Chanakya Niti: ಮನಸ್ಸಿನಲ್ಲಿ ದುರಾಸೆ, ಸ್ವಾರ್ಥ ತುಂಬಿರುವ ಅಪಾಯಕಾರಿ ಜನರ ಸಹವಾಸ ಎಂದಿಗೂ ಮಾಡಬೇಡಿ – ಚಾಣಕ್ಯ ನೀತಿ
Chanakya Niti: ಕೆಲವರು ಸದಾ ನಮ್ಮೊಂದಿಗೆ ಇದ್ದು ನಮಗೆ ತಿಳಿಯದೆಯೇ ಹಾನಿಯುಂಟು ಮಾಡುತ್ತಾರೆ. ನಾವು ಅವರನ್ನು ನಂಬುವಷ್ಟು ಅವರ ನಮ್ಮನ್ನು ನಂಬುವುದಿಲ್ಲ. ಅಂತಹ ಜನರೊಂದಿಗೆ ಬಹಳ ಎಚ್ಚರಿಕೆಯಿಂದಿರಬೇಕು.

ಆಚಾರ್ಯ ಚಾಣಕ್ಯರು ಮಹಾನ್ ತತ್ವಜ್ಞಾನಿಗಳು. ನೀತಿ ಶಾಸ್ತ್ರದ ರಚನಾಕಾರರಾದ ಚಾಣಕ್ಯರು ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ನೀತಿ ಶಾಸ್ತ್ರದ ಮೂಲಕ ಜನಸಾಮಾನ್ಯರ ದಿನಿನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಚಾಣಕ್ಯರ ನೀತಿಗಳು ಜನರಿಗೆ ಉತ್ತಮ ಸಂದೇಶಗಳಾಗಿವೆ. ಅವುಗಳನ್ನು ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡರೆ ಕಷ್ಟಗಳು ದೂರವಾಗುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ, ನಮ್ಮಲ್ಲಿ ಕೆಲವರು ತುಂಬಾ ಅಪಾಯಕಾರಿ ವ್ಯಕ್ತಿಗಳಾಗಿರುತ್ತಾರೆ. ಅವರು ಹಾವು, ಚೇಳುಗಳಿಗಿಂತಲೂ ಹೆಚ್ಚು ಅಪಾಯವನ್ನುಂಟು ಮಾಡುವವರಾಗಿರುತ್ತಾರೆ. ಅಂತಹ ವ್ಯಕ್ತಿಗಳಿಂದ ಒಬ್ಬರ ಜೀವನವೇ ಹಾಳಾಗುತ್ತದೆ. ಮನಸ್ಸನ್ನು ವಿಷಪೂರಿತಗೊಳಿಸುವ ಕೆಟ್ಟ ಜನರಿಂದ ದೂರವಿರಬೇಕು ಎಂಬುದು ಚಾಣಕ್ಯರ ಸಲಹೆ. ಅಂತಹ ಜನರಿಂದ ಎಂದಿಗೂ ಸಹಾಯವನ್ನು ಕೇಳಬಾರದು. ನಾವು ಜೀವನದಲ್ಲಿ ಸಂತೋಷವಾಗಿ ಇರಬೇಕೆಂದರೆ ಅಂತಹ ಜನರಿಂದ ದೂರವಿರಬೇಕು. ಆಚಾರ್ಯ ಚಾಣಕ್ಯರ ಪ್ರಕಾರ ಇನ್ನೊಬ್ಬರ ಜೀವನವನ್ನು ಹಾಳುಮಾಡುವವರು ಯಾರು ಎಂದು ನೋಡೋಣ.
ಆಚಾರ್ಯ ಚಾಣಕ್ಯರ ಪ್ರಕಾರ, ದುರಾಸೆಯ ಜನರಿಂದ ಯಾವತ್ತೂ ದೂರವಿರಬೇಕು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಅವರ ಸಹಾಯ ಪಡೆದುಕೊಳ್ಳಬಾರದು. ಏಕೆಂದರೆ ಅಂತಹ ಜನರಿಗೆ ನಿಮಗೆ ಸಹಾಯ ಮಾಡುವ ಯಾವುದೇ ಒಳ್ಳೆಯ ಉದ್ದೇಶವಿರುವುದಿಲ್ಲ. ಮೇಲ್ನೋಟಕ್ಕೆ ಅವರು ನಿಮಗೆ ಸಹಾಯ ಮಾಡಿದಂತೆ ತೋರಿಸಿಕೊಂಡು ನಿಮ್ಮಿಂದ ದುಪ್ಪಟ್ಟು ಲಾಭ ಪಡೆದುಕೊಳ್ಳುತ್ತಾರೆ. ಇದರಿಂದ ನಿಮ್ಮ ಜೀವನ ನಾಶವಾಗುತ್ತದೆ. ನಿಮ್ಮ ಯಶಸ್ಸು ಮತ್ತು ಅಭಿವೃದ್ಧಿ ಎಂದಿಗೂ ಬಯಸುವುದಿಲ್ಲ. ಅವರಿಗೆ ನಿಮ್ಮ ಕಷ್ಟ ಅಥವಾ ನೋವು ಕಾಣಿಸುವುದಿಲ್ಲ. ಅವರ ಲಾಭ ಮಾತ್ರ ಕಾಣಿಸುತ್ತದೆ. ಆದ್ದರಿಂದ ದುರಾಸೆಯ ಜನರ ಸಹವಾಸ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ಚಾಣಕ್ಯರ ಪ್ರಕಾರ, ಅತಿಯಾಗಿ ಕೋಪಗೊಳ್ಳುವ ಜನರಿಂದ ದೂರವಿರಬೇಕು. ಎಲ್ಲರಿಗೂ ತಿಳಿದಿರುವಂತೆ, ಕೋಪವು ಮನುಷ್ಯನ ದೊಡ್ಡ ಶತ್ರು. ಅತಿಯಾಗಿ ಕೋಪಗೊಂಡ ವ್ಯಕ್ತಿಯು ಆ ಕ್ಷಣದಲ್ಲಿ ಯಾವುದೇ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾನೆ. ಅಷ್ಟೇ ಅಲ್ಲ, ಅವನ ಕೋಪವು ಇತರರಿಗೆ ಹಾಗೂ ಸ್ವತಃ ಅವನಿಗೆ ಹಾನಿಯನ್ನುಂಟುಮಾಡಬಹುದು. ವ್ಯಕ್ತಿಯು ಕೋಪಗೊಂಡಾಗ, ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಬುದ್ದಿವಂತಿಕೆಯನ್ನು ಕಳೆದುಕೊಂಡಿರುತ್ತಾನೆ. ಅಂತಹ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾರ್ಥಿಗಳ ಸಹವಾಸ ಮಾಡಬಾರದು. ಏಕೆಂದರೆ ಅಂತಹ ಜನರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಅವರು ತಮ್ಮ ಸ್ವಾರ್ಥವನ್ನು ಮಾತ್ರ ನೋಡುತ್ತಾರೆ. ಅವರು ನಿಮ್ಮನ್ನು ಯಾವುದೇ ಸಮಯದಲ್ಲಿಯಾದರೂ ತೊಂದರೆಗೆ ಸಿಲುಕಿಸಬಹುದು. ಚಾಣಕ್ಯ ಪ್ರಕಾರ, ಸ್ವಾರ್ಥಿಗಳು ಹಿತ ಶತ್ರುಗಳಿದ್ದಂತೆ. ಶತ್ರುಗಳು ಹಿಂದಿನಿಂದ ನಮ್ಮ ಮೇಲೆ ದಾಳಿ ಮಾಡುತ್ತಾರೆ. ಆದರೆ ಸ್ವಾರ್ಥಿಗಳು ಹಾಗಲ್ಲ, ಅವರು ನಿಮ್ಮೊಂದಿಗೆ ಉಳಿದುಕೊಂಡು, ನಿಮ್ಮ ವಿಷಯಗಳನ್ನೆಲ್ಲಾ ತಿಳಿದುಕೊಂಡು, ನಿಮಗೆ ಮೋಸ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಂತಹ ಜನರನ್ನು ಎಂದಿಗೂ ನಂಬಬೇಡಿ. ಸ್ವಾರ್ಥಿಗಳು, ನಿಮ್ಮಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಬಗ್ಗೆ ಮಾತ್ರ ಯೋಚಿಸುತ್ತಾರೆ. ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಅಂತಹ ಜನರ ಬಲೆಗೆ ಬೀಳಬೇಡಿ. ಒಬ್ಬ ವ್ಯಕ್ತಿಗೆ ಅವನ ಜೀವನದಲ್ಲಿ ಒಳ್ಳೆಯ ನಂಬಿಕಸ್ಥ ವ್ಯಕ್ತಿ ಇರುವುದು ಬಹಳ ಮುಖ್ಯ. ಹಣ ಇಲ್ಲದಿದ್ದರೂ ಪರವಾಗಿಲ್ಲ, ಹೃದಯ ಶುದ್ಧವಾಗಿರುವ ಜನರೊಂದಿಗೆ ಸ್ನೇಹ ಬೆಳೆಸುವುದು ಉತ್ತಮ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
