೆ ನೀವು ಸಾಲವಾಗಿ ಕೊಟ್ಟರೆ ಅದನ್ನು ಮರಳಿಸುವ ವ್ಯಕ್ತಿಗೆ ಮಾತ್ರ ಕೊಡಿ. ಇಲ್ಲದಿದ್ದರೆ ನೀವು ಬಡತನದಲ್ಲೇ ನರಳ ಬೇಕಾಗುತ್ತದೆ.
ಈ 3 ಪ್ರಶ್ನೆಗಳನ್ನು ಕೇಳಿ
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ನಿಮ್ಮನ್ನು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ. ಏಕೆ? ಇದರಿಂದ ಸಿಗುವ ಫಲಿತಾಂಶವೇನು? ಇದರಲ್ಲಿ ನಾನು ಯಶಸ್ಸು ಗಳಿಸಲು ಸಾಧ್ಯವೇ? ನೀವು ಆಳವಾಗಿ ಯೋಚಿಸಿ ಈ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕಂಡುಕೊಂಡರೆ ಮಾತ್ರ ಕೆಲಸದಲ್ಲಿ ಮುಂದುವರಿಯಿರಿ. ಗುರಿಯಿಲ್ಲದೆ ನೀವು ಎಂದಿಗೂ ಕೆಲಸಗಳಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇದರಿಂದ ಹಣ ಗಳಿಸುವುದು ಅಸಾಧ್ಯ.
ಅರ್ಧಕ್ಕೆ ಬಿಟ್ಟು ಕೊಡಬೇಡಿ
ಒಂದು ಕೆಲಸವನ್ನು ಪ್ರಾರಂಭಿಸಿದ ನಂತರ, ಅದನ್ನು ಅರ್ಧಕ್ಕೆ ಬಿಡಬೇಡಿ. ವೈಫಲ್ಯದ ಭಯವು ನಿಮ್ಮನ್ನು ಹತ್ತಿರ ಬರಲು ಬಿಡಬೇಡಿ. ಕಷ್ಟಪಟ್ಟು ಕೆಲಸ ಮಾಡಿ. ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಅತ್ಯಂತ ಸಂತೋಷವಾಗಿರುವವರು ಎಂದು ಚಾಣಕ್ಯ ಹೇಳಿದ್ದಾರೆ.
ಅತಿಯಾದ ದಾನ ಒಳ್ಳೆಯದಲ್ಲ
ಅತಿಯಾದ ಔದಾರ್ಯದಿಂದಾಗಿ ಅನೇಕ ಜನರು ತೊಂದರೆಗೆ ಸಿಲುಕಿದ್ದಾರೆ. ಈ ವಿಷಯ ಪುರಾಣಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಆದ್ದರಿಂದ, ಅತಿಯಾದರೆ ಎಲ್ಲವೂ ಕೆಟ್ಟದ್ದೇ. ಇದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಅಲ್ಲದೆ, ಇತರರಿಗೆ ಹೆಚ್ಚು ಕೊಡುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ನಾವು ಬಡತನ ಅನುಭವಿಸಬೇಕಾಗುತ್ತದೆ.
ಸರಿಯಾದ ರೀತಿಯಲ್ಲಿ ಹಣ ಗಳಿಸಿ
ಹಣವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಗಳಿಸಬೇಕು. ಏಕೆಂದರೆ ಅಕ್ರಮವಾಗಿ ಗಳಿಸಿದ ಹಣವು ಅಲ್ಪಾವಧಿಗೆ ಮಾತ್ರ ಇರುತ್ತದೆ. ಅನೈತಿಕ ಮಾರ್ಗಗಳಿಂದ ಗಳಿಸಿದ ಹಣವು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಚಾಣಕ್ಯರ ಪ್ರಕಾರ, ಅನೈತಿಕ ವಿಧಾನಗಳಿಂದ ಗಳಿಸಿದ ಹಣವು ಶೀಘ್ರದಲ್ಲೇ ನಿಮ್ಮ ಕೈಯಿಂದ ಕಣ್ಮರೆಯಾಗುತ್ತದೆ. ಅಂತಹ ಹಣದ ಜೀವಿತಾವಧಿ ಕೇವಲ ಹತ್ತು ವರ್ಷಗಳು. ಈ ಹತ್ತು ವರ್ಷಗಳಲ್ಲಿ, ಹಣವು ನಿಮ್ಮ ಕೈಗಳಲ್ಲಿ ನೀರಿನಂತೆ ಹರಿಯುತ್ತದೆ. ನೀವು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಹಣ ಗಳಿಸಬೇಕು. ಆಗ ನಾವು ಶ್ರೀಮಂತಿಕೆ ಕಾಣಲು ಸಾಧ್ಯವಿದೆ.
ಕಷ್ಟಪಟ್ಟು ಕೆಲಸ ಮಾಡಿ.
ಚಾಣಕ್ಯ ನೀತಿಯ ಪ್ರಕಾರ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಹಣ ಗಳಿಸುವಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಅಂತಹ ಶ್ರಮ ವಹಿಸುವ ಜನರಿಗೆ ಜೀವನದಲ್ಲಿ ಹಣ, ಸಂತೋಷ ಅಥವಾ ಆಸ್ತಿಗೆ ಯಾವುದೇ ಕೊರತೆ ಇರುವುದಿಲ್ಲ. ಚಾಣಕ್ಯ ಹೇಳಿದ್ದು, ಒಬ್ಬ ವ್ಯಕ್ತಿಯು ತನ್ನ ಒಳ್ಳೆಯ ಗುಣಗಳಿಂದ ಹಣ ಮತ್ತು ಸಂಪತ್ತಿನಿಂದ ಶ್ರೀಮಂತನಾಗುತ್ತಾನೆ.
ನಿಮ್ಮ ವಹಿವಾಟಿನ ಬಗ್ಗೆ ಚರ್ಚೆ ಬೇಡ
ನಿಮ್ಮ ಆಸ್ತಿ ಬಗ್ಗೆ ಯಾರಿಗೂ ಹೇಳಬೇಡಿ. ಭವಿಷ್ಯದ ಯಾವುದೇ ವಹಿವಾಟಿನಿಂದ ನಿಮಗೆ ನಷ್ಟವಾದರೆ, ಯಾರಿಗೂ ಹೇಳಬೇಡಿ. ಎಷ್ಟೇ ಆತ್ಮೀಯರಾಗಿದ್ದರೂ ಅವರೊಂದಿಗೆ ಈ ವಿಷಯಗಳನ್ನು ಯಾವಾಗಲೂ ಗೌಪ್ಯವಾಗಿಡಿ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ