ಕನ್ನಡ ಸುದ್ದಿ  /  ಜೀವನಶೈಲಿ  /  ಈಜಿ ಲೈಫ್; ಕೈಜಾರಿದ ಕನಸುಗಳಿಗೆ ಬಟ್ಟೆ ತೊಡಿಸಿ ಕೊನೆಯಾಸೆ ಹುಡುಕ ಹೊರಟಾಗ, ಮುಗುಳ್ನಕ್ಕಿತ್ತು ಮೊದಲ ಆಸೆ

ಈಜಿ ಲೈಫ್; ಕೈಜಾರಿದ ಕನಸುಗಳಿಗೆ ಬಟ್ಟೆ ತೊಡಿಸಿ ಕೊನೆಯಾಸೆ ಹುಡುಕ ಹೊರಟಾಗ, ಮುಗುಳ್ನಕ್ಕಿತ್ತು ಮೊದಲ ಆಸೆ

The Asadas: ಸಾವಿನ ನೆರಳಿನಲ್ಲಿ ಬದುಕು ಹುಡುಕುವ ಕಥೆ ಇರುವ ಚಿತ್ರ 'ದಿ ಅಸಾದಾಸ್‌'. ಎಲ್ಲ ಕಳೆದುಕೊಂಡ ಅಸಹಾಯಕತೆಯಲ್ಲಿಯೂ ಬದುಕುವ ಆಸೆ ಚಿಗುರಿಸುವ ಬೆಳ್ಳಿಗೆರೆಯನ್ನು ಹೇಗೆಲ್ಲಾ ಕಂಡುಕೊಳ್ಳಬಹುದು ಎನ್ನುವುದಕ್ಕೆ ಈ ಚಿತ್ರಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ.

ದಿ ಅಸಾದಾಸ್ ಸಿನಿಮಾದ ಸ್ಟಿಲ್ ಮತ್ತು ಮೈಸೂರಿನ ಕಲಾವಿದೆ ನೀಲಿ ಲೋಹಿತ್
ದಿ ಅಸಾದಾಸ್ ಸಿನಿಮಾದ ಸ್ಟಿಲ್ ಮತ್ತು ಮೈಸೂರಿನ ಕಲಾವಿದೆ ನೀಲಿ ಲೋಹಿತ್ (ವಿನ್ಯಾಸ: ಉಮೇಶ್ ಕುಮಾರ್ ಶಿಮ್ಲಡ್ಕ)

ಮಹಾಭಾರತದಲ್ಲಿ ಒಂದು ಪ್ರಸಂಗವಿದೆ. ಪಾಂಡವರಲ್ಲಿ ಧರ್ಮಜಿಜ್ಞಾಸೆ ನಡೆಯುವಾಗ ಭೀಮ ಕಾಮವೇ (ಆಸೆಯೇ) ಮುಖ್ಯ. ಅದೇ ಮನುಷ್ಯತ್ವದ ತಂತು ಎಂಬ ಅರ್ಥಗಳು ಬರುವ ಮಾತು ಆಡುತ್ತಾನೆ. ಮುಂದೆ ಇದರ ಬಗ್ಗೆ ದೊಡ್ಡ ಚರ್ಚೆಯಾಗಿ ಶ್ರೀಕೃಷ್ಣ ಇದನ್ನೇ ಒಪ್ಪುತ್ತಾನೆ. ಹೌದು ಆಸೆಯೇ ಮುಖ್ಯ. ಆಸೆಯ ಬೆನ್ನು ಹತ್ತುವುದೇ ಜೀವನ. ಹೀಗೆ ಬೆನ್ನು ಹತ್ತಿದ ಎಲ್ಲ ಆಸೆಗಳು ಈಡೇರಬೇಕು ಎಂದೇನೂ ಇಲ್ಲ. ಎಷ್ಟೋ ಸಲ ಬೆನ್ನುಹತ್ತುವವರಿಗೂ ಅದು ಕೈಗೂಡಬಹುದು ಎಂಬ ವಿಶ್ವಾಸವೂ ಇರುವುದಿಲ್ಲ. ಹಾಗೆಂದು ಆಸೆಯನ್ನೇ ಬಿಟ್ಟುಬಿಟ್ಟರೆ ಬದುಕು ಸಾಗುವುದುಂಟೆ. ಮತ್ತೆ ಉಸಿರೆಳೆದುಕೊಳ್ಳಬಲ್ಲೆ ಎಂಬ ಭರವಸೆಯಿಂದಲೇ ತಾನೆ ಶ್ವಾಸಕೋಶದಿಂದ ಉಸಿರು ಹೊರಗೆ ಬೀಳುವುದು. ಇಂಥ ಭರವಸೆಗಳೋ, ವಿಶ್ವಾಸಗಳೋ, ಆಶಯಗಳೋ, ಗುರಿಗಳೋ, ಮತ್ತೇನೋ... ಆ ಎಲ್ಲದರ ಮೊತ್ತವನ್ನೇ ಸದ್ಯದ ಮಟ್ಟಿಗೆ ಆಸೆ ಎಂದುಕೊಳ್ಳೋಣ. ಭಿನ್ನವಿಭಿನ್ನ ಹಿನ್ನೆಲೆಯ ಮನುಷ್ಯರು ಆಸೆಗಳನ್ನು ಬೆನ್ನುಹತ್ತುವುದನ್ನು ಬಿಂಬಿಸುವ ಸಿನಿಮಾ 'ದಿ ಅಸಾದಾಸ್'. ಇದೇ ಸಿನಿಮಾದ ಆಶಯವನ್ನೇ ಹೋಲುವ ಘಟನೆಯೊಂದು ಮೈಸೂರಿನಲ್ಲಿ ನಡೆದದ್ದು ತೀರಾ ವಿಶೇಷ. ಸಪ್ತಸಾಗರದಾಚೆಗೆ ಇರುವ ಮನುಷ್ಯರಲ್ಲೂ ಇರುವ ತಂತು ಒಂದೇ ಎಂಬುದನ್ನು ನೆನಪಿಸುವಂತಿದೆ ಈ ಘಟನೆ.

ಈಗ ವಿಷಯಕ್ಕೆ ಬರೋಣ. ಸಾಮಾನ್ಯ ಬದುಕಿನ ಅಸಾಮಾನ್ಯ ಸಂಗತಿಗಳನ್ನು ಹೆಕ್ಕಿ ತೋರಿಸುವಲ್ಲಿ ಜಪಾನಿ ಸಿನಿಮಾ ನಿರ್ದೇಶಕರು ನಿಪುಣರು. 2020ರಲ್ಲಿ ತೆರೆಕಂಡ 'ದಿ ಅಸಾದಾಸ್' (The Asadas) ಕೂಡ ಇಂಥದ್ದೇ ಚಿತ್ರ. ಸ್ವತಃ ಅಣ್ಣನಿಂದ 'ಕೆಲಸಕ್ಕೆ ಬಾರದವ' ಎನಿಸಿಕೊಂಡ ತರುಣ ಮಸಾಶಿ ಸದಾ ಹೊಸತನಕ್ಕೆ ತುಡಿಯುವ ಮನಸ್ಸುಳ್ಳವನು. ಅವನಲ್ಲಿ ಮೊಳೆತ ಫೋಟೊಗ್ರಫಿ ಹುಚ್ಚಿಗೆ ಅವನ ಅಪ್ಪನೇ ಕಾರಣ. ಫೋಟೊಗ್ರಫಿ ಕೋರ್ಸ್‌ಗೆ ಸೇರುತ್ತಾನಾದರೂ ಅದರಲ್ಲಿ ಒಂದು ಪ್ರಾಜೆಕ್ಟ್ ಬಾಕಿಯಾಗಿರುತ್ತದೆ. ಆ ಪ್ರಾಜೆಕ್ಟ್ ಮುಗಿಯುವುದರೊಂದಿಗೆ ಮಸಾಶಿ ಬದುಕಿಗೂ ಹೊಸ ತಿರುವು ಸಿಗುತ್ತದೆ. ಎಷ್ಟೋ ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ತಮ್ಮದೇ ಬದುಕು ತೆರೆಯ ಮೇಲೆ ಬಂದಂತೆ ಭಾಸವಾಗುತ್ತದೆ.

'ನಿನ್ನ ಅಮ್ಮನಿಗೆ ನರ್ಸ್ ಆಗಬೇಕೆಂಬ ಆಸೆಯಿತ್ತು. ನನಗೂ ಏನೇನೋ ಆಸೆಗಳಿದ್ದವು. ಆದರೆ ನನಗೆ ನನ್ನ ಆಸೆ ಈಡೇರಿಸಿಕೊಳ್ಳುವುದಕ್ಕಿಂತಲೂ ನಿನ್ನಮ್ಮನ ಖುಷಿ ಮುಖ್ಯವಾಗಿತ್ತು. ಹೀಗಾಗಿ ನಾನು ಮನೆಯಲ್ಲಿ ರುಚಿರುಚಿಯಾಗಿ ಅಡುಗೆ ಮಾಡಲು ಶುರು ಮಾಡಿದೆ. ಮಕ್ಕಳನ್ನು ಸಾಕಿ ಬೆಳೆಸಿದೆ. ಈಗ ನೋಡು ನಿನ್ನಮ್ಮ ರಿಟೈರ್ಡ್ ಆಗಿದ್ದಾಳೆ. ಆದರೂ ನಾನೇ ಅಡುಗೆ ಮಾಡ್ತಿದ್ದೇನೆ. ಸಂಜೆ ಬೇಗ ಮನೆಗೆ ಬಾ, ನಿನಗೊಂದು ಸರ್‌ಪ್ರೈಸ್ ಇರುತ್ತೆ. ಆರುವ ಮೊದಲು ತಿಂದ್ರೆ ಚಂದ' ಎಂದು ಫೋಟೊಗ್ರಫಿ ಪ್ರಾಜೆಕ್ಟ್‌ಗಾಗಿ ತಲೆಕೆಡಿಸಿಕೊಳ್ಳುತ್ತಿದ್ದ ಮಗ ಮಸಾಶಿ ಎದುರು ತಲೆಗೂದಲು ಹಣ್ಣಾದ ಆಕಿರಾ ಅಸಾದಾ ಹೆಮ್ಮೆಯಿಂದ ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಇಷ್ಟುದಿನ ಅಪ್ಪನ ಬದುಕಿನ ಬಗ್ಗೆ ಹೆಚ್ಚು ಆಸಕ್ತಿಯನ್ನೇ ತೋರದಿದ್ದ ಮಸಾಶಿಗೆ ಈಗ ಅಪ್ಪ ಅಂದ್ರೆ ಹೊಲಿಗೆ ಹಾಕಿರುವ ಕುತೂಹಲದ ಮೂಟೆ ಎನಿಸುತ್ತದೆ. ನಿಧಾನವಾಗಿ ಅಪ್ಪನ ಆಸೆಗಳನ್ನು ಅರಿಯಲು ಯತ್ನಿಸುತ್ತಾನೆ. ಆಗ ಅವನಿಗೆ ತನ್ನ ಅಪ್ಪನಿಗೆ ಫೈರ್‌ಮನ್ ಆಗುವ ಆಸೆಯಿದ್ದುದು ತಿಳಿಯುತ್ತೆ. ಊರಿನ ಫೈರ್‌ಸ್ಟೇಷನ್‌ಗೆ ಅಣ್ಣನನ್ನು ಸಾಗ ಹಾಕಿ, ಅವನಿಂದ ಸಲಾಮು ಹಾಕಿಸಿ ಫೈರ್ ಎಂಜಿನ್ ವಾಹನ ಮತ್ತು ಸಮವಸ್ತ್ರ ತಂದು, ಅದನ್ನು ಅಪ್ಪ, ಅಮ್ಮ, ಅಣ್ಣನಿಗೆ ತೊಡಿಸಿ. ತಾನೂ ತೊಟ್ಟುಕೊಂಡು ಕ್ಯಾಮೆರಾಗೆ ಟೈಮರ್ ಇಟ್ಟು ಫೋಟೊ ತೆಗೆಯುತ್ತಾನೆ. ಮುಂದೆ ಇಂಥ ಫೋಟೊಗಳೇ ಅವನಿಗೆ ಹೆಸರು ತಂದುಕೊಡುತ್ತವೆ.

ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಇಂಥ ಈಡೇರದ ಪ್ರಬಲ ಆಸೆಗಳಿರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಮಸಾಶಿ ಒಬ್ಬ ಛಾಯಾಚಿತ್ರ ಕಲಾವಿದನಾಗಿ ದೊಡ್ಡ ಹೆಸರು ಮಾಡುತ್ತಾನೆ. ಎಷ್ಟೋ ಕುಟುಂಬಗಳ ಅವಿಸ್ಮರಣೀಯ ಕ್ಷಣಗಳನ್ನು ಮರುಸೃಷ್ಟಿಸಿ, ಕ್ಯಾಮೆರಾ ಕಣ್ಣಿನಲ್ಲಿ ದಾಖಲಿಸುತ್ತಾನೆ. ಎಲ್ಲ ಹೀಗೆ ಸಾಗುತ್ತಿರುವಾಗಲೇ ಸುನಾಮಿ ಜಪಾನಿಗೆ ಅಪ್ಪಳಿಸುತ್ತದೆ. ಎಷ್ಟೋ ಕುಟುಂಬಗಳು ಬೀದಿಪಾಲಾಗುತ್ತವೆ. ತನ್ನ ಗ್ರಾಹಕರಿಗೆ ಫೋಟೊ ತಲುಪಿಸಲು ಹೋಗುವ ಮಸಾಶಿ ಅವರ ಮನೆಗಳೇ ಕೊಚ್ಚಿಹೋಗಿರುವುದನ್ನು ಕಂಡು ಹೌಹಾರುತ್ತಾನೆ. ಕಲಾವಿದನಾಗಿ ಮಾಗಿದ್ದ ಅವನ ಮನಸ್ಸು ಈಗ ದೇಶದ ಸಂಕಷ್ಟಕ್ಕೆ ಮಿಡಿಯುತ್ತದೆ. ಹೆಣಗಳು ಸಿಗದ ಕುಟುಂಬಗಳು ತಮ್ಮವರ ಅಂತ್ಯಸಂಸ್ಕಾರಕ್ಕಾಗಿ ಒಂದು ಫೋಟೊ ಆದರೂ ಸಿಗಬಹುದೆಂದು ಹುಡುಕಾಡುತ್ತಿರುವುದನ್ನು ಮನಗಂಡು, ಕೆಸರಿನಲ್ಲಿ ಸಿಲುಕಿದ ಹಳೇ ಫೋಟೊ ಆಲ್ಬಮ್‌ಗಳನ್ನು ಹುಡುಕಿ ಫೋಟೊಗಳನ್ನು ಸ್ವಚ್ಛಗೊಳಿಸಿ ಪ್ರದರ್ಶಿಸುತ್ತಾನೆ.

ಇಂಥದ್ದೊಂದು ಸಂದರ್ಭದಲ್ಲಿಯೇ ಮಸಾಶಿಗೆ ಅಪ್ಪನೇ ಇಲ್ಲದ ಫೋಟೊ ಆಲ್ಬಮ್ ಕೈಲಿ ಹಿಡಿದ ಮಗು ಸಿಗುವುದು. ಯಾವಾಗಲೂ ಹೆಂಡತಿ, ಮಕ್ಕಳ ಫೋಟೊ ತೆಗೆಯುತ್ತಿದ್ದ ಅಪ್ಪ ತಾನು ಮಾತ್ರ ಯಾವ ಫೋಟೊದಲ್ಲೂ ಇರಲೇ ಇಲ್ಲ. ಏಕೆಂದರೆ ಅವನು ತನ್ನನ್ನು ತಾನೇ ಮರೆಯುವಷ್ಟರ ಮಟ್ಟಿಗೆ ಹೆಂಡತಿ-ಮಕ್ಕಳನ್ನು ಪ್ರೀತಿಸುತ್ತಿದ್ದ. ಕ್ಯಾಮೆರಾ ಹಿಂದಿದ್ದ ಅಪ್ಪ ಹೇಗೆ ತಾನೆ ಫೋಟೊದಲ್ಲಿ ಬರಲು ಸಾಧ್ಯ? ಗಟ್ಟಿಕಥೆಯೇ ಈ ಚಿತ್ರದ ನಿಜವಾದ ಹೀರೋ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಸಂಗೀತ, ಸಂಭಾಷಣೆ, ಉದ್ವೇಗವೇ ಇಲ್ಲದ ನಿರೂಪಣೆ... ಹೀಗೆ ಇಡೀ ಚಿತ್ರ ಒಂದೊಳ್ಳೆ ಅನುಭವವಾಗಿ ರೂಪಾಂತರವಾಗುತ್ತದೆ. ಹಲವು ವರ್ಷಗಳ ಒಳಗೆ ಮನಸ್ಸಿನಲ್ಲಿಯೇ ಬೆಳೆಯುತ್ತಿರುತ್ತದೆ.

'ದಿ ಅಸಾದಾಸ್' ಚಿತ್ರ ಮತ್ತೊಮ್ಮೆ ನೆನಪಾಗಲು ಮೈಸೂರಿನ ಟೆರಾಕೋಟಾ ಕಲಾವಿದೆ ನೀಲಿ ಲೋಹಿತ್ ಕಾರಣ. ತಮಗೆ ಆಗಿರುವ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿರುವ ನೀಲಿ ಲೋಹಿತ್ ಅವರ ಫೇಸ್‌ಬುಕ್ ಬರಹಗಳು ಜನರ ಗಮನ ಸೆಳೆದಿವೆ. ವ್ಯವಸ್ಥೆಯ ಹುಳುಕನ್ನು ಒಂದೊಂದಾಗಿ ಬಯಲಾಗಿಸುತ್ತಿರುವ ಇವರ ಫೇಸ್‌ಬುಕ್ ಖಾತೆಯಲ್ಲಿ ಮೇ 15ರಂದು ಅಪ್‌ಲೋಡ್ ಆಗಿರುವ ಚಿತ್ರಗಳು, ಅವರು ಬರೆದುಕೊಂಡಿರುವ ಒಕ್ಕಣೆ 'ದಿ ಅಸಾದಾಸ್' ಚಿತ್ರದ ಕರ್ನಾಟಕದ ಅವತರಣಿಕೆಯಂತೆ ಭಾಸವಾಗುತ್ತದೆ.

"ಅವ್ವಾ ಹೋಗ್ಬಿಟ್ಳು... ಅಲ್ಲಿಗೆ ಅವಳೊಟ್ಟಿಗೆ ನನ್ನ Law ಓದುವ ಕನಸೂ ಹೋಯ್ತು... ಆದರೂ ನಾನಾ ಬಿಡೋಳು, ಆ ಕನಸಿಗೆ ಕಡೆ ಪಕ್ಷ ಒಂದು ದಿನದ ಬಟ್ಟೆ ತೊಡಿಸಿ ನೋಡಿಯೇ ಬಿಡೋಣ ಎಂದು ಮಗಳಿಗೆ ಹೇಳಿದ್ದೆ ತಡ, ಅವಳೆ ಖುದ್ದು ನಿಂತು ಈ ಹೊಸಮಗುವಿಗೆ Lawyer ಅವತಾರ ತೊಡಿಸಿ, ಪಟಪಟನೆ ಪಟಗಳನ್ನ ತೆಗೆದು "Sanam tere kasam heroin ಥರ ಮುದ್ದಾಗಿಯಾ" ಅಂದರೆ ಈ ನೀಲಿ ಎಷ್ಟು ಹಾರಿರ್ಬೇಡ ಹೇಳಿ" ಎಂದು ನೀಲಿ ಲೋಹಿತ್ ಬರೆದುಕೊಂಡಿದ್ದಾರೆ. ಮನದಾಳದ ಮೂಸೆಯಲ್ಲಿದ್ದ ಪ್ರಬಲ ಆಸೆಯೊಂದು ಈಡೇರಿದ ತೃಪ್ತಿ ಹೀಗಾದರೂ ಅವರಿಗೆ ಸಿಕ್ಕಿದೆ. ಅದೇ ಹೊತ್ತಿನಲ್ಲಿ ಹೀಗೆ ಪರಿತಪಿಸುವ ಎಷ್ಟೋ ಜನರಿಗೆ ದಾರಿಯನ್ನೂ ತೋರಿಸಿದೆ.

‘ದಿ ಅಸಾದಾಸ್’ ಸಿನಿಮಾದ ಟ್ರೇಲರ್

ಮೈಸೂರಿನ ಕಲಾವಿದೆ ನೀಲಿ ಲೋಹಿತ್ ಅವರ ಫೇಸ್‌ಬುಕ್ ಪೋಸ್ಟ್

(ಪ್ರಿಯ ಓದುಗರೇ, ಪಾಸಿಟಿವ್ ಎನಿಸುವ, ಜೀವನಪ್ರೀತಿ ಹೆಚ್ಚಿಸುವ ಸತ್ಯಕಥೆಗಳನ್ನು ನೀವೂ ಹಂಚಿಕೊಳ್ಳಬಹುದು. ಇಮೇಲ್ dm.ghanashyam@htdigital.in, ht.kannada@htdigital.in)