ಮನುಜನ ಬದುಕಿಗೆ ಅಗತ್ಯ ಹಿತಮಿತ ಪ್ರಮಾಣದ ನಿದ್ರೆ: ನಮಗೆ ನಿದ್ದೆ ಎಷ್ಟು ಬೇಕು? ನಿದ್ದೆ ಮಾಡುವಾಗ ಏನಾಗುತ್ತೆ? -ಜ್ಞಾನ ವಿಜ್ಞಾನ
ನಿದ್ದೆಯಲ್ಲಿ ಲೋಪವು ಒಂದೇ ಸಮನೆ ಮುಂದುವರಿದರೆ ಹುಚ್ಚು ಹಿಡಿಯುವ ಸಂಭವವೂ ಇದೆ. ಕೆಲವರಿಗೆ ಎಲ್ಲಿದ್ದರೂ ಹೇಗಿದ್ದರೂ ಶೀಘ್ರವಾಗಿ ನಿದ್ರೆ ಮಾಡಬಲ್ಲರು. ಆದರೆ ಬಹುತೇಕ ಮಂದಿಗೆ ಒಳ್ಳೆಯ ಪರಿಸರ, ವಾತಾವರಣ, ಸ್ವಚ್ಚತೆಯಿಲ್ಲದಿದ್ದಲ್ಲಿ ನಿದ್ರೆ ಬರುವುದಿಲ್ಲ.
ನಮ್ಮ ದೈನಂದಿನ ಬದುಕಿನಲ್ಲಿ ನಿದ್ದೆಗೆ ಹೆಚ್ಚು ಪ್ರಾಮುಖ್ಯವಿದೆ. ವಾಸ್ತವ ಎಂದರೆ ನಮ್ಮ ಜೀವನದ ಮೂರನೇ ಒಂದು ಭಾಗದಷ್ಟು ಸಮಯ ನಿದ್ದೆಗಾಗಿಯೇ ಮೀಸಲು. ಅನುಭವಿಸಲು ಸುಖದಾಯಕವೆನಿಸುವ ಈ ಸಾಮಾನ್ಯ ಪ್ರಕ್ರಿಯೆ ಒಂದು ಸಂಕೀರ್ಣ ಶಾರೀರಕ ವ್ಯವಸ್ಥೆ. ನಿದ್ದೆಯಲ್ಲಿ ಏನಾಗುತ್ತದೆ? ಎಷ್ಟು ನಿದ್ದೆ ಅವಶ್ಯಕ? ಮುಂತಾದ ಅನೇಕ ವಿಚಾರಗಳ ಬಗ್ಗೆ ಈ ಸಂಚಿಕೆಯಲ್ಲಿ ವಿವರಿಸಲಾಗಿದೆ
ನಿದ್ದೆಯ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಇರುತ್ತದೆ. ಮಕ್ಕಳಿಂದ ವಯೋವೃದ್ದರವರೆಗೆ ವಿವಿಧ ಬೆಳವಣಿಗೆಯ ಹಂತಗಳಲ್ಲಿ ನಿದ್ದೆಯ ಅವಧಿ ಬೇರೆಬೇರೆಯಾಗಿರುತ್ತದೆ. ಒಬ್ಬರಿಗೆ ನಿದ್ದೆ ಹೆಚ್ಚು ಮತ್ತೊಬ್ಬರಿಗೆ ಕಡಿಮೆ ಸಾಕು. ಹುಟ್ಟಿದ ಮಕ್ಕಳು ಮೊದಲ ಮೂರು ತಿಂಗಳವರೆಗೆ 16 ರಿಂದ 20 ಘಂಟೆಯವರೆಗೂ ನಿದ್ರಿಸುತ್ತವೆ. ತಾರುಣ್ಯದ ಅವಧಿಯಲ್ಲಿ ನಿದ್ರೆಯ ಅವಧಿ ಸಹ ಅರ್ಧದಷ್ಟಕ್ಕೆ ಇಳಿಯುತ್ತದೆ. 40 ರ ನಂತರ ನಿದ್ದೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತದೆ. 60 ರ ನಂತರವಂತೂ ನಿದ್ದೆಯ ಅವಧಿ ಇನ್ನಷ್ಟು ಇಳಿಯುತ್ತದೆ.
ಕೆಲವರಿಗಂತೂ ತಾವು ಹೆಚ್ಚು ನಿದ್ರಿಸುತ್ತೇವೆಂಬುದೇ ಚಿಂತೆ. ಬಹಳಷ್ಟು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತಿಸುವುದುಂಟು. ನಿದ್ದೆ ಕಡಿಮೆಮಾಡಿಕೊಳ್ಳಲು ಅವರು ಮಾಡುವ ಪ್ರಯತ್ನಗಳೆಷ್ಟೋ. ಆದರೆ ವಾಸ್ತವವಾಗಿ ಶರೀರವು ತನಗೆ ಎಷ್ಟು ನಿದ್ದೆ ಅವಶ್ಯಕತೆಯಿದೆಯೋ ಅಷ್ಟನ್ನು ಪಡೆದೇ ತೀರುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ಒಂದು ಸಮಾದಾನದ ಸಂಗತಿಯೊಂದು ಗೊತ್ತೇ? ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್ ಅವರು ದಿನಕ್ಕೆ 12 ಗಂಟೆ ನಿದ್ರಿಸುತ್ತಿದ್ದರಂತೆ.
ಮಧ್ಯಾಹ್ನದ ಸವಿನಿದ್ದೆ ಎಲ್ಲರಿಗೂ ಅಚ್ಚುಮೆಚ್ಚು
ಹುಟ್ಟಿದ ಮಕ್ಕಳು ಎಷ್ಟೋ ತಾಯಂದಿರ ರಾತ್ರಿಯಿಡೀ ನಿದ್ರೆಯನ್ನು ಹಾಳುಮಾಡುತ್ತವೆ. ಮಗು ನಾಲ್ಕೈದು ವರ್ಷಗಳ ನಂತರ ಬೆಳಗಿನ ವೇಳೆ ನಿದ್ರಿಸುವುದಿಲ್ಲ, ನಂತರ ಮಧ್ಯಾಹ್ನದವರೆಗಿನ ನಿದ್ದೆಯ ಅವಧಿ ಕಡಿಮೆಯಾಗುತ್ತದೆ. ಆದರೂ ಜೀವಮಾನದುದ್ದಕ್ಕೂ ಅಲ್ಪ ಸಮಯಕ್ಕಾದರೂ ಮಧ್ಯಾಹ್ನದ ಸವಿನಿದ್ದೆ ಉಳಿದು ಬರುತ್ತದೆ. ಪ್ರಪಂಚದ ಅರ್ಧಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ನಿದ್ದೆಯನ್ನು ಖುಷಿಯಿಂದ ಅನುಭವಿಸುತ್ತಾರೆ ಎನ್ನುವ ಅಂದಾಜು ಇದೆ.
ಎಚ್ಚರವಾಗಿದ್ದಾಗ ದೈನಂದಿನ ಕೆಲಸಗಳಲ್ಲಿ ದೇಹದ ಚೈತನ್ಯ ವ್ಯಯವಾಗುತ್ತದೆ. ಅಂಗಾಂಶಗಳು ಸವೆಯುತ್ತವೆ. ನಿದ್ದೆಯ ಸಮಯದಲ್ಲಿ ಕೋಶಗಳು ಅಂಗಾಂಶಗಳನ್ನು ಸರಿಪಡಿಸುತ್ತವೆ. ಆದ್ದರಿಂದಲೇ ಸ್ವಲ್ಪಕಾಲದ ಗಾಢ ನಿದ್ರೆಯಾದರೂ ಸಾಕು. ಶರೀರವು ಮತ್ತೆ ಚೇತರಿಸಿಕೊಂಡಿರುತ್ತದೆ, ದಣಿವು ಆರುತ್ತದೆ. ಅಗತ್ಯವಿರುವಷ್ಟು ನಿದ್ದೆ ಸಿಗದಿದ್ದಾಗ ಅನೇಕ ಬಗೆಯ ತೊಂದರೆ, ಅಸ್ವಸ್ಥತೆ ಉಂಟಾಗುತ್ತವೆ. ಹೆಚ್ಚು ಕಾಲದ ನಿದ್ರಾಹೀನತೆಯಿಂದ ಆಲಸ್ಯ, ಅಜೀರ್ಣ, ಹಸಿವಿಲ್ಲದಿರುವುದು, ವಾಂತಿ, ಸಿಡುಕು, ಗೊಂದಲದ ಸ್ಥಿತಿ, ಭ್ರಮೆ, ತೊದಲು ಮಾತನಾಡುವುದು, ಅಸಂಬದ್ದವಾಗಿ ಮಾತನಾಡುವುದು ಮುಂತಾದುವು ಉಂಟಾಗುತ್ತವೆ.
ನಿದ್ದೆಯಲ್ಲಿ ಲೋಪ ಮುಂದುವರಿದರೆ ಅಪಾಯ
ನಿದ್ದೆಯ ಲೋಪ ಇದೇ ರೀತಿ ಮುಂದುವರಿದರೆ ಹುಚ್ಚು ಹಿಡಿಯುವ ಸಂಭವವೂ ಇದೆ. ಕೆಲವರಿಗೆ ಎಲ್ಲಿದ್ದರೂ ಹೇಗಿದ್ದರೂ ಶೀಘ್ರವಾಗಿ ನಿದ್ರೆ ಮಾಡಬಲ್ಲರು. ಆದರೆ ಬಹುತೇಕ ಮಂದಿಗೆ ಒಳ್ಳೆಯ ಪರಿಸರ, ವಾತಾವರಣ, ಸ್ವಚ್ಚತೆಯಿಲ್ಲದಿದ್ದಲ್ಲಿ ನಿದ್ರೆ ಬರುವುದಿಲ್ಲ. ವಿಪರೀತ ಶಾರೀರಕ ಶ್ರಮವುಂಟಾದಾಗಲೂ ಅಥವಾ ಮಾನಸಿಕ ಒತ್ತಡ, ಆಯಾಸಗಳಿದ್ದರೂ ನಿದ್ದೆ ಬರುವುದಿಲ್ಲ. ಉದಾಹರಣೆಗೆ ಹಲವಾರು ದಿನಗಳವರೆಗೆ ನಿದ್ದೆಗೆಟ್ಟು ಓದಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿ ಕೊನೆಯ ದಿನ ಚೆನ್ನಾಗಿ ನಿದ್ದೆ ಮಾಡಬೇಕೆಂದುಕೊಂಡರೂ ಸಾಧ್ಯವಾಗುವುದಿಲ್ಲ.
ನಾವು ನಿದ್ರಿಸುವಾಗ ನಡೆಯುವ ಶಾರೀರಿಕ ವಿದ್ಯಮಾನಗಳೇನು ಎಂಬ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ, ನಡೆಯುತ್ತಲೇ ಇದೆ. ನಿದ್ದೆ ಹಲವು ಹಂತಗಳಲ್ಲಿ ಪೂರೈಸಲ್ಪಡುತ್ತದೆ. ಈ ಹಂತಗಳನ್ನು ವಿದ್ಯುನ್ ಮಸ್ತಿಷ್ಕ ಲೇಖ (ಎಲೆಕ್ಟ್ರೋಎನ್ಸ್ ಫಾಲೋಗ್ರಾಪ್ –ಇಇಜಿ) ಮೂಲಕ ಅಳೆಯಲಾಗುತ್ತದೆ. ಈ ಉಪಕರಣದಲ್ಲಿ ಮಿದುಳಿನ ತರಂಗಗಳು ಮುದ್ರಿತವಾಗುತ್ತವೆ. ಕಣ್ಣಿನಗುಡ್ಡೆ ಹಾಗೂ ಅದರ ಸ್ನಾಯುಗಳ ಚಲನೆಯ ಆಧಾರದ ಮೇಲೆ ನಿದ್ರೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಇವು ಒಂದಾದ ಮೇಲೆ ಮತ್ತೊಂದರಂತೆ ಪುನರಾವರ್ತಿತಗೊಳ್ಳುತ್ತಿರುತ್ತದೆ.
ವ್ಯಕ್ತಿ ನಿದ್ರಿಸಲು ಆರಂಭಿಸಿದ ಒಂದು ಘಂಟೆ ಅವಧಿ ನಂತರ ಕಣ್ಣುಗುಡ್ಡೆಗಳು ಅವಿರತ ಚಲನೆಯಲ್ಲಿರುತ್ತವೆ. ಹೃದಯ ಬಡಿತ, ಉಸಿರಾಟದಲ್ಲಿ ಏರಿಕೆ ಕಂಡುಬರುತ್ತದೆ. ಬೆರಳು, ಮುಖ ಹಾಗೂ ಇನ್ನಿತರ ಸ್ನಾಯುಗಳಲ್ಲಿ ಚಲನೆ ಕಾಣುತ್ತದೆ. ಮಿದುಳಿನ ರಕ್ತದ ಚಲನೆ, ಉಷ್ಣತೆ ಸಹ ಹೆಚ್ಚುತ್ತದೆ. ಈ ಹಂತವು ಬಹುತೇಕ ಎಚ್ಚರದ ಸ್ಥಿತಿಯನ್ನೇ ಹೋಲುತ್ತದೆ. ಕನಸುಗಳನ್ನು ಕಾಣುವುದೂ ಈ ಸ್ಥಿತಿಯಲ್ಲಿಯೇ. ಈ ಅವಧಿಯಲ್ಲಿ ಹತ್ತು ಹನ್ನೆರಡು ನಿಮಿಷದ ಕಾಲ ಕನಸನ್ನು ಐದಾರು ಬಾರಿ ಕಾಣುತ್ತೇವೆ. ಆದರೆ ಕೊನೆಯ ಹಂತದ ಕನಸನ್ನು ಬಿಟ್ಟು ಬೇರಾವುದೂ ನೆನಪಿನಲ್ಲಿ ಇರುವುದಿಲ್ಲ.
ನವಜಾತ ಶಿಶುಗಳಂತೂ ತಮ್ಮ ನಿದ್ದೆಯ ಅರ್ಧ ಭಾಗವನ್ನು ಈ ಹಂತದಲ್ಲಿಯೇ ಕಳೆಯುತ್ತವೆ. ಇದಾದ ನಂತರ 'ಸ್ಲೋ ವೇವ್' ಅಂದರೆ ಕಣ್ಣಾಲಿಗಳು ಅಲುಗಾಡದ ಹಂತ ಆರಂಭವಾಗುತ್ತದೆ. ಇದು ನಾಲ್ಕು ವಿಧದ ಹಂತಗಳಲ್ಲಿ ಗಾಢ ನಿದ್ರೆಗೆ ನಮ್ಮನ್ನು ಒಯ್ಯುತ್ತದೆ. ಈ ಹಂತದಲ್ಲಿ ಮಿದುಳು ಮೊದಲ ಹಂತದಲ್ಲಿದ್ದಂತೆ ಹೆಚ್ಚು ಕ್ರಿಯಾಶೀಲವಾಗಿರುವುದಿಲ್ಲ. ಗುಡ್ಡೆ ಹಾಗೂ ಇನ್ನಿತರ ಸ್ನಾಯುಗಳ ತೀವ್ರ ಚಲನೆಯೂ ಕಂಡು ಬರುವುದಿಲ್ಲ. ಇದಾದ 90 ನಿಮಿಷಗಳ ನಂತರ ಮತ್ತೆ ಆರ್‌ಇಎಂ ನಿದ್ರಾ ಸ್ಥಿತಿ ಮರಳುತ್ತದೆ.
ನಿದ್ರೆಯ ಅವಧಿಯಲ್ಲಿ ಏರುಪೇರು
ಹೀಗಾಗಿ ಒಂದರ ನಂತರ ಮತ್ತೊಂದರಂತೆ ಈ ಸ್ಥಿತಿಗಳು ನಿರ್ದಿಷ್ಟ ಕಾಲದಲ್ಲಿ ಪುನರಾವರ್ತನೆಗೊಳ್ಳುತ್ತಿರುತ್ತವೆ. ಇವು ರಾತ್ರಿಯಲ್ಲಿ 4 ರಿಂದ 5 ಬಾರಿ ಉಂಟಾಗಿರುತ್ತದೆ. ಒಟ್ಟಾರೆ ಎನ್‌ಅರ್‌ಇಎಂ ಹಂತ ಶೇ 75 ರಷ್ಟಾದರೆ ಆರ್‌ಇಎಂ ಹಂತದ ನಿದ್ರಾ ಕಾಲ ಶೇ 25 ರಷ್ಟು ಮಾತ್ರ. ಪ್ರತಿ ಚಕ್ರಿಯ ಚಲನೆ ಮುಗಿದಾಗಲೂ ವ್ಯಕ್ತಿ ಎಚ್ಚರಗೊಳ್ಳುತ್ತಾನೆ. ಹಾಗೂ ಮಗ್ಗುಲು ಬದಲಿಸುತ್ತಾನೆ. ಹೀಗಾಗಿ ವ್ಯಕ್ತಿ ಒಂದೇ ಭಂಗಿಯಲ್ಲಿ ನಿದ್ರಿಸುವುದು ಅಪರೂಪ, ಬಹುಮಟ್ಟಿಗೆ ಅಸಾಧ್ಯ.
ನಿದ್ರೆಗೆ ಗುಳಿಗೆ, ಮದ್ದು ಸೇವನೆಗಳೆಲ್ಲ ಎಂದೂ ಅಪಾಯಕರವೇ. ಇವೆಲ್ಲವು ಈ ವಿವಿಧ ಹಂತದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತವೆ. ಹಲವು ಮಕ್ಕಳಲ್ಲಿ ರಾತ್ರಿ ವೇಳೆ ಹಾಸಿಗೆ ಒದ್ದೆಯಾಗುವ ಸ್ಥಿತಿ ಸಾಮಾನ್ಯ. ಹಲವು ವ್ಯಕ್ತಿಗಳು ನಿದ್ರೆಯಲ್ಲೇ ಎದ್ದು ಓಡಾಡಿ ಮತ್ತೆ ಮಲಗುವುದುಂಟು. ಆದರೆ ಆ ವ್ಯಕ್ತಿಗಳಿಗೆ ಅದಾವುದೂ ನೆನಪಿರುವುದಿಲ್ಲ.
ಇತ್ತೀಚಿನ ಹಲವು ಸಂಶೋಧನೆಗಳ ಪ್ರಕಾರ ನಿದ್ರೆಯ ಕಾಲದಲ್ಲಿ ಹೃದಯದ ಬಡಿತವನ್ನು ಒಂದೇ ಸ್ಥಿತಿಯಲ್ಲಿಡುವ ಹಾಗೂ ನಿಯಂತ್ರಿಸುವ ಶಾರಿರಕ ವ್ಯವಸ್ಥೆ ಸಹ ಕಂಡುಬಂದಿದೆ. ನಿದ್ದೆ ಮಾನವನ ಅವಶ್ಯಕತೆಗಳೊಲ್ಲೊಂದು. ಅದಕ್ಕೆ ತಕ್ಕಂತೆ ಹಿತಮಿತವಾಗಿ ನಿದ್ರಿಸುವುದು ಒಳ್ಳೆಯದು.
ತುಣುಕು ಮಿಣುಕು: ವೈಜ್ಞಾನಿಕ ಮಾಹಿತಿ
1) ಧ್ವನಿಯು ಗಾಳಿಯಲ್ಲಿ ಗಂಟೆಗೆ 1200 ಕಿಮೀ ಅಥವಾ 745 ಮೈಲುಗಳ ವೇಗದಲ್ಲಿ ಚಲಿಸುತ್ತದೆ.
2) ಚೀನಾದಲ್ಲಿ ಮೊದಲ ಬಾರಿಗೆ ದಶಮಾನ ಪದ್ದತಿ ಆರಂಭವಾಯಿತು.
3) ವಯಸ್ಕರಲ್ಲಿನ ಎಲ್ಲ ರಕ್ತನಾಳಗಳನ್ನು ಒಂದಾದ ನಂತರ ಒಂದರಂತೆ ಜೋಡಿಸಿದರೆ ಅದರ ಉದ್ದ 1,60,000 ಕಿಮೀಗಳಷ್ಟಾದೀತು.