ತುಸು ಭಯ ಆರೋಗ್ಯಕರ, ಅತಿಯಾದರೆ ಹಾನಿಕರ, ನಿಮ್ಮ ಭಯವನ್ನು ಹೀಗೆ ಎದುರಿಸಿ; ಭವ್ಯಾ ವಿಶ್ವನಾಥ್ ಮನದ ಮಾತು ಅಂಕಣ
ಭಯವು ನಾಲ್ಕು ಮೂಲಭೂತ ಭಾವನೆಗಳಲ್ಲಿ ಒಂದಾಗಿದೆ. ತುಸು ಭಯ ಇರುವುದು ಆರೋಗ್ಯಕರ. ಅತಿಯಾದರೆ ಹಾನಿಕರ. ಅಂಜಿಕೆ, ದಿಗಿಲು, ಹೆದರಿಕೆ, ಆತಂಕ, ಗಾಬರಿ, ಭಯವು ನಿಮ್ಮ ಮೇಲೆ ಪ್ರಭುತ್ವ ಸಾಧಿಸಲು ಬಿಡಬೇಡಿ ಎಂದು ಮನಃಶಾಸ್ತ್ರಜ್ಞೆ, ಆಪ್ತಸಮಾಲೋಚಕಿ ಮತ್ತು ಎಚ್‌ಟಿ ಕನ್ನಡದ ಅಂಕಣಗಾರ್ತಿ ಭವ್ಯಾ ವಿಶ್ವನಾಥ್ ಮನದ ಮಾತು ಅಂಕಣದಲ್ಲಿ ತಿಳಿಸಿದ್ದಾರೆ.
ಮನದ ಮಾತು ಅಂಕಣ (ಭವ್ಯಾ ವಿಶ್ವನಾಥ್): ಮನುಷ್ಯನಾಗಿ ಮತ್ತು ಪ್ರಾಣಿಯಾಗಿ ಹುಟ್ಚಿದ ಮೇಲೆ ಭಯವಾಗುವುದು ಸ್ವಾಭಾವಿಕ. ಭಯವು ನಾಲ್ಕು ಮೂಲಭೂತ ಭಾವನೆಗಳಲ್ಲಿ ಒಂದು. ಸಂತೋಷ, ದುಃಖ, ಕೋಪದ ರೀತಿ ಭಯವೂ ಇರುತ್ತದೆ. ನಮ್ಮ ಮನಸ್ಸು ಈ ನಾಲ್ಕು ಭಾವನೆಗಳ ಸುತ್ತ ಚಲಿಸುತ್ತಿರುತ್ತದೆ. ಇವುಗಳು ದೇಹಕ್ಕೆ ಉಪ್ಪು ಸಿಹಿ ಕಹಿ ಮತ್ತು ಖಾರವಿದ್ಧಂತೆ. ಆರೋಗ್ಯವಾದ ಬೆಳವಣಿಗೆಗೆ ಎಲ್ಲವೂ ಅಗತ್ಯವಾಗಿ ಬೇಕು ಆದರೆ ಅತಿಯಾಗಬಾರದು. ಅತಿಯಾದರೆ ದೇಹಕ್ಕೆ ಅನಾರೋಗ್ಯವಾದ್ದಂತೆ, ಯಾವುದೇ ಭಾವನೆ ಅತಿಯಾದರೆ ಮಾನಸಿಕ ಆರೋಗ್ಯ ಕೆಡುತ್ತದೆ.
ಇಂದಿನ ಅಂಕಣದಲ್ಲಿ ಭಯದ ಬಗ್ಗೆ ತಿಳಿಯೋಣ. ಭಯವು ಮಿತವಾಗಿದ್ದರೆ ನಾವು ಎಚ್ಚರಿಕೆಯಿಂದ ಇದ್ದು ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಆದರೆ ಮಿತಿಮೀರಿದರೆ ಪ್ರತಿರೋಧಿಸುವುದು ಸುಲಭವಲ್ಲ. ನಾವು ಸಂಪೂರ್ಣವಾಗಿ ಭಯರಹಿತವಾಗಿರಬೇಕೆಂದು ಇಲ್ಲ. ಇದರ ಬದಲು, ಭಯದ ಮೇಲೆ ಪ್ರಭುತ್ವ ಸಾಧಿಸುವುದು ಅವಶ್ಯ.
ಬದುಕಿನಲ್ಲಿ ನಾವು ಹೋರಾಡದೆ ಏನೂ ಸಾಧಿಸಲು, ಏನೂ ಪಡೆಯಲು ಸಾಧ್ಯವಿಲ್ಲ. ಹೋರಾಟದಲ್ಲಿ ಮೊದಲು ಅಡ್ಡಿಯಾಗುವುದು ನಮ್ಮೊಳಗಿರುವ ಹೆದರಿಕೆ. ಈ ಹಂತದಲ್ಲಿ ನಾವು ಹೆದರಿಕೆಯಿಂದ ಹಿಂಜರಿದರೆ, ನಾವು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಎಷ್ಟೊ ಹೆಣ್ಣುಮಕ್ಕಳಿಗೆ ಮಗುವಿಗೆ ಜನನ ಕೊಡುವ ಆಲೋಚನೆಯೇ ಭಯವನ್ನುಂಟು ಮಾಡುತ್ತದೆ. ಮದುವೆಯಾಗುವುದೆಂದರೆ ಕೆಲವು ಜನಗಳಿಗೆ ಹೆದರಿಕೆ. ಗಾಡಿ ಓಡಿಸುವುದನ್ನು ಕಲಿಯಬೇಕೆಂದಾಗ ರಸ್ತೆ ನೋಡಿದರೆ ಭಯ, ಪರೀಕ್ಷೆ ನೆನಸಿಕೊಂಡರೆ ಭಯ, ಸ್ಪರ್ಧೆಗಳಲ್ಲಿ ಸೋಲುವ ಭಯ, ಆತ್ಮೀಯರನ್ನು ಕಳೆದುಕೊಳ್ಳುವ ಭಯ, ಅನಾರೋಗ್ಯದ ಭಯ.. ಹೀಗೆ ನಾನ ವಿಧವಾದ ಭಯಗಳು ನಮ್ಮನ್ನು ಹಿಂಜರಿಯುವಂತೆ ಮಾಡಿಬಿಡುತ್ತವೆ.
ಭಯದ ಮೇಲೆ ಪ್ರಭುತ್ವ ಸಾಧಿಸಿ
ಯಾವುದೇ ಹೋರಾಟದ ಮೊದಲ ಮೆಟ್ಟಿಲು ಭಯರಹಿತವಾಗುವುದಲ್ಲ. ಆದರೆ ನಮ್ಮ ಭಯವನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳುವುದು. ಭಯ ಉದ್ಭವಿಸುದ್ದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಆದರೆ ಅದರ ನಿಯಂತ್ರಣ ಮಾಡಲು ಪ್ರತಿಯೊಬ್ಬರಿಗೂ ಸಾಧ್ಯವಿದೆ.
ನಿಮ್ಮ ಭಯವನ್ನು ಎದುರಿಸಲು ಮೊದಲು ಧೃಢ ಸಂಕಲ್ಪಮಾಡಿಕೊಂಡು ಪ್ರಾರಂಭ ಮಾಡುವುದು ಮುಖ್ಯ. ನಂತರ ಪ್ರತಿನಿತ್ಯ ಆ ದೊಡ್ಡ ಭಯವನ್ನು ಸಣ್ಣ ಸಣ್ಣ ಹೆಜ್ಜೆಯನ್ನಿಟ್ಟು ಎದುರಿಸಲು ಯತ್ನಿಸಿ. ಭಯವು ಕೊನೆ ಕ್ಷಣದಲ್ಲೂ ಸಹ ಹಿಂಜರಿಯುವಂತೆ ಮಾಡುತ್ತದೆ, ಆದರೆ ಹೆದರಬೇಡಿ, ಬಗ್ಗಬೇಡಿ, ಸವಾಲಾಗಿ ತೆಗೆದುಕೊಂಡು ಮುಂದುವರೆಯಿರಿ. ಭಯವು ಹುಲಿ ಬಂತು ಹುಲಿ ಎನ್ನುವಂತೆ. ನೀವು ಅದಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟು ಹೆದರಿದರೆ ನಿಮ್ಮ ಮೇಲೆ ಪ್ರಭುತ್ವ ಸಾಧಿಸಿ, ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತದೆ.
ಸೋಲುವ ಹೆದರಿಕೆ ಬೇಡ
ಸೋತರು ಸಹ ಸೋಲನ್ನು ಅನುಭವಿಸಿ, ಎದ್ದು ಮುಂದಕ್ಕೆ ಸಾಗಿ. ಆದರೆ ತಪ್ಪಿಸಿಕೊಂಡು ದೂರ ಹೋಗುವ ನಿರ್ಧಾರ ಮಾಡಬೇಡಿ. ಸೋಲಿನ್ನಲ್ಲಡಗಿರುವ ಪಾಠವನ್ನು ಕಲಿಯಿರಿ. ಇದನ್ನೇ ಸಾಮರ್ಥ್ಯವಾಗಿ ಬಳಸಿಕೊಳ್ಳಿ. ಸೋಲನ್ನು ಅವಮಾನವೆಂದು ಪರಿಗಣಿಸಬೇಡಿ. ಬದಲು ಸಾಧನೆಯ ಅಡಿಪಾಯವೆಂದು ಪರಿಗಣಿಸಿ. ಸೋಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ, ನಮ್ಮ ಮಿತಿಗಳನ್ನು ದಾಟುವಂತೆ ಮಾಡಿ ಗೆಲುವಿನ ದಾರಿಯಲ್ಲಿ ಕೊಂಡೊಯ್ಯುತ್ತದೆ. ಸೋಲು ನಿಮ್ಮ ದೃಷ್ಟಿಯಲ್ಲಿ ಕಲಿಕೆಯ ಮೆಟ್ಟಿಲಾಗಬೇಕೆ ಹೊರತು, ನಿಮ್ಮ ದೌರ್ಬಲ್ಯ ಅಥವ ತಪ್ಪಿನ ಸಂಕೇತವಾಗಿರಬಾರದು. ಈ ಸೋಲಿನ ಭಯದಿಂದ ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ. ಭಯವನ್ನು ದಾಟಿದರೆ ಮುಂದೆ ಗೆಲುವಿದೆಯೆನ್ನುವುದನ್ನು ಮರೆಯಬೇಡಿ
ಭಯವೆಂಬ ಕಂಫರ್ಟ್ ಝೋನ್
ಭಯ ಎನ್ನುವುದು ಎಷ್ಟು ಹೆದರಿಕೆಯನ್ನು ಹುಟ್ಟಿಹಾಕುತ್ತದೆಯೋ ನಿಮಗೆ ಗೊತ್ತಿಲ್ಲದ ಹಾಗೆ ಅಷ್ಟೇ ಹಿತವನ್ನು ಸಹ ಉಂಟುಮಾಡಿಬಿಡುತ್ತದೆ. ಬಹಳ ದಿನದ ಭಯ ಹೆಮ್ಮರವಾಗಿ ಆ ಮನಸ್ಥಿತಿಯನ್ನು ಒಪ್ಪಿಕೊಂಡು ಆರಾಮವಾಗಿ ಇದ್ದುಬಿಡುವ ಹಾಗೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಸಹ ಆ ಭಯವನ್ನು ನಿರ್ವಹಿಸುವುದಕ್ಕಾಗಲಿ, ಮುಂದೆ ದಾಟಿಹೋಗುವುದಕ್ಕಾಗಲಿ ನೀವು ಪ್ರಯತ್ನ ಮಾಡದೇ ಇರುವಷ್ಟು ನಿಮ್ಮನ್ನು ತಡೆದು ಹಾಯಾಗಿ ಇರುವಂತೆ ಮಾಡುತ್ತದೆ.
ಬೇರೆಯವರು ಏನು ಭಾವಿಸುತ್ತಾರೆ ಎನ್ನುವ ಅಂಜಿಕೆ ಬೇಡ
ನಿಮ್ಮ ಭಯವನ್ನು ಎದುರಿಸಬೇಕಾದಾಗ ಮೊದಲು ಹೆದರಿಕೆಯ ಜೊತೆಗೆ ಸ್ವಲ್ಪ ಮುಜುಗರ, ಸಂಕೋಚವೆಲ್ಲವೂ ಸಾಮಾನ್ಯ. ನಿಮ್ಮ ಪ್ರಯತ್ನವನ್ನು ಯಾರಾದರೂ ಆಡಿಕೊಂಡರೆ? ಹಾಸ್ಯ ಮಾಡಿದರೆ ಎಂದೆಲ್ಲ ಮನಸ್ಸಿಗೆ ಅನಿಸಬಹುದು. ಆದರೆ, ಈ ಒಂದು ಹಂತ ಹೆಚ್ಚು ಕಾಲ ಉಳಿಯುವುದಿಲ್ಲ. ಒಂದು ಸಲ ನೀವು ನಿಮ್ಮ ಪ್ರಯತ್ನದಲ್ಲಿ ಸುಧಾರಣೆ ಕಾಣುತ್ತೀರೋ ಆ ಕ್ಷಣವೇ ಟೀಕೆಗಳು ಕಡಿಮೆಯಾಗುತ್ತವೆ. ಅದೇ ಜನಗಳು ನಿಮ್ಮನ್ನು ಪ್ರಶಂಶಿಸುತ್ತಾರೆ. ಆದಷ್ಟು ನಿಮ್ಮ ಗಮನವೆಲ್ಲಾ ನಿಮ್ಮ ಭಯದ ಮೇಲೆ ಪ್ರಭುತ್ವ ಸಾಧಿಸುವ ಕಡೆ ಇರಲಿ, ಇಲ್ಲದಿದ್ದರೆ ನಿಮ್ಮ ಭಯಕ್ಕೆ ನೀವೇ ಶಾಶ್ವತವಾಗಿ ಗುಲಾಮರಾಗಬೇಕಾಗುತ್ತದೆ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ