Monday Motivation: ಕೋಪವನ್ನು ನಿಯಂತ್ರಿಸುವುದು ಹೇಗೆ? ಕ್ರೋಧಾದ್ಭವತಿ ಸಮ್ಮೋಹಃ... ವಿಪರೀತ ಕೋಪಿಷ್ಠರಿಗೆ ಸೋಮವಾರದ ಸ್ಪೂರ್ತಿದಾಯಕ ಮಾತು
Monday Motivation by Bhavya Vishwanath: ಕೋಪವು ಒಂದು ಭಾವನೆಯಾದರೂ, ಅತಿಯಾದಾಗ ಅದರ ಶಕ್ತಿ ಅಪಾರ. ಕೋಪವನ್ನು ನಿಯಂತ್ರಿಸುವುದು ಹೇಗೆ? ಎಂದು ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಸೋಮವಾರದ ಸ್ಪೂರ್ತಿದಾಯಕ ಲೇಖನ ಬರೆದಿದ್ದಾರೆ. ಕೋಪ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ತಪ್ಪದೇ ಓದಿ.
Monday Motivation by Bhavya Vishwanath: ಸೋಮವಾರದ ಸ್ಪೂರ್ತಿದಾಯಕ ಬರಹದಲ್ಲಿ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ "ಕೋಪ ನಿಯಂತ್ರಿಸುವುದು ಹೇಗೆ?" ಎಂದು ಅಮೂಲ್ಯ ಸಲಹೆ ನೀಡಿದ್ದಾರೆ. ಕೋಪ ಉದ್ಭವಿಸಿದ ಸಂದರ್ಭಗಳಲ್ಲಿ ನಿಮ್ಮ ವರ್ತನೆಯ ಮೂಲಕ ಕೋಪವು ವ್ಯಕ್ತವಾಗುತ್ತದೆ. ಈ ವರ್ತನೆಯು ನಿಮ್ಮ ಪದಗಳ ಬಳಕೆ, ಧ್ವನಿ, ದೇಹಭಾಷೆ, ಮಾತು, ಮುಖಭಾವಗಳನ್ನು ಬಿರುಸಾಗಿ ಮಾಡುತ್ತದೆ ಮತ್ತು ಇದರ ಪರಿಣಾಮ ಕಠಿಣವಾಗಿ, ಅಹಿತಕರವಾಗಿರುತ್ತದೆ.
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ॥
ಅನುವಾದ: ಕೋಪದಿಂದ, ಸಂಪೂರ್ಣ ಭ್ರಮೆ ಉಂಟಾಗುತ್ತದೆ ಮತ್ತು ಭ್ರಮೆಯಿಂದ ಸ್ಮರಣೆಯ ವಿಸ್ಮಯ ಉಂಟಾಗುತ್ತದೆ. ಸ್ಮೃತಿಯು ದಿಗ್ಭ್ರಮೆಗೊಂಡಾಗ, ಬುದ್ಧಿವಂತಿಕೆಯು ಕಳೆದುಹೋಗುತ್ತದೆ, ಮತ್ತು ಬುದ್ಧಿವಂತಿಕೆಯು ಕಳೆದುಹೋದಾಗ, ಒಬ್ಬರು ಮತ್ತೆ ಭೌತಿಕ ಕೊಳದಲ್ಲಿ ಬೀಳುತ್ತಾರೆ (source - vedabase.io)
ಮೇಲಿರುವ ಸಂಸ್ಕೃತ ಶ್ಲೋಕದ ಅನುವಾದದಂತೆ, ಕೋಪವು ಬರಿ ಒಂದು ಭಾವನೆಯಾದರೂ, ಅತಿಯಾದಾಗ ಅದರ ಶಕ್ತಿ ಅಪಾರವಾದದು. ನಮ್ಮ ಬುದ್ಧಿಯನ್ನು ನಿಷ್ಪ್ರಯೋಜಕವನ್ನಾಗಿ ಮಾಡಿಬಿಡುತ್ತದೆ. ಕೋಪವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಾಗದಿದ್ದರೂ, ಅದರ ನಿಯಂತ್ರಣ ಸಾಧ್ಯವಿದೆ. ಅತಿಯಾದ ಕೋಪ ಬೇರೆಯವರಿಗೆ ಹಾನಿಕಾರಕ ಮಾತ್ರವಲ್ಲ, ಸ್ವ ಹಾನಿಕರವೂ ಹೌದು. ವಿಪರೀತವಾದ ಕೋಪ ನಮ್ಮಲ್ಲೇ ಇರುವ ವಿಷವಿದ್ದಂತೆ, ನಮ್ಮ ಕೋಪ ನಮ್ಮನ್ನೇ ಗುಲಾಮರಾಗಿ ಮಾಡಿ, ತಾನು ರಾಜನಂತೆ ನಮ್ಮನ್ನು ಆಳುತ್ತದೆ. ಆದ್ದರಿಂದ, ಆದಷ್ಚು ಬೇಗ ಕೋಪವನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬೇಕು.
ಕೋಪವನ್ನು ನಿಯಂತ್ರಿಸುವುದು ಹೇಗೆ?
1. ನಿಮ್ಮ ಕೋಪದ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಿ
ಹಲವಾರು ಕಾರಣಗಳಿಂದ ಪ್ರಚೋದನೆಗೊಂಡು ಕೋಪದ ಮೂಲಕ ಭಾವನೆಗಳು ವ್ಯಕ್ತವಾಗುತ್ತವೆ. ಉದಾ: ಕೆಲವು ಕೆಲಸ ಕಾಯ೯ಗಳು ಅಂದುಕೊಂಡಂತೆ ಆಗದೆ ಇರುವ ಕಾರಣ ಅಸಮಧಾನ ಉಂಟಾಗಬಹುದು. ನಮ್ಮನ್ನು ಯಾರಾದರೂ ತಿರಸ್ಕಾರ ಮಾಡಿರುವ ಕಾರಣ ಹತಾಶೆ ಉಂಟಾಗಬಹುದು. ಸೋಲಿನಿಂದ ನಿರಾಸೆ ಅಥವ ಬೇರೆಯವರ ಅಪಮಾನ/ ನಿರ್ಲಕ್ಷ್ಯದಿಂದ ಬೇಸರವಾಗಿರಬಹುದು , ಅಧಿಕಾರ ಚಲಾಯಿಸಕ್ಕಾಗದೆ ಅಸಹಾಯಕತನ ಉಂಟಾಗಬಹುದು...ಇತ್ಯಾದಿ
2. ಪ್ರಚೋದನೆಗಳನ್ನು ಅರಿಯಿರಿ
ಕೋಪವನ್ನು ತಡೆಯುವುದಕ್ಕೆ ಬಹಳ ಮಹತ್ವವಾದ ಅಂಶವೆಂದರೆ ನಿಮ್ಮ ಕೋಪವನ್ನು ಪ್ರಚೋದಿಸುವಂತಹ ಸನ್ನಿವೇಶಗಳನ್ನು ಗಮನಿಸುವುದು. ಒಮ್ಮೆ ಗಮನಿಸಿದ ನಂತರ ಅವುಗಳ ಬಗ್ಗೆ ನಿಮ್ಮಲ್ಲಿ ಅರಿವು ಮೂಡುತ್ತದೆ. ಈ ಅರಿವನಿಟ್ಚುಕೊಂಡು, ಪ್ರಚೋದನೆಗಳನ್ನು ಮರೆಯದೆ ಗುರುತಿಸಿ, ಪಟ್ಟಿ ಮಾಡಿಕೊಳ್ಳಿ. ಗುರುತಿಸಿದ ನಂತರ, ಎಚ್ಚರಿಕೆಯಿಂದಿರಿ. ಉದಾ: ನಿಮಗೆ ಯಾರಾದರೂ ಒರಟಾಗಿ ಮಾತಾಡಿದ ತಕ್ಷಣವೇ ಕೋಪ ಬರಬಹುದು. ಅಥವಾ ನಿಮ್ಮ ಆಜ್ಞೆಯನ್ನು ಪಾಲಿಸದಿದ್ದರೆ ದಿಢೀರನೆ ಕೋಪಬರಬಹುದು. ಕೆಲವರಿಗೆ ತಮ್ಮನ್ನು ಯಾರದರು ವಿಮರ್ಶೆ (criticise) ಮಾಡಿದ ತಕ್ಷಣವೇ ಸಿಟ್ಟು ಬರುವ ಅಭ್ಯಾಸವಿರುತ್ತದೆ. ಇಂತಹ ಪ್ರಚೋದನೆಗಳಿಗೆ ಯಾವುದೇ ಕಾರಣಕ್ಕೂ ನೀವು ಕೋಪಗೊಳ್ಳಬಾರದೆಂದು ಸಂಕಲ್ಪ ಮಾಡಿಕೊಳ್ಳಿ.
3. ತಕ್ಷಣ ಪ್ರತಿಕ್ರಿಯೆ ನೀಡಬೇಡಿ
ಪ್ರತಿಕ್ರಿಯೆ(respond) ಕೊಡಿ. ಆದರೆ ಅತಿ ಪ್ರತಿಕ್ರಿಯೆ (over react) ಕೊಡುವುದನ್ನು ತಡೆಯಿರಿ - (stop- pause- respond)
ಕೋಪಗೊಳ್ಳುವಂತಹ ಸನ್ನಿವೇಶದಲ್ಲಿ ಒಮ್ಮೇಲೆ ಆಲೋಚಿಸದೆ ಪ್ರತಿಕ್ರಿಯಿಸುವುದನ್ನು ತಡೆಯಿರಿ. ದಿಢೀರನೆ ಪ್ರತಿಕ್ರಿಯೆ ನೀಡುವುದನ್ನು ಮೊದಲು ನಿಲ್ಲಿಸಿ. ಚಿಕ್ಕ ವಿರಾಮದ ನಂತರ, ಸರಿ ತಪ್ಪುಗಳನ್ನು, ಸತ್ಯ ಮಿತ್ಯ ವಿಶ್ಲೇಷಿಸಿ ನಂತರ ಪ್ರತಿಕ್ರಯಿಸುವ ಅಭ್ಸಾಸವನ್ನು ಬೆಳೆಸಿಕೊಳ್ಳಿ.
4. ಪೂರ್ವಾಗ್ರಹ ಪೀಡಿತ ನಂಬಿಕೆಯನ್ನು ಬದಲಾಯಿಸಿ
ನಾವು ಹೊಸ ಯತ್ನಗಳು ಮತ್ತು ಸುಧಾರಣೆಯಾಗಬೇಕಾದಾಗ ನಮ್ಮದೇ ಆದ ಕೆಲವು ಪೂವ೯ಗ್ರಹ ಪೀಡಿತ ನಂಬಿಕೆಗಳು ಆಲೋಚನೆಗಳು ನಮ್ಮನ್ನು ತಡೆಯುತ್ತವೆ, ಮುಂದುವರೆಯಲು ಬಿಡುವುದಿಲ್ಲ. ಇಂತಹ ಆಲೋಚನೆಗಳನ್ನು ಮೊದಲು ನಿಮೂ೯ಲನೆ ಮಾಡಬೇಕು. ನಾನು ಸ್ವಭಾವತ: ಕೋಪಿಷ್ಚವಾದ್ದರಿಂದ ನನ್ನ ಕೋಪವನ್ನು ನಿಯಂತ್ರಿಸುವುದು ಅಸಾಧ್ಯ. ಅಥವ ನನ್ನನ್ನು ಯಾವಾಗಲೂ ಬೇರೆಯವರು ಪ್ರಚೋದಿಸಿ ಕೋಪಗೊಳ್ಳುವಂತೆ ಮಾಡುತ್ತಾರೆ. ಆದ್ದರಿಂದ ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನಿಂದ ಕೋಪವನ್ನು ನಿಯಂತ್ರಿಸಲು ಅಸಾಧ್ಯವೆನ್ನುವ ನಂಬಿಕೆಯನ್ನು ಬದಲು ಮಾಡಲು ಯತ್ನಿಸಿ.
5. ಎಚ್ಚರಿಕೆಯ ಚಿಹ್ನೆಗಳನ್ನು (warning signs) ಗಮನಿಸಿ
ನಿಮ್ಮ ದೇಹ ಮತ್ತು ಮನಸ್ಸು ಬಹಳ ಸಲ ಕೆಲವು ಎಚ್ಚರಿಕೆಯ ಸೂಚನೆಗಳನ್ನು ನೀಡುತ್ತವೆ. ಇವುಗಳನ್ನು ಗಮನಿಸಿದರೆ, ವಿಪರೀತ ಕೋಪವನ್ನು ತಡೆಯಬಹುದು. ಉದಾ: ದೈಹಿಕ ಸೂಚನೆಗಳು - ಎದೆ ಬಡಿತ ಹೆಚ್ಚಾಗುವುದು, ವಿಪರೀತವಾಗಿ ಬೆವರುವುದು, ಉಸಿರು ಕಟ್ಟುವುದು, ಕೈಕಾಲು ನಡಗುವುದು ಇತ್ಯಾದಿ. ಮಾನಸಿಕ ಸೂಚನೆಗಳು - ಇರುಸುಮುರುಸು, ಕಿರಿಕಿರಿ, ಅಸಮಧಾನ, ಬೇರೆಯವರ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯುವುದು, ಏಕಾಗ್ರತೆಯ ಕೊರತೆ ಇತ್ಯಾದಿ. ಇಂತಹ ಸೂಚನೆಗಳನ್ನು ಗಮನಿಸಿದರೆ, ಮುಂದೆ ಬರುವ ಕೋಪವನ್ನು ನಿಯಂತ್ರಿಸಬಹುದು.
6. ಪಶ್ಚಾತ್ತಾಪವಿರಲಿ
ನೀವು ವಿಪರೀತವಾದ ಕೋಪದಲ್ಲಿ ಇದ್ದಾಗ ಬೇರೆಯವರ ಮೇಲೆ ಕೂಗಾಡಿರಬಹುದು, ಕೆಟ್ಟಪದಗಳನ್ನು ಬಳಸಿ ವಿಪರೀತವಾದ ನಿಂದನೆ, ದೌರ್ಜನ್ಯ ಮಾಡಬಹುದು. ಬಹಳ ಬೇಸರ , ನೋವನ್ನು ಉಂಟುಮಾಡಿರಬಹುದು. ಆದರೆ ನೀವು ಇವುಗಳ ಕುರಿತು ಶಾಂತವಾದ ನಂತರ ಪಶ್ಚಾತ್ತಾಪ ಪಡುತ್ತೀರಿ. ಇಂತಹ ಘಟನೆಗಳು ನಡೆದಾಗ ಪಶ್ಚಾತಾಪ ಇರಲಿ. ಮುಂದೆ ಹೀಗೆ ಮಾಡೋದಿಲ್ಲ ಎಂದು ದೃಢ ನಿರ್ಧಾರ ಮಾಡಿ.
ಈ ಅಮೂಲ್ಯ ಸಲಹೆ ಗಮನಿಸಿ
ಕೋಪ ಉಂಟಾದ ಸಂದರ್ಭದಲ್ಲಿ ನಿಮ್ಮ ವರ್ತನೆ ಕೋಪದ ಮೂಲಕ ವ್ಯಕ್ತವಾಗುತ್ತದೆ. ಈ ವರ್ತನೆ ಪದ, ಧ್ವನಿ, ದೇಹಭಾಷೆ, ಮುಖಭಾವಗಳ ಮೂಲಕ ಬಿರುಸಾಗಿ , ಕಠಿಣವಾಗಿ , ಅಹಿತಕರವಾಗಿ ಬದಲು ಮಾಡುತ್ತದೆ.
ಇವುಗಳನ್ನು ತಡೆಯಬೇಕಂದರೆ ಈ ಟಿಪ್ಸ್‌ಗಳನ್ನು ಪಾಲಿಸಿ
- ಜಾಗ ಬಿಡಿ: ತಕ್ಷಣವೇ ನೀವು ಪ್ರಸ್ತುತವಿರುವ ಆ ಸ್ಥಳವನ್ನು ಬಿಟ್ಟು ಪ್ರಶಾಂತವಾಗಿರುವ ಸ್ಥಳಕ್ಕೆ ತಲುಪಿ. ಕೋಪವನ್ನು ಮತ್ತಷ್ಟು ಕೆರಳಿಸದೆ ಇರುವ ಸ್ಥಳಕ್ಕೆ ಹೋಗಿ. ಇದರಿಂದ ಮನಸ್ಸು ಶಾಂತವಾಗಿ, ಹಗುರವಾಗುತ್ತದೆ. ಕ್ರಮೇಣ ಕೋಪವೂ ಕೂಡ ಇಳಿಯುತ್ತದೆ
- ನೀರು ಕುಡಿಯಿರಿ: ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯಿರಿ. ನೀರಿಗೆ ಮನಸ್ಸನ್ನು ಶಾಂತ ಮಾಡುವ ಶಕ್ತಿಯಿದೆ. ಕುಡಿದ ತಕ್ಷಣವೇ ಬದಲಾವಣೆಗಳನ್ನು ನೀವು ಕಾಣಬಹುದು
- ಉಸಿರಾಟದ ಮೇಲೆ ಗಮನಹರಿಸಿ: ಜೋರಾಗಿ ಮತ್ತು ಆಳವಾಗಿ ಉಸಿರನ್ನು ತೆಗೆದುಕೊಂಡು ಅಷ್ಟೇ ನಿಧಾನವಾಗಿ ಉಸಿರನ್ನು ಬಿಡಿ . 3 ಸಲವಾದರು ಮಾಡಿ.
- ಪ್ರಕೃತಿ: ಗಿಡ ಮರ ಹೆಚ್ಕಿರುವ ಸ್ಥಳದಲ್ಲಿ ಹೋಗಿ ಫ್ರೆಶ್ ಗಾಳಿ ಸೇವಿಸಿ ಮತ್ತು ಮನಸ್ಸು ಶಾಂತವಾಗುವವರೆಗು ಸ್ವಲ್ಪ ಸಮಯವನ್ನು ಪ್ರಕೃತಿಯ ಮಧ್ಯೆ ಕಳೆಯಿರಿ. ಒಂದು ಚಿಕ್ಕ ವಾಕಿಂಗ್ ಕೂಡ ಮಾಡಬಹುದು.
- ಚಟುವಟಿಕೆಗಳು: 1 ರಿಂದ 10 ರವರೆಗೆ ನಿಧಾನವಾಗಿ ಹೇಳಿ. ನಂತರ 10 ರಿಂದ 1 ರವರೆಗೆ ನಿಧಾನವಾಗಿ ಹೇಳಿ . ಒಂದು ಪೇಪರ್ ತೆಗೆದುಕೊಂಡು ಪೆನ್ನು ಅಥವ ಪೆನ್ಸಿಲ್‌ನಿಂದ ಸಮಾಧಾನವಾಗುವಷ್ಟು ಗೀಚಿ. ಬೇಡವಾದ ಪೇಪರ್ ಇದ್ದರೆ ಅವುಗಳನ್ನು ಪರಪರ ಎಂದು ಹರಿದು ಬಿಸಾಡಬಹುದು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.