ಮನದ ಮಾತು ಅಂಕಣ: ಮಾತಿನ ಮೇಲೆ ಹಿಡಿತ ಅಗತ್ಯ, ಆಡುವ ಪದಗಳ ಮೇಲೆ ಗಮನವಿರಲಿ- ಈ ಅಂಶಗಳನ್ನು ಗಮನಿಸಿ
ಮನದ ಮಾತು ಅಂಕಣ: ಇಂದಿನ ಮನದ ಮಾತು ಅಂಕಣದಲ್ಲಿ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರು ಮಾತಿನ ಮಹತ್ವ ತಿಳಿಸಿದ್ದಾರೆ. ಮಾತಿನ ಮೇಲೆ ಹಿಡಿತ ಪಡೆಯುವುದು ಹೇಗೆ? ಮಾತಿನ ಶಕ್ತಿಯೇನು ಎಂದು ತಿಳಿಸಿದ್ದಾರೆ.
ಮನದ ಮಾತು ಅಂಕಣ: ಆಡಿದ ಮಾತುಗಳನ್ನು ಅಳಿಸಲಾಗುವುದಿಲ್ಲ. ಕ್ಷಮೆ ಕೇಳಬಹುದು, ಆದರೆ ನಿಮ್ಮ ಬಳಸಿದ ಪದಗಳನ್ನು ಅಳಿಸಲು ಸಾಧ್ಯವಿಲ್ಲ. ನಿಮ್ಮ ಮಾತುಗಳಿಂದಾದ ನೋವು ಬೇಸರ ಅಚ್ಚ ಹಸಿರಿನಂತೆ ಉಳಿದು ಸಂಬಂಧಗಳೇ ಕಳಚಿ ಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ನೀವು ಮಾತನಾಡುವ ಮುನ್ನು 10 ಸಲ ಯೋಚಿಸಿ ಮಾತನಾಡಿ.
ಕೋಪ
ನಿರಾಸೆ, ದುಃಖ, ಅಸಹಾಯಕ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಕೋಪ ಬರುತ್ತದೆ. ಕೆಲವೊಮ್ಮೆ ನಮ್ಮ ಅಧಿಕಾರಕ್ಕೆ ಭಂಗ ಬಂದಾಗಲೂ ಕೋಪ ಬರುತ್ತದೆ. ಇಂತಹ ಸಮಯದಲ್ಲಿ ಮತ್ತೊಬ್ಬರನ್ನು ನಿಯಂತ್ರಿಸಲು ಕೆಳಮಟ್ಟದ ಪದಗಳನ್ನು ಬಳಸಿ ನಿಂದಿಸಬಹುದು. ಇದರಿಂದ ಆ ಕ್ಷಣದಲ್ಲಿ ಮನಸ್ಸಿಗೆ ಸಮಾಧಾನ ಸಿಗಬಹುದಾದರೂ ನಂತರ ಪಶ್ಚಾತ್ತಾಪ ಪಡುವುದು ನಾವೇ. ಆದ್ದರಿಂದ ಕೋಪ ಬಂದಾಗ, ಆದಷ್ಟು ಕೋಪವನ್ನು ನಿಯಂತ್ರಿಸಿ, ಬೇರೆಯ ರೀತಿಯಲ್ಲಿ ಅದನ್ನು ವ್ಯಕ್ತಪಡಿಸಿ.
ಕೋಪದ ತಾಪವನ್ನು ಅರಿತು ಜಾಗ ಖಾಲಿ ಮಾಡುವುದು ಅಥವ ಮೌನವಾಗಿರುವುದನ್ನು ಅಭ್ಯಾಸ ಮಾಡುವುದು ಉತ್ತಮ. ಮನಸ್ಸಿಗೆ ಬೇಸರವಾದಾಗ, ಕೋಪ ಬಂದಾಗ ನಮ್ಮ ಮಾತುಗಳು ಹಿತವಾಗಿರುವುದಿಲ್ಲ. ಕಾರಣ ಏನೇ ಇರಲಿ, ಕಠಿಣವಾದ ಕಹಿಯಾದ ಚುಚ್ಚು ಮಾತುಗಳು, ಅವಾಚ್ಯ ಶಬ್ಧಗಳು ಸಾಮಾನ್ಯವಾಗಿ ಉದ್ಭವಾಗಿಬಿಡುತ್ತದೆ. ಇದನ್ನು ತಡೆಯುವುದಕ್ಕೆ ಉಪಾಯವೇನೆಂದರೆ ಆ ಸಂದರ್ಭದಲ್ಲಿ ನಮ್ಮ ಮಾತಿನ ಮೇಲೆ ನಮಗಿರುವ ಪ್ರಜ್ಞೆ ಅಥವಾ ಅರಿವು. ಇದು ನಮ್ನ ಕೋಪವನ್ನು ನಿಯಂತ್ರಿಸಲು ನೆರವು ಮಾಡುವುದಲ್ಲದೇ, ಇದರಿಂದಾಗುವ ಪರಿಣಾಮವನ್ನು ಸಹ ತಡೆಗಟ್ಚುತ್ತದೆ. ಕೋಪವನ್ನು ನಿಯಂತ್ರಿಸಿದರೆ ಮಾತನ್ನು ಸಹ ನಿಯಂತ್ರಿಸಬಹುದು.
ಮೌನದ ಶಕ್ತಿ
“ಮಾತು ಬೆಳ್ಳಿ, ಮೌನ ಬಂಗಾರ " ಎಂಬ ಗಾದೆ ಮಾತಿಗಿಂತ ಮೌನದ ಮೌಲ್ಯವನ್ನು ಸಾರುತ್ತದೆ. ಮಾತನಾಡುವ ಅಗತ್ಯವಿಲ್ಲದಿದ್ದರೆ ಮಾತನಾಡಬೇಡಿ. ಅನಾವಶ್ಯಕವಾಗಿ ಮಾತಾನಾಡುವುದು ವ್ಯರ್ಥ. ಸಮಯವೂ ಹಾಳಾಗುತ್ತದೆ. ದಿನದಲ್ಲಿ ಸ್ವಲ್ಪ ಹೊತ್ತಾದರೂ ಮೌನವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರಶಾಂತ ವಾತಾವರಣದಲ್ಲಿ ಇರಲು ಯತ್ನಿಸಿ. ಮೌನದಲ್ಲಿ ಹೋರಾಡಿ, ಮೌನದಲ್ಲಿ ಗುರಿಯನ್ನು ಸಾಧಿಸಿ. ಸದಾ ಹರಟೆ ಹೊಡೆದುಕೊಂಡು ಮನಸ್ತಾಪಗಳಿಗೆ ಗುರಿಯಾಗಬೇಡಿ. ಕೋಪ, ದುಃಖ, ನಿರಾಶೆ, ಅಸೂಯೇ, ಆತಂಕ ಉದ್ವೇಗ ಸಂದರ್ಭಗಳಲ್ಲಿ ಆದಷ್ಟು ಮೌನದಿಂದ ಇಂಥ ಸಂದರ್ಭ ಕೆಟ್ಟ ಪರಿಣಾಮವನ್ನು ತಡೆಯಿರಿ. ಸ್ವಲ್ಪ ಕಾಲ ಕಳೆದ ಮೇಲೆ ಪ್ರತಿಕ್ರಯಿಸಿ ಮಾತಾನಾಡಿ. ಮೌನ ನಮ್ಮ ದೈನಂದಿನ ಕೆಲಸಗಳಿಗೆ ಮಾತ್ರವಲ್ಲ ಮಾನಸಿಕ ಮತ್ತು ಬೌದ್ಧಿಕ ಅಭಿವೃದ್ದಿಗೂ ನೆರವಾಗುತ್ತದೆ. ಮೌನದಲ್ಲಿ ಶಕ್ತಿಯಿರುತ್ತದೆ, ಸಾಧಕರಲ್ಲಿ ಮಹತ್ವವಾದ ಗುಣ ಮೌನವೂ ಹೌದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನೀವು ಆಯ್ಕೆ ಮಾಡುವ ಪದಗಳ ಮೇಲೆ ಗಮನವಿರಲಿ.
ಅಪರಾಧ
ಬೇರೆಯವರು ತಪ್ಪು ಮಾಡಿದಾಗ ಅತಿಯಾಗಿ ನಿಂದಿಸುವುದು, ನಿಂದನಾತ್ಮಕ ಮಾತುಗಳನ್ನು ಆಡುವುದು, ಆಡಿಕೊಳ್ಳುವುದು ಮಾಡಿದಾಗ ಅವರಿಗೆ ಮನಸ್ಸಿಗೆ ವಿಪರೀತ ನೋವುಂಟಾಗಬಹುದು. ಅವರ ತಪ್ಪನ್ನು ಎತ್ತಿ ಹಿಡಿಯುವುದು ಅಥವಾ ತಿದ್ದಲೂ ಸಹ ಕಠಿಣವಾಗಿ ಮಾತನಾಡಬಹುದು.
ಅಸೂಯೆ
ಕೆಲವು ಸಲ ಮತ್ತೊಬ್ಬರ ಗೆಲುವು, ಏಳಿಗೆ, ಸಾಧನೆ ನಿಮಗೆ ಅಸೂಯೆ ಉಂಟುಮಾಡಬಹುದು. ಬೇರೆಯವರ ಗಳಿಕೆ ನಮ್ಮ ಬಳಿ ಇಲ್ಲದೆ ಹೋದಾಗಲು ನಿಮಗೆ ಅಸೂಯೆ ಆಗಬಹುದು. ಇಂತಹ ಸಂದಭ೯ದಲ್ಲಿ ಅಸೂಯೇ ಆಗುವುದು ಸಹಜ. ಈ ಅಸೂಯೆಯನ್ನು ಅಸಮಾಧಾನ, ಮೊದಲಿಕೆ ಅಥವ ಕುಹಕದ ಮಾತಿನ ಮೂಲಕ ಹೊರಹಾಕಿ ಆ ವ್ಯಕ್ತಿಗೆ ನೋವನ್ನುಂಟು ಮಾಡುವುದು.
ಹೀಗೆ ನಾನ ಕಾರಣಗಳಿಂದಾಗಿ ನಮಗೆೇ ಅರಿವಿಲ್ಲದೆ ಇನ್ನೆೊಬ್ಬರಿಗೆ ನೋವಾಗುವಂತೆ ಮಾತಾನಾಡಬಹುದು. ನಂತರ ಪಶ್ಚಾತ್ತಾಪದಿಂದ ಕ್ಷಮೆ ಕೇಳಿದರೂ ನಮ್ಮ ಆಡಿದ ಮಾತಿನಿಂದಾದ ಗಾಯವನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಕೆಲವು ಸಲ ಕಹಿ ಮಾತಿನಿಂದಾಗಿ ಶಾಶ್ವತವಾಗಿ ಸಂಬಧಗಳು ಕಳಚುತ್ತವೆ.
ಹಾಗೆಂದು ಬೆಣ್ಣೆಯ ಮಾತುಗಳನ್ನಾಡಿ ಮೋಸವನ್ನು ಮಾಡಬಾರದು. ಹಿತವಾದ, ನಯವಾದ, ನಿಯತ್ತಿನಿಂದ ಕೂಡಿದ ಮಾತುಗಳನ್ನಾಡಿ ಕುಗ್ಗಿದ ವ್ಯಕ್ತಿಯನ್ನೂ ಕೂಡ ಹುಮಸ್ಸು ಮತ್ತು ಸಂತೋಷದಿಂದ ಮೇಲ್ಲೆಬ್ಬಿಸುವಂತೆ ಇರಬೇಕು. ಕನಿಷ್ಠ ಪಕ್ಷ ನಮ್ಮ ಮಾತಿನಿಂದ ಬೇರೆಯವರಿಗೆ ಪ್ರಯೋಜನವಾಗದಿದ್ದರೂ ಸರಿ, ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.