Value Education: ಮೌಲ್ಯ ಅಳವಡಿಸಿಕೊಂಡ ಪೋಷಕರ ಬದುಕು ಮಕ್ಕಳಿಗೆ ದೊಡ್ಡ ಆಸ್ತಿ, ಕೊಡುಗೆ ಆಗಬಹುದು -ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Value Education: ಮೌಲ್ಯ ಅಳವಡಿಸಿಕೊಂಡ ಪೋಷಕರ ಬದುಕು ಮಕ್ಕಳಿಗೆ ದೊಡ್ಡ ಆಸ್ತಿ, ಕೊಡುಗೆ ಆಗಬಹುದು -ಮನದ ಮಾತು

Value Education: ಮೌಲ್ಯ ಅಳವಡಿಸಿಕೊಂಡ ಪೋಷಕರ ಬದುಕು ಮಕ್ಕಳಿಗೆ ದೊಡ್ಡ ಆಸ್ತಿ, ಕೊಡುಗೆ ಆಗಬಹುದು -ಮನದ ಮಾತು

ಭವ್ಯಾ ವಿಶ್ವನಾಥ್: ಮೌಲ್ಯ ಶಿಕ್ಷಣವು ಬದುಕುವುದನ್ನು ಕಲಿಸುತ್ತದೆ. ಬದುಕಿನ ಏರಿಳಿತಗಳನ್ನು ಉತ್ತಮವಾಗಿ ಎದುರಿಸುವ ಕೌಶಲಗಳನ್ನು ಕಲಿಸುವುದಲ್ಲದೇ ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಬುದ್ಧಿ ಮತ್ತು ವ್ಯಕ್ತಿತ್ವ ವಿಕಾಸವೂ ಆಗುತ್ತದೆ.

ಮನದ ಮಾತು: ಭವ್ಯಾ ವಿಶ್ವನಾಥ್‌
ಮನದ ಮಾತು: ಭವ್ಯಾ ವಿಶ್ವನಾಥ್‌

ಮೌಲ್ಯ ಶಿಕ್ಷಣದಲ್ಲಿ ಪೋಷಕರ ಪಾತ್ರ ಮಹತ್ವಪೂರ್ಣವಾದುದು. 'ಯಾವ ಶಿಕ್ಷಣದಿಂದ ಮನಸ್ಸಿನ ಶಕ್ತಿ ಹೆಚ್ಚುತ್ತದೆಯೋ, ವ್ಯಕ್ತಿತ್ವ ಮತ್ತು ಬುದ್ಧಿ ವಿಕಾಸಗೊಳ್ಳುತ್ತದೆಯೋ, ಮನುಷ್ಯನಿಗೆ ಸ್ವಾವಲಂಬಿಯಾಗುವ ಸಾಮರ್ಥ್ಯ ಬರುತ್ತದೋ ಅಂಥ ಶಿಕ್ಷಣ ಬೇಕು' ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಮಕ್ಕಳಿಗೆ ಮೌಲ್ಯಗಳು ಶಾಲೆಯಲ್ಲಿ ಕಲಿಯುವ ವಿದ್ಯಾಭ್ಯಾಸದಷ್ಟೇ ಮಹತ್ವವಾದುದು. ಮೌಲ್ಯ ಶಿಕ್ಷಣವು ಬದುಕುವುದನ್ನು ಕಲಿಸುತ್ತದೆ. ಬದುಕಿನ ಏರಿಳಿತಗಳನ್ನು ಉತ್ತಮವಾಗಿ ಎದುರಿಸುವ ಕೌಶಲಗಳನ್ನು ಕಲಿಸುವುದಲ್ಲದೇ ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಬುದ್ಧಿ ಮತ್ತು ವ್ಯಕ್ತಿತ್ವ ವಿಕಾಸವೂ ಆಗುತ್ತದೆ.

ಮೌಲ್ಯಗಳು ಎಂದರೇನು? ನನ್ನ ಮೌಲ್ಯಗಳು ಏನು?

ನಿಮ್ಮ ಬದುಕಿನಲ್ಲಿ ನಿಮಗೆ ಏನು ಮುಖ್ಯ? ಸಂಬಂಧವೋ? ಹಣವೋ? ಸಂತೋಷವೋ? ಅನುಕಂಪವೋ? ಪ್ರೀತಿಯೋ? ಆದರ್ಶವೋ? ಸಂಯಮವೋ? ವಿವೇಕವೋ? ಹೀಗೆ ನಾನಾ ರೀತಿಯ ಮೌಲ್ಯಗಳು ಪ್ರತಿಯೊಬ್ಬರಿಗೂ ಇರುತ್ತವೆ. ನೀವು ಯಾರು? ನೀವು ಎಂಥ ವ್ಯಕ್ತಿ? ನಿಮ್ಮ ಜೀವನದಲ್ಲಿ ನೀವೇನು ಬಯಸುತ್ತೀರಿ ಎನ್ನುವುದನ್ನು ನಿಮ್ಮ ಮೌಲ್ಯಗಳು ತೋರಿಸಿಕೊಡುತ್ತವೆ.

ನಿಮ್ಮನಿಮ್ಮ ಮೌಲ್ಯಗಳಿಗೆ ತಕ್ಕ ಹಾಗೆ ನೀವು ಬದುಕಿನಲ್ಲಿ ವ್ಯವಹರಿಸುತ್ತೀರಿ. ನಿಮ್ಮ ಅಂತರಾಳದ ತಳಹದಿ, ನಿಮ್ಮ ಅಸ್ತಿತ್ವದ, ಮಹತ್ವದ ಒಂದು ಭಾಗವಾಗಿರುತ್ತದೆ. ನಿಮ್ಮ ಮೌಲ್ಯಗಳು ನಿಮ್ಮ ನಂಬಿಕೆಗಳು, ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳನ್ನು ನಿರ್ಣಯಿಸುತ್ತವೆ. ಇವುಗಳೆಲ್ಲ ನಿಮ್ಮ ವ್ಯಕ್ತಿತ್ವದ ತಳಹದಿಯಲ್ಲಿರುವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.

ನಾವು ಗಮನಿಸಬಹುದಾದ ಕೆಲವು ಪ್ರಮುಖ ಮೌಲ್ಯಗಳು

1) ಪ್ರೀತಿ, ನಂಬಿಕೆ, ವಿಶ್ವಾಸ
2) ದಯೆ, ಕರುಣೆ, ಅನುಕಂಪ, ಸಹಾನುಭೂತಿ
3) ಸತ್ಯ, ನಿಷ್ಠೆ, ನಿಯತ್ತು (ಪ್ರಾಮಾಣಿಕತೆ)
4) ಹಣ, ಅಧಿಕಾರ
5) ಸಂಯಮ, ಗೌರವ, ಸ್ವಾಭಿಮಾನ
6) ಆದರ್ಶ, ಶಿಸ್ತು, ಶ್ರಮ
7) ಸಂತೋಷ, ನೆಮ್ಮದಿ, ಶಾಂತಿ, ಮನರಂಜನೆ
8) ಜ್ಞಾನ, ಬುದ್ಧಿವಂತಿಕೆ, ವಿವೇಕ, ಲೋಕಜ್ಞಾನ
9) ಹೊಣೆಗಾರಿಕೆ, ಜವಾಬ್ಧಾರಿ, ನ್ಯಾಯ

ಪ್ರತಿ ವ್ಯಕ್ತಿಗೂ ಬೇರೆಬೇರೆ ಮೌಲ್ಯಗಳು ಇರುತ್ತವೆ. ಅವನ ಅಥವಾ ಅವಳ ಬದುಕಿನ ನಿರ್ಧಾರಗಳು, ಆಯ್ಕೆಗಳು ಮತ್ತು ದೃಷ್ಟಿಕೋನಗಳು ಮೌಲ್ಯಗಳ ಮೇಲೆ ಆಧರಿತವಾಗಿರುತ್ತದೆ. ಮೌಲ್ಯಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರಬಹುದು ಅಥವಾ ಪ್ರಭಾವಿತವಾಗಿರಬಹುದು.

ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದು ಹೇಗೆ?

ಪೋಷಕರೇ ಮಕ್ಕಳಿಗೆ ಮಾದರಿ ಮತ್ತು ಉದಾಹರಣೆ. ಅರಳುತ್ತಿರುವ ಮಕ್ಕಳಿಗೆ ಪೋಷಕರೇ ಮೊದಲ ಗುರು. ಮಕ್ಕಳು ನಾವು ಹೇಳಿದಂತೆ ಮಾಡದಿರಬಹುದು. ಆದರೆ ನಾವು ಮಾಡಿದಂತೆ ಖಂಡಿತ ಮಾಡುತ್ತವೆ. ಸಹಜವಾಗಿಯೇ ಮಗುವು ನಿಮ್ಮ ನಡವಳಿಕೆ, ಅಭ್ಯಾಸಗಳನ್ನು ಅನುಸರಿಸುತ್ತದೆ. ಆದ್ದರಿಂದ ಮೌಲ್ಯ ಶಿಕ್ಷಣವೆನ್ನುವುದು ಮಕ್ಕಳು ವಿದ್ಯಾರ್ಥಿಯಾಗುವ ಹಂತಕ್ಕೆ ಬರುವ ಮೊದಲೇ ಮನೆಯಿಂದಲೇ ಆರಂಭವಾಗಬಹುದು. ಪೋಷಕರು ಈ ವಿಚಾರವನ್ನು ಗಮನಿಸಬೇಕು. ಪೋಷಕರು ತಮ್ಮ ಮಕ್ಕಳಲ್ಲಿ ಯಾವ ಮೌಲ್ಯವನ್ನು ನೋಡುವುದಕ್ಕೆ ಇಚ್ಛಿಸುತ್ತಾರೋ ಅದನ್ನು ತಾವೇ ಪಾಲಿಸಿ ಮಕ್ಕಳಿಗೆ ತೋರಿಸಬೇಕು.

ಉದಾ: ಒಂದು ಪಕ್ಷ ಪೋಷಕರ ಮೌಲ್ಯವು ದಯೆ, ಕರುಣೆಯಾಗಿದ್ದು ತಮ್ಮ ಮಗುವೂ ಸಹ ಈ ಮೌಲ್ಯವನ್ನು ಹೊಂದಿರಬೇಕು ಎಂದು ಬಯಸುವುದಾದರೆ ತಾವು ಪ್ರತಿದಿನ ಮಗುವಿನೊಂದಿಗೆ ಮತ್ತು ಸುತ್ತಮುತ್ತಲಿರುವ ಜನ, ಪ್ರಾಣಿ ಪಕ್ಷಿಗಳ ಬಳಿ ಕರುಣೆಯಿಂದ ವ್ಯವಹರಿಸಬೇಕು. ಆಗ ನೀವೇ ನಿಮ್ಮ ಮಗುವಿಗೆ ಮಾದರಿಯಾಗುತ್ತೀರಿ. ನಿಮ್ಮ ಮೌಲ್ಯವನ್ನು ನಿಮ್ಮ ಮಗುವು ಸಹ ಅನುಸರಿಸುತ್ತದೆ.

ಹಾಗೆಯೇ, ತಂದೆ ತಾಯಂದಿರು ತಮ್ಮ ಮಗುವು ಬುದ್ಧಿವಂತನಾಗಿ, ಜ್ಞಾನವನ್ನು ಹೆಚ್ಚು ಸಂಪಾದಿಸಬೇಕು ಎಂದಾದರೆ ಮೊದಲು ಪೋಷಕರು ಪುಸ್ತಕ ಓದುವುದನ್ನು ಅಭ್ಯಾಸ ಮಾಡಬೇಕು, ಮನೆಯಲ್ಲಿ ಸಾಕಷ್ಟು ಪುಸ್ತಕ ಸಂಗ್ರಹಣೆ ಮಾಡಬೇಕು, ತಮ್ಮ ಜ್ಞಾನ ಹೆಚ್ಚಾಗುವ ವಿಚಾರಗಳನ್ನು ಸಾಕಷ್ಟು ಚಚಿ೯ಸಬೇಕು. ಜ್ಞಾನದ ವಿಚಾರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಿವುದರಿಂದ ಮಗುವು ವಿದ್ಯೆ, ಜ್ಞಾನದ ಕಡೆ ಹೆಚ್ಚು ಪ್ರಭಾವಿತನಾಗುವ ಸಾಧ್ಯತೆಯಿರುತ್ತದೆ.

ಹಾಗೆಯೇ, ನಿಮ್ಮ ಬದುಕಿನಲ್ಲಿ ಶಿಸ್ತು, ನಿಯತ್ತು (ಪ್ರಾಮಾಣಿಕತೆ), ನಿಯಮ, ನಿಷ್ಠೆಗಳು ಪ್ರಮುಖ ಆದ್ಯತೆಯಾಗಿದ್ದರೆ ಇದು ನಿಮ್ಮ ಮೊದಲ ಮೌಲ್ಯವಾಗಿರುತ್ತದೆ. ನಿಮ್ಮ ಮಕ್ಕಳು ಇದ್ದನೇ ಪಾಲಿಸಬೇಕೆಂದರೆ ನೀವು ಶಿಸ್ತು ಮತ್ತು ನಿಷ್ಠೆಯಿಂದ ನಡೆದುಕೊಳ್ಳಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಈ ವಿಷಯದಲ್ಲಿ ಮಾದರಿಯಾದರೆ ಮಕ್ಕಳು ಸಹ ಇಂಥ ಮೌಲ್ಯಗಳನ್ನು ಪಾಲಿಸುವುದು ರೂಢಿಸಿಕೊಳ್ಳುತ್ತಾರೆ.

ಜೀವನದಲ್ಲಿ ನಿಮಗೆ ತಾಳ್ಮೆ, ಸಂಯಮ ಬಹಳ ಮುಖ್ಯವೆನಿಸಿದರೆ ನೀವು ಪ್ರತಿಯೊಂದು ಸನ್ನಿವೇಶವನ್ನೂ ಎಷ್ಟೇ ಕಠಿಣವಾದರೂ ಸರಿ ಸಂಯಮದಿಂದ ಎದುರಿಸಿದರೆ ಮಕ್ಕಳು ಸಹ ನಿಮ್ಮನ್ನು ಅನುಸರಿಸುತ್ತಾರೆ. ಸಂಯಮವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಂಯಮವು ಒಂದು ಪ್ರಬಲವಾದ ಆಯುಧವೆಂದು ಮಕ್ಕಳಿಗೆ ತೋರಿಸಿಕೊಡಿ. ಅಪೇಕ್ಷೆ ಪಟ್ಚಿದ್ದನ್ನು ತಕ್ಷಣವೇ ದಿಢೀರ್ ಎಂದು ಬಯಸಿದ್ದೆಲ್ಲ ಸಿಕ್ಕಿಬಿಡಬೇಕೆಂದುಕೊಳ್ಳುವ ಮಕ್ಕಳಿಗೆ ಕಾಯುವುದನ್ನು ಹೇಳಿಕೊಳ್ಳುವುದು ಬಹಳ ಮುಖ್ಯ. ಸಂಯಮವೆನ್ನುವ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯವಶ್ಯಕ.

ಮೌಲ್ಯಗಳನ್ನು ಮಕ್ಕಳೇ ಬೆಳೆಸಿಕೊಳ್ಳಬಹುದು

ಮನೆ, ಶಾಲೆ ಮತ್ತು ಮಾಧ್ಯಮ, ಸಿನಿಮಾ ಮತ್ತು ಸಮಾಜದಿಂದ ಮಕ್ಕಳು ಸಾಕಷ್ಟು ಪ್ರಭಾವಿತರಾಗುತ್ತಾರೆ. ಮನೆ, ಶಾಲೆ ಮತ್ತು ಸಮಾಜದಲ್ಲಿರುವ ವಾತಾವರಣ ಹಾಗೂ ಸಿನಿಮಾದಂಥ ಸಮೂಹ ಮಾಧ್ಯಮಗಳಲ್ಲಿ ಕಂಡುಬರುವ ವಿಷಯಗಳು (content) ಮಕ್ಕಳ ವ್ಯಕ್ತಿತ್ವ, ಬುದ್ಧಿ, ಮನಸ್ಸು, ನಡವಳಿಕೆಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತವೆ. ಈ ಪ್ರಭಾವಗಳು ಪ್ರಯೋಜನಕಾರಿ ಮತ್ತು ಆರೋಗ್ಯಕರವಾಗಿದ್ದರೆ ಮಕ್ಕಳು ಸರಿಯಾದ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಮಕ್ಕಳಿಗೆ ಧೃಢವಾದ ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುವಂತಹ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಕತ೯ವ್ಯ.

ಹಾಗಾಗಿ ಮೌಲ್ಯಗಳು ನೀವು ನಿಮ್ಮ ಮಕ್ಕಳಿಗೆ ಕೊಡುವ ಉತ್ತಮ ಬಹುಮಾನ ಮತ್ತು ಆಸ್ತಿಯಾಗಬಹುದು.

Whats_app_banner