ಹೆಚ್ಚುತ್ತಿದೆ ಚಳಿ: ಕಾಯಿಲೆ ಹರಡದಂತೆ ತಡೆಯಲು ಮಕ್ಕಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಚ್ಚುತ್ತಿದೆ ಚಳಿ: ಕಾಯಿಲೆ ಹರಡದಂತೆ ತಡೆಯಲು ಮಕ್ಕಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಹೆಚ್ಚುತ್ತಿದೆ ಚಳಿ: ಕಾಯಿಲೆ ಹರಡದಂತೆ ತಡೆಯಲು ಮಕ್ಕಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಕ್ಕಳಲ್ಲಿ ಇನ್ಫ್ಲುಯೆನ್ಸ ಸೇರಿದಂತೆ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿವೆ. ಅದರಲ್ಲೂ ಮಕ್ಕಳು,ವಿಶೇಷವಾಗಿ ಫ್ಲೂ ವೈರಸ್‌ಗೆ ಗುರಿಯಾಗುತ್ತಾರೆ. ಈ ವೈರಸ್ ಶಾಲೆ,ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಹರಡಬಹುದು. ಫ್ಲೂ ಹರಡದಂತೆ ಮಕ್ಕಳನ್ನು ಆರೋಗ್ಯವಾಗಿಡಲು ಇಲ್ಲಿ ಕೆಲವು ಸಲಹೆ ನೀಡಲಾಗಿದೆ.

ಫ್ಲೂ ಹರಡದಂತೆ ತಡೆಯಲು ಮಕ್ಕಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಫ್ಲೂ ಹರಡದಂತೆ ತಡೆಯಲು ಮಕ್ಕಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ (Canva)

ಚಳಿಗಾಲ ಇನ್ನೂ ಮುಗಿದಿಲ್ಲ. ಕೆಲವೊಮ್ಮೆ ಚಳಿ ಹೆಚ್ಚಾಗುತ್ತಿದೆ. ಕರ್ನಾಟಕದ ಕೆಲವಡೆ ಮಳೆಯೂ ಸುರಿದಿದ್ದು, ಜೊತೆಗೆ ಚಳಿಯ ವಾತಾವರಣವೂ ಹೆಚ್ಚಾಗಿದೆ. ಹೀಗಾಗಿ ಮಕ್ಕಳು ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಿದ್ದಾರೆ. ಚಳಿಗಾಲದ ಈ ಸಾಮಾನ್ಯ ಕಾಯಿಲೆಗಳು ಮಕ್ಕಳಿಗೆ ಅನಾನುಕೂಲ ಮತ್ತು ತೊಂದರೆಯನ್ನುಂಟು ಮಾಡಬಹುದು. ಆದರೆ, ಸರಿಯಾದ ಕಾಳಜಿ ವಹಿಸುವುದು ಮತ್ತು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನಿಮ್ಮ ಮಗು ಬೇಗನೆ ಚೇತರಿಸಿಕೊಳ್ಳಬಹುದು. ಈ ಶೀತ ವಾತಾವರಣದಲ್ಲಿ ಮಕ್ಕಳ ಕಾಳಜಿ ಹೀಗಿರಲಿ.

ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಕ್ಕಳಲ್ಲಿ ಇನ್ಫ್ಲುಯೆನ್ಸ ಸೇರಿದಂತೆ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿವೆ. ಅದರಲ್ಲೂ ಮಕ್ಕಳು, ವಿಶೇಷವಾಗಿ ಫ್ಲೂ ವೈರಸ್‌ಗೆ ಗುರಿಯಾಗುತ್ತಾರೆ. ಈ ವೈರಸ್ ಶಾಲೆ, ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಹರಡಬಹುದು. ನಿಮ್ಮ ಮಗುವನ್ನು ರಕ್ಷಿಸಲು ಮತ್ತು ಫ್ಲೂ ಹರಡುವುದನ್ನು ತಡೆಯಲು, ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಫ್ಲೂ ಹರಡದಂತೆ ಮಕ್ಕಳನ್ನು ಆರೋಗ್ಯವಾಗಿಡಲು ಇಲ್ಲಿ ಕೆಲವು ಸಲಹೆ ನೀಡಲಾಗಿದೆ.

ಹೀಗಿರಲಿ ಮಕ್ಕಳ ಕಾಳಜಿ

ಫ್ಲೂ ಲಸಿಕೆ ಹಾಕಿಸಿ: ಮಕ್ಕಳಿಗೆ ವಾರ್ಷಿಕ ಫ್ಲೂ ಲಸಿಕೆಯನ್ನು ಹಾಕಿಸಿ. ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ, ಜ್ವರ ಸಾಮಾನ್ಯವಾಗಿ ಹೆಚ್ಚಿರುವಾಗ, ಇನ್ಫ್ಲುಯೆನ್ಸದಿಂದ ಅವರನ್ನು ರಕ್ಷಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ನೈರ್ಮಲ್ಯವಿರಲಿ: ಸೂಕ್ಷ್ಮಜೀವಿಗಳು ಹರಡುವುದನ್ನು ತಡೆಗಟ್ಟಲು ಮಗುವಿಗೆ ಆಗಾಗ ಕೈ ತೊಳೆಯಲು, ವಿಶೇಷವಾಗಿ ಕೆಮ್ಮಿದ ಅಥವಾ ಸೀನಿದ ನಂತರ, ಕೈಗಳನ್ನು ತೊಳೆಯಲು ಜ್ಞಾಪಿಸುತ್ತಿರಿ. ಹಾಗೆಯೇ ಊಟ ಮಾಡುವ ಅಥವಾ ಏನೇ ಆಹಾರ ತಿನ್ನುವ ಮುನ್ನ ಕೈಗಳನ್ನು ತೊಳೆದು ತಿನ್ನಬೇಕು. ಈ ಮೂಲಕ ಸರಿಯಾದ ನೈರ್ಮಲ್ಯವನ್ನು ಪ್ರೋತ್ಸಾಹಿಸಬೇಕು.

ಶಿಷ್ಟಾಚಾರವನ್ನು ಕಲಿಸಿ: ಮಕ್ಕಳು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಕಾಗದದಿಂದ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳುವಂತೆ ಮಕ್ಕಳಿಗೆ ತಿಳಿ ಹೇಳಿ. ಇದು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಪೌಷ್ಟಿಕ ಆಹಾರ ತಿನ್ನಲು ಕೊಡಿ: ರೋಗನಿರೋಧಕಶಕ್ತಿಯನ್ನು ಬಲಪಡಿಸಲು ಹಣ್ಣುಗಳು ಮತ್ತು ತರಕಾರಿಗಳು, ವಿಶೇಷವಾಗಿ ವಿಟಮಿನ್ ಸಿ ಅಧಿಕವಾಗಿರುವ ಕಿತ್ತಳೆ ಹಣ್ಣು ಮತ್ತು ಸೊಪ್ಪು ತರಕಾರಿಗಳನ್ನು ತಿನ್ನಲು ಕೊಡಿ. ಪೌಷ್ಟಿಕ ಭರಿತ ಆಹಾರವನ್ನು ಮಕ್ಕಳಿಗೆ ತಿನ್ನಿಸಿ.

ಸಾಕಷ್ಟು ವಿಶ್ರಾಂತಿ: ರೋಗನಿರೋಧಕ ವ್ಯವಸ್ಥೆಯು ಮಕ್ಕಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ವಿಶ್ರಾಂತಿ ಬೇಕು. ನಿಮ್ಮ ಮಗುವಿಗೆ ಸಾಕಷ್ಟು ನಿದ್ದೆ ಬರುವಂತೆ ನೋಡಿಕೊಳ್ಳಿ. ಚಳಿಗಾಲದ ತಿಂಗಳುಗಳಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ನಿದ್ದೆಯೂ ಬಹಳ ಅತ್ಯಗತ್ಯ.

ಸಾಕಷ್ಟು ನೀರು ಕುಡಿಯಬೇಕು: ಚಳಿಗಾಲವಾದ್ದರಿಂದ ಬಾಯಾರಿಕೆ ಆಗುವುದು ತೀರಾ ಕಡಿಮೆ. ಹೀಗಾಗಿ ಮಕ್ಕಳು ಬೆಚ್ಚಗಿನ ನೀರು, ಸೂಪ್ ಕುಡಿಯುವುದು ಉತ್ತಮ. ಇದು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಿ: ನಿಯಮಿತ ದೈಹಿಕ ಚಟುವಟಿಕೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹೊರಾಂಗಣ ಆಟಗಳಂತಹ ಒಳಾಂಗಣ ಚಟುವಟಿಕೆಗಳ ಮೂಲಕ ನಿಮ್ಮ ಮಗುವನ್ನು ಸಕ್ರಿಯವಾಗಿರಲು ಪ್ರೋತ್ಸಾಹಿಸಿ. ನೃತ್ಯ ಮಾಡುವುದು ಅಥವಾ ಮನೆಯೊಳಗೆ ಆಟವಾಡುವುದು ಹೀಗೆ ಆದಷ್ಟು ಸಕ್ರಿಯವಾಗಿರಿಸಲು ಪ್ರಯತ್ನಿಸಿ.

ಬೆಚ್ಚಗಿನ ಉಡುಗೆ ಧರಿಸಿ: ಮಕ್ಕಳನ್ನು ಆದಷ್ಟು ಬೆಚ್ಚಗೆ ಇರಿಸುವಂತೆ ನೋಡಿಕೊಳ್ಳಬೇಕು. ಹಾಗಂತ ಹೆಚ್ಚು ಬಟ್ಟೆಯನ್ನು ಅವರಿಗೊ ತೊಡಿಸಬೇಡಿ. ಇದು ಬೆವರುವುದು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಹೊರಗೆ ಹೋಗುವಾಗ ಮಕ್ಕಳ ಕಾಲಿಗೆ ಸಾಕ್ಸ್, ತಲೆಗೆ ಟೋಪಿ ಮತ್ತು ಕೈಗವಸುಗಳನ್ನು ಧರಿಸುವುದು ಉತ್ತಮ.

ಕೆಮ್ಮು ಮತ್ತು ಶೀತಕ್ಕೆ ಈ ಪರಿಹಾರ ಪಡೆಯಿರಿ: ಶೀತ ಮತ್ತು ಕೆಮ್ಮು, ಗಂಟಲು ನೋವನ್ನು ಶಮನಗೊಳಿಸಲು ಜೇನುತುಪ್ಪದಂತಹ ನೈಸರ್ಗಿಕ ಪರಿಹಾರಗಳನ್ನು (1 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ) ಪಡೆಯಬಹುದು. ಯಾವುದೇ ಔಷಧಿಗಳನ್ನು ಅಥವಾ ಮನೆಮದ್ದು ನೀಡುವ ಮೊದಲು ಯಾವಾಗಲೂ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

Whats_app_banner