ಮಕ್ಕಳಿಗೂ ಸನ್‌ಸ್ಕ್ರೀನ್‌ ಹಚ್ಚೋದು ಮರಿಬೇಡಿ; ಎಳೆ ವಯಸ್ಸಿನವರಿಗೆ ಸನ್‌ಸ್ಕ್ರೀನ್ ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳ್ಕೊಂಡಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗೂ ಸನ್‌ಸ್ಕ್ರೀನ್‌ ಹಚ್ಚೋದು ಮರಿಬೇಡಿ; ಎಳೆ ವಯಸ್ಸಿನವರಿಗೆ ಸನ್‌ಸ್ಕ್ರೀನ್ ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳ್ಕೊಂಡಿರಿ

ಮಕ್ಕಳಿಗೂ ಸನ್‌ಸ್ಕ್ರೀನ್‌ ಹಚ್ಚೋದು ಮರಿಬೇಡಿ; ಎಳೆ ವಯಸ್ಸಿನವರಿಗೆ ಸನ್‌ಸ್ಕ್ರೀನ್ ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳ್ಕೊಂಡಿರಿ

ಪಿಕ್‌ನಿಕ್ ಇರಬಹುದು, ಸ್ಕೂಲ್ ಡೇ, ಸ್ಪೋರ್ಟ್ಸ್ ಡೇ ಇರಬಹುದು.. ಮಕ್ಕಳು ಸದಾ ಹೊರಗಡೆ ಬಿಸಿಲಿನಲ್ಲಿ ಇರುತ್ತಾರೆ. ಹಾಗಿರುವಾಗ ಅವರಿಗೆ ಬಿಸಿಲಿನಿಂದ ರಕ್ಷಣೆ ಬೇಕಾಗುತ್ತದೆ. ಜತೆಗೆ ತ್ವಚೆಯ ಕಾಳಜಿಯನ್ನೂ ಮಾಡಬೇಕಾಗುತ್ತದೆ. ಮಕ್ಕಳ ಸನ್‌ಸ್ಕ್ರೀನ್ ಬಳಕೆ ಬಗ್ಗೆ ತಜ್ಞರು ಹೇಳುವುದೇನು?

ಮಕ್ಕಳ ಸನ್‌ಸ್ಕ್ರೀನ್ ಬಳಕೆ ಬಗ್ಗೆ ತಜ್ಞರು ಹೇಳುವುದೇನು?
ಮಕ್ಕಳ ಸನ್‌ಸ್ಕ್ರೀನ್ ಬಳಕೆ ಬಗ್ಗೆ ತಜ್ಞರು ಹೇಳುವುದೇನು? (Pixabay)

ಚರ್ಮದ ಆರೈಕೆ ವಿಚಾರ ಬಂದಾಗ ನಮಗೆ ಹೆಚ್ಚಾಗಿ ತೊಂದರೆಯಾಗುವುದು ಸೂರ್ಯನ ಅತಿನೇರಳೆ ಕಿರಣಗಳಿಂದ. ಅದರಲ್ಲೂ ಸಣ್ಣ ಮಕ್ಕಳು ಮತ್ತು ಹದಿಹರೆಯದವರ ತ್ವಚೆಗೆ ಸೂರ್ಯನ ಕಿರಣಗಳು ನೇರವಾಗಿ ಸೋಕಿದರೆ ಅವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಮಕ್ಕಳು ಆಟೋಟ, ಪಿಕ್‌ನಿಕ್, ಸ್ಕೂಲ್ ಡೇ ಎಂದು ಹೊರಗಡೆ ಬಿಸಿಲಿನಲ್ಲಿ ಇರುವಾಗ, ಅವರ ಎಳೆಚರ್ಮವನ್ನು ಸನ್‌ಸ್ಕ್ರೀನ್ ಬಳಸಿ ಕಾಪಾಡಬಹುದು. ಮಕ್ಕಳು ಸನ್‌ಸ್ಕ್ರೀನ್ ಬಳಸುವುದರಿಂದ ಅವರ ಕೋಮಲ ತ್ವಚೆ ಸೂರ್ಯನ ಬಿಸಿಲಿನಿಂದ ಕಪ್ಪಾಗುವುದನ್ನು ತಡೆಯುವುದಲ್ಲದೆ, ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳಬಹುದಾದ ಚರ್ಮದ ಕ್ಯಾನ್ಸರ್‌ನಿಂದ ಕಾಪಾಡುತ್ತದೆ. ಯಾಕೆಂದರೆ ಮಕ್ಕಳ ಚರ್ಮ ನೇರ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಅವರಲ್ಲಿ ಸಣ್ಣ ವಯಸ್ಸಿನಲ್ಲಿಯೇ ಚರ್ಮ ಗಡುಸಾಗಿ ವಯಸ್ಕರಂತೆ ಕಾಣಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಅವರ ಚರ್ಮದ ಆರೈಕೆಯನ್ನು ಹೆತ್ತವರು ಮಾಡಬೇಕಿದೆ.

ಮಿನರಲ್ ಮತ್ತು ಕೆಮಿಕಲ್ ಸನ್‌ಸ್ಕ್ರೀನ್

ಸನ್‌ಸ್ಕ್ರೀನ್ ಬಳಕೆಯಲ್ಲಿ ಎರಡು ವಿಧಗಳಿವೆ. ಮಿನರಲ್ ಮತ್ತು ಕೆಮಿಕಲ್ ಎಂದಿದ್ದು, ಮಿನರಲ್ ಸನ್‌ಸ್ಕ್ರೀನ್ ಸೂಕ್ಷ್ಮ ಚರ್ಮಕ್ಕೆ ಸೂಕ್ತ ಮತ್ತು ತಕ್ಷಣದ ರಕ್ಷಣೆಯನ್ನು ಒದಗಿಸುತ್ತವೆ. ಅವು ಸೂರ್ಯನ ಅತಿನೇರಳೆ ಕಿರಣಗಳನ್ನು ಚದುರಿಸುವ ಮೂಲಕ ಚರ್ಮವನ್ನು ರಕ್ಷಿಸುತ್ತವೆ. ಮತ್ತೊಂದೆಡೆ, ರಾಸಾಯನಿಕ ಸನ್‌ಸ್ಕ್ರೀನ್‌ಗಳು ಸೂರ್ಯನ ಅತಿ ನೇರಳೆ ಕಿರಣಗಳನ್ನು ಹೀರಿಕೊಂಡು ಅವುಗಳನ್ನು ಶಾಖವಾಗಿ ಪರಿವರ್ತಿಸುತ್ತವೆ, ನಂತರ ಅದು ಚರ್ಮದಿಂದ ಬಿಡುಗಡೆಯಾಗುತ್ತದೆ. ರಾಸಾಯನಿಕ ಸನ್‌ಸ್ಕ್ರೀನ್ ಹಚ್ಚಿಕೊಂಡಾಗ ಹಗುರವಾದ ಪದರದಂತೆ ಇದ್ದು, ಜಿಡ್ಡಿನಂತೆ ಭಾಸವಾಗಬಹುದು. ಅಲ್ಲದೆ, ಹಚ್ಚಿದ 15ರಿಂದ 30 ನಿಮಿಷಗಳ ನಂತರ ಕೆಲಸ ಮಾಡಲಾರಂಭಿಸುತ್ತದೆ.

ಮಕ್ಕಳಿಗೆ ಯಾವ ರೀತಿಯ ಸನ್‌ಸ್ಕ್ರೀನ್ ಸೂಕ್ತ

ಮಕ್ಕಳಿಗೆ ಸನ್‌ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುವಾಗ ಚರ್ಮಕ್ಕೆ ಸೂಕ್ತವಾದ ಸನ್‌ಸ್ಕ್ರೀನ್ ಆರಿಸಿಕೊಳ್ಳುವುದು ಹೆಚ್ಚು ಉತ್ತಮ. ಯಾಕೆಂದರೆ ಎಳೆ ಚರ್ಮವನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಿ, ಸನ್‌ಬರ್ನ್, ವಯಸ್ಸಾದಂತೆ ಕಾಣಿಸುವುದು ಮತ್ತು ಚರ್ಮದ ಕ್ಯಾನ್ಸರ್‌ನಿಂದ ರಕ್ಷಿಸಬೇಕಾಗುತ್ತದೆ.

ನೀರು ಸೋಕಿದರೂ ಉಳಿಯುವ ಸನ್‌ಸ್ಕ್ರೀನ್

ಮಕ್ಕಳು ನೀರಿನಲ್ಲಿ ಆಟವಾಡುವುದು ಮತ್ತು ನೀರಿನ ಬಳಕೆಯನ್ನು ಮಾಡಿಕೊಂಡೇ ಇರುತ್ತಾರೆ. ಹೀಗಾಗಿ ನೀರು ತಾಗಿದರೂ, ಉಳಿಯುವ ಸನ್‌ಸ್ಕ್ರೀನ್ ಬಳಸಿ, ಹಾಗಾದಾಗ ದಿನಪೂರ್ತಿ ಮಗುವಿಗೆ ಸನ್‌ಸ್ಕ್ರೀನ್ ರಕ್ಷಣೆ ದೊರೆಯುತ್ತದೆ. ಆದರೆ, ಈಜಿನಲ್ಲಿ ಪಾಲ್ಗೊಂಡ ಬಳಿಕ ಅಥವಾ ಅತಿಯಾಗಿ ಬೆವರಿದ ಸಂದರ್ಭದಲ್ಲಿ ಮತ್ತೆ ಸನ್‌ಸ್ಕ್ರೀನ್ ಹಚ್ಚಬೇಕಾಗುತ್ತದೆ ಎನ್ನುವುದು ಗಮನದಲ್ಲಿರಲಿ.

ನಾನ್ ಕಾಮೊಡೊಜೆನಿಕ್ ಸನ್‌ಸ್ಕ್ರೀನ್

ಇದನ್ನು ಬಳಸುವುದರಿಂದ ಚರ್ಮದ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಚರ್ಮಕ್ಕೆ ತೆಳುವಾದ ಪದರ ಲೇಪನವಾಗುವ ಜತೆಗೆ ಅದಕ್ಕೆ ಉಸಿರಾಡಲು ಕೂಡ ಅನುವು ಮಾಡಿಕೊಡುತ್ತದೆ. ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆಯನ್ನು ಕೂಡ ಒದಗಿಸುತ್ತದೆ. ಹೀಗಾಗಿ ಮಕ್ಕಳಿಗೆ ಸನ್‌ಸ್ಕ್ರೀನ್ ಖರೀದಿಸುವಾಗ ಈ ಆಯ್ಕೆಯನ್ನು ಪರಿಶೀಲಿಸಿಕೊಳ್ಳಿ. ಅಲ್ಲದೆ, ಮೆಡಿಕಲ್‌ಗಳಲ್ಲಿ ಕೇಳುವಾಗಲೂ, ಮಕ್ಕಳಿಗೆ ಸೂಕ್ತವೆನಿಸುವ ಮತ್ತು ಮಕ್ಕಳಿಗಾಗಿಯೇ ತಯಾರಿಸಲ್ಪಟ್ಟ ಸನ್‌ಸ್ಕ್ರೀನ್ ಖರೀದಿಸಿ ಬಳಸಿ. ಮಕ್ಕಳಿಗೆ ಸನ್‌ಸ್ಕ್ರೀನ್ ಬಳಕೆ ಯಾಕೆ ಬೇಕು ಎನ್ನುವ ಕುರಿತು ಅರಿವು ಮೂಡಿಸಿದರೆ, ಹೊರಗಡೆ ಬಿಸಿಲಿಗೆ ಹೋಗುವಾಗ ಅವರಾಗಿಯೇ ಸನ್‌ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ.

ಅಲರ್ಜಿಯಲ್ಲದ ಸನ್‌ಸ್ಕ್ರೀನ್ ಆಯ್ಕೆ

ಕೆಲವೊಂದು ಸನ್‌ಸ್ಕ್ರೀನ್ ಬಳಕೆ ಮಕ್ಕಳ ಚರ್ಮಕ್ಕೆ ಸೂಕ್ತವಾಗಿಲ್ಲವಾದರೆ, ಅದರಿಂದ ಅಲರ್ಜಿ ಉಂಟಾಗಬಹುದು. ಅಲ್ಲದೆ, ಚರ್ಮದಲ್ಲಿ ತುರಿಕೆ, ಕಿರಿಕಿರಿ ಉಂಟಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಮಕ್ಕಳ ಕೋಮಲ ತ್ವಚೆಯನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ಸೂಕ್ತ ರಕ್ಷಣೆ ಒದಗಿಸುವ ಸನ್‌ಸ್ಕ್ರೀನ್ ಅನ್ನೇ ಖರೀದಿಸಿ ಬಳಸಬೇಕು. ಜತೆಗೆ ಅತಿಯಾದ ಬಿಸಿಲಿಗೆ ಒಡ್ಡಿಕೊಳ್ಳುವ ಸಂದರ್ಭ ಬಂದಾಗ ಸನ್‌ಸ್ಕ್ರೀನ್ ಬಳಸುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಆಗ ಅವರು ಕೂಡ ಚರ್ಮದ ಕುರಿತು ಕಾಳಜಿ ವಹಿಸಲು ಆರಂಭಿಸುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner