ಮಾತು ಕೇಳದ ಮಕ್ಕಳನ್ನು ತಿದ್ದುವುದು ಹೇಗೆ? ರೇಗಿದರೆ ಮಕ್ಕಳ ಮನಸ್ಸು ಕೆಡುತ್ತೆ, ನಿಭಾಯಿಸುವ ರೀತಿ ತಿಳಿಸಿ ಪ್ಲೀಸ್ -ಮನದ ಮಾತು ಅಂಕಣ
ಭವ್ಯಾ ವಿಶ್ವನಾಥ್ ಬರಹ: ‘ಹೇಳಿದ ಮಾತು ಕೇಳದ ಮಕ್ಕಳನ್ನು ನಿಭಾಯಿಸುವುದು ಹೇಗೆ’ -ಬಹುತೇಕ ಪೋಷಕರ ಕೋಟಿ ರೂಪಾಯಿ ಪ್ರಶ್ನೆಗೆ ಈ ಬರಹದಲ್ಲಿದೆ ಉತ್ತರ. ಮಕ್ಕಳು ಪೋಷಕರು ಹೇಳಿದಂತೆ ಕೇಳದಿರಬಹುದು, ಆದರೆ ಪೋಷಕರು ಮಾಡಿದಂತೆ ಮಾಡುವುದು ಮಾತ್ರ ನಿಜ. ಹಾಗಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸಲು ಮೊದಲು ಬದಲಾಗಬೇಕಾದವರು ಯಾರು? -ಈ ಬರಹ ಓದಿದರೆ ನಿಮಗೇ ಅರ್ಥವಾಗುತ್ತದೆ.
ಪ್ರಶ್ನೆ: ನನ್ನ ಮಕ್ಕಳು ನನ್ನ ಮಾತನ್ನೇ ಕೇಳುವುದಿಲ್ಲ. ನಾವು ಮಾತನಾಡುತ್ತಿರುವುದು ಕೇಳಿಸಿಯೂ ಕೇಳಿಸದಂತೆ ಸುಮ್ಮನಿರುತ್ತಾರೆ. ಕೆಲವೊಮ್ಮೆ ಹೇಳಿದ ಕೆಲಸ ಮಾಡುವುದೂ ಇಲ್ಲ. ನನಗಂತೂ ಸಾಕಾಗಿ ಹೋಗಿದೆ. ಅದೇ ಪಕ್ಕದ ಮನೆಯವರ ಮಗಳು ಅಪ್ಪ-ಅಮ್ಮನ ಮಾತುಗಳನ್ನು ಅಚ್ಚುಕಟ್ಟಾಗಿ ಕೇಳುತ್ತಾಳೆ. ಇವರಿಗೆ ಏನಾಗಿದೆ ಮೇಡಂ? ನಾವು ಏನು ಮಾಡಬೇಕು ಹೇಳಿ? -ರಾಧಾ ಮತ್ತು ಗೋವರ್ಧನ, ಪದ್ಮನಾಭನಗರ, ಬೆಂಗಳೂರು
ಉತ್ತರ: ನಿಮ್ಮ ಪ್ರಶ್ನೆ ಮತ್ತು ಸಮಸ್ಯೆ ಅರ್ಥವಾಗುತ್ತೆ. ನನ್ನ ಬಳಿಗೆ ಬರುವ ಹಲವು ಪೋಷಕರು ಇದೇ ಸಮಸ್ಯೆ ಹೇಳಿಕೊಳ್ಳುತ್ತಾರೆ. 'ನಾವು ಹೆತ್ತ ಮಕ್ಕಳು, ನಾವು ಬೆಳೆಸಿದ ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ. ಏನು ಮಾಡಬೇಕು' ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದೆಂದು ತಿಳಿಯೋಣ ಬನ್ನಿ. ಮಕ್ಕಳು ಪೋಷಕರ ಮಾತನ್ನು ಕೇಳಗಿದ್ದಾಗ ಬೇಸರವಾಗುವುದು ಸಹಜ. ತಂದೆ ತಾಯಿಯರಿಗೆ ಇದಕ್ಕಿಂತ ಬೇಸರ ಮತ್ತೊಂದಿಲ್ಲ, ಯಾಕೆಂದರೆ ಅವರು ಹೇಳುವುದು ಮಕ್ಕಳ ಒಳಿತಿಗೇ ಅಲ್ಲವೇ? ಅವರ ಮಾತನ್ನು ಕೇಳದೆ ಹೋದರೆ ಮಕ್ಕಳು ತೊಂದರೆಗೆ ಈಡಾಗುತ್ತಾರೆಂದು ಒಂದು ರೀತಿಯ ಆತಂಕವಾದರೆ ಇನ್ನೊಂದು ಕಡೆ ಮಕ್ಕಳ ತಿರಸ್ಕಾರವನ್ನು ಅಗೌರವ ಎಂದು ಭಾವಿಸುವ ಪೋಷಕರು ನಿರಾಶೆಯ ಭಾವನೆ ಅನುಭವಿಸುತ್ತಾರೆ.
ಮತ್ತೆಮತ್ತೆ ಮಕ್ಕಳ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ ಮತ್ತೊಮ್ಮೆ ಮಗದಮ್ಮೆ ಅದೇ ನಿರಾಶೆ, ಬೇಸರಕ್ಕೆ ಈಡಾಗುತ್ತಾರೆ. ಪರಿಣಾಮವಾಗಿ, ಇಬ್ಬರ ನಡುವೆ (ಮಕ್ಕಳು ಮತ್ತು ಪೋಷಕರು) ಸಿಟ್ಟು, ಜಗಳ, ಮನಸ್ತಾಪಗಳಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಅಪೇಕ್ಷೆ ಮತ್ತು ಪ್ರಬುದ್ಧತೆ
ತಂದೆ ತಾಯಂದಿರು ಮಕ್ಕಳು ತಮ್ಮ ಮಾತನ್ನು ಕೇಳಲಿ ಎಂದು ಅಪೇಕ್ಷಿಸುತ್ತಾರೆ. ಆದರೆ ಮಕ್ಕಳು ಮಾತು ಕೇಳದಿದ್ದಾಗ, ಬೇಸರದ ಜೊತೆಗೆ ಕಾರಣವನ್ನು ಸಹ ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿ. ಯಾವ ಕಾರಣದಿಂದ ಮಗುವು ನಿಮ್ಮ ಮಾತನ್ನು ಕೇಳದೆಯಿರಬಹುದು? ಯಾವುದೇ ಮಗುವು ಸಹಿತ ನಾನು ತಂದೆ ತಾಯಿಯ ಮಾತನ್ನು ಕೇಳಬಾರದು, ಅವರನ್ನು ನೋಯಿಸಬೇಕು, ಅಗೌರವಿಸಬೇಕೆಂದು ಉದ್ದೇಶಪೂವ೯ಕವಾಗಿ ಮಾಡುವುದಿಲ್ಲ. ನೀವು ಹೇಳಿದ ಮಾತು ಅಥ೯ವಾಗುವುದೇ ಇಲ್ಲ ಅಂತೇನಿಲ್ಲ, ಅಥ೯ವೂ ಆಗಿರುತ್ತದೆ, ಮನವರಿಕೆಯೂ ಆಗಿರುತ್ತದೆ. ಆದರೆ ಕೆಲವು ಮಕ್ಕಳು ಪಾಲಿಸುವುದಿಲ್ಲ.
ಮಕ್ಕಳೇಕೆ ಪೋಷಕರ ಮಾತು ಕೇಳುವುದಿಲ್ಲ: ಕಾರಣ ತಿಳಿಯಿರಿ
ಮಕ್ಕಳಿಗೆ ಪೋಷಕರಲ್ಲಿರುವಷ್ಟು ಪ್ರಬುದ್ಧತೆ ಬಂದಿರುವುದಿಲ್ಲ. ಸರಿ-ತಪ್ಪುಗಳ ಅರಿವಾದರೂ ಅದನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ತಮ್ಮ ಭಾವನೆಗಳ ಮೇಲೆ ಹತೋಟಿಯಿರುವುದಿಲ್ಲ. ಕೋಪ, ಸಂತೋಷ, ದುಃಖ, ಹಟ, ಭಯಗಳೆಲ್ಲವೂ ಅತಿರೇಕದಲ್ಲಿರುತ್ತವೆ. ವಯಸ್ಸಿಗೆ ಸಹಜವಾದ ಏಕಾಗ್ರತೆಯ ಕೊರತೆ (ಡಿಸ್ಟ್ರಾಕ್ಷನ್ಸ್) ಮತ್ತು ಆಕರ್ಷಣೆಗಳಿರುತ್ತವೆ. ಸ್ನೇಹಿತರ ಮತ್ತು ಸೆಲೆಬ್ರಿಟಿಗಳ ಪ್ರಭಾವ ಮಕ್ಕಳ ಬುದ್ಧಿಯ ಮೇಲೆ ಹೆಚ್ಚು ಪರಿಣಾಮವನ್ನು ಬೀರಿರುತ್ತದೆ.
ಈ ಥರದ ಮನಸ್ಥಿತಿ ಅವರ ವಯಸ್ಸಿನಲ್ಲಿ ಸ್ವಾಭಾವಿಕ. ಶಾಲೆಗಳಲ್ಲಿ, ಸ್ನೇಹಿತರ ನಡುವೆ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಸ್ಪರ್ಧೆಗಳು, ಒತ್ತಡ, ತಮ್ಮದೇ ಆದ ವಿಚಾರಗಳು ಮತ್ತು ಸಮಸ್ಯೆಗಳಿರುತ್ತವೆ. ಇದರ ಜೊತೆಗೆ ವಿದ್ಯಾಭ್ಯಾಸ, ಉತ್ತಮ ಕಲಿಕೆಯೂ ಆಗಬೇಕು. ಪರಿಣಾಮವಾಗಿ ಸಾಕಷ್ಟು ಗೊಂದಲಗಳು, ಅಸಮಾಧಾನ, ಅಸಹಾಯಕತೆಯೂ ಅವರನ್ನು ಕಾಡುತ್ತದೆ. ತಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವ ಅರಿವು ಮಕ್ಕಳಿಗೆ ಇರುವುದಿಲ್ಲ. ಕೆಲ ಮಕ್ಕಳಿಗೆ ಅಂಥ ಸ್ವಯಂ ಅರಿವು ಇದ್ದರೂ ಅವನ್ನು ನೇರವಾಗಿ ಪೋಷಕರ ಬಳಿ ಹಂಚಿಕೊಳ್ಳುವುದಿಲ್ಲ.
ಪೋಷಕರು ಹೇಗೆ ತಮ್ಮ ಮನಸ್ಥಿತಿಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆಯೋ, ಹಾಗೆಯೇ ಮಕ್ಕಳು ಸಹ ತಮ್ಮ ಮನಸ್ಥಿತಿಯನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ನಾವು ಹೇಳಿಕೊಳ್ಳಿದಿದ್ದರೂ ನಮ್ಮ ಮನಸ್ಥಿತಿ ಪೋಷಕರಿಗೆ ಅರ್ಥವಾಗಬೇಕು ಎಂದು ಮಕ್ಕಳು ನಿರೀಕ್ಷಿಸುತ್ತಾರೆ.
ಮಕ್ಕಳ ಮೌನದಲ್ಲಿ ಹಲವು ಅರ್ಥಗಳಿವೆ
ಮಕ್ಕಳ ಮೌನವನ್ನು ಅರಿತುಕೊಳ್ಳಲು ಪೋಷಕರು ಪ್ರಯತ್ನಿಸಬೇಕಕು. ಮೌನದ ಹಿಂದೆ ಸಾಕಷ್ಚು ಮಾತುಕತೆಗಳು ನಡೆಯುತ್ತಿರುತ್ತವೆ. ಮೌನದ ಮೂಲಕವೇ ನಿಮಗೆ ಅವರು ಏನನ್ನೋ ಹೇಳುವ ಪ್ರಯತ್ನವನ್ನೂ ಮಾಡುತ್ತಿರುತ್ತಾರೆ. ಆದರೆ ಇಬ್ಬರ ನಡುವೆ ನೇರ ನಿರಂತರ ಸಂಹವನ ಕ್ರಿಯೆ ಸರಿಯಾಗಿ ನಡೆಯುತ್ತಿರುವುದಿಲ್ಲ. ಮೌನವೂ ಒಂದು ಭಾಷೆ ಎನ್ನುವ ಗ್ರಹಿಕೆಯೂ ಎಷ್ಟೋ ಪೋಷಕರಿಗೆ ಇರುವುದಿಲ್ಲ.
ಬದಲಿಗೆ ಬಹುತೇಕ ಪೋಷಕರು ಮಕ್ಕಳ ಮೌನವನ್ನು ನಿರ್ಲಕ್ಷಿಸುತ್ತಾರೆ, ಅವಮಾನಿಸುತ್ತಾರೆ, ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮಗು ತಮ್ಮ ಮಾತು ಕೇಳುವುದಿಲ್ಲ ಎನ್ನುವುದೇ ಪೋಷಕರ ಪೂರ್ವಗ್ರಹವಾಗಿರುತ್ತದೆ. ಮಾತನ್ನು ಕೇಳಿದರೆ ತಕ್ಷಣವೇ ಒಪ್ಪಿಕೊಂಡು ಜಾರಿಗೆ ತರಬೇಕು ಎನ್ನುವ ಅಪೇಕ್ಷೆಯು ಸಹ ಪೋಷಕರಿಗೆ ಮಕ್ಕಳ ಮೌನವನ್ನು ಗ್ರಹಿಸುವುದಕ್ಕೆ ಅಡ್ಡಿಯುಂಟು ಮಾಡುತ್ತದೆ. ಮಕ್ಕಳೂ ಸಹ ಪೋಷಕರು ನಮ್ಮನ್ನು ಅಥ೯ವೇ ಮಾಡಿಕೊಳ್ಳುವುದಿಲ್ಲ, ನಮ್ಮ ಮಾತನ್ನು ಒಪ್ಪುವುದೇ ಇಲ್ಲ ಎಂದು ಪೂವ೯ಗ್ರಹಪೀಡಿತ ದೃಷ್ಟಿಯಿಂದ ಸುಮ್ಮನಾಗಿ ಮೌನದ ಮೊರೆ ಹೋಗುತ್ತಾರೆ. ಮೌನವನ್ನೇ ಅಸ್ತ್ರವಾಗಿಸಿಕೊಂಡು ಹೋರಾಡುತ್ತಾರೆ.
ಮಕ್ಕಳಿಗೆ ಪೋಷಕರೇ ಮಾದರಿ (role model)
ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು. ರೋಲ್ ಮಾಡೆಲ್ ಆಗಬೇಕೆಂದರೆ ನೀವು ಮಕ್ಕಳಿಂದ ಏನು ಬಯಸುತ್ತೀರೋ, ಅದನ್ನು ಸ್ವತಃ ಮಾಡಿ ತೋರಿಸಬೇಕು. ಮಕ್ಕಳು ಹಿರಿಯರು ಹೇಳುವ ಮಾತುಗಳನ್ನು ಸಾಮಾನ್ಯವಾಗಿ ಸುಮ್ಮನೆ ಕೇಳುವುದಿಲ್ಲ. ಅಂಥದ್ದನ್ನು ಅವರು ಬೋಧನೆ ಎಂದೇ ಭಾವಿಸುತ್ತಾರೆ. ಆದರೆ ಹಿರಿಯರನ್ನು ಅನುಕರಿಸುವ ವಿಚಾರದಲ್ಲಿ ಅವರು ಹಿಂದೆ ಬೀಳುವುದಿಲ್ಲ. ಹಿರಿಯರ ನಡುವಳಿಕೆ, ಹಾವಭಾವ, ಆಲೋಚನೆ ಸೇರಿದಂತೆ ಬಹುತೇಕ ಎಲ್ಲವನ್ನೂ ಗಮನಿಸಿ ಅನುಕರಿಸುತ್ತಾರೆ. ಹಾಗಾಗಿ ಹಿರಿಯರು ಮಕ್ಕಳಿಂದ ಏನು ಬಯಸುತ್ತಾರೋ ಅದನ್ನು ಮೊದಲು ತಾವೇ ಅನುಸರಿಸಿ ತೋರಿಸಿಕೊಡಬೇಕು.
ಮಕ್ಕಳಿಗೆ ಒಳ್ಳೆಯದನ್ನು ಕಲಿಸಬೇಕು ಮತ್ತು ಅವರ ಮೇಲೆ ನಿಮ್ಮ ಪ್ರಭಾವವು ಒಳ್ಳೆಯ ರೀತಿಯಲ್ಲಿ ಬೀರಬೇಕು ಎಂದಾದರೆ ನೇರವಾಗಿ ಬೋಧನೆ ಮಾಡುವ ಬದಲು ನೀವೇ ಮಾದರಿ ಎನ್ನುವಂತೆ ನಡೆದುಕೊಳ್ಳಿ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.
1) ಮಗುವಿಗೆ ಊಟದ ವೇಳೆಯಲ್ಲಿ ಫೋನ್ ನೋಡಬೇಡವೆಂದು ಹೇಳುವ ಬದಲು ನೀವು ಇದನ್ನು ಪ್ರತಿದಿನ ಪಾಲಿಸಬೇಕು. ಊಟದ ಸಮಯದಲ್ಲಿ ನೀವು ಫೋನ್ ಬಳಕೆ ಮಾಡಬೇಡಿ. ಮಗುವು ನಿಮ್ಮನ್ನು ಗಮನಿಸುತ್ತಿರುತ್ತದೆ. ತಕ್ಷಣವಲ್ಲದಿದ್ದರೂ ನಿಧಾನವಾಗಿ ನಿಮ್ಮನ್ನು ಅನುಸರಿಸುವ ಸಾಧ್ಯತೆ ಹೆಚ್ಚಿರುತ್ತದೆ.
2) ರಾತ್ರಿ ಬೇಗ ಮಲಗಿ, ಬೇಗನೇ ಏಳೆಂದು ನಿಮ್ಮ ಮಗುವಿಗೆ ಹೇಳುವ ಬದಲು, ನೀವು ಇದನ್ನು ರೂಢಿ ಮಾಡಿಕೊಳ್ಳಬೇಕು.
3) ಮಕ್ಕಳು ನಿಮ್ಮ ಬಳಿ ಮಾತನಾಡುವಾಗ ನೀವು ಮಾಡುತ್ತಿರುವ ಕೆಲಸಗಳನ್ನು ಬಿಟ್ಟು ಮಕ್ಕಳ ಮಾತನ್ನು ಗಮನವಿಟ್ಟು ಕೇಳಬೇಕು ಮತ್ತು ಸ್ಪಂದಿಸಬೇಕು. ಆಗ ಮಕ್ಕಳು ಸಹ ನೀವು ಮಾತಾನಾಡುವಾಗ ನಿಮ್ಮ ಮಾತನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ, ಸ್ಪಂದಿಸುತ್ತಾರೆ.
ಮಕ್ಕಳ ವಿಪರೀತ ದೂಷಣೆ ಸಲ್ಲದು
ಮಕ್ಕಳನ್ವು ಸುಧಾರಿಸುವುದು ನಿಮ್ಮ ಉದ್ದೇಶವಾಗಿರುತ್ತದೆ. ಆದರೆ ನಿಮ್ಮ ಮಾತು ಕೇಳುವುದಿಲ್ಲವೆಂದು ಮಕ್ಕಳನ್ನು ವಿಪರೀತವಾಗಿ ದೂಷಿಸುವುದು ತಪ್ಪು. ಕೆಲ ಪೋಷಕರು ನೆಂಟರಿಷ್ಟರು ಮತ್ತು ಸ್ನೇಹಿತರ ಬಳಿ ಮಕ್ಕಳನ್ನು ಬಹಳ ದೂಷಿಸುತ್ತಾರೆ. ನಿಮ್ಮ ದೂಷಣೆ ಕೇಳಿಸಿಕೊಂಡ ಮಕ್ಕಳು ನೊಂದುಕೊಳ್ಳುತ್ತಾರೆ, ತಮ್ಮನ್ನು ಹೀಯಾಳಿಸುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಇದರಿಂದ ಮಕ್ಕಳ ಆತ್ಮವಿಶ್ವಾಸವೂ ಕುಗ್ಗಬಹುದು. ದೂಷಿಸುವುದರಿಂದ ಸಮಸ್ಯೆಗೆ ಪರಿಹಾರವೂ ಸಿಗುವುದಿಲ್ಲ ಮತ್ತು ಮಕ್ಕಳೂ ಸಹ ಸುಧಾರಿಸುವುದಿಲ್ಲ. ಬದಲಾಗಿ, ಮಕ್ಕಳು ಇನ್ನಷ್ಟು ಮೊಂಡಾಗುತ್ತಾರೆ. ಪ್ರೌಢಾವಸ್ಥೆಗೆ ಬಂದ ಮಕ್ಕಳು, ಅವರು ತಪ್ಪು ಮಾಡಿದರೂ ಕೂಡ ಪೋಷಕರ ದೂಷಣೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ಬದಲು, ಒಳ್ಳೆಯ ಮಾತಿನಿಂದ, ಅವರ ಒಳ್ಳೆಯ ಗುಣಗಳನ್ನು ಪ್ರಶಂಶಿಸಿ, ಉಳಿದ ಗುಣಗಳನ್ನು ಸುಧಾರಿಸಲು ಯತ್ನಿಸಿ.
ಪೋಷಕರೊಂದಿಗೆ ಮಕ್ಕಳ ಸಲಿಗೆ, ಸದರದ ಗೆರೆ
ಮಕ್ಕಳಿಗೆ ಪೋಷಕರ ಜೊತೆ ಪ್ರೀತಿ, ಗೌರವದ ಜೊತೆ ಸದರ, ಸಲಿಗೆಯೂ ಇರುತ್ತದೆ. ಆದರೆ ಶಿಕ್ಷಕರು ಮತ್ತು ಸಹಪಾಠಿಗಳ ಪೋಷಕರ ವಿಚಾರದಲ್ಲಿ ಸಲಿಕೆ-ಸದರ ಇರುವುದಿಲ್ಲ. ಅವರೊಂದಿಗೆ ಮಕ್ಕಳು ಎಚ್ಚರ ಮತ್ತು ಗೌರವದಿಂದ ನಡೆದುಕೊಳ್ಳುತ್ತಾರೆ. ನಮ್ಮ ಪೋಷಕರು ನಮ್ಮನ್ನು ಅಥ೯ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಅವರದು. ಪೋಷಕರು ಈ ಅಂಶವನ್ನು ನೆನಪಿಡಬೇಕು. ಆದರೆ, ಸದರ ಸಲಿಗೆ ವಿಪರೀತವಾದಾಗ ಮಕ್ಕಳನ್ನು ಎಚ್ಚರಿಕೆಯಿಂದ ನಡೆದುಕೊಳ್ಳಲು ಸೂಚಸಬೇಕು.
ಸಹಾನುಭೂತಿ, ಸಂಯಮ ಮತ್ತು ಸಮಯ
ಮೇಲೆ ವಿವರಿಸಿದ ಎಲ್ಲಾ ಅಂಶಗಳನ್ನು ಪಾಲಿಸಬೇಕಂದರೆ, ಪೋಷಕರಿಗೆ ಮಕ್ಕಳ ಮೇಲೆ ಸಹಾನುಭೂತಿ ಬೆಳೆಸಿಕೊಳ್ಳುವುದು ಅಗತ್ಯ. ಮಕ್ಕಳ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಅರಿತು ಅದರ ಅನುಸಾರವಾಗಿ ನಡೆದುಕೊಳ್ಳಿ. ಮತ್ತು ಅವರ ತಪ್ಪಗಳನ್ನು ಸುಧಾರಿಸಿಕೊಳ್ಳಲು ಸಮಯಾವಕಾಶವನ್ನು ನೀಡಿ. ದಿಢೀರ್ ಸುಧಾರಣೆಯನ್ನು ಅಪೇಕ್ಷಿಸಬೇಡಿ. ಪೋಷಕರಿಗೆ ಸಂಯಮವಿದ್ದಷ್ಟೂ ಮಕ್ಕಳನ್ನು ಸುಧಾರಿಸುವುದು ಸುಲಭ. ನೆನಪಿಡಿ, ಮಕ್ಕಳೂ ನಿಮ್ಮ ಈ ಗುಣವನ್ನು ಸಹ ಭವಿಷ್ಯದಲ್ಲಿ ಅನುಸರಿಸುತ್ತಾರೆ.
ಮಕ್ಕಳ ಪಾಲನೆ, ಪೋಷಣೆಯೂ ಹೋರಾಟದ ಸುದೀರ್ಘ ಪ್ರಯಾಣ. ಇಲ್ಲಿ ಕಲಿಸುವುದರ ಜೊತೆ ಕಲಿಯುವುದೂ ಸಹ ಸಾಕಷ್ಟು ಉಂಟು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.