ಭಾರತದಲ್ಲಿ ಏರಿಕೆಯಾಗುತ್ತಿದೆ ಬಾಲ್ಯದ ಸ್ಥೂಲಕಾಯ ಸಮಸ್ಯೆ; ಪೋಷಕರೇ ಗಮನಿಸಿ, ಮಕ್ಕಳಲ್ಲಿ ಬೊಜ್ಜು ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ
ಭಾರತದಲ್ಲಿ ಬಾಲ್ಯದ ಸ್ಥೂಲಕಾಯ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದೆ. ಕಳೆದೊಂದು ದಶಕಗಳಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯ ಪ್ರಮಾಣ ಹೆಚ್ಚಾಗಿದೆ. ಮಕ್ಕಳ ತೂಕ ಏರಿಕೆಯ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವೇನು, ಇದರಿಂದ ಪಾರಾಗಲು ಜೀವನಶೈಲಿ ಹೇಗಿರಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಹೀಗಿದೆ.
ಭಾರತದ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ. 10 ರಿಂದ 15 ವರ್ಷದ ಮಕ್ಕಳು ಸ್ಥೂಲಕಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆ. ಅತಿಯಾದ ಬೊಜ್ಜು ನಂತರದ ದಿನಗಳಲ್ಲಿ ಟೈಪ್–2 ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಸಮಸ್ಯೆಗಳು, ಉಸಿರುಕಟ್ಟುವಿಕೆ, ಪಿತ್ತಜನಕಾಂಗದ ಕಾಯಿಲೆ, ಕೀಲು ನೋವಿನ ಸಮಸ್ಯೆ, ಅಧಿಕ ಕೊಲೆಸ್ಟ್ರಾಲ್, ಪಿತ್ತಗಲ್ಲು, ಹಾರ್ಮೋನ್ ಅಸಮತೋಲನ, ಫ್ಯಾಟಿ ಲಿವರ್ ಮುಂತಾದ ಸಮಸ್ಯೆಗಳು ಬರಲು ಕಾರಣವಾಗುತ್ತಿದೆ. ಬಾಲ್ಯದ ಸ್ಥೂಲಕಾಯದ ಸಮಸ್ಯೆಯು ಇಂತಹ ದೈಹಿಕ ಸಮಸ್ಯೆಗಳ ಜೊತೆಗೆ ಖಿನ್ನತೆ, ಆತಂಕ, ಒತ್ತಡದಂತಹ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎನ್ನುತ್ತಾರೆ ಪುಣೆ ಮದರ್‌ಹುಡ್ ಆಸ್ಪತ್ರೆಯ ಶಿಶುವೈದ್ಯ ಮತ್ತು ನವಜಾತ ಶಿಶುಗಳ ತಜ್ಞ ಡಾ. ತುಷಾರ್ ಪಾರಿಖ್.
ಮಕ್ಕಳ ಒಟ್ಟಾರೆ ಯೋಗಕ್ಷೇಮ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ದೇಹತೂಕವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಟೈಮ್ಸ್ ನೌ ಡಿಜಿಟಲ್‌ಗೆ ವಿವರಿಸಿದ್ದಾರೆ ಡಾ. ತುಷಾರ್.
ಬಾಲ್ಯದ ಸ್ಥೂಲಕಾಯದ ಸಮಸ್ಯೆಯು ಮಕ್ಕಳಲ್ಲಿ ಸ್ಥಿರವಾಗಿ ಏರಿಕೆ ಕಾಣುತ್ತಿದೆ. ಕಳೆದೊಂದು ದಶಕದಲ್ಲಿ ಈ ಸಮಸ್ಯೆಯು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. 2003 ರಿಂದ 2023 ರವರೆಗೆ ನಡೆಸಲಾದ 21 ಅಧ್ಯಯನಗಳ ಮೆಟಾ-ವಿಶ್ಲೇಷಣೆಯ ಪ್ರಕಾರ, ಬಾಲ್ಯದ ಸ್ಥೂಲಕಾಯ ಸಮಸ್ಯೆ ಒಟ್ಟು ಹರಡುವಿಕೆ ಶೇ 8.4 ರಷ್ಟು ಎಂದು ಕಂಡುಬಂದರೆ, ಬಾಲ್ಯದ ಅಧಿಕ ತೂಕದ ಹರಡುವಿಕೆಯು ಶೇ 12.4 ರಷ್ಟು ಆಗಿದೆ. ಮಕ್ಕಳ ಅಧಿಕ ತೂಕದ ಸಮಸ್ಯೆ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ಎರಡೂ ಕಡೆ ಇದೆ. ಆದರೆ ನಗರ ಪ್ರದೇಶದಲ್ಲಿ ಮಕ್ಕಳು ಆರಂಭಿಕ ವಯಸ್ಸಿನಲ್ಲಿ ಅಧಿಕ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಸ್ಥೂಲಕಾಯ ಸಮಸ್ಯೆ
ಇತ್ತೀಚಿನದ ಅಧ್ಯಯನಗಳ ಪ್ರಕಾರ, ಭಾರತದ ಗ್ರಾಮೀಣ ಭಾಗದ ಮಕ್ಕಳು ಕೂಡ ಸ್ಥೂಲಕಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಥೂಲಕಾಯದ ಸಮಸ್ಯೆ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ.
ಬಾಲ್ಯದ ಸ್ಥೂಲಕಾಯ ಸಮಸ್ಯೆಗೆ ಕಾರಣ
ಬಾಲ್ಯದ ಸ್ಥೂಲಕಾಯದ ಸಮಸ್ಯೆ ಹೆಚ್ಚಳಕ್ಕೆ ಹಲವಾರು ಪ್ರಮುಖ ಅಂಶಗಳು ಕೊಡುಗೆ ನೀಡುತ್ತವೆ. ಅದರಲ್ಲಿ ಪ್ರಮುಖವಾದ ಅಂಶ ಇದಾಗಿದೆ.
- ಇಂದಿನ ಡಿಜಿಟಲ್ ಯುಗದಲ್ಲಿ, ಮಕ್ಕಳು ಎಲೆಕ್ಟ್ರಾನಿಕ್ ಪರದೆಗಳಿಗೆ ಹೆಚ್ಚು ತೆರೆದುಕೊಳ್ಳುತ್ತಾರೆ. ಇದು ಸ್ಕ್ರೀನ್ ಟೈಮ್ ಹೆಚ್ಚಲು ಕಾರಣವಾಗುತ್ತಿದೆ. ಬಹುತೇಕ ಮಕ್ಕಳು ಹೊರಾಂಗಣ ಚಟುವಟಿಕೆಯಲ್ಲಿ ತೊಡಗುವುದಕ್ಕಿಂತ ಲ್ಯಾಪ್‌ಟಾಪ್, ಮೊಬೈಲ್, ವಿಡಿಯೊ ಆಡುತ್ತಾ ಮನೆಯೊಳಗೆ ಕೂತು ಬಿಡುತ್ತಾರೆ. ಇಂತಹ ಜಡ ಜೀವನಶೈಲಿಯು ಮಕ್ಕಳಲ್ಲಿ ಚಲನಾ ಪ್ರಕ್ರಿಯೆಗೆ ತಡೆ ಒಡ್ಡುತ್ತದೆ. ಅಲ್ಲದೆ ಇದು ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸಲು ಕಾರಣವಾಗುತ್ತಿದೆ.
- ಹೆಚ್ಚು ಹೆಚ್ಚು ಸ್ಕ್ರೀನ್ ನೋಡುವ ಜೊತೆಗೆ ಮಕ್ಕಳು ಚಿಪ್ಸ್, ಸೋಡಾಗಳು, ಮಿಠಾಯಿಗಳು ಮತ್ತು ಫಾಸ್ಟ್ ಫುಡ್‌ನಂತಹ ಅಧಿಕ ಕ್ಯಾಲರಿ ಅಂಶ ಇರುವ ಆಹಾರಗಳ ಸೇವನೆಯನ್ನೂ ಇಷ್ಟಪಡುತ್ತಾರೆ. ಮಿತಿಯಿಲ್ಲದೇ ಇಂತಹ ಆಹಾರಗಳನ್ನ ತಿನ್ನುವುದು ಕೂಡ ಬೊಜ್ಜಿನ ಅಪಾಯ ಹೆಚ್ಚಲು ಕಾರಣವಾಗುತ್ತದೆ ಎಂದು ಡಾ. ತುಷಾರ್ ಹೇಳುತ್ತಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಹೃದಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿದು; ಈ ವಿಚಾರದಲ್ಲಿ ಪೋಷಕರು ಎಂದಿಗೂ ಎಚ್ಚರ ತಪ್ಪಬಾರದು
ಆರೋಗ್ಯಕರ ತೂಕ ನಿರ್ವಹಿಸುವ ಮಹತ್ವ
ವೈದ್ಯರ ಪ್ರಕಾರ ಮಕ್ಕಳಿಗೆ ಬಾಲ್ಯದಿಂದಲೂ ಸರಿಯಾದ ತೂಕ ನಿರ್ವಹಣೆಯ ಮೇಲೆ ಗಮನ ಹರಿಸುವಂತೆ ಮಾಡುವುದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿನ್ನೆಲೆಯಲ್ಲಿ ಬಹಳ ಮುಖ್ಯ. ಅದಕ್ಕಾಗಿ ಪೋಷಕರು ಹಾಗೂ ಶಿಕ್ಷಕರು ಈ ಕೆಲವು ಕೆಲಸಗಳನ್ನು ಮಾಡಬೇಕು.
- ಆಟಗಳಲ್ಲಿ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಮಕ್ಕಳನ್ನು ಉತ್ತೇಜಿಸುವ ಮೂಲಕ ಹೊರಾಂಗಣ ಚಟುವಟಿಕೆಳಲ್ಲಿ ತೊಡಗುವಂತೆ ಮಾಡಬೇಕು. ವ್ಯಾಯಾಮದ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಬೇಕು.
- ಸ್ಕ್ರೀನ್ ಟೈಮ್‌ಗೆ ಮಿತಿ ಹೇರುವ ಮೂಲಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ ಗಮನ ಕೊಡಬೇಕು.
- ತಿನ್ನುವ ಆಹಾರದ ವಿಚಾರದಲ್ಲಿ ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವುದು ಅತಿ ಅಗತ್ಯ. ಇಷ್ಟದ ವಸ್ತುವಾದ್ರೂ ಅದನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ಮಕ್ಕಳಿಗೆ ತಿಳಿ ಹೇಳಬೇಕು.
- ಜಂಕ್‌ಫುಡ್‌ಗಿಂತ ಮನೆ ಆಹಾರ ಯಾಕೆ ಬೆಸ್ಟ್ ಎನ್ನುವುದನ್ನು ಮಕ್ಕಳಿಗೆ ವಿವರಿಸಬೇಕು. ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡುವಂತೆ ಮಾಡಬೇಕು.
ಇದನ್ನೂ ಓದಿ: ಮಕ್ಕಳಿಂದ ಮೊಬೈಲ್ ಚಟ ಬಿಡಿಸುವುದು ಹೇಗೆ?