ನಡೆದಾಗ ಕಾಣಿಸಿಕೊಳ್ಳುವ ಕೊಲೆಸ್ಟ್ರಾಲ್ ಲಕ್ಷಣಗಳು; ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಲೇಬೇಡಿ
ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಹೆಚ್ಚಾಗಬಹುದಾದ ಕೊಲೆಸ್ಟ್ರಾಲ್, ಗಂಭೀರವಾದ ಪೆರಿಫೆರಲ್ ಆರ್ಟರಿ ಡಿಸೀಸ್‍ಗೆ ಕಾರಣವಾಗುತ್ತದೆ. ಆರೋಗ್ಯಕರ ಡಯಟ್ ಮತ್ತು ನಿರಂತರವಾಗಿ ವ್ಯಾಯಾಮ ಮಾಡುವುದರಿಂದ ಈ ಅಪಾಯವನ್ನು ತಡೆಗಟ್ಟಬಹುದು. ಈ ಬಗ್ಗೆ ಇಲ್ಲಿದೆ ವಿವರ. (ಬರಹ: ಪ್ರೀತಿ)

ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಹೆಚ್ಚಾಗಬಹುದಾದ ಕೊಲೆಸ್ಟ್ರಾಲ್, ಗಂಭೀರವಾದ ಪೆರಿಫೆರಲ್ ಆರ್ಟರಿ ಡಿಸೀಸ್‍ಗೆ ಕಾರಣವಾಗುತ್ತದೆ. ಹೆಚ್ಚಾಗಿ ನಡೆಯುವುದರಿಂದ ಕಾಲು ನೋವು ಅಥವಾ ಅಸ್ವಸ್ಥತೆ ಉಂಟಾಗುವುದು, ಸ್ನಾಯುಗಳ ದುರ್ಬಲತೆ, ಪಾದವು ಕೋಲ್ಡ್ ಆಗುವುದು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತದೆ. ನಿಯತವಾಗಿ ತಪಾಸಣೆ ಮಾಡುವುದು, ಆರೋಗ್ಯಕರ ಡಯಟ್ ಮತ್ತು ನಿರಂತರವಾಗಿ ವ್ಯಾಯಾಮ ಮಾಡುವುದರಿಂದ ಈ ಅಪಾಯವನ್ನು ತಡೆಗಟ್ಟಬಹುದು.
ಕೊಲೆಸ್ಟ್ರಾಲ್‌ನಿಂದ ಉಂಟಾಗುವ ಸಮಸ್ಯೆಗಳು
ಕಾಲು ನೋವು ಅಥವಾ ಅಸ್ವಸ್ಥತೆ: ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣವೆಂದರೆ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ನಿಂದ ಉಂಟಾಗುವ ಕಾಲು ನೋವು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ಕುಗ್ಗಿ, ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗದು. ಇದರಿಂದ ನೋವು, ನಿಶ್ಯಕ್ತಿ, ಆಯಾಸ ಮತ್ತು ಬಳಲಿಕೆಯಂತಹ ಲಕ್ಷಣಗಳು ಕಂಡುಬರುತ್ತದೆ. ನಡೆಯುವಾಗ ಮತ್ತು ಮೆಟ್ಟಿಲುಗಳನ್ನು ಹತ್ತುವಾಗ ತೊಡೆಸಂದಿ, ಪೃಷ್ಠದಲ್ಲಿ ನೋವು ಕಂಡುಬರಬಹುದು.
ಸ್ನಾಯುಗಳ ದುರ್ಬಲತೆ: ಕೊಲೆಸ್ಟ್ರಾಲ್ ಶೇಖರಣೆಯಿಂದ ರಕ್ತನಾಳಗಳು ಕುಗ್ಗಿ ಕಾಲುಗಳ ಸ್ನಾಯುಗಳಲ್ಲಿ ದೌರ್ಬಲ್ಯತೆ ಉಂಟಾಗುತ್ತದೆ. ನಡೆಯುವಾಗ, ಸಮತೋಲನದ ವೇಳೆ ಅಥವಾ ಹೆಚ್ಚು ಕಾಲ ನಿಂತುಕೊಂಡಾಗ ನಿಶ್ಯಕ್ತವಾಗುವುದು. ರಕ್ತದ ಮೂಲಕ ಆಮ್ಲಜನಕ ಮತ್ತು ಪೋಷಕಾಂಶವು ಸರಬರಾಜು ಆಗುವುದಿಲ್ಲ. ವಯಸ್ಕರು ಹೆಚ್ಚು ಕಾಲ ನಿಲ್ಲಲಾಗದೆ ಬೀಳುವುದು ಅಥವಾ ಅವರಲ್ಲಿ ಚಲನಶೀಲತೆ ಕಡಿಮೆ ಆಗುತ್ತದೆ.
ಪಾದವು ತಂಪಾಗುವುದು: ರಕ್ತನಾಳಗಳಲ್ಲಿ ಸರಿಯಾಗಿ ರಕ್ತಸರಬರಾಜು ಆಗದಿರುವುದರಿಂದ ನಡೆಯುವಾಗ ಅಥವಾ ನಡೆದ ಬಳಿಕ ದೇಹದ ಬೇರೆ ಭಾಗಗಳಿಗೆ ಹೋಲಿಸಿದರೆ ಕಾಲಿನ ಪಾದವು ತುಂಬಾ ತಂಪಾಗಿರುವ ಅನುಭವವಾಗುತ್ತದೆ. ಸಮಸ್ಯೆ ಗಂಭೀರವಾಗಿದ್ದಲ್ಲಿ, ಕಾಲು ಅಥವಾ ಬೆರಳಿನ ಚರ್ಮವು ಹಳದಿ ಅಥವಾ ನೀಲಿ ಬಣ್ಣದಂತೆ ಕಂಡುಬರುತ್ತದೆ. ಆದ್ದರಿಂದ ಕೈ, ಕಾಲುಗಳು ಹೆಚ್ಚು ತಪ್ಪಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಪಧಮನಿಯ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ: ನರಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದಿದ್ದರೆ ಸೂಜಿಯಲ್ಲಿ ಚುಚ್ಚಿದಂತೆ ಅಥವಾ ಸ್ಪರ್ಶವು ಕಳೆದುಕೊಂಡ ಅನುಭವವಾಗುವುದು. ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹಾಗೆಯೇ ಬಿಟ್ಟರೆ ಅಥವಾ ಕೊಲೆಸ್ಟ್ರಾಲ್ ಹೆಚ್ಚಾದರೆ ದೀರ್ಘಕಾಲದವರೆಗೆ ಮರಗಟ್ಟುತ್ತದೆ ಅಥವಾ ಜುಮ್ಮೆನಿಸುತ್ತದೆ. ಇದನ್ನು ನರಗಳಿಗೆ ಸಂಬಂಧಿಸಿದ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.
ಚರ್ಮದ ಬಣ್ಣ ಬದಲಾವಣೆ: ಪಾದ ಮತ್ತು ಕಾಲಿನ ಬಣ್ಣವು ನೇರಳೆ ನೀಲಿ ಬಣ್ಣ ಅಥವಾ ತಿಳಿ ನೀಲಿ ಬಣ್ಣ ಹೊಂದಿದ್ದರೆ, ಇದು ಅಧಿಕ ಕೊಲೆಸ್ಟ್ರಾಲ್ ಲಕ್ಷಣವೆಂದು ಗುರುತಿಸಬಹುದು. ಚರ್ಮಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಆಗದೆ ಕೆಲವೊಮ್ಮೆ ಆಮ್ಲಜನಕವು ಸರಿಯಾಗಿಲ್ಲದೆ ಇರುವ ಕಾರಣದಿಂದ ತೀವ್ರವಾಗಿ ನೀಲಿ ಬಣ್ಣಕ್ಕೆ ತಿರುಗಬಹುದು. ಇದಕ್ಕೆ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ.
ಗಾಯ ನಿಧಾನವಾಗಿ ಒಣಗುವುದು: ಕಾಲು ಮತ್ತು ಪಾದಗಳಲ್ಲಿರುವ ಸಣ್ಣ ಗಾಯ, ಬೊಕ್ಕೆಗಳು ಅಥವಾ ತರುಚಿದ ಗಾಯಗಳಿದ್ದರೆ ಅವು ಒಣಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಅಂಗಾಂಶಗಳಿಗೆ ಸರಿಯಾಗಿ ಪೋಷಕಾಂಶಗಳು ಮತ್ತು ಆಮ್ಲಜನಕವು ಸಿಗುವುದಿಲ್ಲ. ಇದರಿಂದ ಸಣ್ಣ ಗಾಯ ಒಣಗಲು ಕೂಡ ವಾರ ಅಥವಾ ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೋಂಕು ಹೆಚ್ಚಾಗಿ ಗ್ಯಾಂಗ್ರೀನ್‌ನಂತಹ ಸಮಸ್ಯೆಗಳು ಉಂಟಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್‌ನ ಅಪಾಯವನ್ನು ತಪ್ಪಿಸುವುದು ಹೇಗೆ?
ನಿಯತ ತಪಾಸಣೆ: ನಿಯತ ತಪಾಸಣೆಯಿಂದ ಆರಂಭಿಕ ಕೊಲೆಸ್ಟ್ರಾಲ್ ಸಮಸ್ಯೆ ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ಪಡೆದುಕೊಳ್ಳಬಹುದು.
ಆರೋಗ್ಯಕರ ಆಹಾರ: ಹಣ್ಣು, ತರಕಾರಿ, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಸೇವಿಸಿ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬನ್ನು ಮಿತಿಗೊಳಿಸಿ.
ವ್ಯಾಯಾಮ: ನಿತ್ಯ ವ್ಯಾಯಾಮ ಮತ್ತು ವಾಕಿಂಗ್‍ನಿಂದ ತೂಕ ಇಳಿಸಬಹುದು ಮತ್ತು ಹೃದಯದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ.
ಧೂಮಪಾನ ತ್ಯಜಿಸಿ: ತಂಬಾಕು ಸೇವನೆ ಅಥವಾ ಧೂಮಪಾನದಿಂದ ದೂರವಿದ್ದರೆ ಅಪಧಮನಿಯನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ.
ಯಾರಿಗೆ ಅಪಾಯ ಹೆಚ್ಚು?
ವಂಶವಾಧಿಯಿಂದ ಅಥವಾ ಅನಾರೋಗ್ಯ ಕೊಬ್ಬಿನಾಂಶ, ದೈಹಿಕ ಚಟುವಟಿಕೆ ಕೊರತೆ ಇರುವವರು ಕೊಲೆಸ್ಟ್ರಾಲ್ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಇದರಿಂದ ಅಧಿಕ ತೂಕ, ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಸ್ಯೆಯು ಹೆಚ್ಚಾಗಿ ವಯಸ್ಕರಲ್ಲಿ, ಮಹಿಳೆಯರಲ್ಲಿ ಕಾಣಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
