Chanakya Niti: ಈ 2 ವಿಷಯಗಳಿಗೆ ಭಯಪಡುವವರು ಹೇಡಿಗಳು; ಇವರಿಗೆ ಎಂದಿಗೂ ಯಶಸ್ಸು, ಗೌರವ ಸಿಗುವುದಿಲ್ಲ –ಚಾಣಕ್ಯ ನೀತಿ
Chanakya Niti: ಭಯದ ದಿನಗಳು ಕಳೆದರೆ ಮುಂದೊಂದು ದಿನ ಗೆಲವು ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಂದಕ್ಕೂ ಭಯಪಟ್ಟರೆ ಕಷ್ಟ. ಚಾಣಕ್ಯರ ಪ್ರಕಾರ ಈ 2 ವಿಷಯಗಳಲ್ಲಿ ಭಯಪಡುವವರು ಹೇಡಿಗಳು ಎಂದು ಹೇಳಲಾಗಿದೆ.

Chanakya Niti: ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಜನರ ಜೀವನಶೈಲಿ ಬದಲಾಗಿದೆ. ಆದರೂ ಯಶಸ್ಸು ಕಾಣಲು ಹೆಚ್ಚಿನ ಜನರು ಚಾಣಕ್ಯ ನೀತಿಯನ್ನೇ ಅನುಸರಿಸುತ್ತಾರೆ. ಭಾರತ ಕಂಡ ಅತ್ಯಂತ ಬುದ್ಧಿಜೀವಿಗಳಲ್ಲಿ ಆಚಾರ್ಯ ಚಾಣಕ್ಯರು ಒಬ್ಬರು. ಅವರ ಬಗ್ಗೆ ತಿಳಿಯದವರು ಯಾರೂ ಇಲ್ಲ. ಚಾಣಕ್ಯ ನೀತಿಯಲ್ಲಿ ತೋರಿಸಿರುವ ಮಾರ್ಗವನ್ನು ಅನುಸರಿಸುವ ಮೂಲಕ ತಮ್ಮ ಜೀವನವನ್ನು ಸಂತೋಷದಿಂದ ನಡೆಸಲು ಪ್ರಯತ್ನಿಸುತ್ತಾರೆ. ಚಾಣಕ್ಯರು ನೀತಿ ಶಾಸ್ತ್ರದಲ್ಲಿ ವಿಭಿನ್ನ ವಿಷಯಗಳು, ಗುಣಗಳು ಹಾಗೂ ಜನರಲ್ಲಿರುವ ನ್ಯೂನತೆಗಳನ್ನು ಪಟ್ಟಿ ಮಾಡಿ ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಈ ಎರಡು ವಿಷಯಗಳ ಬಗ್ಗೆ ಭಯಪಡುವ ಅಥವಾ ಹಿಂಜರಿಯುವ ವ್ಯಕ್ತಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ.
ಜೀವನದ ಪ್ರತಿಯೊಂದು ವಿಷಯಗಳಿಗೆ ಹೆದರುವ ವ್ಯಕ್ತಿ ಸಾಧನೆಯ ಹಾದಿಯಲ್ಲಿ ಎಡವಿ ಬೀಳುವುದೇ ಹೆಚ್ಚು. ಭಯದ ಕಾರಣದಿಂದ ಮಾಡಿದ ಕೆಲಸಗಳೆಲ್ಲವೂ ಅಸ್ತವ್ಯಸ್ತವಾಗುತ್ತದೆ. ಸರಿಯಾದ ನಿರ್ಧಾರವನ್ನು ಸಹ ಅವನು ತೆಗೆದುಕೊಳ್ಳಲಾರ. ಜೊತೆಗೆ ಅವನು ತಾನು ಭಯಪಡುವುದರ ಜೊತೆಗೆ ಇತರರನ್ನೂ ಭಯಪಡಿಸುತ್ತಾನೆ. ಆದ್ದರಿಂದ ಜೀವನದಲ್ಲಿ ಯಶಸ್ಸು ಹಾಗೂ ಗೌರವ ಸಂಪಾದಿಸಲು ಎರಡು ವಿಷಯಗಳಿಗೆ ಹೆದರಬಾರದು. ಆ ಎರಡು ವಿಷಯಗಳು ಯಾವುವು ಎಂದು ನೋಡೋಣ.
ಬದಲಾವಣೆಗೆ ಹೆದರುವವರು
ಆಚಾರ್ಯ ಚಾಣಕ್ಯರ ಪ್ರಕಾರ, ಬದಲಾವಣೆಗೆ ವ್ಯಕ್ತಿಗಳು ಎಂದಿಗೂ ಹೆದರಬಾರದು. ಬದಲಾವಣೆಗೆ ಹೆದರುವ ವ್ಯಕ್ತಿ ಎಂದಿಗೂ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಅಂತಹವರು ಸದಾ ಭಯದ ಚಿಂತೆಯಲ್ಲಿಯೇ ಇರುತ್ತಾರೆ. ಬದಲಾವಣೆ ಆಗುವ ಮೊದಲೇ ಅವರು ಭಯಪಡಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಪ್ರಗತಿ ಸಾಧ್ಯವಾಗುವುದಿಲ್ಲ. ಬದಲಾವಣೆ ಜೀವನದ ಒಂದು ಭಾಗ. ಇದರ ಬಗ್ಗೆ ಚಿಂತೆ ಅಥವಾ ಭಯಪಡುವುದು ಒಂದು ಕೆಲಸವಾಗಬಾರದು. ವಾಸ್ತವವಾಗಿ ನೀವು ಯಾವಾಗಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅದು ವೃತ್ತಿಯಾಗಲಿ ಅಥವಾ ಸಂಬಂಧವಾಗಲಿ ಬದಲಾವಣೆ ಇದ್ದೇ ಇರುತ್ತದೆ. ಆದ್ದರಿಂದ ಬದಲಾವಣೆಯನ್ನು ಧೈರ್ಯದಿಂದ ಒಪ್ಪಿಕೊಂಡು ಮುಂದುವರಿಯುವುದೇ ಜಾಣತನ.
ಹೋರಾಡಲು ಹಿಂಜರಿಯುವವರು
ಚಾಣಕ್ಯ ನೀತಿಯಲ್ಲಿ ಜೀವನದಲ್ಲಿ ಎಂದಿಗೂ ಹೋರಾಡಲು ಹೆದರಬಾರದು ಎಂದು ಹೇಳಲಾಗಿದೆ. ಮನುಷ್ಯ ಜೀವನದಲ್ಲಿ ಮುಂದುವರಿಯಬೇಕೆಂದರೆ ಹೋರಾಡಲೇ ಬೇಕು. ಅದರಿಂದ ಮನುಷ್ಯನು ಬಲಶಾಲಿಯಾಗುತ್ತಾನೆ. ಕಷ್ಟಗಳನ್ನು ಸಹಿಸುವ ಶಕ್ತಿಯನ್ನು ಪಡೆಯುತ್ತಾನೆ. ಆದ್ದರಿಂದ ಜೀವನದ ಸಂಘರ್ಷಗಳಿಗೆ ಹೆದರುವ ವ್ಯಕ್ತಿ ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಕಷ್ಟಪಟ್ಟು ಕೆಲಸ ಮಾಡದವರನ್ನು ದೇವರು ಕೂಡಾ ಕೈಹಿಡಿಯುವುದಿಲ್ಲ. ಕೆಲಸ ಮಾಡದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೋರಾಟ ಅಥವಾ ಸಂಘರ್ಷವನ್ನು ಜೀವನದ ಒಂದು ಭಾಗವಾಗಿಸಿಕೊಂಡೇ ಮುಂದುವರಿಯಬೇಕು. ಕಷ್ಟ ಪಟ್ಟು ಕೆಲಸ ಮಾಡಿದರೆ ಫಲಿತಾಂಶವು ಯಾವಾಗಲೂ ಉತ್ತಮವೇ ಆಗಿರುತ್ತದೆ. ಅಂತಹ ಜನರು ಸಮಾಜದಲ್ಲಿಯೂ ಗೌರವ ಪಡೆಯುತ್ತಾರೆ. ಜೊತೆಗೆ ಯಶಸ್ಸನ್ನು ಕಾಣುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ