ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಈ ಚುನಾವಣೆಯಲ್ಲಿ ರೀಲ್ಸ್ ಅಧಿಪತಿಗಳಿಗೆ ಡಿಮ್ಯಾಂಡ್‌; ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗೂ ಇರಲಿ ಸಾಮಾಜಿಕ ಬದ್ಧತೆ

Digital Jagathu: ಈ ಚುನಾವಣೆಯಲ್ಲಿ ರೀಲ್ಸ್ ಅಧಿಪತಿಗಳಿಗೆ ಡಿಮ್ಯಾಂಡ್‌; ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗೂ ಇರಲಿ ಸಾಮಾಜಿಕ ಬದ್ಧತೆ

2024ರ ಲೋಕಸಭಾ ಚುನಾವಣೆಯಲ್ಲಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಬಳಸುತ್ತಿವೆ? ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮೀಮ್ಸ್‌, ರೀಲ್ಸ್‌, ವಿಡಿಯೋಗಳು, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಯತ್ನ ಕಾಣುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಮತದಾರರ ಸೆಳೆಯಲು ಸೋಷಿಯಲ್‌ ಮೀಡಿಯಾ ಬಳಕೆ
ಲೋಕಸಭಾ ಚುನಾವಣೆಯಲ್ಲಿ ಮತದಾರರ ಸೆಳೆಯಲು ಸೋಷಿಯಲ್‌ ಮೀಡಿಯಾ ಬಳಕೆ

ಕಳೆದ ಒಂದು ದಶಕದಲ್ಲಿ ಭಾರತದ ಚುನಾವಣೆಯಲ್ಲಿ ರಾಜಕಾರಣಿಗಳು ಮತ್ತು ಪಕ್ಷಗಳು ಡಿಜಿಟಲ್‌ ಮಾಧ್ಯಮವನ್ನು ಸಮರ್ಪಕವಾಗಿ ಬಳಸಲು ಪ್ರಯತ್ನಿಸುತ್ತಿವೆ. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಬಹುತೇಕ ಪಕ್ಷಗಳು ತಮ್ಮದೇ ಸೋಷಿಯಲ್‌ ಮೀಡಿಯಾ ವಿಂಗ್‌ಗಳನ್ನು ಹೊಂದಿವೆ. ಸತ್ಯವೋ, ಸುಳ್ಳೋ, ಒಂದು ಪಕ್ಷದ ವಿರುದ್ಧ, ರಾಜಕಾರಣಿಯ ವಿರುದ್ಧ ಮೀಮ್ಸ್‌ಗಳನ್ನು, ಪೋಸ್ಟ್‌ಗಳನ್ನು ಹಂಚುವುದೇ ಈ ವಿಂಗ್‌ಗಳ ಕೆಲಸ. ಈ ರೀತಿಯ ಅಧಿಕೃತ ಸೋಷಿಯಲ್‌ ಮೀಡಿಯಾ ವಿಂಗ್‌ಗಳು ಮಾತ್ರವಲ್ಲದೆ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಇನ್‌ಫ್ಲೂಯೆನ್ಸರ್‌ಗಳು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಈಗ ಹೆಚ್ಚು ಸಕ್ರಿಯರಾಗಿದ್ದಾರೆ. ಇವರಿಗೆ ಪೇಮೆಂಟ್‌ ಆಗುತ್ತದೆಯೋ ಇಲ್ಲವೋ ಎನ್ನುವುದು ಮಾತ್ರ ಗುಟ್ಟಿನ ವಿಷಯ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಸಂವಹನ ಮಾಧ್ಯಮಗಳನ್ನು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಬಳಸುವ ವಿಧಾನದಲ್ಲಿ ಸಾಕಷ್ಟು ರೂಪಾಂತರ ಆಗಿರುವುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಒಂದಾನೊಂದು ಕಾಲದಲ್ಲಿ ನಮ್ಮ ಹಿರಿಯರು ಇಂದಿರಾ ಗಾಂಧಿಯ ರೇಡಿಯೋ ಭಾಷಣ ಕೇಳಿ ಪ್ರಭಾವ ಹೊಂದಿರಬಹುದು. ಸೋನಿಯಾ ಗಾಂಧಿ ಟಿವಿ- ರೇಡಿಯೋ ಸ್ಪೀಚ್‌ಗಳೂ ಪರಿಣಾಮಕಾರಿಯಾಗಿದ್ದವು. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಬಹುತೇಕ ಕಡೆ ಇದೇ ಪರಿಸ್ಥಿತಿ ಇತ್ತು. ಬರಾಕ್‌ ಒಬಾಮಾ ಕಾಲದಿಂದ ಡೊನಾಲ್ಟ್‌ ಟ್ರಂಪ್‌ ಕಾಲಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಫ್ರಾಂಕ್‌ಲಿನ್‌ ಡಿ ರೋಸ್‌ವೆಲ್ಟ್‌ ಅವರು ರೇಡಿಯೋವನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರು. ಜಾನ್‌ ಎಫ್‌ ಕೆನಡಿ ಟೆಲಿವಿಷನ್‌ ಬಳಸಿದರು. ಒಬಾಮಾ ಕಾಲಕ್ಕೆ ಸೋಷಿಯಲ್‌ ಮೀಡಿಯಾ ಪ್ರಮುಖ ಪ್ರಚಾರ ಮಾಧ್ಯಮವಾಯಿತು. ಭಾರತದಲ್ಲಿ ನರೇಂದ್ರ ಮೋದಿ ಕಾಲದಲ್ಲಿ ಸೋಷಿಯಲ್‌ ಮೀಡಿಯಾವನ್ನು ಚುನಾವಣಾ ಪ್ರಚಾರಕ್ಕೆ ಪ್ರಮುಖ ಮಾಧ್ಯಮವಾಗಿ ಬಳಸಲಾಯಿತು.

2024ರ ಚುನಾವಣೆಯಲ್ಲಿ ಡಿಜಿಟಲ್‌ ಮಾಧ್ಯಮಗಳ ಪ್ರಭಾವ

ಈಗಲೂ ಡಿಜಿಟಲ್‌ ಮಾಧ್ಯಮದ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅದು ಯಾವೆಲ್ಲ ರೀತಿ ಎಂದು ಸುಲಭವಾಗಿ ಗುರುತಿಸುವುದು ಕಷ್ಟ. ಆಯಾ ರಾಜಕೀಯ ಪಕ್ಷಗಳು ತಮ್ಮದೇ ರೀಲ್ಸ್‌, ಪೋಸ್ಟರ್‌ಗಳು, ಮೀಮ್ಸ್‌ಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಮತ್ತು ಎದುರಾಳಿ ಪಕ್ಷಗಳನ್ನು ಟೀಕಿಸಲು ಪ್ರಯತ್ನಿಸುತ್ತಿವೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ರೀಲ್ಸ್‌ಗಳು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿವೆ. ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳನ್ನು ರಾಜಕಾರಣಿಗಳು ಸಂಪರ್ಕಿಸುತ್ತಿದ್ದಾರೆ. ತಮ್ಮ ಹಾಸ್ಯ ಅಥವಾ ಮಾಹಿತಿ ನೀಡುವ ವಿಡಿಯೋಗಳ ನಡುವೆ ಯಾವುದಾದರೂ ಪಕ್ಷದ ಜಾಹೀರಾತು ಅಥವಾ ಪರವಾದ ಮಾತುಗಳನ್ನು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಹರಿಯಬಿಡುತ್ತಾರೆ. ಚುನಾವಣೆ ಮುಗಿಯುವುದರೊಳಗೆ ಸಿಕ್ಕಷ್ಟು ಬಾಚಿಕೊಳ್ಳೋಣ ಎಂದುಕೊಂಡಿದ್ದಾರೆ. ರೀಲ್ಸ್‌ ಮಾತ್ರವಲ್ಲದೆ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ವಿವಿಧ ಪಕ್ಷಗಳ ವಿರುದ್ಧ ಮೀಮ್ಸ್‌ಗಳನ್ನು ಹರಿಯಬಿಡುತ್ತಿರುವುದು ಹೆಚ್ಚಾಗುತ್ತಿದೆ.

ರೀಲ್ಸ್‌, ಮೀಮ್ಸ್‌, ಇನ್‌ಫ್ಲೂಯೆನ್ಸರ್‌ಗಳ ಕಾಲ

ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಕೆಲವು ಇನ್‌ಫ್ಲೂಯೆನ್ಸರ್‌ಗಳು ತುಂಬಾ ಇಷ್ಟವಾಗಿಬಿಡುತ್ತಾರೆ. ಇವರು ಮಾಡುವ ವಿಡಿಯೋಗಳು, ಮಾತುಗಳಿಗೆ ದೊಡ್ಡ ಮಟ್ಟದ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. ಇಂತಹ ಅಭಿಮಾನಿಗಳ ಅಭಿಮಾನವನ್ನು ಸದಾ ಕಾಪಾಡುವ ಹೊಣೆಗಾರಿಕೆಯೂ ಇವರಿಗೆ ಇರುತ್ತದೆ. ಎಲ್ಲಾದರೂ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟಾದರೆ ಫಾಲೋವರ್ಸ್‌ಗಳ ಸಂಖ್ಯೆ ಕುಸಿಯಬಹುದು ಎಂಬ ಆತಂಕ ಇರುತ್ತದೆ. ಇಂತಹ ಸಮಯದಲ್ಲಿ ಕೆಲವು ಇನ್‌ಫ್ಲೂಯೆನ್ಸರ್‌ಗಳು ಗುಣಮಟ್ಟದ ಕಂಟೆಂಟ್‌ಗಳ ಮೇಲೆ ಮಾತ್ರ ನಂಬಿಕೆಯಿಟ್ಟು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳ ಪ್ರಚಾರ ಇತ್ಯಾದಿಗಳಿಂದ ದೂರ ಇರುತ್ತಾರೆ. ಕೆಲವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಾವು ನಂಬುವ ಪಕ್ಷಕ್ಕಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಇನ್ನು ಕೆಲವು ಇನ್‌ಫ್ಲೂಯೆನ್ಸರ್‌ಗಳು ಮತದಾರರಿಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಹರಿಯಬಿಟ್ಟು ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಾರೆ. ಇದೇ ಸಮಯದಲ್ಲಿ ಚುನಾವಣಾ ಆಯೋಗವೂ ಸೋಷಿಯಲ್‌ ಮೀಡಿಯಾವನ್ನು ಸಮರ್ಪಕವಾಗಿ ಬಳಸಿ ಮತದಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ.

ಮತದಾರರ ಸ್ವಂತ ಬುದ್ಧಿ ಸದಾ ಜಾಗೃತವಾಗಿರಲಿ

ಸೋಷಿಯಲ್‌ ಮೀಡಿಯಾದಲ್ಲಿ ಕಂಡದ್ದೆಲ್ಲ ನಿಜವಾಗಿರಬೇಕಾಗಿಲ್ಲ. ಚುನಾವಣಾ ಕಾಲದಲ್ಲಿ ಸುಳ್ಳು ಸುದ್ದಿಗಳು ಒಂದಿಷ್ಟು ಹೆಚ್ಚೇ ಹರಿದಾಡಬಹುದು. ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದೇ ಹೇಳಿಕೆಗಳು, ಟೀಕೆಗಳನ್ನು ಕಂಡಾಗ ನಮ್ಮ ಅಭಿಪ್ರಾಯವನ್ನು ಆಗಾಗ ಬದಲಾಯಿಸಲು ಹೋಗಬಾರದು. ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಸರಿಯಾದ ಮೂಲಗಳಿಂದ ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದೇ ಸಮಯದಲ್ಲಿ ತಮಗೆ ಹಲವು ಮಿಲಿಯನ್‌ ಫಾಲೋವರ್ಸ್‌ಗಳು ಇದ್ದಾರೆ ಎಂದ ಮಾತ್ರಕ್ಕೆ ಜನರ ದಾರಿತಪ್ಪಿಸುವ ಪ್ರಯತ್ನವನ್ನು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಮಾಡಬಾರದು.

ಸಿ ವಿಜಿಲ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಸಿ ವಿಜಿಲ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಸುತ್ತಮುತ್ತ ಎಲ್ಲೇ ಚುನಾವಣಾ ಅಕ್ರಮಗಳು ಕಂಡರೆ ತಕ್ಷಣ ಫೋಟೋ ತೆಗೆದು ಸಿವಿಜಿಲ್‌ ಆಪ್‌ನಲ್ಲಿ ಅಪ್ಲೋಡ್‌ ಮಾಡಲು ಮರೆಯಬೇಡಿ. ನೀವು ಫಾಲೋ ಮಾಡುವ ಪಕ್ಷದಿಂದ ತಪ್ಪು ನಡೆದರೂ ಫೋಟೋ ತೆಗೆದು ಅಪ್ಲೋಡ್‌ ಮಾಡಿ, ಬೇರೆ ಪಕ್ಷದಿಂದ ತಪ್ಪಾದರೂ ಫೋಟೋ ತೆಗೆದು ಕಳುಹಿಸಿ. ಈ ರೀತಿ ಮಾಡಿದರೆ ಮಾತ್ರ ನಾವು ಜವಾಬ್ದಾರಿಯುತ ಮತದಾರರಾಗಲು ಸಾಧ್ಯ. ಸಿವಿಜಿಲ್‌ ಆಪ್‌ ಡೌನ್‌ಲೋಡ್‌ ಮಾಡಲು ಲಿಂಕ್‌ ಇಲ್ಲಿದೆ.

ಬರಹ: ಪ್ರವೀಣ್‌ ಚಂದ್ರ ಪುತ್ತೂರು

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in