ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌; ಈ ಟಚ್ಚಲಿ ಏನೋ ಇದೆ!-column digital jagathu what is virtual touch teaching minors good touch bad touchnot enough delhi court pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌; ಈ ಟಚ್ಚಲಿ ಏನೋ ಇದೆ!

ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌; ಈ ಟಚ್ಚಲಿ ಏನೋ ಇದೆ!

What is Virtual Touch?: ಈಗ ಗುಡ್‌ಟಚ್‌, ಬ್ಯಾಡ್‌ಟಚ್‌ ಕುರಿತು ಮಾತ್ರ ಮಕ್ಕಳಿಗೆ, ಹದಿಹರೆಯದವರಿಗೆ ಎಚ್ಚರಿಸಿದರೆ ಸಾಲದು. ವರ್ಚ್ಯುಯಲ್‌ ಟಚ್‌ ಕುರಿತೂ ಮಕ್ಕಳಲ್ಲಿ ತಿಳವಳಿಕೆ ಮೂಡಿಸಬೇಕು ಎಂದು ದೆಹಲಿ ಕೋರ್ಟ್‌ ತಿಳಿಸಿದೆ. ಏನಿದು ವರ್ಚ್ಯುಯಲ್‌ ಟಚ್‌? ತಿಳಿದುಕೊಳ್ಳೋಣ ಬನ್ನಿ.

ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌
ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌

ಇದು ಡಿಜಿಟಲ್‌ ಜಗತ್ತು. ಕೈಯಲ್ಲಿರುವ ಮೊಬೈಲ್‌, ಕಂಪ್ಯೂಟರ್‌ ಮೂಲಕ ದುತ್ತನೇ ಯಾವ ಅಪಾಯ ಕಾಡಬಹುದು ಎಂದು ಹೇಳಲಾಗದು. ಇದೇ ಕಾರಣಕ್ಕೆ ಈ ಡಿಜಿಟಲ್‌ ಜಗತ್ತಿನಲ್ಲಿ ಅಪ್ತಾಪ್ತರಿಗೆ ವರ್ಚ್ಯುಯಲ್‌ ಟಚ್‌ ಬಗ್ಗೆ ಜಾಗೃತಿ, ತಿಳಿವಳಿಕೆ ಮೂಡಿಸಬೇಕು ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಿದರೆ ಸಾಲದು, ವರ್ಚ್ಯುಯಲ್‌ ಟಚ್‌ ಬಗ್ಗೆಯೂ ಕಲಿಸಿಕೊಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಏನಿದು ವರ್ಚ್ಯುಯಲ್‌ ಟಚ್‌?

ಮಕ್ಕಳಿಗೆ ಆನ್‌ಲೈನ್‌ ನಡವಳಿಕೆ ಕಲಿಸುವುದು, ಹಿಂಸಾತ್ಮಕ ನಡವಳಿಕೆಯ ಸೂಚನೆಗಳನ್ನು ಗುರುತಿಸುವುದು, ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಸೇರಿದಂತೆ ಅಪ್ತಾಪ್ತರಿಗೆ ಡಿಜಿಟಲ್‌ ಜಗತ್ತಿನ ಬಳಕೆ ಮತ್ತು ಅಪಾಯದ ಕುರಿತು ಸರಿಯಾದ ಜ್ಞಾನ ಮೂಡಿಸಬೇಕು. ಅಪ್ತಾಪ್ತರು, ವಯಸ್ಕರು ಆನ್‌ಲೈನ್‌ ಮಾಧ್ಯಮದಲ್ಲಿ ಸಂವಹನ ನಡೆಸುತ್ತಾರೆ. ಈ ಸಂದರ್ಭದಲ್ಲಿ ಸೈಬರ್‌ಸ್ಪೇಸ್‌ನಲ್ಲಿ ಅಡಗಿರುವ ಸಂಭವನೀಯ ಅಪಾಯಗಳನ್ನು ಗುರುತಿಸುವುದನ್ನು ಮಕ್ಕಳು ಕಲಿಯಬೇಕಿದೆ. ಕಮಲೇಶ್‌ ದೇವಿ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿ ಈ ಅಭಿಪ್ರಾಯವ್ಯಕ್ತಪಡಿಸಿದೆ.

ಏನಿದು ಪ್ರಕರಣ?

ತನ್ನ ಮಗನಿಗೆ ಅಪ್ತಾಪ್ತ ಬಾಲಕಿಯನ್ನು ಅಪಹರಿಸಿ ವೈಶ್ಯಾವಾಟಿಕೆಗೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಈ ಕಮಲೇಶ್‌ ದೇವಿ ಮೇಲಿದೆ. ಆರೋಪಿ ಕಮಲೇಶ್‌ ದೇವಿ ಪುತ್ರ ರಾಜೀವ್‌ ಹದಿನಾರು ವರ್ಷದ ಬಾಲಕಿಯೊಂದಿಗೆ ಸೋಷಿಯಲ್‌ ಮೀಡಿಯಾದ ಮೂಲಕ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನು ಭೇಟಿಯಾಗುವ ಸಂದರ್ಭದಲ್ಲಿ ಅಪಹರಣ ಮಾಡಿದ್ದ. ಬಾಲಕಿಯನ್ನು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲವು ದಿನಗಳ ಕಾಲ ಕೂಡಿ ಇಟ್ಟಿದ್ದನು. ಈತ ಮತ್ತು ಇತರರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸ್ಮರಣಾ ಕಾಂತ ಶರ್ಮಾ ಅವರಿದ್ದ ನ್ಯಾಯಪೀಠವು "ಅಪ್ತಾಪ್ತ ವಯಸ್ಕರು ಡಿಜಿಟಲ್‌ ಜಗತ್ತಿನಲ್ಲಿ ಹೇಗೆ ಇರಬೇಕು ಎಂದು ಪೋಷಕರು ಮತ್ತು ಶಿಕ್ಷಕರು ಅರಿವು ಮೂಡಿಸಬೇಕು" ಎಂದು ಅಭಿಪ್ರಾಯಪಟ್ಟಿದೆ.

ಡಿಜಿಟಲ್‌ ಜಗತ್ತಿನಲ್ಲಿ ಸುರಕ್ಷತೆ

ಸೋಷಿಯಲ್‌ ಮೀಡಿಯಾದಲ್ಲಿ ಅಪರಿಚಿತರ ಜತೆ ಸಂವಹನ ನಡೆಸುವುದು ಅಪಾಯಕಾರಿ. ವಿಶೇಷವಾಗಿ ಮಕ್ಕಳು ಇಂತಹ ಆನ್‌ಲೈನ್‌ ವಂಚಕರ ಪೀಡನೆಗೆ ಒಳಗಾಗುತ್ತಾರೆ. ಆನ್‌ಲೈನ್‌ ಲೈಂಗಿಕ ದೌರ್ಜನ್ಯ ಇತ್ತೀಚೆಗೆ ಹೆಚ್ಚಾಗುತ್ತದೆ. ಸಾಕಷ್ಟು ಮಕ್ಕಳು ಇಂತಹ ತೊಂದರೆಗೆ ಒಳಗಾದ ಸಂದರ್ಭದಲ್ಲಿ ಮನೆಯವರಿಗೆ, ಶಿಕ್ಷಕರಿಗೆ ಮಾಹಿತಿ ನೀಡುವುದಿಲ್ಲ. ಇದರಿಂದ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಾರೆ. ಆನಲೈನ್‌ ಸೆಕ್ಷುವಲ್‌ ಹೆರಾಸ್‌ಮೆಂಟ್‌ ಎನ್ನುವುದು ತಮಗೆ ತಿಳಿದ ವ್ಯಕ್ತಿಗಳಿಂದ ಅಥವಾ ತಿಳಿಯದ ವ್ಯಕ್ತಿಗಳಿಂದ ಆಗಬಹುದು. ಬುಲ್ಲಿಂಗ್‌, ಬಾಡಿ ಶೇಮಿಂಗ್‌, ಪಾರ್ನ್‌ಗ್ರಫಿಗಳು ಆನ್‌ಲೈನ್‌ ಲೈಂಗಿಕ ದೌರ್ಜನ್ಯದಡಿಗೆ ಬರುತ್ತವೆ.

ಹೆತ್ತವರು ಏನು ಮಾಡಬೇಕು?

ಮಕ್ಕಳಲ್ಲಿ ಹೆತ್ತವರು ಮುಕ್ತವಾಗಿ ಹಲವು ವಿಚಾರಗಳ ಕುರಿತು ಮಾತನಾಡಬೇಕು. ಸಾಕಷ್ಟು ಸ್ನೇಹಪೂರ್ವಕ ವರ್ತನೆ ಹೊಂದಿರಬೇಕು. ಆನ್‌ಲೈನ್‌ ಜಗತ್ತಿನಲ್ಲಿ ಹೇಗಿರಬೇಕು, ಹೇಗಿರಬಾರದು ಎಂದು ತಿಳಿಹೇಳಬೇಕು. ಏನಾದರೂ ತೊಂದರೆಯಾದರೆ ಭಯಪಡದೆ ತಮಗೆ ವಿಷಯ ತಿಳಿಸಬೇಕು ಎಂದು ಹೇಳಬೇಕು. ಮಕ್ಕಳು ಅಥವಾ ಹದಿಹರೆಯದವರ ವರ್ತನೆ ಮೇಲೆ ಸದಾ ಕಣ್ಣಿಡಬೇಕು. ಅನುಮಾನಸ್ಪದ ನಡವಳಿಕೆ ಕಂಡಾಗ ವಿಷಯ ಏನೆಂದು ತಿಳಿಸುವಂತೆ ಪ್ರೀತಿಯಿಂದ ಒತ್ತಾಯಿಸಬೇಕು. ಮಕ್ಕಳು ಆನ್‌ಲೈನ್‌ನಲ್ಲಿ ಏನು ನೋಡುತ್ತಾರೆ ಎನ್ನುವುದರ ಮೇಲೆ ಒಂದು ನಿಗಾ ಯಾವತ್ತೂ ಇರಬೇಕು.

ವರ್ಚ್ಯುವಲ್‌ ಟಚ್‌ ಬಗ್ಗೆ ಎಚ್ಚರವಿರಲಿ

ಅಪರಿಚಿತರು ಪ್ರತಿನಿತ್ಯ ಆತ್ಮೀಯವಾಗಿ ಮಾತನಾಡುತ್ತ ನಿಮ್ಮ ಆತ್ಮೀಯತೆ ಗಳಿಸಲು ಪ್ರಯತ್ನಿಸಬಹುದು. ಆ ವ್ಯಕ್ತಿಯ ನಡವಳಿಕೆ ಅನುಮಾನಸ್ಪದವಾಗಿರಬಹುದು. ಪ್ರಮುಖವಾಗಿ ಲೈಂಗಿಕ ಆಸಕ್ತಿ ಅತಿಯಾಗಿ ಕಾಣಿಸಬಹುದು. ಇಂತಹ ವ್ಯಕ್ತಿಗಳಿಂದ ಹದಿಹರೆಯದವರು ದೂರವಾಗಬೇಕು. ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲದೆ ಗಂಡು ಮಕ್ಕಳ ಮೇಲೂ ಕಾಮಾಂಧರು ಆನ್‌ಲೈನ್‌ನಲ್ಲಿ ಬಲೆ ಬೀಸಬಹುದು. ಕೆಲವೊಮ್ಮೆ ಬ್ಲ್ಯಾಕ್‌ಮೇಲ್‌ ಮಾಡಿ ನಿಮ್ಮನ್ನು ಬಲೆಗೆ ಬೀಸಲು ಪ್ರಯತ್ನಿಸಬಹುದು.

ಈ ಮುಂದಿನ ಅಪಾಯಗಳ ಕುರಿತು ತಿಳಿದಿರಿ

ಸೈಬರ್‌ ಫ್ಲಾಷಿಂಗ್‌: ಡೇಟಿಂಗ್‌ ಆಪ್‌ಗಳು, ಮೆಸೆಜ್‌ ಆಪ್‌ಗಳ, ಬ್ಲೂಟೂಥ್‌, ಏರ್‌ಡ್ರಾಪ್‌ಗಳ ಮೂಲಕ ಲೈಂಗಿಕ ಚಿತ್ರಗಳನ್ನು ಕಳುಹಿಸುವುದು.

ಡೀಪ್‌ಫೇಕ್‌: ನಿಮ್ಮ ಮುಖ, ಧ್ವನಿ ಬಳಸಿ ವಿಡಿಯೋ ರಚಿಸಿ ನಿಮ್ಮನ್ನು ಬ್ಲ್ಯಾಕ್‌ಮೇಲ್‌ ಮಾಡಬಹುದು. ಇಂತಹ ಘಟನೆಗಳು ಸಂಭವಿಸಿದಾಗ ಭಯಪಡಬೇಡಿ.

ಡಿಜಿಟಲ್‌ ವೊಯೆರಿಸಮ್‌: ಮಹಿಳೆ ಅಥವಾ ಮಕ್ಕಳಿಗೆ ತಮ್ಮ ಖಾಸಗಿ ಅಂಗಗಳ ಫೋಟೋಗಳನ್ನು ಕಳುಹಿಸುವುದು ಇತ್ಯಾದಿ.

ಡೌನ್‌ಬ್ಲೌಸಿಂಗ್‌: ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಮಹಿಳೆಯ ನಗ್ನ ಚಿತ್ರಗಳನ್ನು ಒಪ್ಪಿಗೆಯಿಲ್ಲದೆ ಅಥವಾ ರಹಸ್ಯವಾಗಿ ಚಿತ್ರೀಕರಣ ಮಾಡಲಾಗುತ್ತದೆ. ಇವುಗಳನ್ನು ಆನ್‌ಲೈನ್‌ನಲ್ಲಿ ಹಂಚಬಹುದು.

ಡಾಕ್ಸಿಂಗ್‌: ವ್ಯಕ್ತಿಯೊಬ್ಬರ ಒಪ್ಪಿಗೆ ಇಲ್ಲದೆ ಅವರ ಖಾಸಗಿ ಮಾಹಿತಿ ಕಂಡುಹಿಡಿದು ಅವಮಾನಿಸುವುದು ಇತ್ಯಾದಿ.

ಜೆಂಡರ್‌ಟ್ರೋಲಿಂಗ್‌: ಲಿಂಗದ ಆಧಾರದಲ್ಲಿ ಆನ್‌ಲೈನ್‌ನಲ್ಲಿ ಟ್ರೋಲ್‌ ಮಾಡುವುದು.

ಇವು ಡಿಜಿಟಲ್‌ ಜಗತ್ತಿನಲ್ಲಿ ಅಪ್ತಾಪ್ತರಿಗೆ, ವಯಸ್ಕರಿಗೆ ಉಂಟಾಗಬಹುದಾದ ಕೆಲವು ತೊಂದರೆಗಳ ಮಾಹಿತಿಯಷ್ಟೇ. ಆನ್‌ಲೈನ್‌ನಲ್ಲಿ ಇಂತಹ ಹಲವು ಬಗೆಯ ತೊಂದರೆಗಳು ಉಂಟಾಗಬಹುದು. ಹದಿಹರೆಯದ ಮಕ್ಕಳನ್ನು ಸೆಳೆಯಲು ಆನ್‌ಲೈನ್‌ನಲ್ಲಿ ನಾನಾ ಮಾರ್ಗಗಳನ್ನು ಅನುಸರಿಸಬಹುದು. ಪ್ರೀತಿಯ ನಾಟಕವಾಡಬಹುದು. ಬ್ಲ್ಯಾಕ್‌ಮೇಲ್‌ ಮಾಡಬಹುದು. ಡೀಪ್‌ಫೇಕ್‌ ವಿಡಿಯೋ ಅಥವಾ ಫೋಟೋರಚಿಸಿ ಭಯಪಡಿಸಿ ಕೆಟ್ಟದ್ದಾಗಿ ಬಳಸಿಕೊಳ್ಳಬಹುದು. ಹೀಗಾಗಿ, ಮಕ್ಕಳಿಗೆ ಗುಡ್‌ಟಚ್‌, ಬ್ಯಾಡ್‌ಟಚ್‌ ಬಗ್ಗೆ ಮಾತ್ರವಲ್ಲದೆ ಆನ್‌ಲೈನ್‌ನಲ್ಲಿ ಮೇಲ್ನೋಟಕ್ಕೆ ಕಾಣಿಸಿದ ವರ್ಚ್ಯುಯಲ್‌ ಟಚ್‌ ಬಗ್ಗೆಯೂ ಅರಿವು ಮೂಡಿಸುವ ಅವಶ್ಯಕತೆಯಿದೆ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

mysore-dasara_Entry_Point