ಪಾಲಕರೇ, ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ಐದು ವರ್ಷದೊಳಗಿನ ಮಗುವಿಗೆ ಈ ಆಹಾರ ಕೊಡಲೇಬೇಡಿ
ನವಜಾತ ಶಿಶುವಿನಿಂದ ತೊಡಗಿ ಐದು ವರ್ಷದವರೆಗೆ ಮಕ್ಕಳ ಲಾಲನೆ-ಪಾಲನೆ ಅತ್ಯಂತ ನಾಜೂಕಿನಿಂದ ಕೂಡಿರುತ್ತದೆ. ವಾತಾವರಣ ಮತ್ತು ಆರೋಗ್ಯ,ಆಹಾರದಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಪುಟ್ಟ ಮಗುವಿಗೆ ಸಮಸ್ಯೆಯಾಗುತ್ತದೆ. ಹಾಗಾಗಬಾರದು ಎಂದರೆ ಆಹಾರದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿಯಮ ಪಾಲಿಸಲೇಬೇಕು.
ಮಕ್ಕಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಪ್ರತಿ ಪಾಲಕರ ಅಭಿಲಾಷೆಯಾಗಿರುತ್ತದೆ. ತಮ್ಮ ಇತಿಮಿತಿಯಲ್ಲಿ ಅವರಿಗೆ ಪೂರಕವಾದ ಎಲ್ಲ ಆಹಾರ, ಪೋಷಕಾಂಶಯುಕ್ತ ಪದಾರ್ಥಗಳನ್ನು ಮಗುವಿಗೆ ತಂದೆ ತಾಯಿ ನೀಡುತ್ತಾರೆ. ಪುಟ್ಟ ಶಿಶುವಿಗೆ ಹಾಲುಣಿಸುವುದರಿಂದ ತೊಡಗಿ, ವೈದ್ಯರ ಸಲಹೆಯಂತೆ ಅವರ ಬೆಳವಣಿಗೆಗೆ ಪೂರಕ ಆಹಾರವನ್ನು ನೀಡಲಾಗುತ್ತದೆ. ಹೀಗೆ ನೀಡುವ ಆಹಾರದಲ್ಲಿ ಪಾಲಕರು ಬಹಳಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ನೀವು ನೀಡುವ ಆಹಾರವೇ ಮಗುವಿಗೆ ಕಂಟಕವಾಗಬಹುದು.
ಹಲವು ಸಂದರ್ಭಗಳಲ್ಲಿ ನೀವು ಮಾಧ್ಯಮಗಳಲ್ಲಿ ಗಮನಿಸಿರಬಹುದು, ಮಗುವಿನ ಗಂಟಲಿನಲ್ಲಿ ಆಹಾರ ಅಥವಾ ಯಾವುದಾದರೊಂದು ಪದಾರ್ಥ ಸಿಲುಕಿಕೊಂಡು, ಉಸಿರುಗಟ್ಟಿ ಮಗು ಸಾವಿಗೀಡಾಯಿತು ಎನ್ನುವ ಸುದ್ದಿಗಳನ್ನು ಓದುವಾಗ ನಿಜಕ್ಕೂ ಬೇಸರವಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಪಾಲಕರ ಅಜಾಗರೂಕತೆ ಇದ್ದರೆ, ಹಲವರಿಗೆ ಮಗುವಿಗೆ ಕೊಡಬೇಕಾದ ಮತ್ತು ಕೊಡಬಾರದ ಆಹಾರದ ಕುರಿತು ಅರಿವು ಇರುವುದಿಲ್ಲ. ಹೀಗಾಗಿ ಐದು ವರ್ಷದವರೆಗೆ ಮಗುವಿಗೆ ಕೊಡಬಾರದ ಆಹಾರದ ಕುರಿತು ಪಾಲಕರು ತಿಳಿದುಕೊಂಡಿರಬೇಕು. ಯಾವುದೇ ಕಾರಣಕ್ಕೂ ಮಗುವಿಗೆ ನೀಡಲೇಬಾರದ ಐದು ಬಗೆಯ ಆಹಾರಗಳ ವಿವರ ಇಲ್ಲಿದೆ ನೋಡಿ.
ಐದು ವರ್ಷದವರೆಗೆ ಮಗುವಿಗೆ ಕೊಡಬಾರದ ಆಹಾರಗಳು
ಬೀಜಗಳು ಮತ್ತು ಧವಸ ಧಾನ್ಯ: ಐದು ವರ್ಷದೊಳಗಿನ ಮಗುವಿಗೆ ಯಾವುದೇ ರೀತಿಯ ಕಾಳು, ಬೀಜ ಮತ್ತು ಧವಸಧಾನ್ಯಗಳನ್ನು ಇಡಿಯಾಗಿ ನೀಡಲೇಬೇಡಿ. ಅವುಗಳು ಮಗುವಿನ ಪುಟ್ಟ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲು ತೊಂದರೆಯಾಗಬಹುದು. ಮಕ್ಕಳಲ್ಲಿ ಗಂಟಲು ಸಣ್ಣದಾಗಿದ್ದು, ಅದರಲ್ಲಿ ಸೀಮಿತ ಆಹಾರ ಮಾತ್ರ ಸೇವಿಸಬಹುದು. ಅದಕ್ಕಿಂತ ಹೆಚ್ಚಿನ ಗಾತ್ರದ ಆಹಾರ, ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಅಲ್ಲದೆ, ಬಾದಾಮಿ, ಕಡಲೆಕಾಳು, ಸೂರ್ಯಕಾಂತಿ ಬೀಜಗಳು ಗಟ್ಟಿಯಾಗಿದ್ದು, ದೊಡ್ಡದಾಗಿರುವುದರಿಂದ ಅವುಗಳನ್ನು ಚೀಪಿ ತಿನ್ನಲು ಕೂಡ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪುಟ್ಟ ಮಗುವಿಗೆ ಅವುಗಳನ್ನು ಕೊಡಲೇಬೇಡಿ.
ಪೂರ್ತಿಯಾದ ದ್ರಾಕ್ಷಿ ಹಣ್ಣು: ದ್ರಾಕ್ಷಿ ಮೆತ್ತಗೆ ಇರುತ್ತದೆ, ಸುಲಭದಲ್ಲಿ ತಿನ್ನಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಪುಟ್ಟ ಮಕ್ಕಳಿಗೆ ಪೂರ್ತಿ ದ್ರಾಕ್ಷಿ ಹಣ್ಣು ನೀಡಿದರೆ ಅದು ಅವರ ಶ್ವಾಸನಾಳದಲ್ಲಿ, ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಹೀಗಾಗಿ ಪೂರ್ತಿ ದ್ರಾಕ್ಷಿ ಅಥವಾ ಅರ್ಧ ದ್ರಾಕ್ಷಿ ಹಣ್ಣನ್ನು ಮಗುವಿಗೆ ಕೊಡಬೇಡಿ, ಅದನ್ನು ಪುಟ್ಟದಾಗಿ ತುಂಡರಿಸಿ, ಅಂದರೆ ಕಾಲು ಭಾಗದಷ್ಟು ಹಣ್ಣನ್ನು ಕೊಡಬಹುದು. ಜತೆಗೆ ದ್ರಾಕ್ಷಿ ಬೀಜ ತೆಗೆದಿರುವುದನ್ನು ಖಚಿತಪಡಿಸಿಕೊಂಡು ಕೊಡಿ.
ಪಾಪ್‌ಕಾರ್ನ್: ಎಲ್ಲರ ಮೆಚ್ಚಿನ ಪಾಪ್‌ಕಾರ್ನ್ ತಿನ್ನಲು ರುಚಿಯಾಗಿರುತ್ತದೆ. ನೀವು ತಿನ್ನುವಾಗ ಮಕ್ಕಳು ಕೂಡ ಆಸೆಯಿಂದ ನೋಡಬಹುದು. ಹೀಗಾಗಿ ಅವರಿಗೆ ಕೂಡ ಒಂದರೆಡು ಇರಲಿ ಎಂದು ತಿನ್ನಲು ಕೊಡುವ ಮುನ್ನ ಎಚ್ಚರ ವಹಿಸಿ. ಐದು ವರ್ಷದ ಕೆಳಗಿನ ಮಗುವಿಗೆ ಪಾಪ್‌ಕಾರ್ನ್ ಯಾವುದೇ ಕಾರಣಕ್ಕೂ ಕೊಡಬಾರದು. ಮಕ್ಕಳಲ್ಲಿ ಆಹಾರ ವಸ್ತುವನ್ನು ಜಗಿದು ತಿನ್ನಲು ಮತ್ತು ಚೀಪಲು ಅವರ ಬಾಯಿಯ ರಚನೆ ಮತ್ತು ಗಂಟಲಿನ ಬೆಳವಣಿಗೆ ಪೂರಕವಾಗಿರುವುದಿಲ್ಲ. ಅಲ್ಲದೆ, ಪಾಪ್‌ಕಾರ್ನ್‌ನ ಚೂಪಾದ ತುದಿಗಳು ಗಂಟಲಿಗೆ ಹಾನಿ ಮಾಡಬಹುದು. ಆದ್ದರಿಂದ ಪುಟ್ಟ ಮಗುವಿಗೆ ಪಾಪ್‌ಕಾರ್ನ್ ನೀಡಿ ಸಂಕಟ ತರಬೇಡಿ.
ಹಸಿ ಕ್ಯಾರೆಟ್: ಕ್ಯಾರೆಟ್ ತಿಂದರೆ ಉತ್ತಮ ಮತ್ತು ಆರೋಗ್ಯಕ್ಕೆ ಒಳ್ಳೆಯದೇನೋ ಹೌದು. ಆದರೆ ಪುಟ್ಟ ಮಗುವಿಗೆ ಹಸಿ ಕ್ಯಾರೆಟ್ ನೀಡುವುದು ಸರಿಯಲ್ಲ. ಆ್ಯಪಲ್, ಕ್ಯಾರೆಟ್ ಗಟ್ಟಿಯಾಗಿರುತ್ತವೆ ಮತ್ತು ಮಕ್ಕಳು ಅದನ್ನು ಜಗಿದು ತಿನ್ನಲು, ಗಂಟಲಿನಲ್ಲಿ ನುಂಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಕ್ಯಾರೆಟ್ ಅನ್ನು ಹದವಾಗಿ ಬೇಯಿಸಿ ಅಥವಾ ತುರಿದು ಸಣ್ಣ ತುಂಡುಗಳಾಗಿಸಿ ನೀಡಬಹುದು. ಇದರಿಂದ ಅವರಿಗೆ ಅಗತ್ಯ ಪೋಷಕಾಂಶವೂ ದೊರೆಯುತ್ತದೆ ಮತ್ತು ಗಂಟಲಿನಲ್ಲಿ ಸಿಲುಕಿಕೊಳ್ಳುವ ಅಪಾಯವೂ ಇರುವುದಿಲ್ಲ.
ಕ್ಯಾಂಡಿ: ಕ್ಯಾಂಡಿ ಎಂದರೆ ಮಕ್ಕಳ ಬಾಯಲ್ಲಿ ನೀರೂರುತ್ತದೆ. ಬಣ್ಣಬಣ್ಣದ, ವಿವಿಧ ಗಾತ್ರ, ಆಕಾರ ಮತ್ತು ರುಚಿಯ ಕ್ಯಾಂಡಿ ತಿನ್ನಲು ಮಕ್ಕಳು ಹಾತೊರೆಯುತ್ತಾರೆ. ಆದರೆ ಐದರ ಒಳಗಿನ ಪುಟ್ಟ ಮಕ್ಕಳಿಗೆ ಅಂತಹ ಗಟ್ಟಿಯಾದ ಯಾವುದೇ ಮಿಠಾಯಿ, ಕ್ಯಾಂಡಿ, ಚಾಕೊಲೇಟ್‌ಗಳನ್ನು ನೀಡಬೇಡಿ. ಬಾಯಲ್ಲಿಟ್ಟ ಕೂಡಲೇ ಅವು ಜಾರುವುದರಿಂದ ಗಂಟಲಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಹೀಗಾಗಿ ಮಕ್ಕಳಿಗೆ ನೀಡುವ ಆಹಾರ, ತಿನಿಸುಗಳ ಬಗ್ಗೆ ಎಚ್ಚರಿಕೆ ವಹಿಸಿದಷ್ಟೂ ಸುರಕ್ಷಿತ ಮತ್ತು ಆರೋಗ್ಯಕ್ಕೂ ಪೂರಕ.