Chanakya Niti: ಚಾಣಕ್ಯರ ಈ 4 ಸೂತ್ರಗಳಿಂದ ನಿಮ್ಮ ಅತಿದೊಡ್ಡ ಶತ್ರುವನ್ನು ಸಹ ಸುಲಭವಾಗಿ ಸೋಲಿಸಬಹುದು
Chanakya Niti: ಆಚಾರ್ಯ ಚಾಣಕ್ಯರು ಪ್ರಾಚೀನ ಭಾರತದ ಶ್ರೇಷ್ಠ ರಾಜನೀತಿಜ್ಞರು. ಚಾಣಕ್ಯರು ನೀತಿ ಶಾಸ್ತ್ರದಲ್ಲಿ ನಿಮ್ಮ ಅತಿದೊಡ್ಡ ಶತ್ರುವನ್ನು ಸಹ ಸುಲಭವಾಗಿ ಜಯಿಸಲು 4 ಸೂತ್ರಗಳನ್ನು ಹೇಳಿದ್ದಾರೆ. (ಬರಹ: ಅರ್ಚನಾ ವಿ.ಭಟ್)

ಭಾರತದ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಚಾಣಕ್ಯ ನೀತಿ ಮತ್ತು ಅರ್ಥಶಾಸ್ತ್ರದಂತಹ ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ, ಕೆಟ್ಟ ಸಮಯದಲ್ಲಿ ಸಹಾಯ ಮಾಡುವ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಬರುವ ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ. ಕೆಟ್ಟ ಸನ್ನಿವೇಶಗಳಿಗೆ ನಿಮ್ಮನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕೆಂದನ್ನು ಅವರು ವಿವರವಾಗಿ ಮತ್ತು ಕೆಲವು ಸೂತ್ರಗಳ ಮೂಲಕ ಉಲ್ಲೇಖಿಸಿದ್ದಾರೆ. ಕೆಲವು ವಿಷಯಗಳನ್ನು ಅನುಸರಿಸಿದರೆ ಶತ್ರುಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಸೋಲಿಸಬಹುದು ಎಂಬುದು ಅವರು ನಮಗೆ ನೀಡಿರುವ ಸಂದೇಶವಾಗಿದೆ.
ಭಯದ ವಿರುದ್ಧ ಹೋರಾಡಿ
ಯಾವಾಗಲೂ ಭಯವೇ ನಮ್ಮನ್ನು ದುರ್ಬಲಗೊಳಿಸುತ್ತದೆ. ಅದೇ ರೀತಿ ಸಂದರ್ಭಗಳು ನಮ್ಮನ್ನು ಆಳುತ್ತವೆ. ಭಯಭೀತ ವ್ಯಕ್ತಿಗಿಂತ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯು ಪರಿಸ್ಥಿತಿಯನ್ನು ಜಯಿಸುವ ಸಾಧ್ಯತೆ ಹೆಚ್ಚು. ಅತಿಯಾಗಿ ಭಯಪಡುವವರು ಅಪಾಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು, ನೀವು ಮೊದಲು ಭಯದ ವಿರುದ್ಧ ಹೋರಾಡಬೇಕು. "ಭಯ ಬಂದಾಗ ಯೋಧನಂತೆ ದಾಳಿ ಮಾಡಿ ಕೊಲ್ಲು" ಎಂದು ಚಾಣಕ್ಯರು ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಿ
ನಿಮ್ಮ ವೈಫಲ್ಯಕ್ಕೆ ನಿಮ್ಮ ಕೆಟ್ಟ ಸಮಯವೇ ಕಾರಣ ಎಂದು ನೀವು ಭಾವಿಸಿದರೆ ಅದು ತಪ್ಪು. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಅದೇನೆಂದರೆ, ಅನೇಕ ಜನರು ಕೆಟ್ಟ ಸಮಯವನ್ನು ಎದುರಿಸಬೇಕಾದಾಗ ದುಃಖವು ಅವರ ಹೃದಯವನ್ನು ಆವರಿಸುತ್ತದೆ. ಅದು ಅವರನ್ನು ನಿರಾಶೆಗೊಳಿಸುತ್ತದೆ. ಆದ್ದರಿಂದ ಹಿಂದಿನ ಅಥವಾ ಭವಿಷ್ಯದ ಬಗ್ಗೆ ಯೋಚಿಸದೆ, ಪರಿಸ್ಥಿತಿಯನ್ನು ನಿಭಾಯಿಸಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ವರ್ತಮಾನದಲ್ಲಿಯೇ ಬದುಕಬೇಕು. ಸಮಯ ಅನುಕೂಲಕರವಾಗಿಲ್ಲದಿದ್ದಾಗ, ತಾಳ್ಮೆಯಿಂದಿರಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಚಾಣಕ್ಯ ನೀತಿ ಹೇಳುವಂತೆ, ನಿಮ್ಮ ಭೂತಕಾಲದ ಬಗ್ಗೆ ಚಿಂತಿಸಬೇಡಿ, ನಿಮ್ಮ ಭವಿಷ್ಯದ ಬಗ್ಗೆಯೂ ಚಿಂತಿಸಬೇಡಿ, ನಿಮ್ಮ ವರ್ತಮಾನದಲ್ಲಿ ಚೆನ್ನಾಗಿ ಬದುಕಿ.
ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ನಿಮ್ಮ ಈ ಪರಿಸ್ಥಿತಿಗೆ ನಿಮ್ಮ ಶತ್ರುಗಳೇ ಕಾರಣವಾಗಿರಬಹುದು. ನಿಮ್ಮ ಎದುರಾಳಿಯು ನಿಮ್ಮ ನೈತಿಕ ಸ್ಥೆರ್ಯವನ್ನು ಕುಗ್ಗಿಸಿದರೆ ನಿಮ್ಮನ್ನು ಸೋಲಿಸುವುದು ಸುಲಭ. ಆತ್ಮವಿಶ್ವಾಸವು ಒಬ್ಬ ವ್ಯಕ್ತಿಗೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಎಂತಹುದೇ ಪರಿಸ್ಥಿತಿಯಲ್ಲಾದರೂ ಸರಿ ಸದಾ ಸಂತೋಷವಾಗಿರಿ. ನೀವು ಆತ್ಮವಿಶ್ವಾಸ ಹೊಂದಿದ್ದರೆ, ಅದು ಶತ್ರುವನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಸಂತೋಷವನ್ನು ನೋಡಲು ಇಷ್ಟಪಡದವರ ಎದುರು ಖುಷಿಯಾಗಿರಿ. ಅದೇ ನೀವು ಅವರಿಗೆ ಕೊಡಬಹುದಾದ ದೊಡ್ಡ ಶಿಕ್ಷೆಯಾಗಿರುತ್ತದೆ.
ಬಲಶಾಲಿಗಳಾಗಿ
ನಿಮ್ಮನ್ನು ನೀವು ಬಲಶಾಲಿಯಾಗಿ ರೂಪಿಸಿಕೊಳ್ಳಿ. ಎದುರಾಳಿಯು ಬಲಿಷ್ಠನಾಗಿದ್ದಾಗ ಎಲ್ಲರಿಗೂ ಭಯವಾಗುವುದು ಸಹಜ. ಅನೇಕ ಸಲ ದುರುದ್ದೇಶಪೂರಿತ ಜನರು ತಮಗಿಂತ ಬಲಶಾಲಿಗಳನ್ನು ಎದುರಿಸಲು ಹೋಗುವುದಿಲ್ಲ. ಅವರು ಮೊದಲು ದುರ್ಬಲರ ಮೇಲೆಯೇ ದಾಳಿ ಮಾಡುತ್ತಾರೆ. ಆದ್ದರಿಂದ, ನೀವು ಯಾವಾಗಲೂ ನಿಮ್ಮನ್ನು ಬಲಿಷ್ಠ ವ್ಯಕ್ತಿಯೆಂದು ಬಿಂಬಿಸಿಕೊಳ್ಳಬೇಕು. ನಿಮ್ಮ ಶತ್ರುವಿಗೆ ನೀವು ಬಲಿಷ್ಠರೆಂದು ತಿಳಿದಿದ್ದರೆ, ಅವರು ನಿಮ್ಮನ್ನು ಎದುರಿಸಿ ನಿಲ್ಲುವ ಆಲೋಚನೆಯನ್ನೂ ಮಾಡುವುದಿಲ್ಲ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ