Chanakya Niti: ಮದುವೆಯಾದ ನಂತರ ತಪ್ಪಿಯೂ ಮಾಡಬಾರದಂತಹ 5 ತಪ್ಪುಗಳಿವು; ದಂಪತಿಗೆ ಚಾಣಕ್ಯರು ಹೇಳಿದ ಜೀವನ ಪಾಠ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಮದುವೆಯಾದ ನಂತರ ತಪ್ಪಿಯೂ ಮಾಡಬಾರದಂತಹ 5 ತಪ್ಪುಗಳಿವು; ದಂಪತಿಗೆ ಚಾಣಕ್ಯರು ಹೇಳಿದ ಜೀವನ ಪಾಠ

Chanakya Niti: ಮದುವೆಯಾದ ನಂತರ ತಪ್ಪಿಯೂ ಮಾಡಬಾರದಂತಹ 5 ತಪ್ಪುಗಳಿವು; ದಂಪತಿಗೆ ಚಾಣಕ್ಯರು ಹೇಳಿದ ಜೀವನ ಪಾಠ

ಚಾಣಕ್ಯ ನೀತಿಯಲ್ಲಿ ವೈವಾಹಿಕ ಜೀವನದ ಕುರಿತು ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ ಚಾಣಕ್ಯ. ಸಂಸಾರದಲ್ಲಿ ಯಾವುದೇ ತಾಪತ್ರಯ ಬರದೇ ಸುಖ ಸಂಸಾರ ನಿಮ್ಮದಾಗಬೇಕು ಎಂದರೆ ಚಾಣಕ್ಯರ ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಚಾಣಕ್ಯರ ಪ್ರಕಾರ ವಿವಾಹಿತರೂ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು, ಇದರಿಂದ ದಾಂಪತ್ಯದಲ್ಲಿ ವಿರಸ ಮೂಡುವುದು ಖಚಿತ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ. ಸಮರ್ಥ ರಾಜಕಾರಣಿ ಮತ್ತು ರಾಜತಾಂತ್ರಿಕ ಕೂಡ. ಚಾಣಕ್ಯರು ತನ್ನ ಚಾಣಕ್ಯ ನೀತಿಯಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಇವರು ರಾಜಕೀಯವನ್ನು ಮೀರಿ ಮಾನವ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಚಾಣಕ್ಯರ ಸೂತ್ರಗಳು ಬಹಳ ಉಪಯುಕ್ತವಾಗಿವೆ. ಆದ್ದರಿಂದಲೇ ಇಂದಿಗೂ ಚಾಣಕ್ಯ ನೀತಿಯನ್ನು ಅನುಸರಿಸುವವರಿದ್ದಾರೆ.

ಚಾಣಕ್ಯ ನೀತಿಯಲ್ಲಿ ವೈವಾಹಿಕ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳಿದ್ದಾರೆ. ವೈವಾಹಿಕ ಜೀವನದಲ್ಲಿ ಚಾಣಕ್ಯರ ಸಲಹೆಗಳನ್ನು ಅನುಸರಿಸಿದರೆ ಸಂತೋಷದ ದಾಂಪತ್ಯವನ್ನು ಆನಂದಿಸಬಹುದು. ಚಾಣಕ್ಯ ನೀತಿಯಲ್ಲಿ ವೈವಾಹಿಕ ಜೀವನವನ್ನು ನಾಶಮಾಡುವ ಕೆಲವು ತಪ್ಪುಗಳನ್ನು ಉಲ್ಲೇಖಿಸಿದ್ದಾರೆ. ಗಂಡ-ಹೆಂಡತಿ ಮಾಡುವ ಈ ಸಣ್ಣ ತಪ್ಪುಗಳು ಅವರ ಬಂಧವನ್ನು ಮುರಿಯಬಹುದು.

ಮಾತಿನ ಮೇಲೆ ನಿಗಾ ಇರಬೇಕು

ಮದುವೆಯಾದ ಮೇಲೆ ಒಬ್ಬರಿಗೊಬ್ಬರು ಹೀಯಾಳಿಸುವುದು, ಕೀಳಾಗಿ ಮಾತನಾಡುವುದು ಮಾಡಬಾರದು. ಪ್ರತಿಯೊಬ್ಬರಿಗೂ ಆತ್ಮಗೌರವ ಇರುತ್ತದೆ. ಆತ್ಮಗೌರವಕ್ಕೆ ಧಕ್ಕೆಯಾಗುವ ಮಾತುಗಳನ್ನು ತಪ್ಪಿಯೂ ಆಡಬಾರದು. ಗಂಡ ಆಗಲಿ, ಹೆಂಡತಿ ಆಗಲಿ ಮಾತಿನ ಮೇಲೆ ನಿಗಾ ಇದ್ದರೆ ಒಳಿತಾಗುವುದು ಖಚಿತ. ಇಲ್ಲದಿದ್ದರೆ ಸಂಸಾರದಲ್ಲಿ ತೊಂದರೆ ಎದುರಾಗುವುದು ಖಚಿತ.

ಮಾತನಾಡುವುದನ್ನು ನಿಲ್ಲಿಸುವುದು

ದಾಂಪತ್ಯ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ ಇಬ್ಬರೂ ಪರಸ್ಪರ ಮಾತನಾಡುವುದನ್ನು ನಿಲ್ಲಿಸಬಾರದು. ಪತಿ ಪತ್ನಿಯರ ನಡುವೆ ಸಣ್ಣಪುಟ್ಟ ಜಗಳಗಳು ಅನಿವಾರ್ಯ. ಆದರೆ ಅದಕ್ಕಾಗಿ ಪರಸ್ಪರ ಮಾತನಾಡುವುದನ್ನು ನಿಲ್ಲಿಸಬೇಡಿ. ಇಲ್ಲದಿದ್ದರೆ ಸಣ್ಣ ಜಗಳವೇ ದೊಡ್ಡದಾಗುತ್ತದೆ. ಮಾತಿನ ಮೂಲಕ ಎಂತಹ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಲು ಸಾಧ್ಯವಿದೆ.

ಸಹಕಾರ ಭಾವ ಇಲ್ಲದೇ ಇರುವುದು

ಪತಿ-ಪತ್ನಿ ಇಬ್ಬರೂ ಎಲ್ಲಾ ಕಾರ್ಯಗಳಲ್ಲಿ ಪರಸ್ಪರ ಸಹಕರಿಸಬೇಕು. ಮನೆಕೆಲಸ ಹೆಣ್ಣಿಗೆ ಎಂದು ಅನೇಕರು ಭಾವಿಸಿ ಎಲ್ಲ ಕೆಲಸಗಳನ್ನು ಅವರಿಗೇ ಬಿಟ್ಟುಬಿಡುತ್ತಾರೆ. ಇದು ಮೊದಲಿಗೆ ಚೆನ್ನಾಗಿ ಕಾಣಿಸಬಹುದು ಆದರೆ ಅಂತಿಮವಾಗಿ ಸಂಘರ್ಷಕ್ಕೆ ಕಾರಣವಾಗುತ್ತದೆ. ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರ ಪರಸ್ಪರ ಸಹಕಾರ ಅತ್ಯಗತ್ಯ. ಸಂತೋಷದ ದಾಂಪತ್ಯ ಜೀವನಕ್ಕಾಗಿ ಇಬ್ಬರೂ ಪರಸ್ಪರ ಹೊಂದಾಣಿಕೆಯಾಗಿರಬೇಕು.

ಹಣದ ಮಹತ್ವ ಅರಿಯದೇ ಇರುವುದು

ಸರಿಯಾದ ಜೀವನ ನಡೆಸಲು ಹಣ ಅತ್ಯಗತ್ಯ . ಹಣದ ಬಳಕೆಗೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಸ್ಪಷ್ಟವಾದ ತಿಳುವಳಿಕೆ ಇದ್ದರೆ, ಸಂಬಂಧವು ಸುಗಮವಾಗಿ ಸಾಗುತ್ತದೆ. ದಂಪತಿಗಳಲ್ಲಿ ಒಬ್ಬರು ಮಾತ್ರ ಈ ರೀತಿ ವರ್ತಿಸಲು ಪ್ರಾರಂಭಿಸಿದರೆ, ದಾಂಪತ್ಯ ಜೀವನ ನಾಶವಾಗುತ್ತದೆ.

ಅಗೌರವದ ವರ್ತನೆ ತೋರುವುದು

ಸಂಬಂಧದಲ್ಲಿ ಗೌರವವಿಲ್ಲದಿದ್ದರೆ ಅದು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ ದಂಪತಿಗಳು ಈ ತಪ್ಪನ್ನು ತಪ್ಪಿಸಬೇಕು. ಪುರುಷ ಅಥವಾ ಮಹಿಳೆ ವೈವಾಹಿಕ ಸಂಬಂಧದಲ್ಲಿ ಅಗೌರವದಿಂದ ವರ್ತಿಸಿದರೆ, ಅದು ಶೀಘ್ರವಾಗಿ ಅವರ ದಾಂಪತ್ಯದಲ್ಲಿ ಶಾಶ್ವತವಾದ ಪ್ರತ್ಯೇಕತೆಗೆ ಕಾರಣವಾಗಬಹುದು.

ಕೋಪ ಮಾಡಿಕೊಳ್ಳುವುದು

ಕೋಪವು ಒಂದು ಕೆಟ್ಟ ಭಾವನೆಯಾಗಿದ್ದು ಅದು ವೈವಾಹಿಕ ಸಂಬಂಧವನ್ನು ವಿನಾಶದ ಅಂಚಿಗೆ ತರಬಹುದು. ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸುತ್ತಾನೆ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮಹಿಳೆಯಾಗಲಿ ಅಥವಾ ಪುರುಷನಾಗಲಿ ಕೋಪಗೊಂಡಾಗ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕು ಮತ್ತು ಸಮಸ್ಯೆಯನ್ನು ಶಾಂತವಾಗಿ ಎದುರಿಸಬೇಕು.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner