ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚೋಕೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು, ಯಾವ ಸಮಯದಲ್ಲಿ ತಿಂದ್ರೆ ಹೆಚ್ಚು ಪ್ರಯೋಜನಕಾರಿ; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚೋಕೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು, ಯಾವ ಸಮಯದಲ್ಲಿ ತಿಂದ್ರೆ ಹೆಚ್ಚು ಪ್ರಯೋಜನಕಾರಿ; ಇಲ್ಲಿದೆ ಮಾಹಿತಿ

ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚೋಕೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು, ಯಾವ ಸಮಯದಲ್ಲಿ ತಿಂದ್ರೆ ಹೆಚ್ಚು ಪ್ರಯೋಜನಕಾರಿ; ಇಲ್ಲಿದೆ ಮಾಹಿತಿ

ಪರೀಕ್ಷಾ ಸಮಯ ಬಂದಾಗ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲಿ ಎನ್ನುವ ಕಾರಣಕ್ಕೆ ಬಹುತೇಕ ಪೋಷಕರು ಬಾದಾಮಿ ಕೊಡುತ್ತಾರೆ. ಪೋಷಕಾಂಶ ಸಮೃದ್ಧ ಬಾದಾಮಿ ಆರೋಗ್ಯಕ್ಕೂ ಒಳ್ಳೆಯದು. ಹಾಗಂತ ಇದನ್ನು ಬೇಕಾಬಿಟ್ಟಿ ತಿನ್ನುವಂತಿಲ್ಲ. ಮಕ್ಕಳಿಗೆ ದಿನಕ್ಕೆಷ್ಟು ಬಾದಾಮಿ ಕೊಡಬಹುದು. ಬಾದಾಮಿ ತಿನ್ನಲು ಬೆಸ್ಟ್ ಸಮಯ ಯಾವುದು? ಇಲ್ಲಿದೆ ಮಾಹಿತಿ.

ಮಕ್ಕಳಿಗೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು?
ಮಕ್ಕಳಿಗೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು? (PC: Canva)

ಇದು ಪರೀಕ್ಷೆಯ ಸಮಯ. ಮಕ್ಕಳಿಗೆ ಪರೀಕ್ಷೆ ಬಂತೆಂದರೆ ಪೋಷಕರಿಗೂ ಚಿಂತೆ ತಪ್ಪಿದ್ದಲ್ಲ. ಈ ಸಮಯದಲ್ಲಿ ಮಕ್ಕಳನ್ನ ಓದಿಸುವ ಜೊತೆಗೆ ಅವರ ನೆನಪಿನ ಶಕ್ತಿ ಹೆಚ್ಚಿಸುವುದರ ಮೇಲೂ ಪೋಷಕರು ಗಮನ ಹರಿಸಬೇಕಾಗುತ್ತದೆ. ನೆನಪಿನ ಶಕ್ತಿ ಹೆಚ್ಚುವ ವಿಷಯಕ್ಕೆ ಬಂದಾಗ ಬಾದಾಮಿಗಿಂತ ಉತ್ತಮ ಇನ್ನೊಂದಿಲ್ಲ ಎನ್ನಬಹುದು. ಇದು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೂ ಉತ್ತಮ. ಬಾದಾಮಿ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹಾಗೂ ಏಕಾಗ್ರತೆ ಸುಧಾರಿಸುವ ಬಾದಾಮಿಯನ್ನು ಪ್ರತಿದಿನ ತಿನ್ನಬೇಕು. ಇದು ಜೀವಸತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್‌ಗಳಿಂದ ತುಂಬಿರುತ್ತದೆ. ‌

ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಬಾದಾಮಿಯನ್ನು ಮಿತವಾಗಿ ತಿನ್ನುವುದು ಅಷ್ಟೇ ಮುಖ್ಯ. ಮಕ್ಕಳು ಹೆಚ್ಚು ಬಾದಾಮಿ ತಿನ್ನುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ಹಾಗಾದರೆ ಮಕ್ಕಳು ದಿನಕ್ಕೆಷ್ಟು ಬಾದಾಮಿ ತಿನ್ನಬಹುದು, ಅದನ್ನು ತಿನ್ನಲು ಉತ್ತಮ ಸಮಯ ಯಾವುದು?

ಮಕ್ಕಳು ದಿನಕ್ಕೆಷ್ಟು ಬಾದಾಮಿ ತಿನ್ನಬೇಕು?

ವಯಸ್ಸು, ಆಹಾರದ ಅಗತ್ಯಗಳು ಮತ್ತು ಚಟುವಟಿಕೆಯ ಮಟ್ಟವನ್ನು ಆಧರಿಸಿ ಮಕ್ಕಳಿಗೆ ನೀಡುವ ಬಾದಾಮಿಗಳ ಸಂಖ್ಯೆಯು ಬದಲಾಗಬಹುದು. ಸಾಮಾನ್ಯವಾಗಿ, ಸುರಕ್ಷಿತ ಮತ್ತು ಪ್ರಯೋಜನಕಾರಿ ಪ್ರಮಾಣವು ದಿನಕ್ಕೆ ಸುಮಾರು 5 ರಿಂದ 10 ಬಾದಾಮಿಗಳಾಗಿರುತ್ತದೆ. ಆದರೆ ವಯಸ್ಕರು ದಿನಕ್ಕೆ 20 ರಿಂದ 23 ಬಾದಾಮಿ ತಿನ್ನಬಹುದು. ಇಷ್ಟೇ ಪ್ರಮಾಣದಲ್ಲಿ ತಿನ್ನುವುದರಿಂದ ಅವರ ಜೀರ್ಣಾಂಗ ವ್ಯವಸ್ಥೆ ಲಯ ತಪ್ಪದೇ ಪೋಷಕಾಂಶಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಮಕ್ಕಳು ದೊಡ್ಡವರಾದಂತೆ ಅವರಿಗೆ ನೀಡುವ ಬಾದಾಮಿ ಸಂಖ್ಯೆಯನ್ನು ಹೆಚ್ಚಿಸಬಹುದು.

ಬಾದಾಮಿಯ ಪ್ರಯೋಜನಗಳು

ಬಾದಾಮಿಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದ್ದು, ಇದನ್ನು ಮಗುವಿನ ಆಹಾರದಲ್ಲಿ ಸೇರಿಸುವುದು ಬಹಳ ಉತ್ತಮ. ವಿಟಮಿನ್ ಇ ಒಂದು ಉತ್ಕರ್ಷಣ ನಿರೋಧಕವಾಗಿದ್ದು ಅದು ರೋಗನಿರೋಧಕ ಕಾರ್ಯ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ, ಆದರೆ ಮೆಗ್ನೀಸಿಯಮ್ ಮೂಳೆ ಬೆಳವಣಿಗೆ ಮತ್ತು ಶಕ್ತಿ ಉತ್ಪಾದನೆಗೆ ನಿರ್ಣಾಯಕವಾಗಿದೆ. ಬಾದಾಮಿಯಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಕ್ಕಳು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಅನ್ನಿಸಲು ಸಹಾಯ ಮಾಡುತ್ತದೆ. ಇದು ಅನಾರೋಗ್ಯಕರ ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಬಾದಾಮಿ ತಿನ್ನಲು ಯಾವುದು ಉತ್ತಮ ಸಮಯ?

ಬಾದಾಮಿ ಪ್ರಯೋಜನ ಹೆಚ್ಚಿಸಲು ಒಬ್ಬೊಬ್ಬರು ಒಂದೊಂದು ಸಮಯ ಉತ್ತಮ ಎಂದು ಹೇಳುತ್ತಾರೆ. ಆದರೆ ಬಹುತೇಕರು ಬಾದಾಮಿ ಸೇವನೆಯಿಂದ ಹೆಚ್ಚಿನ ಪ್ರಯೋಜನ ಪಡೆಯಲು ಬೆಳಿಗ್ಗೆ ಅಥವಾ ಸಂಜೆ ಸೇವಿಸುವುದು ಉತ್ತಮ ಎಂದು ಹೇಳುತ್ತಾರೆ. ಬೆಳಿಗ್ಗೆ ತಿನ್ನುವುದರಿಂದ ಪೌಷ್ಟಿಕಾಂಶ ಸಾಕಷ್ಟು ಸಿಗುತ್ತದೆ. ಅದಾಗ್ಯೂ ಬಾದಾಮಿ ತಿನ್ನಲು ಯಾವುದೇ ಕಠಿಣ ಸಮಯದ ನಿರ್ಬಂಧವಿಲ್ಲ.

ಮಕ್ಕಳ ಆಹಾರದಲ್ಲಿ ಬಾದಾಮಿಯನ್ನು ಸೇರಿಸುವುದು ರುಚಿಕರ ಮತ್ತು ಪೌಷ್ಟಿಕ ಎರಡೂ ಆಗಿರಬಹುದು. ದಿನವಿಡೀ 5 ರಿಂದ 10 ಬಾದಾಮಿ ಸೇವನೆಯು ಅವರ ಬೆಳವಣಿಗೆ, ಶಕ್ತಿ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸುತ್ತದೆ. ಯಾವುದೇ ಆಹಾರದಂತೆ, ಮಿತವಾಗಿರುವುದು ಮುಖ್ಯವಾಗಿದೆ. ಆದರೆ ಚಿಕ್ಕ ಮಕ್ಕಳಿಗೆ ಬಾದಾಮಿ ನೀಡುವ ಮುನ್ನ ಕಲುಷಿತವಾಗಿಲ್ಲ, ಕಲಬೆರಕೆ ಬಾದಾಮಿ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner