ಬದುಕು ಬದಲಾಗಬೇಕು ಎಂದರೆ ಅಭ್ಯಾಸಗಳು ಸರಿಯಿರಬೇಕು, ಸರಿಯಾದ ಅಭ್ಯಾಸ ರೂಢಿಸಿಕೊಳ್ಳುವುದು ಹೇಗೆ? ಈ ಅಂಶ ಗಮನಿಸಿ, ಅನುಸರಿಸಿ -ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  ಬದುಕು ಬದಲಾಗಬೇಕು ಎಂದರೆ ಅಭ್ಯಾಸಗಳು ಸರಿಯಿರಬೇಕು, ಸರಿಯಾದ ಅಭ್ಯಾಸ ರೂಢಿಸಿಕೊಳ್ಳುವುದು ಹೇಗೆ? ಈ ಅಂಶ ಗಮನಿಸಿ, ಅನುಸರಿಸಿ -ಮನದ ಮಾತು

ಬದುಕು ಬದಲಾಗಬೇಕು ಎಂದರೆ ಅಭ್ಯಾಸಗಳು ಸರಿಯಿರಬೇಕು, ಸರಿಯಾದ ಅಭ್ಯಾಸ ರೂಢಿಸಿಕೊಳ್ಳುವುದು ಹೇಗೆ? ಈ ಅಂಶ ಗಮನಿಸಿ, ಅನುಸರಿಸಿ -ಮನದ ಮಾತು

ಉತ್ತಮ ರೀತಿಯಲ್ಲಿ, ಫಲಪ್ರದವಾಗಿ ಬದುಕು ಕಳೆಯಬೇಕು ಎನ್ನುವುದು ಹಲವರ ಆಶಯ. ಬದುಕನ್ನು ಸುಧಾರಿಸಿಕೊಳ್ಳಲು ಸಿದ್ಧರಿರುತ್ತಾರೆ. ಆದರೆ ಹೇಗೆ ಪ್ರಯತ್ನ ಮಾಡಬೇಕು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರುವುದಿಲ್ಲ. ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು, ಒಳ್ಳೆಯ ರೀತಿಯಲ್ಲಿ ಜೀವನ ಕಳೆಯಬೇಕು ಎನ್ನುವ ಛಲ ಇರುವವರು ನೀವಾಗಿದ್ದರೆ ಈ ಬರಹ ನಿಮಗಾಗಿ.

ಮನದ ಮಾತು – ಭವ್ಯಾ ವಿಶ್ವನಾಥ್
ಮನದ ಮಾತು – ಭವ್ಯಾ ವಿಶ್ವನಾಥ್

ನಮ್ಮ ಪ್ರತಿದಿನದ ಈ 5 ಅಭ್ಯಾಸಗಳು ನಮ್ಮ ಬದುಕನ್ನು ಬದಲಾಯಿಸಬಲ್ಲದು. ಹಲವರು ಜೀವನವಿಡೀ ಅಭ್ಯಾಸಗಳೆಂದರೆ ನಾವು ಪದೇಪದೆ ಮಾಡುವ ಕೆಲಸಗಳು ಮತ್ತು ಆಲೋಚನೆಗಳು. ಒಂದು ಕ್ಷಣದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗುವ ಅಭ್ಯಾಸಗಳು ಅನೇಕ ಸಲ ಪುನರಾವೃತ್ತಿಯಾಗುತ್ತವೆ. ನಂತರ ನಮ್ಮಲ್ಲೇ ನೆಲೆಗೂಡುವ ಇಂಥ ಕ್ರಿಯೆಯನ್ನೇ ಅಭ್ಯಾಸ ಎನ್ನಲಾಗುತ್ತದೆ. ಇದು ಪ್ರಯತ್ನಪೂರ್ವಕ ಅಥವಾ ಪ್ರಯತ್ನವೇ ಇಲ್ಲದೆ ನಡೆಸುವ ಕ್ರಿಯೆ ಆಗಬಹುದು. ಅಭ್ಯಾಸಗಳು ದೈಹಿಕ ಮತ್ತು ಮಾನಸಿಕ ಎನ್ನುವ ಎರಡೂ ರೂಪಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ನಾವು ಪದೇಪದೆ ಯೋಚಿಸುವಂತಹ ವಿಚಾರಗಳು, ಭಾವನೆಗಳು, ನಮ್ಮನ್ನು ನಾವು ತೊಡಗಿಸಿಕೊಳ್ಳುವ ಕೆಲಸಗಳು, ದೈಹಿಕ ಚಲನವಲನಗಳೆಲ್ಲವೂ ಅಭ್ಯಾಸಗಳಾಗಿ ಮಾರ್ಪಡುತ್ತವೆ. ಪ್ರತಿದಿನ ಒಂದೇ ಸಮಯಕ್ಕೆ ಆಹಾರ ಸೇವಿಸುವುದು, ಉದ್ಯೋಗಕ್ಕೆ ಹೊರಡುವುದು, ಎದ್ದ ತಕ್ಷಣ ಪ್ರಾಥಿ೯ಸುವುದು, ಆತ್ಮೀಯರಿಗೆ ಒಂದೇ ಸಮಯಕ್ಕೆ ಕರೆ ಮಾಡಿ ಮಾತನಾಡುವುದು, ಫೋನ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು, ಪುಸ್ತಕ ಓದುವುದು, ಧಾರಾವಾಹಿಗಳನ್ನು ವೀಕ್ಷಿಸುವುದು ಇತ್ಯಾದಿಗಳೆಲ್ಲವೂ ಅಭ್ಯಾಸಗಳೇ ಆಗುತ್ತವೆ.

ಹೀಗೆಯೇ ನಮ್ಮಲ್ಲಿ ಪದೇಪದೆ ಮೂಡುವ ಆಲೋಚನೆಗಳು ಸಹ ಕ್ರಮೇಣ ಅಭ್ಯಾಸಗಳೇ ಆಗಬಹುದು. ಹಣ, ಆಸ್ತಿ, ಆರೋಗ್ಯ, ವಿದ್ಯೆ, ಹುಟ್ಟು, ಸಾವು, ಸೌಂದರ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೆಚ್ಚು ಆಲೋಚನೆ ಮಾಡುವುದೆಲ್ಲವೂ ಅಭ್ಯಾಸವಾಗಿ ಬಿಡಬಹುದು. ಹಾಗಾಗಿ ನಾವು ಬೆಳೆಸಿಕೊಳ್ಳುವಂತಹ ಒಳ್ಳೆಯ ಹಾಗೂ ಕೆಟ್ಟ ಅಭ್ಯಾಸಗಳು (ವ್ಯಸನ / ಚಟ) ನಮ್ಮಲ್ಲಿ ಒಳಗೂಡಿ ನಮ್ಮನ್ನು ಯಾವ ರೀತಿಯಲ್ಲಿಯಾದರೂ ಬದಲಾಯಿಸಬಹುದು. ಆದರೆ ಅಭ್ಯಾಸಗಳ ಆಯ್ಕೆ ನಮ್ಮದಾಗಿರುತ್ತದೆ. ಆದ್ದರಿಂದ ಅಭ್ಯಾಸಗಳನ್ನು ಬೆಳೆಸಿಕೊಳ್ಳುವಾಗ ಎಚ್ಚರದಿಂದಿರಬೇಕು.

ನಮ್ಮ ಕೆಲವು ಪ್ರಮುಖ ದೈನಂದಿನ ಅಭ್ಯಾಸಗಳಿಗೆ ನಮ್ಮನ್ನು ಬದಲಿಸುವ ಸಾಮರ್ಥ್ಯ ಇರುತ್ತದೆ. ಇವುಗಳ ಕುರಿತು ಇನಷ್ಟು ತಿಳಿಯೋಣ

1) ಕೃತಜ್ಞತೆ (Gratitude): ಕೃತಜ್ಞತೆ ಸಲ್ಲಿಸುವುದನ್ನೂ ಸಹ ನಾವು ಒಂದು ಅಭ್ಯಾಸವಾಗಿ ರೂಢಿಸಿಕೊಳ್ಳಬಹುದು. ಪ್ರತಿ ಮುಂಜಾನೆ ಎದ್ದ ತಕ್ಷಣವೇ ಸೂರ್ಯನಿಗೆ ನಮನ ಸಲ್ಲಿಸುವುದನ್ನು ಹಲವರು ರೂಢಿಸಿಕೊಂಡಿರುತ್ತಾರೆ. ಸೇವಿಸುವ ಗಾಳಿ, ನೀರು, ಭೂಮಿ, ಆಹಾರ, ತಂದೆ ತಾಯಿ, ಕುಟುಂಬ, ಆರೋಗ್ಯ, ವಿದ್ಯೆ ಪಡೆದುದಕ್ಕಾಗಿ ಹೃತ್ಪೂವ೯ಕ ಧನ್ಯವಾದಗಳನ್ನು ಸಲ್ಲಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. 'ನನಗೆ ಏನೆಲ್ಲಾ ಸಿಕ್ಕಿದೆಯೋ ಅದಕ್ಕಾಗಿ ಧನ್ಯವಾದ' (Thank you for everything I have) ಎಂದು ಮನಃಪೂರ್ವಕ ನೆನೆಯಬೇಕು. ಹೀಗೆ ಪ್ರತಿ ಮುಂಜಾನೆ ಮಾಡುವುದರಿಂದ ನಮ್ಮ ಬದುಕಿನಲ್ಲಿ ನಮಗೆ ಲಭ್ಯವಿರುವ ಪ್ರತಿ ಅಂಶದ ಮಹತ್ವ ಅರಿವಾಗಿ ಮನಸ್ಸು ತೃಪ್ತಿಯಿಂದಲೂ, ಸಮಾಧಾನದಿಂದರಲೂ ಸ್ಪಂದಿಸುತ್ತದೆ. ನಮ್ಮ ಆಲೋಚನೆಗಳು ಪಾಸಿಟಿವ್ ಆಗುತ್ತವೆ. ಕಠಿಣ ಪರಿಸ್ಥಿತಿ ಎದುರಾದಾಗ ಪರಿಣಾಮಕಾರಿಯಾಗಿ ಎದುರಿಸಲು ಅನುಕೂಲ ಮಾಡಿಕೊಡುತ್ತದೆ.

2) ಧ್ಯಾನ: ಸಾಮಾನ್ಯವಾಗಿ ಧ್ಯಾನವೆಂದರೆ ಭಗವಂತನ ಕುರಿತು ಅಥವಾ ಆಧ್ಯಾತ್ಮಿಕ ಸಾಧನೆಯಲ್ಲಿದ್ದವರು ಮಾತ್ರ ಮಾಡುವಂಥದ್ದು ಎಂದು ಭಾವಿಸುತ್ತಾರೆ. ಸಾಮಾನ್ಯ ಜನರು, ಸಂಸಾರಿಗಳಿಗೆ ಧ್ಯಾನ ಸಲ್ಲದು ಎನ್ನುವ ತೀರ್ಮಾನಕ್ಕೂ ಹಲವರು ಬಂದಿರುತ್ತಾರೆ. ಧ್ಯಾನ ಎನ್ನುವುದು ಮನಸ್ಸನ್ನು ನಿಯಂತ್ರಿಸುವ, ಮನಸ್ಸನ್ನು ಪ್ರಶಾಂತಗೊಳಿಸುವ ಒಂದು ಮಹತ್ವ ವಿಧಾನ. ಏಕಾಗ್ರತೆ, ನೆನಪಿನ ಶಕ್ತಿ, ಸಮತೋಲನ, ಸ್ಪಷ್ಟತೆಗಳೆಲ್ಲವೂ ಧ್ಯಾನದಿಂದ ಲಭ್ಯವಾಗುತ್ತವೆ. ಧ್ಯಾನವು ಗೊಂದಲ, ನೆಗೆಟಿವ್ ಥಿಂಕಿಂಗ್, ಆತಂಕ, ದುಗುಡ, ದುಃಖಗಳನ್ನು ನಿಯಂತ್ರಿಸಲು ಮತ್ತು ದುಶ್ಚಟಗಳನ್ನು ದೂರವಾಗಿಸಲು ನೆರವು ಮಾಡಿಕೊಡುತ್ತದೆ. ಆದ್ದರಿಂದ ನಿಮಗೆ ಅನುಕೂಲವಾಗುವ ಸಮಯದಲ್ಲಿ ದಿನಕ್ಕೆ ಒಂದು ಸಲವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

3) ಪ್ರಜ್ಞಾಪೂರ್ವಕವಾಗಿ ಆಹಾರ ಸೇವಿಸುವುದು (Mindfult Eating): ಆಹಾರ ಸೇವಿಸುವಾಗ ಮನಸ್ಸನ್ನು ಇತರೆಡೆ ಹರಿಯಬಿಡುವುದು ಸಾಮಾನ್ಯವಾಗುತ್ತಿದೆ. ಉದಾಹರಣೆಗೆ ಫೋನ್ ಬಳಸುತ್ತಾ, ಮೀಟಿಂಗಿನಲ್ಲಿ ತೊಡಗಿಸಿಕೊಂಡು, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಒಂದು ರೋಲ್ ಅಥವಾ ಸಾಂಡ್‌ವಿಚ್, ಬರ್ಗರ್‌ಗಳನ್ನು ತಿನ್ನುವುದು, ಟಿವಿ ನೋಡಿಕೊಂಡು ಸೇವಿಸುವುದು ಸಾಮಾನ್ಯವಾಗಿದೆ. ಪೋಷಕರು ಮಕ್ಕಳಿಗೆ ಊಟ ಮಾಡಿಸುತ್ತಿದ್ದರೆ, ಮಕ್ಕಳು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಾರೆ. ಒಂಟಿಯಾಗಿ ಇದ್ದರಂತೂ ಇವುಗಳಿಲ್ಲದೇ ಆಹಾರ ಸೇವಿಸುವುದು ‘ಬೋರಿಂಗ್’ ಎನ್ನುವ ಮನಸ್ಥಿತಿ ಕಾಡುತ್ತಿದೆ. ಆದರೆ ಈ ರೀತಿ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳಯದಲ್ಲ. ಏನನ್ನು ತಿನ್ನುತ್ತಿದ್ದೇವೆ? ಎಷ್ಟು ತಿನ್ನುತಿದ್ದೇವೆ? ಇನ್ನಷ್ಟು ಬೇಕೋ ಬೇಡವೋ ಎನ್ನುವುದೂ ಗೊತ್ತಾಗದೇ, ಗಮನವೆಲ್ಲ ಬೇರೆಲ್ಲೋ ಇಟ್ಟುಕೊಂಡು ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಪರಿಣಾಮವಾಗಿ ಅನಗತ್ಯ ಅಥವಾ ಅಗತ್ಯಕಿಂತ ಕಡಿಮೆ ಆಹಾರ ಸೇವಿಸುವ ಅಪಾಯ ಇರುತ್ತದೆ. ಜಂಕ್‌ಫುಡ್‌ಗಳನ್ನು ಅನಗತ್ಯವಾಗಿ ಸೇವಿಸಿ ಅಜೀರ್ಣಕ್ಕೆ ತುತ್ತಾಗಬಹುದು. ಇದರ ಪರಿಣಾಮವಾಗಿ ಗ್ಯಾಸ್ಟ್ರಿಕ್, ಆಸಿಡಿಟಿಗಳಿಂದ ನರಳುವುದು, ಮನಸ್ಸಿಗೆ ಕಿರಿಕಿರಿ, ಬೇಸರ ಮಾಡಿಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಈ ಕಾರಣಗಳಿಂದಾಗಿ ಆಹಾರ ಸೇವಿಸುವಾಗ ಸಂಪೂರ್ಣ ಗಮನವಿಟ್ಟುಕೊಂಡು ಮನಸ್ಸಿಗೆ ಅತ್ತಇತ್ತ ಹರಿಯದಂತೆ (ಡಿಸ್ಟ್ರಾಕ್ಷನ್) ಸೇವಿಸಬೇಕು. ಇದು ಮನಸ್ಸಿಗೆ ಮತ್ತು ದೇಹಕ್ಕೆ ಒಳ್ಳೆಯದು.

4) ದಿನವನ್ನು ಪರಿಶೀಲಿಸಿ: ಪ್ರತಿದಿನ ನಮ್ಮ ದಿನ ನಮಗೇ ಪರಿವಿಲ್ಲದೆ ಕಳೆದು ಹೋಗುತ್ತದೆ. ಅಷ್ಟರಮಟ್ಚಿಗೆ ನಾವು ಬ್ಯುಸಿಯಾಗಿರುತ್ತೇವೆಯೋ ಅಥವಾ ನಿರ್ಲಕ್ಷ್ಯ ಮಾಡುತ್ತೇವೆಯೋ ತಿಳಿಯುವುದಿಲ್ಲ. ನಂತರ ಅಯ್ಯೋ ದಿನ ಹೇಗೆ ಹೋಯಿತೋ ಗೊತ್ತಾಗಲೇ ಇಲ್ಲ, ಅಂದುಕೊಂಡಿದ್ದು ಮಾಡಲೇ ಇಲ್ಲ ಎಂದು ಒದ್ದಾಡುತ್ತೇವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಮ್ಮೆ, ಇಡೀ ದಿನವನ್ನು ಮೆಲುಕು ಹಾಕುವುದನ್ನು ಅಭ್ಯಾಸಮಾಡಿ. ನೀವು ಏನೇನು ಮಾಡಿದಿರಿ? ಪರಿಸ್ಥಿತಿಗಳನ್ನು ಹೇಗೆ ಎದುರಿಸಿದಿರಿ? ಯಾವ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದಿರಿ? ಸಮಯವನ್ನು ಎಷ್ಚು ಉಪಯುಕ್ತವಾಗಿ ಬಳಿಸಿದಿರಿ? ಹೀಗೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದಾಗ ಸುಧಾರಣೆ ಮಾಡಿಕೊಳ್ಳಬಹುದು. ಸಮಯ ನಿರ್ವಹಣೆಯನ್ನೂ (Time Management) ಸಹ ರೂಢಿಸಿಕೊಳ್ಳಬಹುದು. ಇವತ್ತು ಏನು ತಪ್ಪಾಗಿದೆ ಎನ್ನುವುದು ಅರಿವಾದರೆ ಮಾರನೇ ದಿನದಿಂದ ಸುಧಾರಿತ ದಿನಚರಿ ರೂಢಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಮ್ಮ ನಡವಳಿಕೆ, ದಿನಚರಿ, ಸಾಮಥ್ಯ೯, ದೌಬ೯ಲ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

5) ದಿನವನ್ನು ಸರಿಯಾಗಿ ಯೋಜಿಸಿ: ದಿನವನ್ನು ಪ್ಲಾನ್ ಮಾಡುವುದು ಅಗತ್ಯ. ಇಲ್ಲವಾದಲ್ಲಿ, ನೀರು ಹರಿದು ಹೋದಂತೆ ದಿನಗಳು ಜಾರಿ ಹೋಗುತ್ತವೆ. ಯಾವ ಕೆಲಸ ಕಾಯ೯ಗಳಿಗೆ ಮೊದಲ ಆದ್ಯತೆ ಮತ್ತು ಸಮಯ ನೀಡಬೇಕು ಎನ್ನುವುದನ್ನು ಪ್ಲಾನ್ ಮಾಡಿ. ಬಾಕಿಯಿರುವ ಕೆಲಸ ಕಾಯ೯ಗಳು ಮಹತ್ವವಾಗಿದ್ದರೆ, ಅವುಗಳಿಗೆ ಆದ್ಯತೆ ನೀಡಿ ಮುಗಿಸಿ. ನಿಮ್ಮ ಬದುಕಿನ ಈ ಹಂತದ ಗುರಿಗಳ ಅನುಸಾರ ನಿಮ್ಮ ದಿನಚರಿಯನ್ನು ಪ್ಲಾನ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ಶಿಸ್ತಿನ ಜೊತೆಗೆ ಉಲ್ಲಾಸವಿರುತ್ತದೆ ಮತ್ತು ಪಾಪಪ್ರಜ್ಞೆ ಕಾಡುವುದಿಲ್ಲ. ಶಿಸ್ತಿನಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಯಾಕೆಂದರೆ ಸರಿಯಾದ ಸಮಯಕ್ಕೆ ಸರಿಯಾದ ಕಾಯ೯ಗಳು ನಡೆಯುತ್ತವೆ. ಅಲ್ಲದೇ, ನಿಮ್ಮ ಗುರಿಗಳತ್ತ ನೀವು ಸಾಗುವಲ್ಲಿ ಈ ರೀತಿಯ ಪರಿಶೀಲನೆ ನೆರವಾಗುತ್ತದೆ.

ಹೀಗೆ ಮೇಲೆ ವಿವರಿಸಿದ 5 ಅಂಶಗಳು ನಿಮ್ಮ ಬದುಕನ್ನು ಖಂಡಿತವಾಗಿಯೂ ಬದಲಾಯಿಸಿ ಯಶಸ್ಸು ಕಾಣುವಂತೆ ಮಾಡುತ್ತದೆ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

kannada.hindustantimes.com/astrology/yearly-horoscope

Whats_app_banner