ಮಕ್ಕಳ ಆರೋಗ್ಯ ಕೆಡಿಸುವ 4 ಜನಪ್ರಿಯ ಪಾನೀಯಗಳಿವು, ಸ್ಥೂಲಕಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಇವೇ ಕಾರಣ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಆರೋಗ್ಯ ಕೆಡಿಸುವ 4 ಜನಪ್ರಿಯ ಪಾನೀಯಗಳಿವು, ಸ್ಥೂಲಕಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಇವೇ ಕಾರಣ

ಮಕ್ಕಳ ಆರೋಗ್ಯ ಕೆಡಿಸುವ 4 ಜನಪ್ರಿಯ ಪಾನೀಯಗಳಿವು, ಸ್ಥೂಲಕಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಇವೇ ಕಾರಣ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಆರೋಗ್ಯಕರ ಆಹಾರಗಳಿಗಿಂತ ಆರೋಗ್ಯ ಕೆಡಿಸುವ ಆಹಾರ, ಪಾನೀಯಗಳ ಮೇಲೆ ಹೆಚ್ಚು ಒಲವು ಹೊಂದಿರುತ್ತಾರೆ. ಪೋಷಕರು ಕೂಡ ತಿಳಿದೋ ತಿಳಿಯದೆಯೋ ಮಕ್ಕಳಿಗೆ ಅಂತಹ ಪಾನೀಯಗಳನ್ನೇ ಕೊಡಿಸುತ್ತಾರೆ. ಈ 4 ಪಾನೀಯಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಪಾನೀಯಗಳನ್ನು ತಪ್ಪಿಯೂ ಮಕ್ಕಳಿಗೆ ಕೊಡಬೇಡಿ.

 ಮಕ್ಕಳ ಆರೋಗ್ಯ ಕೆಡಿಸುವ ಜನಪ್ರಿಯ ಪಾನೀಯಗಳು (ಸಾಂಕೇತಿಕ ಚಿತ್ರ)
ಮಕ್ಕಳ ಆರೋಗ್ಯ ಕೆಡಿಸುವ ಜನಪ್ರಿಯ ಪಾನೀಯಗಳು (ಸಾಂಕೇತಿಕ ಚಿತ್ರ) (PC: Canva)

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣದಿಂದ ಪೋಷಕರು ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಬೇಕು. ಅದರಲ್ಲೂ ಮಕ್ಕಳು ಸೇವಿಸುವ ಆಹಾರ, ಪಾನೀಯಗಳ ಮೇಲೆ ವಿಶೇಷ ನಿಗಾ ಇಡಬೇಕು. ಹಲವು ಬಾರಿ, ಪೋಷಕರು ತಿಳಿದೋ ತಿಳಿಯದೆಯೋ ತಮ್ಮ ಮಕ್ಕಳಿಗೆ ಕೆಲವು ಅನಾರೋಗ್ಯಕರ ಪಾನೀಯಗಳನ್ನು ಕುಡಿಯಲು ನೀಡುತ್ತಾರೆ. ಬಾಯಿಗೆ ರುಚಿಸುವ ಕಾರಣ ಮಕ್ಕಳು ಇದನ್ನು ಹೆಚ್ಚಾಗಿ ಕೇಳುತ್ತಾರೆ. ಈ ಪಾನೀಯಗಳು ಮಕ್ಕಳ ಬಾಯಿಗೆ ರುಚಿಸಿದ್ರೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ಆರೋಗ್ಯ ಕೆಡೋದು ಖಂಡಿತ. ಹಾಗಾದರೆ ಮಕ್ಕಳ ಆರೋಗ್ಯ ಕೆಡಿಸುವ 4 ಪ್ರಮುಖ ಪಾನೀಯಗಳು ಯಾವುವು ನೋಡಿ.

ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾದ ಪಾನೀಯಗಳಲ್ಲಿ ಸಕ್ಕರೆ ಮತ್ತು ಕೆಫೀನ್ ಅಧಿಕವಾಗಿರುವ ಜ್ಯೂಸ್‌ಗಳು ಸೇರಿವೆ. ಇದು ಮಕ್ಕಳಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಮೂಲಕ ದಂತಕ್ಷಯ, ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ.

ಫ್ಲೇವರ್ಡ್‌ ಸೋಡಾ

ಫ್ಲೇವರ್ಡ್ ಸೋಡಾದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸೋಡಾದಲ್ಲಿರುವ ಸಕ್ಕರೆ ಮತ್ತು ಆಮ್ಲವು ಮಕ್ಕಳ ಹಲ್ಲುಗಳಿಗೆ ಹಾನಿ ಮಾಡುತ್ತದೆ. ಇದು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಎನರ್ಜಿ ಡ್ರಿಂಕ್ಸ್‌

ಮಾರುಕಟ್ಟೆಯಲ್ಲಿ ಹಲವು ರೀತಿಯ ಎನರ್ಜಿ ಡ್ರಿಂಕ್‌ಗಳು ಲಭ್ಯವಿವೆ. ಇವು ಮಕ್ಕಳ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮಕ್ಕಳು ಮತ್ತು ಹದಿಹರೆಯದವರು ಯಾವುದೇ ಕಾರಣಕ್ಕೂ ಎನರ್ಜಿ ಡ್ರಿಂಕ್ಸ್‌ಗಳನ್ನು ಕುಡಿಯಬಾರದು ಎಂದು ಶಿಫಾರಸು ಮಾಡುತ್ತದೆ.

ಸ್ಪೋರ್ಟ್ಸ್ ಡ್ರಿಂಕ್

ಮಕ್ಕಳು ಇತ್ತೀಚೆಗೆ ಸ್ಪೋರ್ಟ್ಸ್ ಡ್ರಿಂಕ್ಸ್ ಮೇಲೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಲ್ಲಿರುವ ಸಕ್ಕರೆ, ಸೋಡಿಯಂ, ಕೆಫೀನ್ ಮತ್ತು ಕೃತಕ ಬಣ್ಣಗಳಿದ್ದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ. ಇವು ತೂಕ ಹೆಚ್ಚಾಗುವುದು, ಹಲ್ಲು ಕೊಳೆಯುವುದು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಸುವಾಸನೆ ಬೀರುವ ಹಾಲು 

ಫ್ಲೇವರ್ಡ್‌ ಮಿಲ್ಕ್‌ ಅಥವಾ ಸುವಾಸನೆ ಬೀರುವ ಹಾಲು ಕೂಡ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ ಹಾಗೂ ಇದರ ಸುವಾಸನೆ ಹಾಗೂ ರುಚಿಗೆ ಮಕ್ಕಳು ಮಾರು ಹೋಗುತ್ತಿದ್ದಾರೆ. ಇದರಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದು, ಇದು ಮಕ್ಕಳಲ್ಲಿ ಬೊಜ್ಜು ಬೆಳೆಯಲು ಕಾರಣವಾಗುತ್ತಿದೆ.

ಈ ಪಾನೀಯಗಳು ಮಕ್ಕಳಿಗೆ ಉತ್ತಮ

ಈ ಮೇಲಿನ ಪಾನೀಯಗಳು ಮಕ್ಕಳ ಆರೋಗ್ಯಕ್ಕೆ ಹಾನಿ ಮಾಡಿದರೆ ಇನ್ನೂ ಕೆಲವು ಪಾನೀಯಗಳನ್ನು ಮಕ್ಕಳಿಗೆ ಹೆಚ್ಚು ಹೆಚ್ಚು ಕುಡಿಸಬಹುದು. ಇದರಿಂದ ಅವರ ಆರೋಗ್ಯಕ್ಕೆ ಸಾಕಷ್ಟು ‍ಪ್ರಯೋಜನ ಸಿಗುತ್ತದೆ. ಅಂತಹ ಪಾನೀಯಗಳು ಯಾವುವು ನೋಡಿ.

ನೀರು

ಮಕ್ಕಳಿಗೆ ನೀರು ಅತ್ಯಗತ್ಯ ಪಾನೀಯ. ನೀರು ಸಕ್ಕರೆ ಅಥವಾ ಕ್ಯಾಲೊರಿಗಳನ್ನು ಸೇರಿಸದೆ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಮಗು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಸಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಕುಡಿಯುವ ನೀರು ದೇಹಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಚರ್ಮ ಹಾಗೂ ಕೀಲಿನ ಆರೋಗ್ಯಕ್ಕೂ ಉತ್ತಮ.

ಹಾಲು

ಇದು ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲ. ಇದು ಮಕ್ಕಳ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಿಮ್ಮ ಮಗುವಿಗೆ ಲ್ಯಾಕ್ಟೋಸ್ ಅಲರ್ಜಿ ಇದ್ದರೆ, ನೀವು ಪರ್ಯಾಯವಾಗಿ ಬಾದಾಮಿ ಹಾಲು ಅಥವಾ ಓಟ್ ಹಾಲನ್ನು ಸಹ ಸೇರಿಸಿಕೊಳ್ಳಬಹುದು.

ತಾಜಾ ಹಣ್ಣು, ತರಕಾರಿ ಜ್ಯೂಸ್‌

ಮಕ್ಕಳ ಆರೋಗ್ಯಕ್ಕೆ ಸಕ್ಕರೆ ಇಲ್ಲದೆ ಹಣ್ಣಿ ಹಾಗೂ ತರಕಾರಿ ರಸದಿಂದ ತಯಾರಿಸಿದ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಹಣ್ಣಿನ ರಸಗಳಲ್ಲಿ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾ

ಕ್ಯಾಮೊಮೈಲ್ ಹೂವುಗಳು ಮತ್ತು ಪುದೀನದಂತಹ ಗಿಡಮೂಲಿಕೆ ಚಹಾಗಳನ್ನು ಯಾವುದೇ ಸಿಹಿಕಾರಕಗಳಿಲ್ಲದೆ ಬಿಸಿಯಾಗಿ ಕುಡಿದರೆ ಅದು ಮಕ್ಕಳ ಆರೋಗ್ಯಕ್ಕೆ ಪ್ರಯೋಜನಕಾರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner