cinnamon and beauty tips: ಅಡುಗೆಯ ಘಮ ಹೆಚ್ಚಿಸುವ ದಾಲ್ಚಿನ್ನಿಯಲ್ಲಿದೆ ಸೌಂದರ್ಯವರ್ಧಕ ಗುಣ. ನಿಮಗಿದು ಗೊತ್ತೆ?
cinnamon and beauty tips: ದಾಲ್ಚಿನ್ನಿ ಅಡುಗೆ ಘಮ ಹೆಚ್ಚಿಸುವುದು ಮಾತ್ರವಲ್ಲ; ಸೌಂದರ್ಯವರ್ಧಕವೂ ಹೌದು. ಇದರ ಎಣ್ಣೆ ಹಾಗೂ ಪುಡಿಯಿಂದ ಚರ್ಮದ ಆರೋಗ್ಯಕ್ಕೆ ಹಲವು ಬಗೆಯ ಉಪಯೋಗಗಳಿವೆ. ಇದರ ಬಳಕೆಯಿಂದ ಚರ್ಮದ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಸೋಂಕಿನಂತಹ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.
ಭಾರತೀಯ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿಗೆ ವಿಶೇಷ ಸ್ನಾನವಿದೆ. ಅಡುಗೆಯ ಪರಿಮಳ ಹಾಗೂ ಸ್ವಾದ ಹೆಚ್ಚಿಸುವ ಸಲುವಾಗಿ ಇದನ್ನು ಬಳಸಲಾಗುತ್ತದೆ. ಇದನ್ನು ಔಷಧ ರೂಪದಲ್ಲೂ ಬಳಸಲಾಗುತ್ತದೆ. ಇದರಲ್ಲಿ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಹಲವು ಗುಣಗಳಿವೆ. ತೂಕ ಇಳಿಸಲು ತೂಕ ದಾಲ್ಚಿನ್ನಿ ಬಳಸುತ್ತಾರೆ.
ದಾಲ್ಚಿನ್ನಿ ಅಡುಗೆ ಘಮ ಹೆಚ್ಚಿಸುವುದು ಮಾತ್ರವಲ್ಲ; ಸೌಂದರ್ಯವರ್ಧಕವೂ ಹೌದು. ಇದರ ಎಣ್ಣೆ ಹಾಗೂ ಪುಡಿಯಿಂದ ಚರ್ಮದ ಆರೋಗ್ಯಕ್ಕೆ ಹಲವು ಬಗೆಯ ಉಪಯೋಗಗಳಿವೆ. ಇದರ ಬಳಕೆಯಿಂದ ಚರ್ಮದ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಸೋಂಕಿನಂತಹ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.
ಮೊಡವೆ ಹಾಗೂ ಕಲೆಗಳ ನಿವಾರಣೆ
ದಾಲ್ಚಿನ್ನಿಯಲ್ಲಿ ನಂಜುನಿರೋಧಕ ಗುಣವಿದ್ದು, ಇದು ಮುಖದ ಮೇಲೆ ಮೂಡುವ ಕಪ್ಪುಕಲೆ ಹಾಗೂ ಮೊಡವೆಗೆ ಉತ್ತಮ ಔಷಧಿ. ವೈದ್ಯಕೀಯವಾಗಿಯೂ ಹಲವು ಫೇಶಿಯಲ್ ಕ್ರೀಮ್ ಹಾಗೂ ಆಯಿಂಟ್‌ಮೆಂಟ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದು ಕಲೆ ಹಾಗೂ ಮೊಡವೆಯನ್ನು ತಕ್ಷಣಕ್ಕೆ ನಿಯಂತ್ರಿಸುತ್ತದೆ.
ಬಳಕೆಯ ವಿಧಾನ: ಒಂದು ಚಮಚ ದಾಲ್ಚಿನ್ನಿ ಪುಡಿ, ಮೂರು ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮೊಡವೆ ಹಾಗೂ ಕಲೆ ಇದ್ದ ಜಾಗದಲ್ಲಿ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಪದೇ ಪದೇ ಹಚ್ಚುವುದೂ ಸರಿಯಲ್ಲ. ವಾರಕ್ಕೊಮ್ಮೆ ಇದನ್ನು ಬಳಸಬಹುದು.
ಎಕ್ಸಿಮಾ ನಿವಾರಣೆಗೂ ಸೈ
ಎಕ್ಸಿಮಾ ಸಮಸ್ಯೆ ಇರುವವರಿಗೂ ದಾಲ್ಚಿನ್ನಿ ಮದ್ದು. ಇದನ್ನು ಹಚ್ಚಿಕೊಳ್ಳುವುದರಿಂದ ತಕ್ಷಣಕ್ಕೆ ಪರಿಹಾರ ಸಿಗಬಹುದು.
ಬಳಕೆ ವಿಧಾನ: ಜೇನುತುಪ್ಪಕ್ಕೆ ದಾಲ್ಚಿನ್ನಿ ಪುಡಿ ಸೇರಿಸಿ ಪೇಸ್ಟ್ ತಯಾರಿಸಿ, ಎಕ್ಸಿಮಾ ಉಂಟಾದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಉರಿ, ತುರಿಕೆ ಬೇಗನೆ ಕಡಿಮೆಯಾಗುತ್ತದೆ.
ಚರ್ಮದ ಆರೋಗ್ಯ ಸುಧಾರಣೆ
ಇದು ಚರ್ಮವನ್ನು ನೈಸರ್ಗಿಕವಾಗಿ ಎಕ್ಸಫೋಲಿಯೇಟ್ ಮಾಡುವ ಗುಣವನ್ನು ಹೊಂದಿದೆ. ಇದು ಚರ್ಮದ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಬ್ಯಾಕ್ಟೀರಿಯಾ ಹಾಗೂ ಸೋಂಕುನಿವಾರಕ ಗುಣವನ್ನು ಹೊಂದಿದ್ದು, ದೇಹ ಮೈಪದರವನ್ನು ರಕ್ಷಿಸುವ ಜೊತೆಗೆ ಚರ್ಮದ ಹೊಳಪಿಗೂ ಕಾರಣವಾಗುತ್ತದೆ. ಇದು ಸೌಂದರ್ಯವರ್ಧಕವೂ ಆಗಿದ್ದು, ಫೇಸ್‌ಪ್ಯಾಕ್ ರೀತಿ ಬಳಸಬಹುದು.
ಬಳಸುವ ರೀತಿ: ಒಂದು ಕಪ್‌ಗೆ ದಾಲ್ಚಿನ್ನಿ ಪುಡಿ, ಕಳಿತ ಸ್ಮ್ಯಾಷ್ ಮಾಡಿದ ಬಾಳೆಹಣ್ಣು, ಮೊಸರು ಹಾಗೂ ನಿಂಬೆರಸ ಹಾಕಿ ಈ ಎಲ್ಲಾವನ್ನೂ ಚೆನ್ನಾಗಿ ಕಲೆಸಿ ಪೇಸ್ಟ್ ತಯಾರಿಸಿ. ಇದನ್ನು ಇಡೀ ಮುಖಕ್ಕೆ ಫೇಸ್‌ಪ್ಯಾಕ್ ರೀತಿ ಬಳಸಿ. ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಮೃದುವಾಗುವ ಜೊತೆಗೆ ಹೊಳಪು ಹೆಚ್ಚುತ್ತದೆ.
ತುಟಿಯ ಅಂದಕ್ಕೆ
ತುಟಿಯ ಅಂದ ಹೆಚ್ಚಿಸಲು ಕೂಡ ದಾಲ್ಚಿನ್ನಿಯನ್ನು ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿ ತುಟಿ ಉಬ್ಬುವಂತೆ ಮಾಡಿ, ಹೊಳಪು ಹೆಚ್ಚಲು ಸಹಕರಿಸುತ್ತದೆ.
ಬಳಕೆ ವಿಧಾನ: ದಾಲ್ಚಿನ್ನಿ ಹಾಗೂ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ತುಟಿಗೆ ಹಚ್ಚಬೇಕು. ಇದರಿಂದ ತುಟಿ ಸೌಮ್ಯವಾಗುವ ಜೊತೆಗೆ ತುಂಬಿದಂತಿರುತ್ತದೆ. ಕೆಲವೊಂದು ಲಿಪ್‌ಬಾಮ್‌ನಲ್ಲೂ ದಾಲ್ಚಿನ್ನಿ ಎಣ್ಣೆಯನ್ನು ಬಳಸುತ್ತಾರೆ.
ಹಿಮ್ಮಡಿ ಒಡೆತಕ್ಕೆ
ವಾತಾವರಣದ ಬದಲಾವಣೆ ಹಾಗೂ ದೂಳಿನ ಕಾರಣದಿಂದ ಹಿಮ್ಮಡಿ ಒಡೆಯುತ್ತದೆ. ಹಿಮ್ಮಡಿಗೆ ನಾವು ಮಾಯಿಶ್ಚರೈಸರ್ ಬಳಕೆ ಮಾಡುವುದು ಕಡಿಮೆ, ಇದರಿಂದ ಹಿಮ್ಮಡಿಯ ಅಂದ ಹಾಳಾಗಿರುತ್ತದೆ. ಆದರೆ ನಿರ್ಜೀವ ಚರ್ಮದ ನಿವಾರಣೆಗೆ ದಾಲ್ಚಿನ್ನಿ ಪುಡಿ ಅದ್ಭುತ ಔಷಧಿ. ಇದು ಪಾದವನ್ನು ಎಕ್ಸಪೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ.
ಬಳಕೆ: ಕಲ್ಲುಪ್ಪು, ದಾಲ್ಚಿನ್ನಿ ಪುಡಿ, ಆಲಿವ್ ಎಣ್ಣೆ ಹಾಗೂ ಜೇನುತುಪ್ಪ ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಹಿಮ್ಮಡಿಗೆ ಹಚ್ಚಿ ಚೆನ್ನಾಗಿ ಉಜ್ಜಿ, 15 ನಿಮಿಷಗಳ ನಂತರ ತೊಳೆಯಿರಿ. ನಂತರ ವ್ಯಾಸಲಿನ್ ಹಚ್ಚಿ. ಇದರಿಂದ ಹಿಮ್ಮಡಿ ಒಡೆಯುವುದನ್ನು ತಪ್ಪಿಸಬಹುದು, ಜೊತೆಗೆ ಪಾದದ ಅಂದವೂ ಹೆಚ್ಚುತ್ತದೆ.
ನೆತ್ತಿಯ ತುರಿಕೆ
ದೂಳು, ಕೊಳೆ ಹಾಗೂ ತಲೆಹೊಟ್ಟಿನ ಕಾರಣದಿಂದ ಕೂದಲು ತುರಿಸುವುದು ಸಾಮಾನ್ಯ. ತಲೆಸ್ನಾನ ಮಾಡಿದ ನಂತರವೂ ತುರಿಕೆ ಕಮ್ಮಿಯಾಗುವುದಿಲ್ಲ. ಇದು ನೆತ್ತಿಯ ಭಾಗದಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು. ಇದಕ್ಕೆ ದಾಲ್ಚಿನ್ನಿ ಪುಡಿ ಬಳಸಬಹುದು.
ಬಳಸುವ ವಿಧಾನ: ದಾಲ್ಚಿನ್ನಿ ಪುಡಿ ಹಾಗೂ ಆಲಿವ್ ಎಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ, ಕೂದಲಿನ ಬುಡಕ್ಕೆ ಹಚ್ಚಬೇಕು, 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡಬೇಕು.
ಒಣ ಚರ್ಮ
ನೀವು ಒಣಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರೆ ದಾಲ್ಚಿನ್ನಿ ಎಣ್ಣೆ ಬಳಸಬಹುದು. ಇದು ಚರ್ಮಕ್ಕೆ ತೇವಾಂಶ ಸಿಗುವಂತೆ ಮಾಡುತ್ತದೆ ಮಾತ್ರವಲ್ಲ ರಕ್ತದ ಹರಿವನ್ನೂ ಸರಾಗಗೊಳಿಸುತ್ತದೆ.
ಬಳಸುವ ಬಗೆ: ಆಲಿವ್ ಎಣ್ಣೆ ಅಥವಾ ವ್ಯಾಸಲಿನ್ ಜೊತೆಗೆ ದಾಲ್ಚಿನ್ನಿ ಎಣ್ಣೆಯನ್ನು ಬೆರೆಸಿ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಬೇಕು. ಇದನ್ನು ತುಟಿ ಬಿರುಕಿಗೂ ಬಳಸಬಹುದು.
ವಿಭಾಗ