Adolescence: ಹುಡುಗಾಟಿಕೆ; ಅಂಕಗಳ ಬೆನ್ನೇರಬೇಡಿ, ಪೋಷಕರೇ ಇದರಲ್ಲಿ ನೀವೂ ಪಾಲುದಾರರು
Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ಎಸ್‌ಎಸ್‌ಎಲ್‌ಸಿ ತರಗತಿಗಳು ಆರಂಭವಾಗಿ ಒಂದೆರಡು ವಾರಗಳಷ್ಟೇ ಆಗಿವೆ. ಅಷ್ಟರಲ್ಲೇ ಮಂಗಳೂರು ನಗರದಲ್ಲಿ ವಾಸವಿರುವ ವಿಭಕ್ತ ಕುಟುಂಬದ ವಿದ್ಯಾರ್ಥಿ ನಿಖಿಲ್ ಅಂತಿಮ ಪರೀಕ್ಷೆಯ ಅಂಕಗಳ ಲೆಕ್ಕದಲ್ಲಿ ತೊಡಗಿದ್ದ. ತರಗತಿಯಲ್ಲಿ ಪಾಠಗಳು ಆರಂಭವಾಗಿ ಬೆರಳೆಣಿಕೆಯ ದಿನಗಳಷ್ಟೇ ಆಗಿವೆ. ಆಗಲೇ ಈ ವಿದ್ಯಾರ್ಥಿಗೆ ಅಂಕಗಳ ಚಿಂತೆ ಶುರುವಾಗಿದೆ. ಇದು ನಿಖಿಲ್ ಒಬ್ಬನ ಕತೆಯಲ್ಲ. ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಓದುವ ಬಹುತೇಕ ವಿದ್ಯಾರ್ಥಿಗಳ ವಾಸ್ತವ ಸಂಗತಿ.
ಇತ್ತೀಚಿನ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಇದು ತೀರಾ ಸಾಮಾನ್ಯ ಎನಿಸಿ ಬಿಟ್ಟಿದೆ. ಅದು ಕೂಡಾ ಫಲಿತಾಂಶ ಪ್ರಕಟಗೊಂಡು ಹೆಚ್ಚು ಅಂಕಗಳು ಪಡೆದ ಬಳಿಕ ಮಕ್ಕಳು ಹಾಗೂ ಅವರ ಪೋಷಕರ ಪ್ರತಿಕ್ರಿಯೆ ಕೇಳಿ ಈ ಸ್ಪರ್ಧಾ ಮನೋಭಾವ ತಲುಪಿರುವ ಮಟ್ಟದ ಅರಿವಾಗುತ್ತದೆ. ಪ್ರತಿದಿನ ಟ್ಯೂಷನ್, ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಕಷ್ಟಪಟ್ಟು ಓದಿದ ಕಾರಣದಿಂದ ಈ ಸಾಧನೆ ಸಾಧ್ಯವಾಯ್ತು ಎಂಬುದೇ ಹೆಚ್ಚಿನ ಮಕ್ಕಳು ಹಾಗೂ ಪೋಷಕರ ಅಭಿಪ್ರಾಯ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅವಧಿಯ ಹರೆಯರ ಬದುಕಿನ ಪ್ರಮುಖ ಘಟ್ಟ. ಈ ಬಗ್ಗೆ ನಾನು ಈ ಹಿಂದಿನ ಅಂಕಣದಲ್ಲೂ ತಿಳಿಸಿದ್ದೆ. ಹರೆಯದ ಸವಿ ಅನುಭವಿಸಬೇಕಾದ ಸಮಯಕ್ಕೆ ಪ್ರಮುಖ ಶೈಕ್ಷಣಿಕ ಪರೀಕ್ಷೆಯ ಪ್ರಮುಖ ಘಟ್ಟವೂ ಎದುರಾಗುತ್ತದೆ. ಅದಕ್ಕೆ ತಕ್ಕನಾಗಿ ಪೋಷಕರು ಕೂಡಾ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಕರೆದೊಯ್ಯುತ್ತಾರೆ. ಅಂದರೆ, ಇಲ್ಲಿ ಜೀವನ ಪಾಠಕ್ಕಿಂತ ಅಂಕ ಗಳಿಕೆಗೆ ಆದ್ಯತೆ ಜಾಸ್ತಿ. ಹರೆಯರ ಸಮಸ್ಯೆ, ಅವರ ಮನಸ್ಸಿನ ಗೊಂದಲಗಳು, ಭಾವನೆಗಳನ್ನು ಅರ್ಥೈಸಿಕೊಳ್ಳದೆ ಬರಿಯ ಪಠ್ಯದ ಅಂಶಗಳನ್ನೇ ತಲೆಯೊಳಗೆ ತುರುಕುವ ಪ್ರಯತ್ನ ತೀರಾ ಸಾಮಾನ್ಯ. ಪಠ್ಯದ ಹೊರತಾಗಿ ಪಠ್ಯೇತರ ಚುಟುವಟಿಕೆ, ಮಾತು, ಮನರಂಜನೆಗೂ ಅವಕಾಶ ನೀಡುವವರ ಸಂಖ್ಯೆ ಬೆರಳೆಣಿಕೆಯಷ್ಟೇ.
ಆಟೋಟಗಳು ಬಂದ್, ಲಘು ಪ್ರವಾಸ ಹಾಗೂ ಸ್ನೇಹಿತರ ಭೇಟಿಗೆ ನಿರ್ಬಂಧ ಸೇರಿದಂತೆ ಮನರಂಜನಾ ಚಟುವಟಿಕೆಗಳಿಗೆ ಅಡ್ಡಗಟ್ಟಿ ನಿತ್ಯವೂ ಬರೀ ಓದಿನ ಕಡೆಗೆ ಗಮನಿಸುವ ಮಕ್ಕಳು ಸಾಧಿಸುವುದು ಏನೂ ಇಲ್ಲ. ಇದು ಹರೆಯರಿಗಿಂತ ಪೋಷಕರು ಅರ್ಥ ಮಾಡಿಕೊಳ್ಳಬೇಕಾದ ಪ್ರಮುಖ ಅಂಶ. ವಯಸ್ಸಿನ ಸವಿಯನ್ನು ಅನುಭವಿಸಬೇಕಾದ ವಯಸ್ಸಿನಲ್ಲಿ ಒತ್ತಡ ಹಾಕಿ, ಅಂಕಗಳ ಬೆನ್ನೇರಿದರೆ ಅವರ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದಂತಾಗುತ್ತದೆ. ಹಾಗಂತ ಓದದೆ ಪರೀಕ್ಷೆ ಬರೆಯಬೇಕೆಂದಲ್ಲ. ನಿತ್ಯದ ಓದಿಗೆ ಐದಾರು ಗಂಟೆ ಬೇಕಿಲ್ಲ. ಶಾಲೆಯ ಅವಧಿಯ ಹೊರತಾಗಿ ಮನೆಯಲ್ಲಿ ಇರುವ ಸಮಯದೆಲ್ಲೆಲ್ಲಾ ಓದಿದರೆ, ಆ ಓದು ಮನಸಿಗೆ ರುಚಿಸುವುದಿಲ್ಲ.
ವಿದ್ಯಾರ್ಥಿಗಳು ವರ್ಷಪೂರ್ತಿ ಪಾಠವನ್ನು ಆಲಿಸಿ, ತಮ್ಮ ಸೃಜನಶೀಲ ಕೌಶಲದಿಂದ ಈ ಅಂಕಗಳನ್ನು ಪಡೆದರೆ ಸ್ವಾಗತಿಸೋಣ. ಬದಲಿಗೆ ಪ್ರತಿದಿನ ಆರೇಳು ಗಂಟೆ ಓದಿ, ಕಂಠಪಾಠ ಮಾಡಿ ಬರೆದು ಸಂಪಾದಿಸುವ ಅಂಕಗಳ ಮೌಲ್ಯವೇನು? ಹರೆಯದ ವಯಸ್ಸು, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ದೈಹಿಕ ಬದಲಾವಣೆಯ ಸಮಯದಲ್ಲಿ ದೇಹದ ಆರೋಗ್ಯ, ವೈಯಕ್ತಿಕ ನೈರ್ಮಲ್ಯ ಈ ಎಲ್ಲಾ ಅಂಶಗಳ ಬಗ್ಗೆ ಹರೆಯರಿಗೆ ಕಲಿಕೆ ಬೇಕು. ಅದನ್ನು ಕಲಿಸುವ ಶಿಕ್ಷಕರು ಹಾಗೂ ಪೋಷಕರು ಬೇಕು. ತಮ್ಮ ಸಮಸ್ಯೆಗಳನ್ನು ಗೊಂದಲಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ಹರೆಯರಿಗೆ ಇರಬೇಕು. ಸ್ನೇಹ, ಗೆಳೆತನ, ಬಾಹ್ಯ ಆಕರ್ಷಣೆ, ಪ್ರೀತಿ ಮತ್ತು ಆಕರ್ಷಣೆಯ ವ್ಯತ್ಯಾಸ ಹೀಗೆ ಭಾವನಾತ್ಮಕ ಅಂಶಗಳ ಬಗ್ಗೆ ಹರೆಯರಿಗೆ ಪಾಠ ಹೇಳಿಕೊಡಬೇಕು. ಪಠ್ಯದಷ್ಟೇ ಮಹತ್ವ ಪಠ್ಯೇತರ ಚಟುವಟಿಕೆಗೂ ಕೊಡಬೇಕು. ಇದು ಏಲ್ಲಾಗುತ್ತಿದೆ?
ಹರೆಯದ ವಯಸ್ಸಿನಲ್ಲಿ ಹರೆಯರ ಭಾವನೆಗಳನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಒತ್ತಡ ಹೇರಿದರೆ ಖಿನ್ನತೆಯಂತಯ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗೆ ಹರೆಯರು ತುತ್ತಾಗಬಹುದು. ನೆನಪಿರಲಿ ಹರೆಯದ ವಯಸ್ಸಿನ ಮಕ್ಕಳು ಖಿನ್ನತೆಗೆ ಒಳಗಾದರೆ, ಹೆಚ್ಚು ಚಿಂತಾಕೃತರಾದರೆ ಅದಕ್ಕೆ ಅವರು ಕಾರಣರಲ್ಲ. ಬದಲಾಗಿ ಪೋಷಕರು. ಹೀಗಾಗಿ ಹರೆಯರು ಮಾತ್ರವಲ್ಲದೆ ಮಕ್ಕಳ ಬಾವನೆಯನ್ನು ಅರ್ಥ ಮಾಡಿಕೊಳ್ಳಿ. ಕೆಲವು ಮಕ್ಕಳು ಭವಿಷ್ಯದ ಭಯದಿಂದಾಗಿ ತಮ್ಮ ಮೇಲೆ ತಾವೇ ಒತ್ತಡ ಹೇರಿಕೊಂಡು ಕಂಠಪಾಠದ ಓದಿಗೆ ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ನಿರ್ಲಕ್ಷ್ಯ ವಹಿಸಬಾರದು.
ಹರೆಯದ ಕೆಲವು ಮನಸುಗಳು ತಮ್ಮ ಜೀವನವನ್ನು ಅನಗತ್ಯವಾಗಿ ಕಳೆದುಕೊಳ್ಳುತ್ತಾರೆ. ಸಣ್ಣ ವಯಸ್ಸಿನಲ್ಲೇ ಖಿನ್ನತೆಯಂತಹ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಸುದ್ದಿ ಕೇಳಿ ದುಃಖವಾಗುತ್ತದೆ.
ಪರೀಕ್ಷೆಯಲ್ಲಿ ಅಂಕಗಳ ಹಿಂದೆ ಬಿದ್ದು, ಅದು ಕಡಿಮೆಯಾದಾಗ ಅಥವಾ ಅನುತ್ತೀರ್ಣರಾದಾಗ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಇನ್ನೂ ಕೆಲವರು ಒಂಟಿ ಭಾವನೆಯಿಂದ ಖಿನ್ನತೆಗೊಳಗಾಗಿ ಅಮೂಲ್ಯ ಜೀವನಕ್ಕೆ ಅಂತ್ಯ ಹಾಡುತ್ತಾರೆ. ಇಲ್ಲಿ ಅಂತಹ ಮನಸುಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಬೇರೆ ಮನಸು ಇರುವುದಿಲ್ಲ. ಮಕ್ಕಳಿಗಿಂತ ಹೆಚ್ಚು ಸ್ಪರ್ಧಾತ್ಮಕ ಮನಸ್ಥಿತಿ ಹೊಂದಿರುವ ಪೋಷಕರೇ ಇದಕ್ಕೆ ಪ್ರಮುಖ ಕಾರಣರು. ಹರೆಯದ ಮಕ್ಕಳೊಂದಿಗೆ ಸ್ನೇಹಿತರಾಗಿ ಹೆತ್ತವರಿರಬೇಕು. ಅವರ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಹಾಗೂ ಯಾತನೆಗಳನ್ನು ಅರ್ಥಮಾಡಿಕೊಂಡು ಆ ಬಗ್ಗೆ ಮುಕ್ತವಾಗಿ ಸ್ನೇಹಿತರಂತೆ ಸಂವಹನ ನಡೆಸಬೇಕು. ಹರೆಯರ ನಡೆ ನುಡಿಗಳ ಮೇಲೆ ನಿಗಾ ಇಟ್ಟು, ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಮಕ್ಕಳ ಎಲ್ಲಾ ಖುಷಿಗೂ ಬೇಲಿ ಹಾಕುವ ಬದಲು, ಬೇಲಿ ಹಾರದಂತೆ ಎಚ್ಚರ ವಹಿಸಬೇಕು. ಹರೆಯರಿಗೆ ಪ್ರಶ್ನೆ ಕೇಳುವುದು ಗೊತ್ತೇ ಹೊರತು, ಉತ್ತರಿಸುವ ವಯಸ್ಸು ಅವರದಲ್ಲ. ಅವರಿಗೆ ಬೇಕಿರುವುದು ಮುಕ್ತ ಮಾತು. ಗೊಂದಲಗಳಿಗೆ ಪರಿಹಾರ. ಈ ವಯಸ್ಸಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೇ ಇರುವುದಿಲ್ಲ. ಯಾಕಂದ್ರೆ ಜವಾಬ್ದಾರಿ ಬಂದ ಮೇಲೆ ಒತ್ತಡದಿಂದ ಖಿನ್ನತೆ ಬರಬಹುದು. ಓದುವ ಮಕ್ಕಳೇ ಮಾನಸಿಕ ಯಾತನೆಗೊಳಗಾದರೆ, ಅವರ ಭಾವನೆಗಳನ್ನು ಆಲಿಸೋ ಮನಸುಗಳ ಕೊರತೆಯೇ ಕಾರಣ.
-ಜಯರಾಜ್
ಈ ಬರಹದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ. ಇ-ಮೇಲ್: ht.kannada@htdigital.in
ಇಂತಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ