Christmas 2024: ಈ ದೇಶಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಡಿಫರೆಂಟ್‌: ಬೀದಿ ತುಂಬಾ ಮೇಣದ ಬತ್ತಿ ಬೆಳಗುವುದರಿಂದ ಸ್ಮಶಾನಕ್ಕೆ ಭೇಟಿ ನೀಡುವ ತನಕ
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2024: ಈ ದೇಶಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಡಿಫರೆಂಟ್‌: ಬೀದಿ ತುಂಬಾ ಮೇಣದ ಬತ್ತಿ ಬೆಳಗುವುದರಿಂದ ಸ್ಮಶಾನಕ್ಕೆ ಭೇಟಿ ನೀಡುವ ತನಕ

Christmas 2024: ಈ ದೇಶಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಡಿಫರೆಂಟ್‌: ಬೀದಿ ತುಂಬಾ ಮೇಣದ ಬತ್ತಿ ಬೆಳಗುವುದರಿಂದ ಸ್ಮಶಾನಕ್ಕೆ ಭೇಟಿ ನೀಡುವ ತನಕ

ಕ್ರಿಸ್‌ಮಸ್ ಪ್ರಪಂಚದಾದ್ಯಂತ ನಡೆಯುವ ದೊಡ್ಡ ಹಬ್ಬ. ಏಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ ಎಂಬ ನಂಬಿಕೆ ಇದೆ. ಕ್ರಿಸ್‌ಮಸ್‌ ಹಬ್ಬವನ್ನು ಕೆಲವು ದೇಶಗಳಲ್ಲಿ ಭಿನ್ನವಾಗಿ ಆಚರಿಸುತ್ತಾರೆ. ಕ್ಯಾಲೆಂಡರ್‌ ತೂಗು ಹಾಕುವುದರಿಂದ ಸ್ಮಶಾನಕ್ಕೆ ಭೇಟಿ ನೀಡುವವರೆಗೆ, ಯಾವೆಲ್ಲಾ ದೇಶಗಳಲ್ಲಿ ಕ್ರಿಸ್‌ಮಸ್ ಆಚರಣೆ ಹೇಗಿದೆ ನೋಡಿ.

ವಿಭಿನ್ನ ಕ್ರಿಸ್‌ಮಸ್ ಆಚರಣೆಗಳು
ವಿಭಿನ್ನ ಕ್ರಿಸ್‌ಮಸ್ ಆಚರಣೆಗಳು

ಎಲ್ಲೆಲ್ಲೂ ಕ್ರಿಸ್‌ಮಸ್‌ನ ಸಂಭ್ರಮ ಜೋರಾಗಿದೆ. ಪ್ರತಿವರ್ಷ ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್ ಎಂದರೆ ಎಲ್ಲರೂ ಒಟ್ಟಾಗಿ ಸಂತೋಷ, ಖುಷಿಯ ಕ್ಷಣಗಳನ್ನು ಕಳೆಯುವುದು. ಕ್ರಿಸ್‌ಮಸ್‌ ಹಳೆಯ ವರ್ಷಕ್ಕೆ ಅಂತ್ಯ ಹಾಡಿ, ಹೊಸ ವರ್ಷವನ್ನು ಸ್ವಾಗತಿಸುವ ಸಮಯವೂ ಹೌದು.

ಕ್ರಿಸ್‌ಮಸ್‌ ಎಂದರೆ ಚರ್ಚ್‌ಗಳ ಅಲಂಕಾರ, ದೇವರನ್ನು ಭಜಿಸುವುದು, ಕ್ರಿಸ್‌ಮಸ್ ಟ್ರೀ ನೆಡುವುದು, ವಿದ್ಯುತ್‌ ದೀಪಗಳಿಂದ ಅಲಂಕರಿಸುವುದು, ಕೇಕ್ ಹಂಚುವುದು, ಸಾಂತಾಕ್ಲಾಸ್‌ನಿಂದ ಉಡುಗೊರೆ ಪಡೆಯುವುದು ಇಷ್ಟೇ ಅಲ್ಲ. ಇದನ್ನೂ ಮೀರಿದ ಆಚರಣೆಗಳು ಕೆಲವು ದೇಶಗಳಲ್ಲಿದೆ. ಈ ದೇಶಗಳಲ್ಲಿ ಕ್ರಿಸ್‌ಮಸ್ ಅನ್ನು ಬಹಳ ವಿಭಿನ್ನವಾಗಿ, ವಿಶೇಷವಾಗಿ ಆಚರಿಸುತ್ತಾರೆ. ಹಾಗಾದರೆ ಯಾವೆಲ್ಲಾ ದೇಶಗಳಲ್ಲಿ ಕ್ರಿಸ್‌ಮಸ್‌ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ ನೋಡಿ.

ಕ್ಯಾಲೆಂಡರ್ ನೇತು ಹಾಕುವುದು: ಜರ್ಮನಿ

ಜರ್ಮನಿಯಲ್ಲಿ ಕ್ರಿಸ್‌ಮಸ್‌ ಸಮಯದಲ್ಲಿ ಕ್ಯಾಲೆಂಡರ್‌ಗಳನ್ನು ನೇತು ಸಂಪ್ರದಾಯವಿದೆ. 19ನೇ ಶತಮಾನದಲ್ಲಿ ಕ್ರಿಸ್‌ಮಸ್‌ ಹಬ್ಬದ ಆರಂಭಕ್ಕೂ ಮುನ್ನ ಅಂದರೆ 4 ವಾರಗಳ ಮೊದಲು ಹಬ್ಬ ಆಚರಿಸುವ ಪದ್ಧತಿ ಚಾಲ್ತಿಯಾಯಿತು. ಈ ಸಮಯದಲ್ಲಿ ಹಾರಗಳನ್ನು ನೇತು ಹಾಕುವ ಮೂಲಕ ಕ್ರಿಸ್‌ಮಸ್ ಆಚರಣೆವನ್ನು ಶುರು ಮಾಡಲಾಗುತ್ತಿತ್ತು. ನಂತರ ಅಡ್ವೆಂಟ್ ಕ್ಯಾಲೆಂಡರ್‌ಗಳು ಹಾಗೂ ಆ ಕ್ಯಾಲೆಂಡರ್‌ಗಳಿಗೆ ಚಾಕೊಲೇಟ್‌ಗಳನ್ನು ನೇತು ಹಾಕುವ ಸಂಪ್ರದಾಯ ಶುರುವಾಯ್ತು. ಇತ್ತೀಚಿನ ದಿನಗಳಲ್ಲಿ ಜರ್ಮನಿಯ ಕಟ್ಟಡಗಳಿಗೆ ದೊಡ್ಡ ಅಡ್ವೆಂಟ್ ಕ್ಯಾಲೆಂಡರ್‌ಗಳನ್ನು ನೇತುಹಾಕುವ ಪದ್ಧತಿ ಜನಪ್ರಿಯವಾಗಿದೆ.

ಕೊಲಂಬಿಯಾದಲ್ಲಿ ನೋಚೆ ಡೆ ಲಾಸ್ ವೆಲಿಟಾಸ್

ಕೊಲಂಬಿಯಾದಲ್ಲಿ ಡಿಸೆಂಬರ್ 7 ರಂದು ಜೀಸಸ್‌ನ ತಾಯಿ ಮೇರಿ ಹಾಗೂ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್‌ನ ಹಬ್ಬವನ್ನು ನೋಚೆ ಡಿ ಲಾಸ್ ವೆಲಿಟಾಸ್ (ನೈಟ್ ಆಫ್ ದಿ ಲಿಟಲ್ ಕ್ಯಾಂಡಲ್ಸ್) ನೊಂದಿಗೆ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಕೊಲಂಬಿಯನ್ನರು ತಮ್ಮ ಮನೆ ಹಾಗೂ ಬೀದಿಗಳಲ್ಲಿ ಲಕ್ಷಾಂತರ ಬಿಳಿ ಬಣ್ಣದ ಮೇಣದ ಬತ್ತಿಗಳನ್ನು ಬೆಳಗಿಸುತ್ತಾರೆ. ಈ ಸಂಪ್ರದಾಯವು ಕೊಲಂಬಿಯಾದಲ್ಲಿ ರಜಾದಿನಗಳ ಆರಂಭವನ್ನು ಸೂಚಿಸುತ್ತದೆ.

ಗ್ವಾಟೆಮಾಲಾದಲ್ಲಿ ಲಾ ಕ್ವೆಮಾ ಡೆಲ್ ಡಯಾಬ್ಲೊ

ಲಾ ಕ್ವೆಮಾ ಡೆಲ್ ಡಯಾಬ್ಲೊ ಎಂದರೆ ದೆವ್ವವನ್ನು ಸುಡುವುದು ಎಂಬ ಅರ್ಥ. ಗ್ವಾಟೆಮಾಲಾದ ಜನರು ಡಿಸೆಂಬರ್ 7 ರ ಮಂಗಳಕರ ದಿನದಂದು ದೆವ್ವದ ಪ್ರತಿಕೃತಿಯನ್ನು ಸುಡುವುದರಿಂದ ಅವರ ಮನೆಗಳು ಮತ್ತು ಅವರ ಜೀವನವನ್ನು ಶುದ್ಧೀಕರಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಋಣಾತ್ಮಕ ಅಂಶಗಳೆಲ್ಲಾ ದೂರಾಗಿ ಧನಾತ್ಮಕ ಅಂಶಗಳು ಮಾತ್ರ ಹರಡುತ್ತವೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿದೆ.

ಕ್ರಿಸ್‌ಮಸ್ ಟ್ರೀ ಸುತ್ತಲೂ ಡಾನ್ಸ್ ಮಾಡುವುದು: ಡೆನ್ಮಾರ್ಕ್

ಇದು ಡೆನ್ಮಾರ್ಕ್‌ನಲ್ಲಿ ಆಚರಿಸಲಾಗುವ ಒಂದು ಮೋಜಿನ ಸಂಪ್ರದಾಯವಾಗಿದೆ. ಈ ಸಂಪ್ರದಾಯದ ಪ್ರಕಾರ ಮನೆಯವರೆಲ್ಲಾ ಕೈ ಕೈ ಹಿಡಿದುಕೊಂಡು ಕ್ರಿಸ್‌ಮಸ್‌ ಟ್ರೀಗೆ ಸುತ್ತು ಹಾಕುತ್ತಾರೆ. ಕ್ರಿಸ್‌ಮಸ್‌ ಉಡುಗೊರೆ ನೀಡುವುದು, ಹಾಡು, ನೃತ್ಯ, ನಗು ಎಲ್ಲವೂ ಈ ಆಚರಣೆಯ ಭಾಗವಾಗುತ್ತದೆ.

ಸ್ಮಶಾನಕ್ಕೆ ಭೇಟಿ ನೀಡುವುದು: ಫಿನ್ಲೆಂಡ್‌

ಕ್ರಿಸ್‌ಮಸ್‌ ಈವ್‌ನಲ್ಲಿ ಫಿನ್ಲೆಂಡ್‌ನಲ್ಲಿ ಜನರು ತಮ್ಮ ಮೃತ ಕುಟುಂಬ ಸದಸ್ಯರು ಮತ್ತು ಪೂರ್ವಜರ ಸಮಾಧಿಗಳ ಮೇಲೆ ಮೇಣದಬತ್ತಿಗಳನ್ನು ಬೆಳಗಿಸಲು ಸ್ಮಶಾನಕ್ಕೆ ಭೇಟಿ ನೀಡುತ್ತಾರೆ. ಕ್ರಿಸ್‌ಮಸ್ ಸೌನಾ ಫಿನ್ಲೆಂಡ್‌ನಲ್ಲಿ ಅನುಸರಿಸುವ ಮತ್ತೊಂದು ಸಂಪ್ರದಾಯವಾಗಿದೆ, ಅಲ್ಲಿ ಕುಟುಂಬ ಸದಸ್ಯರು ಕ್ರಿಸ್ಮಸ್ ಈವ್‌ನ ಮಧ್ಯಾಹ್ನ ಒಟ್ಟಿಗೆ ಸೌನಾವನ್ನು ಆನಂದಿಸುತ್ತಾರೆ.

Whats_app_banner