ಮಕ್ಕಳ ಬೇಕು-ಬೇಡಗಳ ಕಡೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗ್ಗೆಯೂ ಇರಲಿ ಗಮನ: ಪಾಲಕರು ಮಾಡಬೇಕಿರುವುದು ಏನು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಬೇಕು-ಬೇಡಗಳ ಕಡೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗ್ಗೆಯೂ ಇರಲಿ ಗಮನ: ಪಾಲಕರು ಮಾಡಬೇಕಿರುವುದು ಏನು? ಇಲ್ಲಿದೆ ಮಾಹಿತಿ

ಮಕ್ಕಳ ಬೇಕು-ಬೇಡಗಳ ಕಡೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗ್ಗೆಯೂ ಇರಲಿ ಗಮನ: ಪಾಲಕರು ಮಾಡಬೇಕಿರುವುದು ಏನು? ಇಲ್ಲಿದೆ ಮಾಹಿತಿ

ಮಕ್ಕಳ ಪಾಲನೆ ಮತ್ತು ಪೋಷಣೆ ಸುಲಭದ ಕೆಲಸವಲ್ಲ. ಊಟ-ತಿಂಡಿ,ಅವರ ಬೇಕು-ಬೇಡಗಳ ಬಗ್ಗೆ ಗಮನ ಹರಿಸಿದಷ್ಟೇ ನಾವು ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಹಾಗಾದಾಗ ಮಾತ್ರ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಮಕ್ಕಳ ಬೇಕು-ಬೇಡಗಳನ್ನು ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗೆಗೂ ಇರಲಿ ಗಮನ
ಮಕ್ಕಳ ಬೇಕು-ಬೇಡಗಳನ್ನು ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗೆಗೂ ಇರಲಿ ಗಮನ (PC: Canva)

ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂಬ ಮಾತಿದೆ. ಭವಿಷ್ಯದ ಪ್ರಜೆಗಳ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳ ವಿಚಾರದಲ್ಲಿ ಪಾಲಕರು ಇಂದು ಎಚ್ಚರ ವಹಿಸಿದಷ್ಟೂ ಸಾಲದು ಎಂಬ ಸ್ಥಿತಿಯಿದೆ. ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ, ಮಾನಸಿಕ ಬೆಳವಣಿಗೆಗೂ ಪಾಲಕರು ಇಂದು ಸಮಯ ನೀಡಬೇಕಿದೆ. ಸಣ್ಣ ಕುಟುಂಬ ಪದ್ಧತಿಯಿಂದಾಗಿ, ಮಕ್ಕಳು ಸಂಕುಚಿತ ಭಾವನೆ ಹೊಂದುವುದನ್ನು ತೊಡೆದುಹಾಕುವುದು ಪಾಲಕರ ಕರ್ತವ್ಯವಾಗಿದೆ.

ಮಕ್ಕಳ ಬದುಕು ಉಲ್ಲಾಸ, ಸಂತಸದಿಂದ ಕೂಡಿರಲು ಅವರ ಮಾನಸಿಕ ಸ್ಥಿತಿ ಎಷ್ಟು ಮುಖ್ಯ ಮತ್ತು ಬೆಳವಣಿಗೆ ಹೇಗಿರಬೇಕು, ಅದಕ್ಕಾಗಿ ಮಕ್ಕಳ ಹೆತ್ತವರು ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬ ಬಗ್ಗೆ ಮೈಂಡ್‌ಗ್ರಾಫ್ಟ್ಸ್ ಸ್ಥಾಪಕರು ಮತ್ತು ಮನಃಶಾಸ್ತ್ರಜ್ಞರಾದ ಜೀನಾ ಗಿರಿಲಾಲ್ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಮಕ್ಕಳು ಹೇಳುವುದನ್ನು ಕೇಳಿ

ಮಕ್ಕಳನ್ನು ಅವರ ಮನಸ್ಸು ಮತ್ತು ಹೃದಯ ಬಿಚ್ಚಿ ಮಾತನಾಡಲು ಅವಕಾಶ ಕಲ್ಪಿಸಿ. ಅವರಿಗೆ ಮುಕ್ತ ಮಾತುಕತೆಗೆ ಪೂರಕ ವಾತಾವರಣ ಇರಲಿ.

ನಡೆ-ನುಡಿಯನ್ನು ಗಮನಿಸಿ

ಮಕ್ಕಳು ಮಾತನಾಡುವಾಗ ಅವರ ಹಾವ-ಭಾವ ಗಮನಿಸಿ. ಅವರ ಮಾತು, ನಡೆಯಲ್ಲಿ ವ್ಯತ್ಯಾಸ ಕಾಣಿಸಿದರೆ, ಅವರು ಸುಳ್ಳು ಹೇಳುತ್ತಿದ್ದರೆ ಅಥವಾ ನಿಮ್ಮಿಂದ ಏನಾದರೂ ಮುಚ್ಚಿಡುತ್ತಿದ್ದಾರೆ ಎಂದಾದರೆ, ಏನಾದರೂ ಸಮಸ್ಯೆಯಾಗಿದೆ ಎನ್ನುವುದನ್ನು ಗಮನಿಸಿ.

ಅವರ ಭಾವನೆಗೆ ಬೆಲೆ ಕೊಡಿ

ಮಕ್ಕಳು ಏನಾದರೂ ಹೇಳುತ್ತಿರಬಹುದು ಅಥವಾ ನಿಮಗೆ ಏನನ್ನಾದರೂ ಅರ್ಥ ಮಾಡಿಸಲು ಯತ್ನಿಸುತ್ತಿರಬಹುದು. ಅದಕ್ಕೆ ನೀವು ಬೆಲೆಕೊಡಿ, ಅವರ ಭಾವನೆಯನ್ನು ಕೇಳಿ ಅರ್ಥಮಾಡಿಕೊಳ್ಳಿ.

ಆರೋಗ್ಯಕರ ಅಭ್ಯಾಸ ರೂಢಿ ಮಾಡಿ

ಮಕ್ಕಳಿಗೆ ಹೊಸ ಮತ್ತು ಆರೋಗ್ಯಕರ ಅಭ್ಯಾಸ, ಹವ್ಯಾಸ ರೂಢಿಮಾಡಿ. ವ್ಯಾಯಾಮ, ಯೋಗ, ಧ್ಯಾನದ ಜತೆಗೆ ಹೊರಗಡೆ ಹೋದಾಗ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳನ್ನು ಕಲಿಸಿಕೊಡಿ. ಅವರು ಯಾವ ರೀತಿ ಸಮಯ ಕಳೆಯುತ್ತಾರೆ ಎನ್ನುವುದನ್ನು ಕೂಡ ಗಮನಿಸಿ. ಹವ್ಯಾಸ-ಅಭ್ಯಾಸಗಳು ಅವರ ಮಾನಸಿಕ-ದೈಹಿಕ ಆರೋಗ್ಯಕ್ಕೆ ಪೂರಕವಾಗಿರಲಿ. ಅವರ ಒತ್ತಡ, ಕಿರಿಕಿರಿಯನ್ನು ತಗ್ಗಿಸಲು, ಮನಸ್ಸು ಸ್ವಚ್ಛವಾಗಿರಲು ನಿಮ್ಮ ನೆರವು ಅಗತ್ಯ.

ಸಮಾಜದಲ್ಲಿ ಅವರು ಬೆರೆಯಲಿ

ಕುಟುಂಬ, ಬಂಧು ಬಳಗದವರೊಡನೆ ಬಾಂಧವ್ಯ ವೃದ್ಧಿಸಿಕೊಳ್ಳಲು ಮಕ್ಕಳಿಗೆ ಅನುವು ಮಾಡಿಕೊಡಿ. ಅವರ ಜತೆ ಮಾತುಕತೆ, ಹರಟೆ, ಸುತ್ತಾಟಕ್ಕೆ ಅವಕಾಶ ನೀಡಿ.

ವೃತ್ತಿಪರರ ನೆರವು ಪಡೆಯಿರಿ

ಮಕ್ಕಳ ಮಾನಸಿಕ ಆರೋಗ್ಯ ಸರಿಯಿಲ್ಲ, ಸದಾ ಯಾವುದೋ ಗುಂಗಿನಲ್ಲಿ ಇದ್ದಾರೆ, ನಿಮ್ಮೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಿಲ್ಲ ಎಂದಾದರೆ ಕೌನ್ಸೆಲರ್, ಥೆರಪಿಸ್ಟ್ ಅಥವಾ ಸೂಕ್ತ ತಜ್ಞರ ನೆರವು ಪಡೆಯಲು ಹಿಂಜರಿಕೆ ಬೇಡ.

ಭಾವನಾತ್ಮಕ ಬುದ್ಧಿವಂತಿಕೆ

ಮಕ್ಕಳು ಬುದ್ಧಿವಂತರಾಗಬೇಕು ಎಂಬ ಕನಸು ಎಲ್ಲ ಪಾಲಕರಲ್ಲೂ ಇರುತ್ತದೆ. ಅದಕ್ಕಾಗಿ ಅವರನ್ನು ಕೇವಲ ಪುಸ್ತಕದ ಹುಳುಗಳಾಗಿಸದೇ, ಎಲ್ಲ ಸಂಗತಿಗಳ ಕುರಿತು ಕೂಡ ಅರಿವು ಮೂಡಿಸಿ.

ಮುಕ್ತ ಮಾತುಕತೆಯಿರಲಿ

ಮಕ್ಕಳ ಮನಸ್ಸು ಮತ್ತು ವಿಶ್ವಾಸ ಗೆಲ್ಲುವುದು ಸುಲಭವಲ್ಲ. ಹೀಗಾಗಿ ಅವರ ಮಾತುಗಳನ್ನು ಸದಾ ಸಮಾಧಾನದಿಂದ ಆಲಿಸಿ, ಮುಕ್ತ ಮಾತುಕತೆಯಾಡಿ.

ಧನಾತ್ಮಕ ಚಿಂತನೆ

ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮತ್ತು ತನ್ನ ಶಕ್ತಿ, ಮಿತಿಯ ಕುರಿತು ಅರಿವು ಮೂಡಿಸಿ. ಅವರಿಂದಾಗುವ ಕೆಲಸಗಳಿಗೆ ಪ್ರೇರಣೆ ನೀಡಿ, ಅವರಲ್ಲಿ ಕೌಶಲ್ಯ ಅಭಿವೃದ್ಧಿ, ವಿಶೇಷ ಪ್ರತಿಭೆ ಇದ್ದರೆ ಪ್ರೋತ್ಸಾಹಿಸಿ.

ಗ್ಯಾಜೆಟ್ ವ್ಯಸನ ತಪ್ಪಿಸಿ

ಬಹುತೇಕ ಪಾಲಕರು ಮಕ್ಕಳಿಗೆ ಟಿವಿ, ಮೊಬೈಲ್ ಕೊಟ್ಟು ಅವರು ಸದಾ ಅದರಲ್ಲೇ ಮುಳುಗಿರುವಂತೆ ಮಾಡುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ. ಅನಗತ್ಯ ಮತ್ತು ಅಧಿಕ ಸಮಯವನ್ನು ಮಕ್ಕಳು ಗ್ಯಾಜೆಟ್‌ಗಳಲ್ಲಿ ಕಳೆದರೆ, ಅದರಿಂದ ಮುಂದೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವವರು ನೀವೇ ಎನ್ನುವುದು ನಿಮ್ಮ ಗಮನದಲ್ಲಿರಲಿ.

Whats_app_banner