ಹೊಸ ಪೊರಕೆ ಬಂದಾಗ ಹಳೆ ಪೊರಕೆ ಕಸದ ಬುಟ್ಟಿ ಸೇರುತ್ತೆ: ಇದನ್ನು ಎಸೆಯದೆ ಹೀಗೆಲ್ಲಾ ಬಳಸಬಹುದು ನೋಡಿ
ಮನೆಯನ್ನು ಸ್ವಚ್ಛವಾಗಿಡುವಲ್ಲಿ ಪೊರಕೆಗಳು ಮಹತ್ವದ ಪಾತ್ರ ವಹಿಸುತ್ತದೆ. ಬೆಳಗ್ಗೆ ಪ್ರತಿ ಮನೆಯ ಹೆಂಗಳೆಯರು ಪೊರಕೆಯಿಂದ ತಮ್ಮ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಪೊರಕೆ ಹಳೆಯದಾದಾಗ ಎಸೆಯಲಾಗುತ್ತದೆ. ಆದರೆ, ಹಳೆಯ ಪೊರಕೆಗಳನ್ನು ಎಸೆಯದೆ ಮನೆಗೆ ಕೆಲವು ರೀತಿಯಲ್ಲಿ ಬಳಸಬಹುದು. ಹಳೆಯ ಪೊರಕೆಗಳನ್ನು ಮರುಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪೊರಕೆಗಳನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಧೂಳನ್ನು ಗುಡಿಸಲು ಬಳಸಲಾಗುತ್ತದೆ. ಪೊರಕೆ ಇಲ್ಲದೆ ಮನೆಯ ನೆಲಹಾಸು ಸ್ವಚ್ಛವಾಗಿರುವುದಿಲ್ಲ. ಪ್ರತಿದಿನ ಬೆಳಗ್ಗೆ ಎಲ್ಲರೂ ಕೂಡ ತಮ್ಮ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುವುದು ಮಾಮೂಲಿ. ಹಳ್ಳಿಗಳಲ್ಲಿ ಅಡಿಕೆ ಅಥವಾ ತೆಂಗಿನ ಗರಿಯಿಂದ ಮಾಡಲಾಗುವ ಪೊರಕೆಗಳನ್ನು ಇಂದಿಗೂ ಬಳಸುವುದನ್ನು ನೋಡಬಹುದು. ಆದರೆ, ನಗರ ಪ್ರದೇಶಗಳಲ್ಲಿ ಮಾರುಕಟ್ಟೆಯಿಂದ ಖರೀದಿಸಿ ತರಲಾಗುತ್ತದೆ. ಗುಡಿಸಲು ಚೆನ್ನಾಗಿಯೇ ಆಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪೊರಕೆಗಳು ಸುಮಾರು ಒಂದು ತಿಂಗಳಲ್ಲಿ ಹಳೆಯದಾಗುತ್ತಿವೆ. ಸರಿಯಾಗಿ ಗುಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪದೇ ಪದೇ ಹೊಸ ಪೊರಕೆಗಳನ್ನು ಖರೀದಿಸಬೇಕಾಗುತ್ತಿದೆ. ಹೊಸ ಪೊರಕೆ ಬಂದಾಗ ಹಳೆಯ ಪೊರಕೆಗಳು ಕಸದ ಲಾರಿಗೆ ಸೇರುವುದು ಸಾಮಾನ್ಯ. ಆದರೆ, ಹಳೆಯ ಪೊರಕೆಯನ್ನು ಎಸೆಯದೆ ಇದನ್ನು ಹೇಗೆಲ್ಲಾ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಮಾಹಿತಿ.
ಹಳೆಯ ಪೊರಕೆಯ ಉಪಯೋಗ ಇಲ್ಲಿವೆ
ಫ್ಯಾನ್ ಮತ್ತು ಸೀಲಿಂಗ್ ಸ್ವಚ್ಛಗೊಳಿಸಲು ಬಳಸಬಹುದು: ಪೊರಕೆಯು ಕೆಲ ದಿನಗಳು ಬಳಸಿದ ನಂತರ ಅವು ತೆಳುವಾಗುತ್ತವೆ ಅಥವಾ ಸವೆದು ಹೋಗುತ್ತವೆ. ಸರಿಯಾಗಿ ಗುಡಿಸಲು ಆಗುವುದಿಲ್ಲ. ಹೀಗಾಗಿ ಬಹುತೇಕರು ಇದನ್ನು ಎಸೆಯುತ್ತಾರೆ. ಇದನ್ನು ಎಸೆಯದೆ ಈ ತೆಳುವಾದ ಪೊರಕೆಯಿಂದ ಫ್ಯಾನ್ ಮತ್ತು ಛಾವಣಿಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಒಂದು ಕೋಲನ್ನು ಹಳೆಯ ಪೊರಕೆಗೆ ಕಟ್ಟಿ, ಅದನ್ನು ಸ್ವಚ್ಛಗೊಳಿಸುವ ಸಾಧನವಾಗಿ ಬಳಸಬಹುದು. ಫ್ಯಾನ್‌ಗಳು, ಚಾವಣಿಯ ಮೇಲಿನ ಧೂಳನ್ನು ಕೋಲಿಗೆ ಕಟ್ಟಿರುವ ಹಳೆಯ ಪೊರಕೆಯಿಂದ ಗುಡಿಸಬಹುದು. ಇದಕ್ಕಾಗಿ ಬೇರೆ ವಸ್ತುವನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿಲ್ಲ.
ಹಳೆಯ ಪೊರಕೆಗಳನ್ನು ಜೋಡಿಸಿ: ಪೊರಕೆಗಳನ್ನು ಬಳಸಿದ ನಂತರ ಅವು ತೆಳುವಾಗುತ್ತವೆ. ಹೀಗೆ ತೆಳುವಾದ ಕೆಲವು ಹಳೆಯ ಪೊರಕೆಗಳನ್ನೆಲ್ಲಾ ಸೇರಿಸಿ ಒಂದು ಪೊರಕೆ ಮಾಡಬಹುದು. ಇದರಿಂದ ಪೊರಕೆ ದಪ್ಪವಾಗುತ್ತದೆ. ಇದನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸಬಹುದು.
ಗಿಡಗಳನ್ನು ರಕ್ಷಿಸಲು ಬಳಸಬಹುದು: ಹಳೆಯ ಪೊರಕೆಗಳನ್ನು ನಿಮ್ಮ ಕೈತೋಟದಲ್ಲಿರುವ ಸಸ್ಯಗಳಿಗೆ ಸಹ ಬಳಸಬಹುದು. ಸಣ್ಣ ಜಾನುವಾರುಗಳು ತೋಟಕ್ಕೆ ಪ್ರವೇಶಿಸುವ ಅಪಾಯ ಯಾವಾಗಲೂ ಇರುತ್ತದೆ. ಬಹುತೇಕ ಬಾರಿ ಜಾನುವಾರುಗಳು ತೋಟಕ್ಕೆ ಪ್ರವೇಶಿಸಿ ಸಾಕಷ್ಟು ಹಾನಿ ಮಾಡುತ್ತವೆ. ಹೀಗಾಗಿ ಹಳೆಯ ಪೊರಕೆಗಳನ್ನು ಬೇರ್ಪಡಿಸಿ, ಸಸ್ಯಗಳ ರಕ್ಷಣೆಗಾಗಿ ಅದರ ಸುತ್ತಲೂ ನೆಡಬಹುದು. ಹೀಗೆ ಮಾಡಿದರೆ ದನಗಳು ತೋಟಕ್ಕೆ ಪ್ರವೇಶಿಸಿದಾಗ ಚಿಕ್ಕ ಗಿಡಗಳು ಕಾಣುವುದಿಲ್ಲ. ಹೀಗಾಗಿ ಅದನ್ನು ತಿನ್ನಲು ಜಾನುವಾರುಗಳು ಪ್ರಯತ್ನಿಸುವುದಿಲ್ಲ.
ಅಲಂಕಾರಕ್ಕಾಗಿ ಬಳಕೆ: ಕಲೆಯಲ್ಲಿ ಆಸಕ್ತಿ ಇದ್ದರೆ ಅದನ್ನು ಕ್ರಿಯೇಟಿವ್ ಆಗಿ ಮಾಡಬೇಕೆಂದರೆ ಹಳೆಯ ಪೊರಕೆಗಳನ್ನೂ ಆಕರ್ಷಕವಾಗಿ ಮಾಡಬಹುದು. ಅಲಂಕಾರದ ವಸ್ತುಗಳಿಗೆ ಪೊರಕೆ ಕಡ್ಡಿಗಳನ್ನು ಬಳಸಬಹುದು. ಹಳೆಯ ಪೊರಕೆಗೆ ವಿವಿಧ ಬಣ್ಣಗಳನ್ನು ಸೇರಿಸುವ ಮೂಲಕ ಹೊಸ ರೂಪವನ್ನು ನೀಡಬಹುದು. ಇದನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.
ಈ ಕೆಲಸಗಳಿಗೂ ಬಳಕೆ: ಇದಲ್ಲದೆ, ಹಳೆಯ ಪೊರಕೆಗಳನ್ನು ಕೆಲವು ಸಣ್ಣ ಕೆಲಸಗಳಿಗೂ ಬಳಸಬಹುದು. ಮನೆಯನ್ನು ಶುಚಿಗೊಳಿಸುವಾಗ, ಕಿಟಕಿಗಳು ಮತ್ತು ಹಲಗೆಗಳ ನಡುವಿನ ಧೂಳನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ತೆಳ್ಳಗಿರುವುದರಿಂದ, ಹಳೆಯ ಪೊರಕೆ ಕಿಟಕಿಯ ಸರಳುಗಳಿಂದ ಸುಲಭವಾಗಿ ಧೂಳು ತೆಗೆಯಲು ಸಹಾಯಕವಾಗಿದೆ. ಸಿಂಕ್‌ನ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹ ಹಳೆಯ ಪೊರಕೆಗಳನ್ನು ಸಹ ಬಳಸಬಹುದು.
ವಿಭಾಗ