ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲಿನ ರಾಸಾಯನಿಕ ವಿಶ್ಲೇಷಣೆ: ಪೋಷಕಾಂಶಗಳ ಭಂಡಾರ ಹಾಲಿನಲ್ಲಿ ಏನೆಲ್ಲಾ ಇದೆ? ಹಾಲೇಕೆ ಮೊಸರಾಗುತ್ತೆ -ಜ್ಞಾನ ವಿಜ್ಞಾನ

ಹಾಲಿನ ರಾಸಾಯನಿಕ ವಿಶ್ಲೇಷಣೆ: ಪೋಷಕಾಂಶಗಳ ಭಂಡಾರ ಹಾಲಿನಲ್ಲಿ ಏನೆಲ್ಲಾ ಇದೆ? ಹಾಲೇಕೆ ಮೊಸರಾಗುತ್ತೆ -ಜ್ಞಾನ ವಿಜ್ಞಾನ

ಎಚ್‌.ಎ.ಪುರುಷೋತ್ತಮ ರಾವ್ ಬರಹ: ನಾವೆಲ್ಲರೂ ಪ್ರತಿದಿನ ಸೇವಿಸುವ ಹಾಲಿನಲ್ಲಿ ಏನೆಲ್ಲಾ ಇದೆ? ಹಾಲೇಕೆ ಬಿಳಿ ಬಣ್ಣದಲ್ಲಿಯೇ ಇರುತ್ತೆ? ಹಾಲಿನಲ್ಲಿರುವ ರಾಸಾಯನಿಕ ಅಂಶಗಳೇನು? ಹಾಲಿನಲ್ಲಿರುವ ಸೂಕ್ಷ್ಮಜೀವಿಗಳು ಯಾವುವು? -ಈ ಎಲ್ಲ ಪ್ರಶ್ನೆಗಳಿಗೆ ವೈಜ್ಞಾನಿಕ ತಳಹದಿಯ ಉತ್ತರ ಇಲ್ಲಿದೆ.

ಹಾಲಿನ ರಾಸಾಯನಿಕ ವಿಶ್ಲೇಷಣೆ: ಪೋಷಕಾಂಶಗಳ ಭಂಡಾರ ಹಾಲಿನಲ್ಲಿ ಏನಿದೆ? ಹಾಲೇಕೆ ಮೊಸರಾಗುತ್ತೆ? -ಜ್ಞಾನ ವಿಜ್ಞಾನ ಅಂಕಣ
ಹಾಲಿನ ರಾಸಾಯನಿಕ ವಿಶ್ಲೇಷಣೆ: ಪೋಷಕಾಂಶಗಳ ಭಂಡಾರ ಹಾಲಿನಲ್ಲಿ ಏನಿದೆ? ಹಾಲೇಕೆ ಮೊಸರಾಗುತ್ತೆ? -ಜ್ಞಾನ ವಿಜ್ಞಾನ ಅಂಕಣ

ಹಾಲು ಪ್ರಕೃತಿಯಲ್ಲಿ ದೊರಕುವ ಉತ್ಕೃಷ್ಟ ಆಹಾರ. ಎಲ್ಲಾ ಸಸ್ತನಿಗಳಲ್ಲಿ ಹುಟ್ಟಿದ ಮಕ್ಕಳ ಮೊದಲ ಅತ್ಯಗತ್ಯ ದ್ರವಾಹಾರ. ಎಳೆಯ ಪ್ರಾಣಿಗಳಿಗಾಗಿ ಸೃಷ್ಟಿಯಾಗಿರುವ ಈ ಹಾಲಿನಲ್ಲಿ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ, ರೋಗ ಸುಧಾರಣೆಗೆ, ಸ್ವಶಕ್ತಿವರ್ದನೆಗೆ ಬೇಕಾದ ಎಲ್ಲಾ ಪೂರಕ ಅಂಶಗಳೂ ಇರುವುದರಿಂದ ಇದನ್ನು ಪೋಷಕಾಂಶಗಳ ಭಂಡಾರ (ನ್ಯೂಟ್ರಿಷನ್ ಬ್ಯಾಂಕ್) ಎಂದು ಕರೆದಿರುವುದು ಅತಿಶಯೋಕ್ತಿಯೇನಲ್ಲ

ಸಸ್ತನಿಗಳಲ್ಲಿ ಹಾಲನ್ನು ಉತ್ಪಾದಿಸುವ ನ್ಯೂಮರಿ ಗ್ರಂಥಿಗಳಿವೆ. ಇವುಗಳಿಂದ ಹಾಲು ಉತ್ಪಾದಿಸಲ್ಪಡುತ್ತದೆ. ಹಸುವಿನಲ್ಲಿ ರಕ್ತನಾಳಗಳು ಕರಗಿರುವ ಆಹಾರವನ್ನು ಒಳಗೊಂಡ ರಕ್ತವನ್ನು ಈ ಗ್ರಂಥಿಗಳಿಗೆ ಒದಗಿಸುತ್ತವೆ. ಈ ಗ್ರಂಥಿಗಳು ಹಸು ಕರುವನ್ನು ಹಾಕುವ ಸ್ವಲ್ಪ ಸಮಯದ ಮೊದಲು ಕಾರ್ಯಾಚರಣೆ ಆರಂಭಿಸಿ ಈ ಹಾಲನ್ನು ಉತ್ಪಾದಿಸುತ್ತವೆ. ನಂತರ ಸ್ತನಗಳಲ್ಲಿನ (ಕೆಚ್ಚಲು) ಅಸಂಖ್ಯ ಜೀವಕೋಶಗಳು ಈ ಹಾಲನ್ನು ನಿರ್ದಿಷ್ಟ ಅವಧಿಯವರೆಗೆ ಉತ್ಪಾದಿಸುತ್ತಲಿರುತ್ತದೆ.

ರಾಸಾಯನಿಕವಾಗಿ ಹಾಲು ಹಾಲಿನ ಸಕ್ಕರೆಯೆನಿಸಿಕೊಂಡಿದೆ. ಅಂದರೆ ನೀರಿನ ದ್ರಾವಣ, ಸಕ್ಕರೆ, ಖನಿಜಗಳು, ಕೊಬ್ಬು, ಪ್ರೊಟೀನ್ ಗಳ ಮಿಶ್ರಣ. ಹಸುವಿನ ಹಾಲಿನಲ್ಲಿ ಶೇಕಡಾ 87ರಷ್ಟು ನೀರು, ಶೇ 3.35ರಷ್ಟು ಪ್ರೊಟೀನು, ಶೇ 4.9ರಷ್ಟು ಶರ್ಕರ ಪಿಷ್ಟ, ಶೇ 4ರಷ್ಟು ಮೇದಸ್ಸು, ಶೇ 0.75ರಷ್ಟು ಖನಿಜಗಳಿವೆ. ಹಸು, ಎಮ್ಮೆ, ಆಡು, ಮಾನವ ಇವರುಗಳಲ್ಲಿನ ಈ ಪ್ರಮಾಣದಲ್ಲಿ ಸ್ವಲ್ಪ ಬದಲಾವಣೆಗಳಿರುತ್ತವೆ. ಪ್ರೊಟೀನುಗಳು ಅಮೀನೋ ಆಮ್ಲಗಳಿಂದ ಆಗಿವೆ. ಇವುಗಳಲ್ಲಿ 3 ಬಗೆಯ ಪ್ರೋಟೀನುಗಳು ಮುಖ್ಯವೆನಿಸಿವೆ. ಅವೇ ಗ್ಯಾಬ್ಯುಲಿನ್, ಆಲ್ಬುಮಿನ್ ಮತ್ತು ಕೇಸಿನ್‌ಗಳು. ಕೇಸಿನ್‌ನಿಂದಾಗಿ ಹಾಲು ಬಿಳಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಲಿನಲ್ಲಿರುವ ಕೊಬ್ಬಿಗೆ ವಾಣಿಜ್ಯ ಮೌಲ್ಯ

ಹಾಲಿನಲ್ಲಿರುವ ಕೊಬ್ಬಿನ ಅಂಶ ವ್ಯಾಪಾರೀ ದೃಷ್ಟಿಯಿಂದ ಅತ್ಯಗತ್ಯ. ಇದೇ ಕೆನೆ, ಬೆಣ್ಣೆಯ ಮೂಲ, ಹಾಲಿನಲ್ಲಿ ಕೊಬ್ಬಿನ ಆಂಶವು ಕೋಟ್ಯಾಂತರ ಸೂಕ್ಷ್ಮ ದುಂಡು ಹನಿಗಳ ರೂಪದಲ್ಲಿದ್ದು ಪ್ರತಿಹನಿಯೂ ತನ್ನದೇ ಆದ ಪದರದಿಂದ ಆವರಿಸಲ್ಪಟ್ಟಿರುತ್ತದೆ. ಹಾಲನ್ನು ಸ್ವಲ್ಪ ಕಾಲ ಅಲುಗಾಡಿಸದೆ ಇಟ್ಟಾಗ ಈ ಕೊಬ್ಬಿನ ಹನಿಗಳು ಹಾಲಿನ ಮೇಲ್ಬಾಗದಲ್ಲಿ ಸಂಗ್ರಹಗೊಂಡು ದಪ್ಪವಾದ ಕೆನೆ ಉಂಟಾಗಲು ಕಾರಣವಾಗುತ್ತವೆ. ಕಾಯಿಸಿದ ನಂತರವೂ ಇದೇ ಸ್ಥಿತಿ ಉಂಟಾಗುತ್ತದೆ.

ಹಾಲನ್ನು ಕಾಯಿಸಿದಾಗ (ಪಾಶ್ಚರೀಕರಣ) ಗ್ಲಾಬ್ಸುಲಿನ್‌ನಲ್ಲಿ ಗಂಧಕದ ಅಂಶವನ್ನೊಳಗೊಂಡ ಸಿಸ್ಟೆಯಿನ್ ಎಂಬ ಅಮೀನೋ ಆಮ್ಲ ವಿಭಜನೆಗೊಂಡು ಜಲಜನಕದ ಸಲ್‌ಫೈಡ್ ಬಿಡುಗಡೆಯಾಗುತ್ತದೆ. ಆದ್ದರಿಂದ ಕಾದ ಹಾಲಿನಿಂದ ವಿಶೇಷ ವಾಸನೆ ಹೊರ ಸೂಸುತ್ತದೆ. ಲ್ಯಾಕ್ಟೋಸ್ ಎಂಬ ಒಂದು ರೀತಿಯ ಸಕ್ಕರೆಯು ಹಾಲಿನಲ್ಲಿ ಕಂಡುಬರುತ್ತದೆ. ಇದು ಹಾಲನ್ನು ಬಿಟ್ಟರೆ ಬೇರಾವುದೇ ಆಹಾರ ವಸ್ತುಗಳಲ್ಲೂ ಕಂಡು ಬರುವುದಿಲ್ಲ. ಇನ್ನೂ ವಿಶಿಷ್ಟವೆಂದರೆ ಹಾಲನ್ನು ಕೊಡುವ ಪ್ರಾಣಿಯ ರಕ್ತದಲ್ಲೂ ಸಹ ಈ ಅಂಶವಿಲ್ಲ. ಈ ಸಕ್ಕರೆ ಕಬ್ಬಿನ ಸಿಹಿಗಿಂತ ಐದುಪಟ್ಟು ಕಡಿಮೆಯಾದ್ದರಿಂದ ಹಾಲಿನ ಸಕ್ಕರೆ ಸ್ವಲ್ಪ ಸಪ್ಪೆಯೆನಿಸುತ್ತದೆ.

ಹಾಲಿನಲ್ಲಿರುವ ಸ್ಟ್ರೆಪ್ಟೋಕಾಕಸ್ ಲ್ಯಾಕ್ಟಿಸ್ ಎಂಬ ಬ್ಯಾಕ್ಟೀರಿಯಾಗಳು ಹಾಲಿನ ಸಕ್ಕರೆಯನ್ನು ಸುಲಭವಾಗಿ ವಿಭಜಿಸುತ್ತದೆ. ಆಗ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಹಾಲನ್ನು ಹುಳಿ ಮಾಡುತ್ತದೆ. ಕೆಲವೊಮ್ಮೆ ಹಾಲು ಬಿಸಿ ಮಾಡಿದಾಗ ಒಡೆಯುತ್ತದೆ. ಅದಕ್ಕೂ ಈ ಬ್ಯಾಕ್ಟೀರಿಯಾಗಳೇ ಕಾರಣ. ಆದ್ದರಿಂದಲೇ ಹಾಲನ್ನು ಚೆನ್ನಾಗಿ ಕಾಯಿಸಿ ಈ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬೇಕು.

ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧ

ನಮ್ಮ ಎಲುಬು ಮತ್ತು ಹಲ್ಲುಗಳ ಬೆಳವಣಿಗೆಗೆ ಅತ್ಯಗತ್ಯವಾದ ಕ್ಯಾಲ್ಸಿಯಂ ರಂಜಕಗಳು ಹಾಲಿನಲ್ಲಿ ಹೇರಳವಾಗಿವೆ. ಅಲ್ಲದೆ ವಿಟಮಿನ್ ಎ, ಬಿ, ಮತ್ತು ಡಿ, ಕೆ ಸಹ ಸೇರಿವೆ. ಸಂಪೂರ್ಣ ಸಮತೋಲಿತವಾದ ಇದು ಸಸ್ಯಾಹಾರಿಗಳ ಆಹಾರದಲ್ಲಂತೂ ಇರಲೇಬೇಕು.

ಹೈನುಗಾರಿಕೆ ಇಂದು ಅತ್ಯಂತ ಪ್ರಮುಖ ವ್ಯಾಪಾರೋದ್ಯಮವಾಗಿದ್ದು ಹಾಲಿನ ಉಪ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ಗಿಣ್ಣುಗಳು, ಕುದಿಸಿದ ಹಾಲು, ಸಾಂದ್ರೀಕರಿಸಿದ ಹಾಲು, ಐಸ್‌ಕ್ರೀಮ್, ಚಾಕೊಲೇಟ್ ತಯಾರಿಕೆಗಳಲ್ಲಿ ಹಾಲಿಗೆ ವಿಶೇಷ ಬೇಡಿಕೆಯಿದೆ. ಹಾಲಿನಪುಡಿ ಸಹ ಈಗಿನ ಪ್ರಮುಖ ತಯಾರಿಕೆಗಳಲ್ಲಿ ಒಂದು. ಹಾಲಿನಲ್ಲಿ ಲ್ಯಾಕ್ಟೋಸ್ ರೂಪದಲ್ಲಿರುವ ಬ್ಯಾಕ್ಟೀರಿಯಾ ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲದ ರೂಪಕ್ಕೆ ಪರಿವರ್ತನೆಯಾಗುತ್ತದೆ. ಅದು ಕ್ಯಾಲ್ಸಿಯಂ ಮತ್ತು ರಂಜಕಗಳ ಜೀರ್ಣತೆಯನ್ನು (ಜೀರ್ಣವಾಗುವ ಸಾಮರ್ಥ್ಯ) ಹೆಚ್ಚಿಸುತ್ತದೆ. ಮಕ್ಕಳಲ್ಲಿ ಹಲ್ಲು ಮತ್ತು ಮೂಳೆಗಳ ಬಲವರ್ಧನೆಗೂ ಇದು ಸಹಾಯಕ. ಹೀಗಾಗಿಯೇ ನೇರವಾಗಿ ಹಾಲು ಸೇವಿಸುವುದಕ್ಕಿಂತಲೂ, ಮೊಸರಿನ ರೂಪದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಭಾವನೆ ಸಮಾಜದಲ್ಲಿದೆ.

ಹಾಲು ಕೊಡುವ ಹಲವು ಪ್ರಾಣಿಗಳು

ಪುರಾತನ ಕಾಲದಿಂದಲೂ ಹಾಲಿಗಾಗಿ ಪ್ರಾಣಿಗಳನ್ನು ಸಾಕುವುದು ಕಂಡು ಬಂದಿದೆ. ನಮ್ಮ ಸಮಾಜಕ್ಕೆ ಹೆಚ್ಚಿನ ಪ್ರಮಾಣದ ಹಾಲು ಹಸುಗಳಿಂದಲೇ ಸಿಗುತ್ತಿದೆ. ಇದರೊಂದಿಗೆ ಎಮ್ಮೆ, ಮೇಕೆಗಳೂ ಹಾಲು ಕೊಡುತ್ತವೆ. ಮರುಭೂಮಿಯಲ್ಲಿ ಒಂಟೆಯು ಹಾಲಿನ ಮೂಲವಾಗಿದೆ. ಅಮೇರಿಕಾದ ಹಲವೆಡೆ ಲಾಮಾ ಒಂಟೆಯಂತಹ ಪ್ರಾಣಿಯನ್ನು ಹಾಲಿಗಾಗಿ ಸಾಕುವುದುಂಟು. ಟಿಬೆಟ್ ಮತ್ತು ಮಂಗೋಲಿಯಾದ ಜನರು ಕುದುರೆ, ಕತ್ತೆ, ಮತ್ತು ಯಾಕ್ ಪ್ರಾಣಿಯ ಹಾಲನ್ನು ಕುಡಿಯುತ್ತಾರೆ. ಲಾತ್ ಲೆಂಡಿನಲ್ಲಿ ಹಿಮ ಸಾರಂಗಗಳ ಹಾಲಿನ ಸೇವನೆಯ ಪದ್ಧತಿಯಿದೆ.

ಶುಚಿಯಾದ (ರೋಗ ರಹಿತ) ಹಾಲಿನ ಬಳಕೆಯು ಶರೀರದ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತದೆ. ಪ್ರಕೃತಿಯ ಈ ಅದ್ಬುತ ಸೃಷ್ಟಿ ನಿಜಕ್ಕೂ ವಿಸ್ಮಯಕಾರಿ.

ತುಣುಕು ಮಿಣುಕು: ಇದು ವಿಜ್ಞಾನ ಲೋಕದ ಅಚ್ಚರಿ

* ಭೂಮಿಯ ಶೇ 94 ರಷ್ಟು ನೀರು ಸಾಗರಗಳಲ್ಲಿದೆ

* ಈಜಿಪ್ಟ್‌ನ ಕುಫು ಪಿರಮಿಡ್ ರಚನೆಗಾಗಿ 2,50,000 ಮೀಟರ್‌ನಷ್ಟು ಕಲ್ಲುಗಳನ್ನು ಬಳಸಲಾಗಿದೆ

* ಮಾನವನ ಪ್ರತಿ ಕೈಗಳಲ್ಲಿಯೂ 27 ಮೂಳೆಗಳಿವೆ

* ದಕ್ಷಿಣ ಅಮೇರಿಕಾದ ಕಪ್ಪೆಯೊಂದು 17 ಸೆಂಟಿಮೀಟರ್ ನಷ್ಟು ಎತ್ತರವಾಗಿದ್ದು ಸುಮಾರು 75 ಸೆಂಟಿಮೀಟರ್‌ನಷ್ಟು ದೂರ ಕುಪ್ಪಳಿಸ ಬಲ್ಲದು

* ದೇಹದ ಮೇಲೆ ಕಪ್ಪುಚುಕ್ಕೆ ಹೊಂದಿರುವ ಹೈಗ್ರೋನಿಗ್ರೊಮೆಕುಲಾ ಪ್ರಭೇದಕ್ಕೆ ಸೇರಿದ ಕಪ್ಪೆಯೊಂದು 30 ಮಿಮೀನಷ್ಟು ಎತ್ತರವಿದೆ. ಇದು 1.5 ಮೀಟರ್‌ನಷ್ಟು ದೂರ ಕುಪ್ಪಳಿಸುತ್ತದೆ.

* ಕಶೇರುಕ ಪ್ರಾಣಿ ವರ್ಗದಲ್ಲಿ ಕಪ್ಪೆಯ ರೀತಿ ಕುಪ್ಪಳಿಸುವ ಪ್ರಾಣಿ ಇನ್ನಾವುದೂ ಇಲ್ಲ.

ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ
ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ

ಎಚ್‌ಎ ಪುರುಷೋತ್ತಮ ರಾವ್ ಪರಿಚಯ

ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್‌.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974.