ಕನ್ನಡ ಸುದ್ದಿ  /  ಜೀವನಶೈಲಿ  /  ಇಷ್ಟವಿಲ್ಲದಿದ್ರೂ ಧೈರ್ಯವಾಗಿ ಆಗಲ್ಲ ಅನ್ನೋಕೆ ಆಗ್ತಿಲ್ವಾ? ತಮ್ಮೊಳಗೆ ಕೊರಗುವ ಬದಲು ಬೇರೇನು ಮಾಡಬಹುದು -ಕಾಳಜಿ

ಇಷ್ಟವಿಲ್ಲದಿದ್ರೂ ಧೈರ್ಯವಾಗಿ ಆಗಲ್ಲ ಅನ್ನೋಕೆ ಆಗ್ತಿಲ್ವಾ? ತಮ್ಮೊಳಗೆ ಕೊರಗುವ ಬದಲು ಬೇರೇನು ಮಾಡಬಹುದು -ಕಾಳಜಿ

ಉದ್ಯೋಗದ ಸ್ಥಳ ಸೇರಿದಂತೆ ಬಹುತೇಕ ಕಡೆ ಕೆಲವರು ಯಾರು ಏನು ಹೇಳಿದರೂ ಇಲ್ಲ, ಆಗಲ್ಲ ಎಂದು ಹೇಳಲಾಗದೆ ಹೇಳಿದ ಎಲ್ಲ ಕೆಲಸವನ್ನು ಮೈ ಮೇಲೆ ಎಳೆದುಕೊಂಡು ಇಷ್ಟವಿಲ್ಲದಿದ್ದರೂ ಮಾಡುತ್ತಾರೆ. ಮಾನಸಿಕವಾಗಿ ಹಿಂಸೆ ಅನುಭವಿಸುತ್ತಾರೆ. ಯಾಕೆ ಹೀಗೆ? ಇಂತಹ ಸಂದರ್ಭಗಳಲ್ಲಿ ನೋ ಅಂತ ಹೇಳುವುದು ಹೇಗೆ? ಉತ್ತರ ಬರಹದಲ್ಲಿದೆ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ನನಗೆ ಬಹಳ ಸಂದರ್ಭಗಳಲ್ಲಿ ಧೈರ್ಯವಾಗಿ ನೋ ಎಂದು ಹೇಳಲಾಗುತ್ತಿಲ್ಲ, ಆಫೀಸಿನಲ್ಲಿ ಇದ್ದ ಬದ್ದ ಕೆಲಸಗಳನ್ನು ಮಾಡುತ್ತಿರುವೆ, ಮನೆಯಲ್ಲಿಯೂ ಅಷ್ಟೇ, ಹೀಗೆ ಸ್ನೇಹಿತರು ಏನಾದರೂ ಸಹಾಯ ಕೇಳಿದರೆ ಅಥವಾ ಪಾರ್ಟಿಗೋ, ಸಿನಿಮಾಗೋ ಕರೆದರೆ ನನಗೆ ಇಷ್ಟವೇ ಇಲ್ಲದಿದ್ದರೂ ಮಾಡುವೆ. ಇದರಿಂದ ನನಗೆ ವೈಯಕ್ತಿಕ ಸಮಯವೇ ಸಿಗುತ್ತಿಲ್ಲ. ಎಲ್ಲರಿಗೂ ಒಳ್ಳೆಯವನಾಗುವ ಉದ್ದೇಶದಲ್ಲಿ ನನ್ನನ್ನು ನಾನೇ ಕಳೆದುಕೊಳ್ಳುತ್ತಿರುವೆ‌ . ನನಗೆ ಬೇಡವೆಂದಾಗ ಎದುರಿನವರಿಗೆ ಬೇಜಾರು ಆಗದ ಹಾಗೆ ನೋ ಹೇಳುವುದು ಹೇಗೆ?

ಟ್ರೆಂಡಿಂಗ್​ ಸುದ್ದಿ

ಉತ್ತರ: ಈ ಸಮಸ್ಯೆ ನಿಮ್ಮೊಬ್ಬರದೇ ಅಲ್ಲ, ಬಹಳಷ್ಟು ಜನ ಆಗಲ್ಲ ಎಂದು ಹೇಳಲಾಗದೇ ಯಾರಿಗಾಗಿಯೋ ಏನೋ ಆಗಲು ಅಥವಾ ಯಾರಿಗೋ ಏನೋ ಸಹಾಯ‌ ಮಾಡಲು ಅಥವಾ ಇನ್ಯಾರಿಗಾಗಿಯೋ ತಮ್ಮಲ್ಲಿಲ್ಲದ ಗುಣಗಳ‌ ಮುಖವಾಡ ಧರಿಸುತ್ತಿರುತ್ತಾರೆ. ಇಷ್ಟವಿಲ್ಲದಿದ್ದರೂ ಕೆಲವೊಂದು ಕೆಲಸಗಳನ್ನು ಮಾಡುತ್ತಾ ತಮ್ಮೊಳಗೇ ಕೊರಗುತ್ತಿರುತ್ತಾರೆ‌ . ಸಾಕಷ್ಟು ಜನರು ಬೇರೆ ಸಂದರ್ಭಗಳಲ್ಲಿ ಕಡ್ಡಿ ತುಂಡು‌ಮಾಡುವಂತೆ ಮಾತಾಡುವವರೂ ಸಹಾ ಕೆಲವೊಮ್ಮೆ ತಾವು ನಿಜವಾಗಿಯೂ ಮಾಡಲು ಇಷ್ಟ ಪಡದ ವಿಷಯಗಳಿಗೆ ಹೌದು ಎಂದು ಹೇಳುವುದನ್ನು ಕಾಣಬಹುದು . ಇದು ಸರಿಯೇ, ತಪ್ಪಾ? ಆಗುವುದಿಲ್ಲ ಎಂದರೆ ಸಂಬಂಧಗಳನ್ನು ಕಳೆದುಕೊಳ್ಳುತ್ತೇವಾ?

ನೀವು ನಿಜವಾಗಿಯೂ ಮಾಡಲು ಇಷ್ಟಪಡದ ಯಾವುದನ್ನೇ ಆಗಲಿ ಹೌದು ಎಂದು ಹೇಳುವುದು ಕೆಲವು ಸಂದರ್ಭಗಳಲ್ಲಿ ಈ ಸೂಕ್ತವಾಗಿರುತ್ತದೆ. ಉದಾಹರಣೆಗೆ ಕೆಲಸದ ಮಾಡುವ ಕಡೆ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಮ್ಮ ಬಾಸ್ ನಿಮ್ಮನ್ನು ಏನಾದರೂ ಹೆಚ್ಚು ಕೆಲಸ ಮಾಡಲು ಕೇಳಿದರೆ ಆಗುವುದಿಲ್ಲ ಎಂದು‌ ಹೇಳುವುದು ಸೂಕ್ತವಾಗಲ್ಲ‌ . ಅನಿವಾರ್ಯ ಪರಿಸ್ಥಿತಿಯಲ್ಲಿ ಓಕೆ‌. ಆದರೆ ಮೇಲಿನಂತಹ‌ ಅನಿವಾರ್ಯ ಪರಿಸ್ಥಿತಿಗಳನ್ನು ಬಿಟ್ಟು ಇತರೇ ಸಂದರ್ಭಗಳಲ್ಲಿ "ಹೌದು" ಎಂದು ಹೇಳುವುದು ಮುಖ್ಯ ಅದೂ ನಿಮಗೆ ಇಷ್ಟವಿಲ್ಲ ಎಂದಾಗ. ಉದಾಹರಣೆಗೆ, ಕೆಲವರು ‌ಕಚೇರಿಯಲ್ಲಿ ಎಲ್ಲರ ಕೆಲಸಗಳನ್ನೂ ತಲೆ ಮೇಲೆ ಹೊತ್ತು ಕೊಂಡಂತೆ ಮಾಡುತ್ತಿರುತ್ತಾರೆ. ಅದೂ ಸ್ವಂತ‌ ಕಾಳಜಿ ನೋಡಿಕೊಳ್ಳದೇ. ಅದು ಅನಿವಾರ್ಯವಲ್ಲದೇ ಇದ್ದರೂ ಸಹಾ, ಹಾಗೆಯೇ‌ ಕೆಲವರು‌ ಸ್ನೇಹಿತರಿಗಾಗಿ ಇಷ್ಟವಿಲ್ಲದಿದ್ದರೂ ಕೆಲವೊಂದು‌ ದುರಭ್ಯಾಸಗಳನ್ನು‌ ಶುರು ಮಾಡಿ ಚಟಕ್ಕೆ‌ ಬೀಳುತ್ತಾರೆ.

ಕೆಲವರು ಇತರರಿಗೋಸ್ಕರ ತಮಗೆ‌ ಇಷ್ಟವಿಲ್ಲದಿದ್ದರೂ‌ ಬದಲಾಗಲು ಹೋಗುತ್ತಾರೆ. ಅವರೇನು ಅಂದುಕೊಳ್ಳುವರೋ ಎಂಬ‌ ಭಯಕ್ಕೆ ಎಲ್ಲಾ ತಾಪತ್ರಯಗಳನ್ನು‌ ತಲೆಯ‌ ಮೇಲೆ ಹಾಕಿಕೊಳ್ಳುವುದು. ಇಷ್ಟವಿಲ್ಲದಿದ್ದರೂ No ಎಂದು ಹೇಳದೇ‌ , ಇಷ್ಟವಿರದ ಸಹಾಯ ಅಥವಾ ಕೆಲಸ ಮಾಡಲು ಹೋದರೆ ಮುಂದೆ ಆಗುವ ಪರಿಣಾಮಗಳು ಏನು ನೋಡೋಣ.

 • ನೀವು ನಿಜವಾಗಿಯೂ "no" ಎಂಬ ಮನಸ್ಥಿತಿಯಲ್ಲಿ ಇದ್ದಾಗ "ಆಯಿತು, ಓಕೆ ಮಾಡಿಕೊಡುವೆ ಎಂದು ಒಪ್ಪಿಕೊಂಡರೆ, ನಿಮ್ಮಲ್ಲಿ ಒಳಗೊಳಗೇ ಅಸಮಾಧಾನ ಮತ್ತು ಕೋಪ ಬೆಳೆಯಬಹುದು.
 • ನಿಮ್ಮ ಬಗ್ಗೆಯೇ ಹೆಚ್ಚೆಚ್ಚು ಬೇಸರದ ಸಿಟ್ಟು ಬರುತ್ತದೆ.
 • ನೀವು ನಿಭಾಯಿಸಲು ಆಗುವುದಕ್ಕಿಂತ ಹೆಚ್ಚು ಹೆಚ್ಚು‌ ಜವಾಬ್ದಾರಿಯನ್ನೋ ಅಥವಾ ಕೆಲಸವನ್ನೋ ಮಾಡುತ್ತಿದ್ದರೆ ನೀವು ಹೆಚ್ಚು ಕೆಲಸ ಮಾಡಬೇಕಾಗಿ ಬರುವುದರಿಂದ ದೀರ್ಘಾವಧಿಯಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಬಹುದು.
 • ಧೈರ್ಯವಾಗಿ ನೋ ಹೇಳಲಾಗದ ನಿಮ್ಮ ಬಗ್ಗೆಯೇ ಬೇಸರ ಹುಟ್ಟಿ ನಿಮ್ಮ ಸ್ವಾಭಿಮಾನವನ್ನು ಕಡಿಮೆ ಮಾಡಿ ಅದು‌ ಖಿನ್ನತೆ ಮತ್ತು ಆಂಕ್ಸೈಟಿಗೆ‌ ಕಾರಣವಾಗಬಹುದು.

ಹಾಗಂತ ಇದಕ್ಕೆ‌ ವಿರುದ್ದವಾಗಿ ಕೆಲವು ಜನರು ಇತರ ವ್ಯಕ್ತಿಗಳನ್ನ ಪರಿಗಣಿಸದೆ ಅಥವಾ ಅಗೌರವವಾಗಿ ಅಥವಾ ಅಗ್ರೆಸೀವ್ ಆದ ರೀತಿಯಲ್ಲಿ "ಇಲ್ಲ" ನಾನು ಮಾಡಲ್ಲ ಎಂದು ಹೇಳಬಹುದು. ಇದರಿಂದಾಗಿ ಜನರು ನಿಮ್ಮನ್ನು ಇಷ್ಟಪಡದೇ ಇರಲು ಇದು ಕಾರಣವಾಗಬಹುದು.‌ ಅಥವಾ ನಿಮ್ಮ‌ ಬಗ್ಗೆ ಅಸಮಾಧಾನ ಬೆಳೆಯಲು ಕಾರಣವಾಗಬಹುದು. ಈ ಮೇಲಿನ ಎರಡೂ ರೀತಿಯೂ ಉತ್ತಮವಾದ ಸಂವಹನವಲ್ಲ.

“ಇಲ್ಲ” ಎಂದು ಏಕೆ ಹೇಳುವುದು ಕಷ್ಟ?

ಹುಟ್ಟುವಾಗ , ನಾವೆಲ್ಲರೂ ಖಂಡಿತವಾದಿಗಳಾಗಿಯೇ ಜನಿಸುತ್ತೇವೆ. ಒಂದು ಮಗುವಿನ ಜೊತೆ ಒಡನಾಟದ ಸಮಯದಲ್ಲಿ ನೀವು ಗಮನಿಸಿರಬಹುದು ಅವರಿಗೆ‌ “ನೋ !” ಎಂದು ಹೇಳಲು ಯಾವುದೇ ಹಿಂಜರಿಕೆ ಇರುವುದಿಲ್ಲ. ಆದರೂ, ನಾವು ಬೆಳೆಯುತ್ತಿದ್ದಂತೆ, ನಮ್ಮ ಪರಿಸರ ಮತ್ತು ಅನುಭವದಿಂದ “ನೋ” ಎಂದು ಹೇಳುವುದು ತಪ್ಪು ಎಂದು ಕಲಿಯುತ್ತೇವೆ. ಇದಕ್ಕೆ ಕಾರಣ‌ “ನೋ” ಎಂಬ ಪದವನ್ನು ಬಳಸಲು ಹಿಂಜರಿಯಲು ನಮ್ಮ ಮನಸಲ್ಲಿ ಬೇರೂರಿದ ಹಲವಾರು ನಂಬಿಕೆಗಳು. ಈ ನಂಬಿಕೆಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿ ಮಾಡಿರುವೆ. ನಿಮಗೆ ಯಾವುದಾದರೂ ಅನ್ವಯಿಸುತ್ತವೆಯೇ ಎಂದು ನೋಡಿ:

 • “ಇಲ್ಲ” ಎಂದು ಹೇಳುವುದು ಒರಟುತನ ಹಾಗು ಕೆಟ್ಟತನ
 • “ಇಲ್ಲ” ಎಂದು ಹೇಳುವವರು ಕರುಣೆಯಿಲ್ಲದವರು,, ಕಾಳಜಿ ಇಲ್ಲದವರು ಮತ್ತು ಸ್ವಾರ್ಥ ಇರುವವರು
 • “ಇಲ್ಲ” ಎಂದು ಹೇಳುವುದು ಇತರರಿಗೆ ನೋವುಂಟು ಮಾಡಿ, ಅವರನ್ನು ತಿರಸ್ಕರಿಸಿದ ಭಾವನೆ ಕೊಡುವುದು
 • “ಇಲ್ಲ” ಎಂದು ಯಾರಿಗಾದರೂ ಹೇಳಿದರೆ ಅವರು ನನ್ನನ್ನು ಇಷ್ಟಪಡುವುದಿಲ್ಲ

• ಸಹಾಯ ಕೇಳಿದಾಗ “ನೋ” ಎಂದು ಹೇಳುವುದು ಸಣ್ಣತನ ತೋರಿಸುತ್ತದೆ

ಮೇಲಿನ ಎಲ್ಲವೂ ಹಲವರ ಅನುಭವಕ್ಕೆ ಬಂದಿರುತ್ತವೆ. ಮೇಲಿನ ನಿಷ್ಪ್ರಯೋಜಕ ಚಿಂತನೆಗಳು ಸತ್ಯಗಳಲ್ಲ. ಇವೆಲ್ಲಾ ನಮ್ಮ ಸುತ್ತಮುತ್ತಲಿನ ಪರಿಸರದಿಂದ ನಾವು ಕಲಿತವುಗಳು ಅಥವಾ ಅಭಿಪ್ರಾಯಗಳಷ್ಟೇ. “ನೋ” ಎಂದು ಹೇಳುವುದನ್ನು ಕಲಿಯಲು‌ ಮೇಲಿನ ಪ್ರತಿಯೊಂದು ಅಂಶವನ್ನೂ ಹೆಚ್ಚು ಬೇರೊಂದು ಅರ್ಥ ಕೊಡುವುದರ ಮೂಲಕ ಬದಲಾಯಿಸಬಹುದು. ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿ ಮಾಡಿರುವೆ

ಹೇಗೆ ಇತರರಿಗೆ ಸಹಾಯ ಕೇಳುವ ಹಕ್ಕಿದೆಯೋ ಹಾಗೇ ನಿಮಗೆ ನಿರಾಕರಿಸುವ ಅಥವಾ ಅಂಗೀಕರಿಸುವ ಹಕ್ಕಿದೆ .

 • “ಇಲ್ಲ” ಎಂದು ಹೇಳಿದಾಗ ನೀವು ಬೇಡಿಕೆಯನ್ನಷ್ಟೇ ನಿರಾಕರಿಸುತ್ತೀರಿ, ಹೊರತು ಸಹಾಯ ಕೇಳಿದ ವ್ಯಕ್ತಿಯನ್ನಲ್ಲ
 • ನಮಗೆ ಎಲ್ಲಾ ಸಂದರ್ಭಗಳಲ್ಲೂ ಹೌದು ಅಥವಾ ಇಲ್ಲ ಎನ್ನುವ ಆಯ್ಕೆ ಇರುತ್ತದೆ. ಎಲ್ಲಾ ಸಮಯಗಳಲ್ಲಿಯೂ ನಾವು ನಿರಂತರವಾಗಿ ಆಯ್ಕೆಗಳನ್ನು ಮಾಡುವ ಹಕ್ಕು ನಮಗಿದೆ.
 • ಒಂದು ವಿಷಯಕ್ಕೆ “ಓಕೆ” ಎಂದು ಹೇಳಿದಾಗ ನಾವು ಮತ್ತೊಂದು ವಿಷಯಕ್ಕೆ “ನೋ” ಎಂದು ಹೇಳುವುದರಲ್ಲಿ ತಪ್ಪಿಲ್ಲ.
 • ನೋ ಎಂದು ಹೇಳಲು ತೊಂದರೆ ಇರುವವರು ಸಾಮಾನ್ಯವಾಗಿ ನಿರಾಕರಣೆಯನ್ನು ಸ್ವೀಕರಿಸುವಲ್ಲಿ ಇತರ ವ್ಯಕ್ತಿಗೆ ಇರುವ ತೊಂದರೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅಂದಾಜು ಮಾಡುತ್ತಾರೆ.
 • ನಮ್ಮ ಭಾವನೆಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದರಿಂದ, ಇತರ ವ್ಯಕ್ತಿಗೂ ಅವರ ಭಾವನೆಗಳನ್ನು ಧೈರ್ಯದಿಂದ ವ್ಯಕ್ತಪಡಿಸಲು ಸಹಾಯ‌ಮಾಡುತ್ತದೆ.
 • ಯಾರಿಗಾದರೂ “ನೋ” ಎಂದು ಹೇಳುವುದರಿಂದ ಅವರಿಗೆ ಮತ್ತಷ್ಟು ಬೇಡಿಕೆಗಳನ್ನು ಕೇಳಲು ಸಾಧ್ಯವಾಗುವಂತೆಯೇ ನಿಮ್ಮ ವಿನಂತಿಗಳಿಗೆ “ನೋ” ಎಂದು ಹೇಳಲು ಅವರಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: ಸಂಶಯ ಪಿಶಾಚಿ ಉಸಿರುಗಟ್ಟಿಸುತ್ತಿದೆ, ಇದೇ ಕಾರಣಕ್ಕೆ ಸಂಗಾತಿಯೊಂದಿಗೆ ಸಂಬಂಧ ಹಾಳಾಗುತ್ತಿದೆ ಏನು ಮಾಡಲಿ? ಅನುಮಾನ ಬಿಡಲಾದೀತೆ -ಕಾಳಜಿ

ನೋ ಎಂದು” ಎಂದು ಹೇಳುವುದು ಹೇಗೆ ?

ನಡವಳಿಕೆಯನ್ನು ಬದಲಾಯಿಸುವುದರ ಮೂಲಕ ನಿಮಗೆ ಬೇಡ ಎನಿಸಿದಾಗ ಅಥವಾ “ನೋ” ಎಂದು ಹೇಳಬೇಕು ಎಂದೆನಿಸಿದಾಗ ಕೆಳಗಿನ ವಿಷಯಗಳನ್ನು ನೆನಪಿಡಿ.

 1. ಸಾವಧಾನತೆ ಅಭ್ಯಾಸ‌ ಮಾಡಿ. ಆಳವಾದ ಉಸಿರಾಟದ ಅಭ್ಯಾಸಗಳನ್ನು ಮಾಡಿ ಇನ್ನೊಬ್ಬರಿಗೆ ನೋ ಹೇಳುವ ಮುಂಚೆ ನಿಮಗೆ ನೀವೇ ನೋ ಹೇಳಿಕೊಳ್ಳಬಲ್ಲಿರಾ ಎಂದು ಪರೀಕ್ಷಿಸಿ, ಉದಾಹರಣೆಗೆ ನಿಮ್ಮ‌ ಸಹೋದ್ಯೋಗಿ ನಿಮ್ಮ ಮೇಲೆ ಕೆಲಸ ಹೇರಿದಾಗ, ಮಾಡಲಾರೆ ಎಂದು ನೀವೇ ಹೇಳಿಕೊಳ್ಳಲಾದೀತಾ ಚೆಕ್ ಮಾಡಿ.
 2. ನಿಮ್ಮ ಮಾತನ್ನು ಪರಿಣಾಮಕಾರಿಯಾಗಿ ಹೇಳಲು ನೀವು ನೇರ ಮತ್ತು ಪ್ರಾಮಾಣಿಕವಾಗಿರಬೇಕು ಆದರೆ ಒರಟಾಗಿರಬಾರದು.
 3. ಸಾಮಾನ್ಯವಾಗಿ ಸುತ್ತಿ ಬಳಸಿ ಸುಳ್ಳು ವಿವರಣೆ‌ಕೊಡುವ ಬದಲು ಆದಷ್ಟು ಸತ್ಯ ಹಾಗೂ ಸಂಕ್ಷಿಪ್ತವಾಗಿಡಿರಿ.
 4. ನಿಮಗೆ ಇದು ಏಕೆ ಕಷ್ಟ ಎಂದು ವ್ಯಕ್ತಿಗೆ ಅರ್ಥವಾಗುವಂತೆ ಹೇಳಿ
 5. “ಕೇಳಿದ್ದಕ್ಕಾಗಿ ಧನ್ಯವಾದಗಳು...” ಎಂದೋ ಅಥವಾ ಇನ್ನೇನಾದರೂ ಹೇಳಿ. ನಿಧಾನವಾಗಿ ಮತ್ತು ತಾಳ್ಮೆಯಿಂದ ಮಾತನಾಡಿ. ಇಲ್ಲದಿದ್ದರೆ “ನೋ” ಎಂಬುದು ಅಹಂಕಾರವಾಗಿ ಕೇಳಿಸಬಹುದು
 6. ಅನಗತ್ಯವಾಗಿ ಸಾರಿ ಕೇಳಬೇಡಿ ಮತ್ತು “ನೋ” ಎಂದು ಹೇಳಲು ಸರಿಯಾದ ವಿವರವಾದ ಕಾರಣಗಳನ್ನು ನೀಡಿ. ನೀವು ವಿವರ ನೀಡಲು ಬಯಸದಿದ್ದರೆ ಕೇವಲ “ನೋ” ಎಂದು ಹೇಳುವ ಹಕ್ಕು ನಿಮಗೆ ಇದೆ.
 7. ಪ್ರಸ್ತುತ ನೇರವಾಗಿ ನೋ ಎನ್ನುವುದು ದೀರ್ಘಾವಧಿಯಲ್ಲಿ ಉಂಟಾಗಬಹುದಾದ ಕೋಪ ಮತ್ತು ನಿಮ್ಮೊಳಗೆ ನಿರಾಸೆಗಿಂತ ಉತ್ತಮ ಎಂದು ನೆನಪಿಡಿ. ಒಂದು ವೇಳೆ‌ ನಿಮ್ಮ‌ ನೋ ಎನ್ನುವುದು ಒಂದು‌‌ ಸಂಬಂಧವನ್ನೋ ಸ್ನೇಹವನ್ನೋ ಮುರಿಯಬಲ್ಲದಾದರೆ, ಅಷ್ಟು ದುರ್ಬಲ ಸಂಬಂಧದ ಅಗತ್ಯವಿದೆಯೇ ಯೋಚಿಸಿ
 8. ನೋ” ಎಂದು ಹೇಳುವಾಗ, ಅದರ ಹೊಣೆಗಾರಿಕೆಯನ್ನು ತೆಗೆದುಕೊಳ್ಳಿ. ಬೇರಾರನ್ನೋ ಅಥವಾ ಇತರೇ ವಿಷಯವನ್ನೋ ದೂಷಿಸಬೇಡಿ ಅಥವಾ ಸಿಲ್ಲಿ ಕಾರಣಗಳನ್ನು ಹುಟ್ಟುಹಾಕಬೇಡಿ.

ನೋ ಎಂದು ಹೇಳುವ ವಿಧಾನಗಳು

“ನೋ ಎಂದು ಹೇಳಲು ಹಲವಾರು ಮಾರ್ಗಗಳಿವೆ. ಇವುಗಳಲ್ಲಿ ಕೆಲವು ಆಯಾ ಪರಿಸ್ಥಿತಿಗನುಗುಣವಾಗಿ ಆಯಾ ಮಾರ್ಗವನ್ನು ಬಳಸಬಹುದು. ಇವುಗಳನ್ನು ಈ ಕೆಳಗೆ ವಿವರಿಸಲಾಗಿದೆ.

 • ನೇರವಾಗಿ “ನೊ”: ಯಾರಾದರೂ ನೀವು ಮಾಡಲು ಬಯಸದ ಏನನ್ನಾದರೂ ಮಾಡಲು ಕೇಳಿದಾಗ, ನೇರವಾಗಿ ನೋ ಎಂದು ಹೇಳಿ.
 • ರಿಫ್ಲೆಕ್ಟೀವ್ ನೋ”: ಈ ತಂತ್ರವು ಕೇಳಿದ ಸಹಾಯದ ವಿಷಯ ಮತ್ತು ಅದರಲ್ಲಿ ಅಡಗಿದ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದು. ನಂತರ ನಿಮ್ಮ ದೃಢವಾದ ನಿರಾಕರಣೆಯನ್ನು ಕೊನೆಯಲ್ಲಿ ಸೇರಿಸುವುದು

ಭವಿಷ್ಯದಲ್ಲಿ ಎಸ್ ಎಂದು ಹೇಳಬಹುದಾದುದ್ದು

ಇದು ಪ್ರಸ್ತುತ ಕ್ಷಣದಲ್ಲಿ ವಿನಂತಿಗೆ “ನೋ ಎಂದು ಹೇಳುವ ಒಂದು ಮಾರ್ಗವಾಗಿದೆ. ಆದರೆ ಭವಿಷ್ಯದಲ್ಲಿ “ಹೌದು” ಎಂದು ಹೇಳಲು ಅವಕಾಶವನ್ನು ಕೊಡುತ್ತೆ. ನೀವು ಅವರ ವಿನಂತಿಯನ್ನು ನಿಜವಾಗಿಯೂ ಪೂರೈಸಲು ಆಗುವುದಾದರೆ ಮಾತ್ರ ಇದನ್ನು ಬಳಸಿ. ಉದಾಹರಣೆಗೆ "ನಾನು ಇಂದು ನಿಮ್ಮೊಂದಿಗೆ ಊಟಕ್ಕೆ ಬರಲು ಸಾಧ್ಯವಿಲ್ಲ, ಆದರೆ ಮುಂದಿನ ವಾರ ಅಥವಾ ಯಾವುದಾದರೂ ಸಮಯದಲ್ಲಿ ಮಾಡಬಹುದು".

ನೋ ಬದಲಾಗಿ ಬೇರೆ ಪದೇ ಬಳಸುವುದು. ಅಂದರೆ ನೋ ಹೇಳದೇ‌ನೇ ಹೇಳುವುದು. ಉದಾಹರಣೆಗೆ‌ ನಿಮ್ಮ ಗೆಳತಿ ಕ್ಲಾಸ್ ಬಂಕ್‌ ಮಾಡಿ ಹೊರಗಡೆ ಹೋಗೋಣ ಎಂದಾಗ, ಅದು ನಿಮಗೆ ಇಷ್ಟ ಇಲ್ಲದೇ ಇದ್ದಾಗ, “ನಾನು ಹೊರಗಡೆ ಬರಲು ಇಷ್ಟ, ಅದರೆ‌ ಕ್ಲಾಸ್ ಅಟೆಂಡ್ ಆಗಲೇಬೇಕು.” ಅಂತ ಹೇಳುವುದು.

ಯಾರೋ ನಿಮ್ಮ ಸಹಾಯ‌ಕೇಳುತ್ತಾರೆ. ಆಗ“ ನಿಮಗೆ ಸಹಾಯ ಮಾಡುವ ಮನಸ್ಸಿದೆ ಆದರೂ ‌ಈ ಸಮಯದಲ್ಲಿ ನನ್ನ ಕೆಲಸವೇ‌ ಬಹಳ‌ ಇದೆ.” ಹೀಗೆ ನೇರವಾಗಿ‌ ಕಾರಣ‌ ಕೊಡಿ. ಇಲ್ಲದ ನೆಪಗಳನ್ನು ಕೊಟ್ಟು‌ ಇಲ್ಲ ಅನ್ನಬೇಡಿ. ಹಾಗೂ ಸುಳ್ಳುಗಳನ್ನು ಹೇಳಬೇಡಿ.

ಕೆಲವು ಸಲ ಇತರರ ಬಲವಂತಕ್ಕೋ ಅಥವಾ ಬೆದರಿಕೆಗೋ ಅಥವಾ ಇನ್ಯಾವುದೇ ಆಮಿಷ, ಅನಿವಾರ್ಯ ಕಾರಣಗಳಿಂದ ನಿಮ್ಮ ನೊ ಅನ್ನು ಎಸ್ ಆಗಿ ಬದಲಾಯಿಸಿಕೊಂಡುಬಿಡಬಹುದು. ಆ ಕ್ಷಣದ ನಿರ್ಧಾರ ಬದುಕನ್ನೇ ಹಾಳುಗೆಡವಬಹುದು. ಅಂತಹ‌ ಸನ್ನಿವೇಶ ಬರಬಾರದೆಂದರೆ. ನಿಮ್ಮ ಮಾತಿಗೆ ಅಚಲವಾಗಿರಿ. ಕೊನೆಯದಾಗಿ‌ ನೆನಪಿಟ್ಟುಕೊಳ್ಳಿ. ನಿಮ್ಮ ಹೇಳಿಕೆಗಷ್ಟೇ ನೀವು ಜವಾಬ್ದಾರರು. ಅದನ್ನು‌ ಜನ ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡು ರಿಯಾಕ್ಟ್ ಮಾಡುತ್ತಾರೆಂಬುದಕ್ಕೆ ಅಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)