Chanakya Niti: ಚಾಣಕ್ಯರ ಪ್ರಕಾರ ಈ ರೀತಿ ಮಾತಾಡುವವರು ತಾವು ಸಂತೋಷವಾಗಿರುವುದರ ಜತೆ ಸುತ್ತಲಿನ ಪರಿಸರವನ್ನು ಖುಷಿಯಾಗಿಡುತ್ತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ ರೀತಿ ಮಾತಾಡುವವರು ತಾವು ಸಂತೋಷವಾಗಿರುವುದರ ಜತೆ ಸುತ್ತಲಿನ ಪರಿಸರವನ್ನು ಖುಷಿಯಾಗಿಡುತ್ತಾರೆ

Chanakya Niti: ಚಾಣಕ್ಯರ ಪ್ರಕಾರ ಈ ರೀತಿ ಮಾತಾಡುವವರು ತಾವು ಸಂತೋಷವಾಗಿರುವುದರ ಜತೆ ಸುತ್ತಲಿನ ಪರಿಸರವನ್ನು ಖುಷಿಯಾಗಿಡುತ್ತಾರೆ

ಆಚಾರ್ಯ ಚಾಣಕ್ಯರ ನೀತಿಯು ಮಾನವರು ಹೇಗೆ ಬಾಳಬೇಕು ಎಂಬುದನ್ನು ಕಲಿಸುತ್ತದೆ. ಅವರು ಹೇಳುವ ಪ್ರಕಾರ ಕೆಲವು ಜನರು ತಾವು ಸಂತೋಷವಾಗಿರುವುದರ ಜೊತೆಗೆ ಇತರರೂ ಸಂತೋಷವಾಗಿರುವಂತೆ ನಡೆದುಕೊಳ್ಳುತ್ತಾರೆ. ಅದು ಹೇಗೆ ಇಲ್ಲಿದೆ ಓದಿ. (ಬರಹ: ಅರ್ಚನಾ ವಿ. ಭಟ್‌)

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಬರೆದ ಚಾಣಕ್ಯ ನೀತಿ ಬಹಳ ಜನಪ್ರಿಯವಾಗಿದೆ. ಚಾಣಕ್ಯರ ಅರ್ಥಶಾಸ್ತ್ರವಂತೂ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ. ಚಾಣಕ್ಯರು ತಮ್ಮ ನೀತಿ ಪುಸ್ತಕದಲ್ಲಿ ಮಾನವನ ಜೀವನವನ್ನು ಸರಳ ಮತ್ತು ಯಶಸ್ವಿಯಾಗಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ. ನೀವು ಆ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅದು ನಿಮಗೆ ದಾರಿದೀಪವಾಗುತ್ತದೆ. ಯಶಸ್ಸಿನ ಬಾಗಿಲು ತೆರೆಯುವಂತೆ ಮಾಡುತ್ತದೆ.

ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಮನುಷ್ಯನ ಗುಣಸ್ವಭಾವ ಹಾಗೂ ನಡವಳಿಕೆ ಹೇಗಿರಬೇಕೆಂದು ಹೇಳಿದ್ದಾರೆ. ಮನುಷ್ಯನು ಎಲ್ಲರೊಂದಿಗೆ ಒಟ್ಟಾಗಿ‌ ಬಾಳಬೇಕೆಂದರೆ ಅವನು ಕೆಲವು ವಿಷಯಗಳನ್ನು ಚೆನ್ನಾಗಿ ಅರಿತಿರಬೇಕು. ಬೇರೆಯವರಿಗೆ ನೋವನ್ನುಂಟು ಮಾಡುವಂತಹ ಸ್ವಭಾವವನ್ನು ಬೆಳೆಸಿಕೊಳ್ಳಬಾರದು. ಅದರಲ್ಲಿ ಪ್ರಮಖವೆಂದರೆ ಮಾತು. ಮಾತು ಮನುಷ್ಯನಿಗೆ ಬಹಳ ಮುಖ್ಯ. ಮಾತಿನ ಮೂಲಕವೇ ಸಂಬಂಧ, ವ್ಯವಹಾರಗಳು ನಡೆಯುತ್ತವೆ. ಒಳ್ಳೆಯ ಮಾತುಗಾರ ಎಂದಿಗೂ ಸೋಲನ್ನು ಅನುಭವಿಸುವುದಿಲ್ಲ. ಅದೇ ರೀತಿ ಕೆಲವರು ತಾವಾಡುವ ಮಾತುಗಳಿಂದ ತಾವು ಸಂತೋಷವಾಗಿರುವುದರ ಜೊತೆಗೆ ಇತರರಿಗೂ ಸಂತಸವನ್ನುಂಟು ಮಾಡುತ್ತಾರೆ. ಇದನ್ನು ಚಾಣಕ್ಯರು ಈ ಶ್ಲೋಕದ ಮೂಲಕ ಹೀಗೆ ವಿವರಿಸುತ್ತಾರೆ.

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ |

ತಸ್ಮಾತ್ತದೈವ ವಕ್ತವ್ಯಂ ವಚನೇ ಕಾ ದರಿದ್ರತಾ ||

ಈ ಶ್ಲೋಕದ ಅರ್ಥ: ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಮಾತಿನ ಮಹತ್ವವನ್ನು ಹೇಳಿದ್ದಾರೆ. ಅಂದರೆ ಯಾವಾಗಲೂ ಮಧುರವಾದ ಅಂದರೆ ಮನಸ್ಸಿಗೆ ಹಿತವನ್ನುಂಟುಮಾಡುವ ಮಾತುಗಳನ್ನೇ ಆಡಬೇಕು. ಹೀಗೆ ಮಾತನಾಡುವವರು ಸಂತೋಷವಾಗಿರುವುದರ ಜೊತೆಗೆ ತಮ್ಮ ಪ್ರಿಯವಾದ ಮಾತಿನಿಂದ ಇತರರನ್ನು ಸಂತೋಷದಲ್ಲಿರಿಸುತ್ತಾರೆ. ಇಂತಹ ಜನರ ಹತ್ತಿರ ಇರುವುದರಿಂದ ಧನಾತ್ಮಕತೆ ಹೆಚ್ಚುತ್ತದೆ ಹಾಗೂ ಮಾತಿನಲ್ಲೂ ಪರಿವರ್ತನೆಯಾಗುತ್ತದೆ.

ಪ್ರಿಯವಾದ ಮಾತಿನಿಂದ ಸಿಗುವ ಲಾಭಗಳು

ಪ್ರಿಯವಾದ ಮಾತುಗಳನ್ನಾಡುವ ವ್ಯಕ್ತಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಸಿಹಿಯಾಗಿ ಮಾತನಾಡುವುದರಿಂದ ಅವರ ಮನಸ್ಸು ಮತ್ತು ಇತರರ ಮನಸ್ಸು ಎರಡೂ ಸಂತೋಷವಾಗಿರುತ್ತದೆ. ಇದು ವ್ಯಕ್ತಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ ಮಧುರವಾದ ಮಾತುಗಳಿಂದ ಯಾವುದೇ ವ್ಯಕ್ತಿಯ ಮನಸ್ಸನ್ನು ಗೆಲ್ಲಬಹುದು. ಆದ್ದರಿಂದ ಕೋಪದಲ್ಲಿಯೂ ಸಹ ಎಂದಿಗೂ ನಿಂದನೆಯ ಅಥವಾ ಅಸಭ್ಯ ಭಾಷೆಯನ್ನು ಬಳಸಬಾರದು. ಏಕೆಂದರೆ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಗಾದೆಯಂತೆ ಒಮ್ಮೆ ಬಾಯಿಂದ ಬಂದ ಮಾತು ಎಂದಿಗೂ ಹಿಂತಿರುಗಿ ಬರುವುದಿಲ್ಲ. ಕೋಲಿನ ಏಟಿಗಿಂತ, ಮಾತುಗಳಿಂದ ಉಂಟಾದ ಗಾಯಗಳು ಎಂದಿಗೂ ಗುಣವಾಗುವುದಿಲ್ಲ. ದೇಹಕ್ಕೆ ಉಂಟಾದ ಏಟಿಗಿಂತ ಮಾತಿನ ಏಟು ಇನ್ನೂ ಹರಿತವಾಗಿರುತ್ತದೆ. ಆದ್ದರಿಂದ ಯಾವಾಗಲೂ ಮಧುರವಾದ ಮಾತುಗಳನ್ನೇ ಆಡಬೇಕೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner