Colon Health: ಸೇಬು ಹಣ್ಣಿನಿಂದ ಶುಂಠಿಯವರೆಗೆ; ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ದೊಡ್ಡ ಕರುಳು ಶುದ್ಧವಾಗುತ್ತೆ
Colon Health:ಹೊಟ್ಟೆ ಆರೋಗ್ಯಕರವಾಗಿದ್ದರೆ, ನಿಮ್ಮ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ನಿಯತವಾಗಿ ಮಲವಿಸರ್ಜನೆ ಮಾಡಿದರೆ ಕರುಳನ್ನು ಸ್ವಚ್ಛವಾಗಿಡಬಹುದು. ಇದು ಅನೇಕ ರೋಗಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲ ಪ್ರತಿದಿನ ಕರುಳಿಗೆ ಪ್ರಯೋಜನಕಾರಿಯಾದ ಆಹಾರವನ್ನು ಸೇವಿಸುವುದರಿಂದ ದೊಡ್ಡ ಕರುಳನ್ನು ಶುದ್ಧೀಕರಿಸಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ಹೊಟ್ಟೆ ಆರೋಗ್ಯಕರವಾಗಿದ್ದರೆ, ನಿಮ್ಮ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ಹೊಟ್ಟೆ ಉಬ್ಬಿದರೆ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆ ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಅಸಮತೋಲನವು ಆರೋಗ್ಯ ಅಪಾಯಗಳು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತರಬಹುದು. ಮಲಬದ್ಧತೆ ಇರುವವರಿಗೆ ಸಮಸ್ಯೆ ಗಂಭೀರವಾದರೆ, ಅದು ತುಂಬಾ ಅಪಾಯಕಾರಿ. ಅವರಲ್ಲಿ ಜಠರಗರುಳಿನ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿದೆ.
ಕರುಳು ಆರೋಗ್ಯಕರವಾಗಿಲ್ಲದಿದ್ದರೆ ಆಗಾಗ ವಾಕರಿಕೆ ಬರುತ್ತದೆ. ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಗೆ ಮುಕ್ತಿ ನೀಡಬಹುದು. ದೇಹವನ್ನು ಶುದ್ಧೀಕರಿಸಲು ಅನೇಕ ಮಾರ್ಗಗಳಿವೆ, ನೈಸರ್ಗಿಕವಾಗಿ ಕರುಳನ್ನು ಸ್ವಚ್ಛಗೊಳಿಸುವುದರಿಂದ ಕರುಳಿನ ಕ್ಯಾನ್ಸರ್, ಬ್ಯಾಕ್ಟೀರಿಯಾದ ಸೋಂಕುಗಳು ಮುಂತಾದ ಕಾಯಿಲೆಗಳನ್ನು ತಡೆಯಬಹುದು.
ಮಲವಿಸರ್ಜನೆ
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ನಿಯತವಾಗಿ ಮಲವಿಸರ್ಜನೆ ಮಾಡುವುದು ಅವಶ್ಯಕ. ದಿನಕ್ಕೆ ಒಮ್ಮೆಯಾದರೂ ವಿಸರ್ಜನೆ ಮಾಡುವುದರಿಂದ ಆರೋಗ್ಯ ಅಪಾಯಗಳನ್ನು ತಡೆಯಬಹುದು.
ದೀರ್ಘಕಾಲದವರೆಗೆ ಮಲವಿಸರ್ಜನೆ ಮಾಡದೇ ಇರುವುದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಲವಿಸರ್ಜನೆ ಮಾಡದೇ ಇದ್ದರೆ ಮಲವನ್ನು ಮತ್ತೆ ದೊಡ್ಡ ಕರುಳಿಗೆ ತಳ್ಳಲು ಸ್ನಾಯು ಕೆಲಸ ಮಾಡುತ್ತದೆ. ಇದು ಮಲದಲ್ಲಿನ ನೀರನ್ನು ಮತ್ತೆ ದೇಹಕ್ಕೆ ಮತ್ತು ಮಲಕ್ಕೆ ಹೀರಿಕೊಳ್ಳಲು ಕಾರಣವಾಗುತ್ತದೆ. ಇದು ಕರುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಒಬ್ಬ ವ್ಯಕ್ತಿಯ ಮಲವು ಕರುಳಿನಲ್ಲಿ ದೀರ್ಘಕಾಲ ಉಳಿದರೆ, ಅದು ಕೆಟ್ಟ ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಕಾರಣವಾಗಬಹುದು. ಇದು ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲದವರೆಗೆ ಮಲವಿಸರ್ಜಿಸದೇ ಇರುವುದು ಗುದನಾಳದ ಸ್ನಾಯುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದು ಮಲವನ್ನು ಗಟ್ಟಿಗೊಳಿಸುತ್ತದೆ. ಇದು ಮಲಬದ್ಧತೆ, ಮೂಲವ್ಯಾಧಿ ಇತ್ಯಾದಿಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ನೈಸರ್ಗಿಕವಾಗಿ ಕರುಳನ್ನು ಶುದ್ಧೀಕರಿಸುವ ಆಹಾರಗಳು
ಸೇಬು ಹಣ್ಣು: ಪೆಕ್ಟಿನ್ ಸಮೃದ್ಧವಾಗಿರುವ ಸೇಬು ಹಣ್ಣು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಸೇಬುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಸೊಪ್ಪು ತರಕಾರಿಗಳು: ಸೊಪ್ಪು ತರಕಾರಿಗಳಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ಇದು ನಿಮ್ಮ ಹೊಟ್ಟೆಯ ಸಮಸ್ಯೆಯನ್ನು ಶಮನಗೊಳಿಸುತ್ತವೆ. ಆರೋಗ್ಯಕರ ಕರುಳಿನ ಚಲನೆಗೆ ಕಾರಣವಾಗುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಾಮಕಸ್ತೂರಿ ಬೀಜ: ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಸಮೃದ್ಧವಾಗಿರುವ ಕಾಮಕಸ್ತೂರಿ ಬೀಜವು ಹೊಟ್ಟೆಯ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಇದು ಕರುಳಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ ಹಾಗೂ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ.
ಓಟ್ ಮೀಲ್: ಪ್ರತಿದಿನ ಓಟ್ ಮೀಲ್ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ನಾರಿನಂಶವನ್ನು ಒದಗಿಸುತ್ತದೆ. ಕರುಳಿಗೆ ಪ್ರಯೋಜನಕಾರಿಯಾದ ಫೈಬರ್ ಆರೋಗ್ಯಕರ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಓಟ್ ಮೀಲ್ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.
ಶುಂಠಿ: ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಶುಂಠಿ ಮಲಬದ್ಧತೆ ಮತ್ತು ಹೊಟ್ಟೆಯ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಹೊಟ್ಟೆ ನೋವು ಮತ್ತು ಉರಿಯೂತವನ್ನು ತಡೆಯುತ್ತದೆ. ಇದು ತೂಕ ನಷ್ಟಕ್ಕೂ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ವಾಕರಿಕೆಯನ್ನು ಸಹ ಕಡಿಮೆ ಮಾಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
