ಕನ್ನಡ ಸುದ್ದಿ  /  Lifestyle  /  Child Care Best Summer Food For Growing Children Including Tender Coconut Water Melon In Summer Rsa

Summer Tips: ಬೇಸಿಗೆಯಲ್ಲಿ ಮಕ್ಕಳಿಗೆ ನಿರ್ಜಲೀಕರಣ ಉಂಟಾಗದಂತೆ ಅವರ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳನ್ನು ನೀಡಿ

Summer Tips: ಬೇಸಿಗೆಯಲ್ಲಿ ಮಕ್ಕಳಿಗೆ ನಿತ್ರಾಣ, ನಿರ್ಜಲೀಕರಣ, ಅಜೀರ್ಣ ಹಾಗೂ ಮಲಬದ್ಧತೆಯಂತಹ ಸಮಸ್ಯೆ ಕಾಡುತ್ತದೆ.ಹೀಗಾಗಿ ಸೂರ್ಯನ ಶಾಖದಿಂದ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಯಾವೆಲ್ಲ ಆಹಾರಗಳನ್ನು ನೀಡಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ (PC: Unsplash)

Summer Tips: ನೋಡ ನೋಡುತ್ತಿದ್ದಂತೆಯೇ ಬೇಸಿಗೆ ಕಾಲ ಆರಂಭಗೊಂಡಿದೆ. ಬಿಸಿಲಿನ ಬೇಗೆ ಅತಿಯಾದಂತೆಲ್ಲ ಸನ್ ಸ್ಟ್ರೋಕ್‌ಗಳು, ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡಲು ಆರಂಭಿಸುತ್ತದೆ. ಅತಿಯಾದ ಬಿಸಿಲಿನಿಂದ ಪಾರಾಗಲು ಜನರು ಫ್ಯಾನ್‌, ಎಸಿ , ಕೂಲರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.

ಜೊತೆಗೆ ಈ ಸಮಯದಲ್ಲಿ ಮಕ್ಕಳು ಸೇರಿದಂತೆ ವಯಸ್ಕರು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಅಲ್ಲದೇ ದೇಹವನ್ನು ತಂಪಾಗಿರಿಸಲು ಸರಿಯಾದ ಆಹಾರದ ಆಯ್ಕೆ ಕೂಡ ಮುಖ್ಯವಾಗಿರುತ್ತದೆ. ವಯಸ್ಕರಿಗೆ ಹೋಲಿಕೆ ಮಾಡಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುವ ಅಪಾಯ ಹೆಚ್ಚಿರುತ್ತದೆ.

ಮಕ್ಕಳಿಗೆ ದ್ರವರೂಪದ ಆಹಾರ ನೀಡಿ

ಶಾಲಾ ರಜಾದಿನಗಳು ಕೂಡ ಬೇಸಿಗೆಗಾಲದಲ್ಲಿಯೇ ಬರುತ್ತದೆ. ಈ ಸಮಯದಲ್ಲಿ ಮಕ್ಕಳು ಹೊರಾಂಗಣ ಆಟಗಳಲ್ಲಿ ಹೆಚ್ಚು ಭಾಗಿಯಾಗುತ್ತಾರೆ. ಇದರಿಂದ ಸಾಕಷ್ಟು ಬೆವರುತ್ತಾರೆ ಹಾಗೂ ಆಯಾಸಗೊಳ್ಳುತ್ತಾರೆ ಕೂಡ..! ಹೀಗಾಗಿ ಮಕ್ಕಳಿಗೆ ನಿರ್ಜಲೀಕರಣದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಎಳನೀರು, ಕಲ್ಲಂಗಡಿ ಹಾಗೂ ಕಬ್ಬಿನ ಜ್ಯೂಸ್‌ನ್ನು ಆಗಾಗ ನೀಡುತ್ತಿರಬೇಕು. ಮಕ್ಕಳಿಗೆ ಸರಿಯಾಗಿ ನೀರು ಕುಡಿಯುವಂತೆ ನಿರ್ದೇಶನ ನೀಡಬೇಕು. ಆದಷ್ಟು ಮಕ್ಕಳಿಗೆ ದ್ರವ ರೂಪದ ಆಹಾರಗಳನ್ನು ನೀಡುತ್ತಿರಬೇಕು. ಮನೆಯಲ್ಲೇ ಮಕ್ಕಳಿಗೆ ಐಸ್ ಕ್ರೀಂ ತಯಾರಿಸಿ ನೀಡಿದರೆ ಇನ್ನೂ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಬೇಸಿಗೆಯಲ್ಲಿ ಮಕ್ಕಳು ಯಾವೆಲ್ಲ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ

ಆರೋಗ್ಯಕರ ಪಾನೀಯಗಳು: ನೆತ್ತಿಯ ಮೇಲೆ ನಿಗಿ ನಿಗಿ ಕೆಂಡ ಕಾರುವ ಸೂರ್ಯನ ಶಾಖದಿಂದಾಗಿ ನಿರ್ಜಲೀಕರಣ ಉಂಟಾಗುವ ಅಪಾಯ ಜಾಸ್ತಿ ಇರುತ್ತದೆ. ಇದರಿಂದ ದೇಹದಲ್ಲಿ ಉಂಟಾಗುವ ನಿತ್ರಾಣವನ್ನು ನಿಯಂತ್ರಿಸಲು ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಮಗುವಿಗೆ ಪ್ರೋಟೀನ್ ಶೇಕ್‌ಗಳು ಸೇರಿದಂತೆ ಆರೋಗ್ಯಕರ ಪಾನೀಯಗಳನ್ನು ನೀಡಬೇಕು. ವಿವಿಧ ಹಣ್ಣುಗಳು ಹಾಗೂ ತರಕಾರಿಗಳಿಂದ ತಯಾರಿಸಿದ ಪಾನೀಯಗಳನ್ನು ಮಕ್ಕಳ ಆಹಾರದ ಜೊತೆ ನೀಡಬೇಕು. ಹೆಚ್ಚಿನ ಕ್ಯಾಲೋರಿ ಹೊಂದಿರುವ ಪಾನೀಯಗಳನ್ನು ಮಕ್ಕಳಿಗೆ ನೀಡಿ. ಎಳನೀರು ಮಕ್ಕಳ ನಿರ್ಜಲೀಕರಣ ಹೋಗಲಾಡಿಸಲು ಉತ್ತಮ ಅಯ್ಕೆಯಾಗಿದೆ. ಹೀಗಾಗಿ ಮಕ್ಕಳಿಗೆ ನಿತ್ಯವೂ ಒಂದು ಎಳನೀರು ಕುಡಿಯಲು ನೀಡಿ.

ಮೊಸರು: ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪ್ರೊಬಯಾಟಿಕ್‌ ಸಂಯೋಜನೆ ಇರುತ್ತದೆ. ಇದು ಚಳಿಗಾಲದಲ್ಲಿ ಮಕ್ಕಳಿಗೆ ಜೀರ್ಣಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಕ್ಕಳಿಗೆ ಊಟದ ಸಮಯದಲ್ಲಿ ಮೊಸರನ್ನು ನೀಡುವುದು ಉತ್ತಮ. ಇದು ದೇಹಕ್ಕೆ ತಂಪು ಮಾತ್ರವಲ್ಲದೇ ಉತ್ತಮ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ಆಮ್ಲೀಯ ಹಣ್ಣುಗಳು : ಬೇಸಿಗೆಯಲ್ಲಿ ಮಕ್ಕಳಿಗೆ ಪ್ರಮುಖ ಜೀವಸತ್ವ ಹಾಗೂ ಖನಿಜಗಳನ್ನು ಒದಗಿಸಲು ಸಿಟ್ರಸ್ ಅಂಶ ಹೆಚ್ಚಿರುವ ನಿಂಬೆ ಹಣ್ಣು ಹಾಗೂ ಕಿತ್ತಳೆ ಹಣ್ಣುಗಳನ್ನು ನೀಡಬೇಕು. ನಿಂಬೆ ಹಣ್ಣಿನ ಪಾನೀಯ ಮಕ್ಕಳಿಗೆ ಜೀರ್ಣಕ್ರಿಯೆ ಸುಧಾರಿಸಲು, ನಿರ್ಜಲೀಕರಣ ಸಮಸ್ಯೆ ಹೋಗಲಾಡಿಸಲು ಸೇರಿದಂತೆ ಎಲ್ಲದಕ್ಕೂ ಸಹಕಾರಿಯಾಗಿದೆ. ಕಿತ್ತಳೆ ಹಣ್ಣುಗಳು ಕೂಡ ಇದೇ ರೀತಿ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದರ ಜೊತೆಯಲ್ಲಿ ಋತುಮಾನದ ಹಣ್ಣುಗಳಾದ ಕಲ್ಲಂಗಡಿ ಹಾಗೂ ಮಾವಿನ ಹಣ್ಣುಗಳು ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಹಸಿರು ತರಕಾರಿಗಳು : ಆಮ್ಲೀಯ ಅಂಶಯುಕ್ತ ಹಣ್ಣುಗಳು ದೇಹಕ್ಕೆ ವಿಟಮಿನ್ ಸಿ ಅಂಶವನ್ನು ಒದಗಿಸಿದರೆ ಹಸಿರು ತರಕಾರಿಗಳು ಮಕ್ಕಳಿಗೆ ಶಕ್ತಿಯನ್ನು ನೀಡುತ್ತದೆ. ಪಾಲಕ್ ಸೊಪ್ಪು, ಎಲೆಕೋಸು, ಮೆಂತ್ಯ ಸೊಪ್ಪುಗಳು, ಹರಿವೆ ಹಾಗೂ ಬಸಳೆ ಸೊಪ್ಪುಗಳು ಸಾಕಷ್ಟು ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಮಕ್ಕಳಿಗೆ ವಿಟಮಿನ್ ಸಿ, ಫೋಲಿಕ್ ಆಮ್ಲ, ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಸೇರಿದಂತೆ ವಿವಿಧ ಖನಿಜಾಂಶಗಳನ್ನು ನೀಡುತ್ತದೆ. ಇದರ ಜೊತೆಯಲ್ಲಿ ಸೌತೆಕಾಯಿ ಕೂಡ ದೇಹಕ್ಕೆ ತಂಪನ್ನು ಒದಗಿಸುತ್ತದೆ. ಅಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಯಲ್ಲಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ಈ ಹಸಿರು ತರಕಾರಿಗಳು ನಿವಾರಿಸುತ್ತವೆ.