ಕೊಬ್ಬರಿಗಾಗಿ ಅಂಗಡಿಗೆ ಹೋಗಬೇಕಾಗಿಲ್ಲ, ಶುಭ ಕಾರ್ಯಗಳಿಗೆ ಗರಿಗಳ ಕೊರತೆ ಇರಲ್ಲ; ತೆಂಗಿನ ಮರ ಮನೆ ಮುಂದೆ ಇದ್ರೆ ಏನೆಲ್ಲಾ ಲಾಭಗಳಿವೆ
Coconut Tree Benefits: ತೆಂಗಿನ ಮರದಿಂದ ಸಾಕಷ್ಟು ಪ್ರಯೋಜಗಳಿವೆ. ಆಹಾರ, ಆರೋಗ್ಯ ಹಾಗೂ ದಿನ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಲ್ಪ ವೃಕ್ಷ ಮನುಷ್ಯನ ಜೀವನದ ಭಾಗವಾಗಿದೆ. ಎಳನೀರಿನ ಬೆಲೆ ಏರುತ್ತಿದ್ದಂತೆ ಮತ್ತೆ ತೆಂಗಿನ ಸಸಿ ನೆಡುವ ಟ್ರೆಂಡ್ ಶುರುವಾಗಿದೆ. ಹೀಗಾಗಿ ಮನೆಯ ಮುಂದೆ ಒಂದು ಅಥವಾ ಎರಡೂ ತೆಂಗಿನ ಮರಗಳಿದ್ದರೆ ಏನೆಲ್ಲಾ ಲಾಭಗಳಿವೆ ತಿಳಿಯೋಣ.
Coconut Tree Benefits: ಹಿಂದೂ ಸಂಪ್ರದಾಯದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳು, ಪೂಜೆ, ಹೋಮ-ಹವನಗಳಿಗೆ ತೆಂಗಿನಕಾಯಿ ಬೇಕೇಬೇಕು. ಆರೋಗ್ಯ ಮತ್ತು ಆಹಾರದ ದೃಷ್ಟಿಕೋನದಲ್ಲಿ ನೋಡುವುದಾದರೆ ತೆಂಗಿನ ಕಾಯಿಯಲ್ಲಿ ಹತ್ತಾರು ಆರೋಗ್ಯ ಪ್ರಯೋಜನಗಳಿದ್ದು, ಕೊಬ್ಬರಿ ಎಣ್ಣೆ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆಹಾರದ ವಿಚಾರದಲ್ಲೂ ಅಷ್ಟೇ ಬಹುತೇಕ ಖಾದ್ಯಗಳಿಗೆ ಕೊಬ್ಬರಿಯನ್ನು ಬಳಸಲಾಗುತ್ತದೆ. ಇದರ ಸಿಹಿ ತಿನಿಸುಗಳು ಹಲವಾರು ದಶಕಗಳಿಂದ ಜನಪ್ರಿಯವಾಗಿವೆ. ತೆಂಗಿನ ಚಿಪ್ಪು, ತೆಂಗಿನ ನಾರು, ತೆಂಗಿನ ಗರಿಗಳು, ತೆಂಗಿನ ಕಡ್ಡಿಗಳು ಹೀಗೆ ಇದರಲ್ಲಿನ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ನೀವೇನಾದರೂ ಮನೆ ಮುಂದೆ ತಂಗಿನ ಮರವನ್ನು ಹೊಂದಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಮನೆ ಮುಂದೆ ತೆಂಗಿನ ಮರವಿದ್ದರೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಮನೆ ಮುಂದಿನ ಒಂದು ಅಥವಾ ಎರಡು ತೆಂಗಿನ ಮರಗಳಿದ್ದರೆ ಅವುಗಳಿಂದ ಸಾಕಷ್ಟು ಪ್ರಯೋಜನಗಳಿವೆ. ನಿಮ್ಮ ಮನೆಯ ಮುಂದಿರುವ ತೆಂಗಿನ ಮರ ಕಾಯಿಗಳನ್ನು ಬಿಡುತ್ತಿದ್ದರೆ ನೀವು ಅಡುಗೆಗೆ ಇದರಲ್ಲಿನ ಕೊಬ್ಬರಿಯನ್ನು ಬಳಸಿಕೊಳ್ಳಬಹುದು. ಒಣಗಿದ ತೆಂಗಿನ ಗರಿ, ಚಿಪ್ಪುಗಳನ್ನು ನೀರಿನ ಒಲೆಗೆ ಬಳಸಿಕೊಳ್ಳಲಾಗುತ್ತದೆ. ತೆಂಗಿನ ಗರಿಗಳಿಂದ ಕಡ್ಡಿಗಳನ್ನು ಸಂಗ್ರಹಿಸಿಕೊಂಡು ಕಸ ಗುಡಿಸುವ ಪೊರಕೆ ತಯಾರಿಸಿಕೊಳ್ಳುತ್ತಾರೆ. ತೆಂಗಿನ ನಾರಿನಿಂದ ಹಗ್ಗ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಎಳನೀರು ನಿಮ್ಮ ಆರೋಗ್ಯಕ್ಕೆ ಹಿತಕಾರಿ. ಇದೇ ಕಾರಣಕ್ಕೆ ಒಂದೇ ಒಂದು ತೆಂಗಿನ ಮರದಿಂದ ಹತ್ತಾರು ಅನುಕೂಲಗಳಿವೆ.
ಬಹೋಪಯೋಗಿ ತೆಂಗಿನ ಮರವನ್ನು ಕೆಲವರು ನಾನಾ ಕಾರಣಗಳಿಂದ ಕಡಿದು ಹಾಕುತ್ತಿರುವುದನ್ನು ಗಮನಿಸಬಹುದು. ಇನ್ನೂ ಕೆಲವರು ಎಷ್ಟೇ ಸಮಸ್ಯೆ, ಸಾಲುಗಳು ಎದುರಾದರೂ ಅವುಗಳನ್ನು ಉಳಿಸಿಕೊಂಡಿರುವುದನ್ನೂ ಕಾಣಬಹುದು. ಈಗ ಮತ್ತೆ ತೆಂಗಿನ ಮರ ಬೆಳೆಸುವ ಕ್ರೇಜ್ ಹೆಚ್ಚಾಗುತ್ತಿದೆ. ತಮ್ಮ ಮನೆಗಳ ಮುಂದೆ ತೆಂಗಿನ ಸಸಿಗಳನ್ನು ನೆಡುವ ಟ್ರೆಂಡ್ ಶುರುವಾಗಿದೆ. ನಗರ ಪ್ರದೇಶದ ಕಾಂಕ್ರೀಟ್ ನೆಲದಲ್ಲಿ ಮನೆಗಳ ಮುಂದೆ ಸಸಿಗಳನ್ನು ನೆಡಲು ಸಾಧ್ಯವಾಗುವುದಿಲ್ಲ. ಆದರೆ ತೆಂಗಿನ ಸಸಿಗಳನ್ನು ಬೆಳೆಸಲೇಬೇಕೆಂಬ ಇಚ್ಛಾಶಕ್ತಿ ಇದ್ದರೆ ಇರೋ ಸ್ಥಳವನ್ನು ಹೊಂದಿಸಿಕೊಂಡು ಈ ಸಸಿಗಳನ್ನು ನೆಡಬಹುದು.
ಇದನ್ನೂ ಓದಿ: ಜೀವಕುಲಕ್ಕೆ ಕಲ್ಪವೃಕ್ಷ ದೇವರು ಕೊಟ್ಟ ಉಡುಗೊರೆ
ಜಿಲ್ಲಾ ತಾಲೂಕು ಹಾಗೂ ಪಟ್ಟಣಗಳಲ್ಲಿ ಮನೆಗಳ ಬಳಿ ವಿಶಾಲವಾದ ಜಾಗ ಇದ್ದೇ ಇರುತ್ತದೆ. ಇಂತಹ ಕಡೆಗಳಲ್ಲಿ ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸಬಹುದು. ಅದರಲ್ಲೂ ಅತಿ ಕಡಿಮೆ ಸಮಯದಲ್ಲಿ ಕಾಯಿಗಳನ್ನು ಬಿಡುವಂತೆ ವಿವಿಧ ಬಗೆಯ ತಳಿಗಳಿವೆ. ನಿಮಗೆ ಇಷ್ಟವಾಗುವಂತಹ ಸಸಿಗಳನ್ನು ನೆಟ್ಟು ಬೆಳಸಬಹುದು. ಹೊಸದಾಗಿ ಮನೆಗಳನ್ನು ನಿರ್ಮಿಸುವವರಲ್ಲಿ ಈ ಪ್ರವೃತ್ತಿ ಹೆಚ್ಚಾಗುತ್ತಿರುವುದು ಖುಷಿಯ ವಿಚಾರವಾಗಿದೆ. ವಾಸ್ತು ಪ್ರಕಾರ ಮನೆ ಮುಂದೆ ತೆಂಗಿನ ಮರವನ್ನು ಹೊಂದುವುದು ಮಂಗಳಕರವಾಗಿದೆ. ಯಾಕೆಂದರೆ ತೆಂಗಿನ ಮರ ಪರಿಶುದ್ಧ ಹಾಗೂ ಮಂಗಳದ ಸಂಕೇತವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಎರಡು ಮೂರು ದಶಕಗಳ ಹಿಂದೆ ಸರ್ಕಾರದಿಂದ ಕಟ್ಟಿಸಿಕೊಡಲಾಗುತ್ತಿದ್ದ ಮನೆಗಳಿಗೆ ತಲಾ 2 ತೆಂಗಿನ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಅಂದು ನೆಟ್ಟಿದ್ದ ತೆಂಗಿನ ಸಸಿಗಳು ಇಂದು ದೊಡ್ಡ ಮರಗಳಾಗಿ ನಿಂತಿದ್ದು, ಯಾವುದೇ ರೀತಿಯ ಜಮೀನು, ತೆಂಗಿನ ತೋಟ ಹೊಂದಿರದ ಬಡವರಿಗೆ ತುಂಬಾ ಪ್ರಯೋಜನಕಾರಿಯಾಗಿವೆ.
ಸಾಮಾನ್ಯವಾಗಿ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತೆಂಗಿನ ಮರಗಳನ್ನು ಹೇರಳವಾಗಿ ಬೆಳೆಸಲಾಗುತ್ತದೆ. ಈ ರಾಜ್ಯಗಳು ಶೇಕಡಾ 90 ರಷ್ಟು ತೆಂಗಿನ ಕಾಯಿಗಳನ್ನು ಉತ್ಪಾದನೆ ಮಾಡುತ್ತವೆ ಎಂಬುದು ವಿಶೇಷ. ಒಂದು ನೀವು ಕೂಡ ಮನೆಯ ಮುಂದೆ ತೆಂಗಿನ ಸಸಿಗಳನ್ನು ನೆಡಬೇಕೆಂಬ ಆಸೆಯಿದ್ದರೆ ಕೂಡಲೇ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಈ ಸಸಿಗಳನ್ನು ಪಡೆದು ತಂದು ಮನೆಯ ಮುಂದೆ ನೆಟ್ಟು ಕೆಲವು ವರ್ಷಗಳ ಬಳಿಕ ಅವುಗಳ ಪ್ರಯೋಜನಗಳನ್ನು ಪಡೆಯಬಹುದು.
ವಿಭಾಗ