ಮನದ ಮಾತು ಅಂಕಣ: ನಿಮ್ಮ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬೇಕೆ? ಈ ಅಂಶಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನದ ಮಾತು ಅಂಕಣ: ನಿಮ್ಮ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬೇಕೆ? ಈ ಅಂಶಗಳನ್ನು ಗಮನಿಸಿ

ಮನದ ಮಾತು ಅಂಕಣ: ನಿಮ್ಮ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬೇಕೆ? ಈ ಅಂಶಗಳನ್ನು ಗಮನಿಸಿ

ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ: ಒಂದು ಹೆಣ್ಣೇ ಆಗಲಿ ಅಥವ ಗಂಡೇ ಆಗಲಿ ಕೆಲವು ಪ್ರಮುಖವಾದ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೌಲ್ಯಗಳ ಮೇಲೆ ಇವರ ಅಗತ್ಯಗಳು ಮತ್ತು ನಂಬಿಕೆಗಳೂ ಆವಲಂಬಿಸಿರುತ್ತವೆ. ಈ ಲೇಖನದಲ್ಲಿ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬಯಸುವವರಿಗೆ ‌ಮಾರ್ಗದರ್ಶಿ ಅಂಶಗಳು ಇವೆ.

ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ
ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ

ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ: ಸಾಮಾನ್ಯವಾಗಿ ಅರೇಂಜ್ ಮ್ಯಾರೇಜಿನಲ್ಲಿ ಗಂಡು ಮತ್ತು ಹೆಣ್ಣು ನಡುವಿನ ಸಂಬಂಧವನ್ನು ದಾಂಪತ್ಯ ಜೀವನದ ಕಡೆಗೆ ಬೆಳೆಸುವುದಕ್ಕೆ ಇಬ್ಬರಲ್ಲೂ ಇರುವ ಕೆಲವು ಸ್ಥಿತಿಗತಿಗಳ ಮತ್ತು ಗುಣಗಳ ಹೊಂದಾಣಿಕೆ ನೋಡುತ್ತಾರೆ. ಗಂಡು ಮತ್ತು ಹೆಣ್ಣಿನ ವಿದ್ಯಾಭ್ಯಾಸ, ಉದ್ಯೋಗ, ಹಣಕಾಸಿನ ವ್ಯವಸ್ಥೆ ಮತ್ತು ಕುಟುಂಬದ ಸ್ಥಿತಿಗತಿಗಳನ್ನು ಪರಿಗಣಿಸುತ್ತಾರೆ. ಗಂಡ ಹೆಣ್ಣಿನ ಸೌಂದಯ೯ವನ್ನೂ ಸಹ ಮ್ಯಾಚ್ ಮಾಡುತ್ತಾರೆ.

ಇನ್ನು ಪ್ರೀತಿಸಿ ವಿವಾಹವಾಗುವವರ ಪೈಕಿ, ಒಬ್ಬರನ್ನೊಬ್ಬರು ಎಷ್ಟು ಪ್ರೇಮಿಸುತ್ತಾರೆಂದು ನೋಡಿ ವಿವಾಹವಾಗುತ್ತಾರೆ. ಈ ರೀತಿಯಾಗಿ ಗಂಡು ಹೆಣ್ಣಿನ ಹೊಂದಾಣಿಕೆ ಮಾಡುವುದು ಎಷ್ಟು ಸರಿಯೇ? ಇನ್ನಾವ ರೀತಿಯಲ್ಲಿ ಮಾಡಬಹುದು ಎಂದು ನೀವು ಯೋಚಿಸುತ್ತಿರಬಹುದಲ್ಲವೇ? ಇದಕ್ಕೆ ಉತ್ತರ ಖಂಡಿತವಾಗಿಯೂ ನೀಡುತ್ತೇನೆ. ಆದರೆ ಇದಕ್ಕೂ ಮುಂಚೆ ಒಮ್ಮೆ ಆಲೋಚಿಸಿ ನೋಡಿ. ಇಲ್ಲಿ ಹೇಳಿದ ನಿಜವಾಗಿಯೂ ಈ ಎಲ್ಲಾ ಅಂಶಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣಿನ ಹೊಂದಾಣಿಕೆಯನ್ನು ಮಾಡುವುದಾದರೆ ದಾಂಪತ್ಯದಲ್ಲಿ ಯಾವುದೇ ಬಿರುಕು ಬರಬಾರದತ್ತಿಲ್ಲವೇ? ವಿಚ್ಚೇದನದ ವಕೀಲರು ಕೆಲಸವಿಲ್ಲದೇ ಖಾಲಿ ಕುಳಿತಿರಬಹುದಿತ್ತಲ್ಲವೇ? ಹಾಗದರೆ, ಈ ಎಲ್ಲಾ ಅಂಶಗಳು ವ್ಯಥ೯ವೇ ?

ಇನ್ಯಾವ ಗುಣಗಳಿಂದ ಗಂಡು ಹೆಣ್ಣನ್ನು ಮ್ಯಾಚ್ ಮಾಡಬಹುದು ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ವಿವರಿಸಿದ್ದೇನೆ ,ಓದಿರಿ.

ಒಂದು ಹೆಣ್ಣೇ ಆಗಲಿ ಅಥವ ಗಂಡೇ ಆಗಲಿ ಕೆಲವು ಪ್ರಮುಖವಾದ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೌಲ್ಯಗಳ ಮೇಲೆ ಇವರ ಅಗತ್ಯಗಳು ಮತ್ತು ನಂಬಿಕೆಗಳೂ ಆವಲಂಬಿಸಿರುತ್ತವೆ. ಪ್ರತಿ ವ್ಯಕ್ತಿಯ ಮೌಲ್ಯಗಳು ಅವರ ವ್ಯಕ್ತಿತ್ವವನ್ನು ನಿರ್ ಮಾ೯ಣ ಮಾಡುತ್ತದೆ. ಸಂಬಧಗಳ ನಿಭಾಯಿಸುವಿಕೆ, ನಿಧಾ೯ರಗಳು, ನಡವಳಿಕೆ ಮತ್ತು ಯಶಸ್ಸುಗಳೆಲ್ಲವೂ ಈ ಮೌಲ್ಯಗಳ ಮೇಲೆ ಆಧಾರಿತವಾಗಿರುತ್ತವೆ.

ವ್ಯಕ್ತಿಯ ಮೌಲ್ಯಗಳು ಮೂಲಭೂತವಾದದ್ದು. ಮೌಲ್ಯಗಳು ವ್ಯಕ್ತಿಯ ಆದ್ಯತೆಗಳೇನು, ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆಂದು ತೋರಿಸಿಕೊಡುತ್ತವೆ.

ಮೌಲ್ಯಗಳನ್ನು ವೈಯುಕ್ತಿಕ, ಸಾಮಾಜಿಕ, ಸಾಂಸ್ಕೃತಿಕ, ಆಥಿ೯ಕ ಹಾಗು ಶೈಕ್ಷಣಿಕ ಮೌಲ್ಯಗಳಾಗಿ ವಿಂಗಡಿಸಲಾಗಿದೆ. ಮೌಲ್ಯಗಳು ಮನಸ್ಸು ಅಥವ ಮನಸ್ಥಿತಿಯಂತೆ ಬದಲಾಗುವುದಿಲ್ಲ, ಬದಲು ಸ್ಥಿರವಾಗಿರುತ್ತವೆ. ಇವುಗಳು ಮನುಷ್ಯನ ವಿಚಾರಗಳು, ನಡುವಳಿಕೆ, ನಂಬಿಕೆಗಳ ಮೇಲೆ ಪ್ರಭಾವ ಬೀರುವುದಲ್ಲದೇ ವ್ಯಕ್ತಿಯು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವಾಗ ಮತ್ತು ಕಠಿಣ ನಿಧಾ೯ರವನ್ನು ತೆಗೆದುಕೊಳ್ಳುವಲ್ಲಿ ಮಾರ್ಗದರ್ಶನವನ್ನೂ ಸಹ ನೀಡುತ್ತದೆ.

ಮೌಲ್ಯಗಳು ಯಾವುವೆಂದರೆ, ಪ್ರಾಮಾಣಿಕತೆ, ನಿಷ್ಠೆ, ಶಿಸ್ತು, ನಂಬಿಕೆ ಮತ್ತು ವಿಶ್ವಾಸ, ಬದ್ಧತೆ, ಸತ್ಯ, ಸಂತೋಷ, ನೆಮ್ಮದಿ ಶಾಂತಿ, ಸುಖ, ಸೌಂದಯ೯, ಆರೋಗ್ಯ, ಪ್ರೀತಿ, ಕಾಳಜಿ, ಕರುಣೆ, ಸಮಾನತೆ, ಸರಳತೆ, ಸಾಹಸ, ಧೈರ್ಯ, ಶಕ್ತಿ, ವಿವೇಕ, ಬುಧ್ಧಿ, ಜ್ಞಾನ, ಕಲೆ, ಪ್ರತಿಭೆ ಇತ್ಯಾದಿ. ಈ ಮೌಲ್ಯಗಳು ಹುಟ್ಟಿನಿಂದಲೇ ಬರುವುದಿಲ್ಲ. ಮನೆ ಮತ್ತು ಸಮಾಜದ ಬೆಳೆಯುವ ವಾತವರಣದಲ್ಲಿ ಅನುಭವಿಸಿ ಕಲಿಯುವಂತಹದು. ಈ ಮೌಲ್ಯಗಳನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ಬೆಳೆಸಿಕೊಳ್ಳಬಹುದು ಮತ್ತು ಬದಲಾಯಿಸಿಕೊಳ್ಳಲೂಬಹುದು.

ಉದಾಹರಣೆಗೆ

- ಸಮಾನತೆಯನ್ನು ತಮ್ಮ ಮೌಲ್ಯವನ್ನಾಗಿ ಬೆಳೆಸಿಕೆೊಂಡವರು ದಾಂಪತ್ಯ ಜೀವನದಲ್ಲಿ ತಮ್ಮ ಸಂಗಾತಿಯ ನಡುವೆ ಸಮಾನತೆಯನ್ನು ಮತ್ತು ನ್ಯಾಯವನ್ನು ನಿರೀಕ್ಷಿಸುತ್ತಾರೆ. ಸಾಮಾಜಿಕ ನ್ಯಾಯ ಮತ್ತು ನ್ಯಾಯ ಸಮತ್ತವಾಗಿವುದನ್ನು ಪ್ರತಿಪಾದಿಸುತ್ತಾರೆ.

- ಹಾಗೆಯೇ, ಪ್ರಾಮಾಣಿಕತೆ ಎಂಬ ಮೌಲ್ಯವನ್ನು ಹೊಂದಿರುವವರು ನಿಜಾಂಶ ಮತ್ತು ಸತ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇಂಥವರು ಸಂಬಧಗಳಲ್ಲಿ ಆದಷ್ಚು ಪ್ರಾಮಾಣಿಕವಾಗಿ ಇರಲು ಯತ್ನಿಸುತ್ತಾರೆ ಮತ್ತು ಸಂಗಾತಿಯಿಂದ ಬಯಸುತ್ತಾರೆ.

- ಧೈರ್ಯ ಮತ್ತು ಸಾಹಸದ ಮೌಲ್ಯಗಳನ್ನು ಹೊಂದಿದ ವ್ಯಕ್ತಿಗಳು ಎದೆಗಾರಿಕೆ ಮತ್ತು ಕಿಚ್ಚಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಾರೆ. ದಾಂಪತ್ಯ ಬದುಕಿನಲ್ಲೂ ಸಹ ಹೊಸ ಮಾದರಿಗಳನ್ನು ಪ್ರಯೋಗಿಸುವುದು, ವೃತ್ತಿಯಲ್ಲಿ ಕಷ್ಟಕರವಾದ, ವಿಭಿನ್ನವಾದದ್ದನ್ನು ಪ್ರಯೋಗಿಸುವುದು ಇವರ ಸ್ವಭಾವವಾಗಿರುತ್ತದೆ. ಅಪಾಯಕಾರಿ ಮತ್ತು ತೊಂದರೆಯುಳ್ಳ (risks) ಪರಿಸ್ಥಿತಿ ಹಾಗು ಕೆಲಸ ಕಾರ್ಯಗಳನ್ನು ಧೈರ್ಯವಾಗಿ ತೆಗೆದುಕೊಳ್ಳುತ್ತಾರೆ. ಮತ್ತು ಪರಿಣಾಮಗಳನ್ನು ಕೂಡ ಉತ್ಸಾಹದಿಂದ ಎದುರಿಸುತ್ತಾರೆ.

- ಹಾಗೆಯೇ, ಪ್ರೀತಿ, ಕಾಳಜಿ, ಅನುಕಂಪದ ಮೌಲ್ಯವನ್ನು ಹೊಂದಿರುವವರು ಒಲವು, ಅನುರಾಗ, ಆತ್ಮೀಯತೆಗೆ ಒತ್ತು ಕೊಡುತ್ತಾರೆ.

ಹೀಗೆ ಪ್ರತಿ ಹೆಣ್ಣು ಮತ್ತು ಗಂಡು ತಮ್ಮದೇ ಆದ ವಿಭಿನ್ನ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೌಲ್ಯಗಳ ಅನುಸಾರವಾಗಿ ಅವರ ನಂಬಿಕೆಗಳು, ನಿಧಾ೯ರಗಳು ಮತ್ತು ನಡುವಳಿಕೆಯು ಇರುತ್ತದೆ.

ಒಟ್ಟಾರೆ ಹೇಳುವುದಾದರೆ ವ್ಯಕ್ತಿತ್ವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಈ ಕಾರಣಗಳಿಂದ, ಮನಶಾಸ್ತ್ರದಲ್ಲಿ, ದಾಂಪತ್ಯಕ್ಕೆ ಕಾಲಿಡುವ ಹೆಣ್ಣು ಮತ್ತು ಗಂಡಿಗೆ VIA Test (Value In Action) ಟೆಸ್ಟ್ ಅನ್ನು ಶಿಫಾರಸ್ಸು ಮಾಡುತ್ತದೆ. VAS ಟೆಸ್ಚ್ ವೈಜ್ಞಾನಿಕವಾದುದು. ಈ ಒಂದು ಟೆಸ್ಟಿನ ಮೂಲಕ ಪರಸ್ಪರ ಮೌಲ್ಯಗಳನ್ನು ತಿಳಿದುಕೊಳ್ಳಬಹುದು. ಈ ಟೆಸ್ಟ್ ವ್ಯಕ್ತಿಯ ಮೊದಲ 5 ಮೌಲ್ಯಗಳನ್ನು ಗುರುತಿಸುತ್ತದೆ. ವ್ಯಕ್ತಿಗಳ ಆದ್ಯತೆಗಳು, ಪ್ರಾಮುಖ್ಯತೆಗಳು ಮತ್ತು ನಂಬಿಕೆಗಳನ್ನು ತೋರಿಸಿಕೊಡುತ್ತದೆ. ವ್ಯಕ್ತಿಯು ತನ್ನ ಮೌಲ್ಯ ಮತ್ತು ಅಗತ್ಯದ ಅನುಸಾರ ಬಾಳ ಸಂಗಾತಿಯಿಂದ ಏನನ್ನು ನಿರೀಕ್ಷಿಸಬಹುದು? ವ್ಯಕ್ತಿಗೆ ಜೀವನದಲ್ಲಿ ಏನು ಮುಖ್ಯ? ಅವರ ಸಿದ್ಧಾಂತಗಳು ಮತ್ತು ವ್ಯಕ್ತಿತ್ವವೇನೆಂಬುದು ಸ್ಪಷ್ಟವಾಗಿ ಅಥ೯ವಾಗುತ್ತದೆ. ಈ ಒಂದು ಟೆಸ್ಟಿನ ಫಲಿತಾಂಶವನ್ನು ಅನುಸರಿಸಿ ನಿತ್ಯ ಅಭ್ಯಾಸ ಮಾಡಿದರೆ ವೈಯಕ್ತಿಕ ಯೋಗಕ್ಷೇಮ ಮತ್ತು ದಾಂಪತ್ಯದ ಯೋಗಕ್ಷೇಮವನ್ನು ಸಾಧಿಸಬಹುದು.

ಒಟ್ಟಾರೆ ಹೇಳುವುದಾದರೆ, ಗಂಡು ಹೆಣ್ಣಿನಲ್ಲಿರುವ ಉಳಿದ ಎಲ್ಲಾ ಅಂಶಗಳ ಹೊಂದಾಣಿಕೆ ಎಷ್ಚು ಮಹತ್ವವೋ ಅಷ್ಚೇ ಮಹತ್ವವದ್ದು ಮೌಲ್ಯಗಳ ಹೊಂದಾಣಿಕೆ ಕೂಡ. ಇಬ್ಬರ ಮೊದಲ 4/ 5 ಮೌಲ್ಯಗಳು ಒಂದೇ ರೀತಿಯಾಗಿದ್ದರೆ, ದಾಂಪತ್ಯ ಜೀವನದಲ್ಲಿ ಸಮರಸ ಮತ್ತು ಹೆೊಂದಾಣಿಕೆಯನ್ನು ಕಾಣಬಹುದು. ಒಂದು ಪಕ್ಷ ಮೌಲ್ಯಗಳು ಭಿನ್ನವಾದಲ್ಲಿ, ದಾಂಪತ್ಯದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗುವ ಸಾಧ್ಯತೆ ಹೆಚ್ಚು. ಹಣ, ಯಶಸ್ಸು, ಆರೋಗ್ಯ ಇಲ್ಲದೆ ಇದ್ದರೂ ಕೂಡ ಸಂಗಾತಿಗಳ ನಡುವೆ ಭಿನ್ನವಾದ ಮೌಲ್ಯಗಳಿರುವದರಿಂದ ಕದನಗಳು, ಭಿನ್ನಾಭಿಪ್ರಾಯಗಳಿಂದ ಕೂಡಿರಬಹುದು. ಹಾಗಾಗಿ, ಗಂಡು ಹೆಣ್ಣಿನ ಹೊಂದಾಣಿಕೆ ಮಾಡುವಾಗ ಅವರ ಮೌಲ್ಯಗಳನ್ನೂ ಕೂಡ ಮಾಡುವುದು ಅವಶ್ಯಕ.

ವಿವಾಹಪೂರ್ವ ಆಪ್ತಸಮಾಲೋಚನೆ (pre-marital counselling)

ವಿವಾಹಪೂರ್ವ ಆಪ್ತಸಮಾಲೋಚನೆಯಲ್ಲಿ ವಿವಾಹವಾಗುವ ಮುನ್ನವೇ ಗಂಡು ಮತ್ತು ಹೆಣ್ಣು ಆಪ್ತಸಮಾಲೋಚನೆಯನ್ನು ತೆಗೆದುಕೊಳ್ಳಬಹುದು. ಇದರ ಒಂಗು ಭಾಗವಾಗಿ VAS ಟೆಸ್ಟ್ಟನ್ನು ತೆಗೆದುಕೊಳ್ಳಬಹುದು. ಈ ಟೆಸ್ಚಿನ ಮೂಲಕ ಒಬ್ಬರನೊಬ್ಬರ ಮೌಲ್ಯಗಳು, ಅಗತ್ಯಗಳು, ನಂಬಿಕೆಗಳನ್ನು ಹಾಗು ಸಾಮಥ್ಯ೯ಗಳನ್ನು ಅಥ೯ಮಾಡಿಕೊಳ್ಳಬಹುದು. ಭಿನ್ನಾಭಿಪ್ರಾಯಗಳಿದ್ದರೆ ಅಥವ ಬೇರೆ ಸಮಸ್ಯೆಗೊಳಿದ್ದರೂ ಕೂಡ ಆಪ್ತಸಮಾಲೋಚಕರಿಂದ ಮಾಗ೯ದಶ೯ನ ಪಡೆದುಕೊಂಡು ತಿದ್ದುಕೊಳ್ಳಬಹುದು.

ಒಂದು ಪಕ್ಷ ನೀವು VAS ಟೆಸ್ಟ್ ಮತ್ತು ವಿವಾಹಪೂರ್ವ ಆಪ್ತಸಮಾಲೋಚನೆ(pre-marital counselling)ಯನ್ನು ತೆಗೆದುಕೆೊಳ್ಳಬೇಕಾದರೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ.

ಭವ್ಯಾ ವಿಶ್ವನಾಥ್ ಪರಿಚಯ

 

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner