Adolescence: ಹುಡುಗಾಟಿಕೆ; ಹರೆಯದಲ್ಲಿ ಫನ್ ಇರದಿದ್ರೆ ಹೇಗೆ; ಈ ಹುಡುಗಾಟಿಕೆ ಮಿಸ್ ಮಾಡ್ಕೋಬೇಡಿ
Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ದಿನಗಳು ಉರುಳಿದಂತೆ ವಯಸ್ಸು ಕೂಡಾ ಏರುತ್ತಾ ಹೋಗುತ್ತದೆ. ಇನ್ನು ಹರೆಯ ನಿಲ್ಲುತ್ತಾ? ಕಾಲೇಜು ಮೆಟ್ಟಿಲು ಹತ್ತುವಾಗ ಸಿಗುವ ಹರೆಯದ ಸವಿ, ಕೈಗೊಂದು ಪದವಿ ಸಿಗುವಷ್ಟರಲ್ಲಿ ಕೈ ಜಾರಿ ಹೋಗಿರುತ್ತದೆ. ಅಲ್ಲಿಯವರೆಗಿನ ಮೋಜು, ಮನರಂಜನೆ, ಹುಡುಗಾಟ ಎಲ್ಲವನ್ನೂ ಅನುಭವಿಸುವ ಮನಸುಗಳು, ಆ ಬಳಿಕ ಹರೆಯಕ್ಕೆ ವಿದಾಯ ಹೇಳಿ ಜವಾಬ್ದಾರಿಯ ಬುಟ್ಟಿ ಹೊತ್ತು ತಿರುಗುತ್ತವೆ. ಹರೆಯದ ಹುಡುಗಾಟಗಳು ಒಂದೊಳ್ಳೆ ಅಧ್ಯಾಯವಾಗಿ ಜೀವನದುದ್ದಕ್ಕೂ ಉಳಿಯುತ್ತದೆ.
ಮನುಷ್ಯ ಬದುಕಿನಲ್ಲಿ ಹರೆಯ ಒಂದು ವರ. ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ರೆಪ್ಪೆಯೊಳಗೆ ಅವಿತಿರುವ ಹರೆಯವನ್ನು ಹೊರೆಗೆಳೆದು ಅನುಭವಿಸಬೇಕು. ಹರೆಯ ಕಳೆದ ಮೇಲೆ ಅದು ಬೇಕೆಂದರೂ ಮತ್ತೆ ಕೈಸೇರುವುದಿಲ್ಲ. ದೇಹ ಮತ್ತು ಮನಸಿಗ ಅತ್ಯಂತ ಅಗತ್ಯ ಮತ್ತು ಮೌಲ್ಯಯುತವಾಗಿರುವ ವಯಸ್ಸಿನಲ್ಲಿ ಮಾತ್ರ ಮಾಡಲಾಗುವ ಹುಟುಗಾಟಗಳ ಬಗ್ಗೆ ಇಂದು ಮಾತಾಡೋಣ.
ಹರೆಯದ ಮೊದಲ ಹಂತ ಕಾಲೇಜು. ಇದು ಈ ಮನಸುಗಳು ಆಸ್ವಾಧಿಸುವ ಮೊದಲ ಮೋಜಿನ ಭಾಗ. ಇದೊಂಥರಾ ಎಳೆ ಮನಸುಗಳಿಗೆ ಪ್ರತಿಷ್ಠೆ. ಇದಕ್ಕೊಂದಷ್ಟು ಕಾರಣಗಳೂ ಇವೆ. ಒಂದು, ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಹತ್ತುತ್ತಿರುವ ಜಂಭ. ಇನ್ನೊಂದು ನಾನು ದೊಡ್ಡವನಾದೆ ಅಥವಾ ದೊಡ್ಡೋಳಾದೆ ಎಂದು ಒಳಮನಸ್ಸು ಹೇಳುವ ಸಮಯ. ಅಷ್ಟಕ್ಕೆ ದೇಹ ಸುಮ್ಮನಾದರೂ ತುಂಟ ಮನಸ್ಸು ಮೌನವಾಗುತ್ತಾ ಹೇಳಿ. ಹೊಸ ಹೊಸ ಮುಖಗಳ ಆಕರ್ಷಕ ಮನಸುಗಳತ್ತ ಆಂತರಿಕ ಮನಸು ವಾಲುತ್ತದೆ. ಇದು ಆಕರ್ಷಣೆ. ಹರೆಯದ ವಯಸ್ಸಿನ ಸಾಮಾನ್ಯ ಲಕ್ಷಣ. ಹಾಗಂತ ಸಮಸ್ಯೆ ಅಲ್ಲ.
ಬಹುತೇಕ ಬಾಹ್ಯ ಸೌಂದರ್ಯಕ್ಕೆ ಮನಸ್ಸು ಆಕರ್ಷಿತವಾಗುತ್ತವೆ. ಒಳ ಮನಸ್ಸು ಒಂದಷ್ಟು ತುಂಟತನದಿಂದ ಯೋಚಿಸುತ್ತದೆ. ಆ ತುಂಟನಿಗೆ ಸೊಪ್ಪು ಹಾಕದಿರಿ. ಹಾಗಂತ ಮಾತು ಹರಟೆಗಳಿಗೂ ಬ್ರೇಕ್ ಹಾಕೋದಾ? ಬೇಡ ಬೇಡ. ಈ ವಯಸ್ಸಲ್ಲಿ ಗೆಳೆಯ ಗೆಳತಿಯರನ್ನು ಸಂಪಾದಿಸದಿದ್ರೆ, ಮತ್ಯಾವಾಗ ಹರೆಯವನ್ನು ಆಸ್ವಾದಿಸುವುದು? ಮತನಾಡಿ, ಹರಟೆ ಹೊಡೆಯಿರಿ. ಈಗಂತೂ ಡಿಜಿಟಲ್ ಜಮಾನಾ. ಮುಖ ನೋಡಿ ಮಾತನಾಡುವ ಕಾಲವೇ ಅಲ್ಲ ಎಂಬಂತಾಗಿದೆ. ಮುಖಾಮುಖಿ ಹರಟೆಗಿಂತ ಆನ್‌ಲೈನ್ ಚಾಟಿಂಗ್ ಜಾಸ್ತಿ. ಅದು ಕೂಡಾ ಇರ್ಲಿ. ಹಾಗಂತಾ, ಜಂಗಮವಾಣಿಯ ಒಳನುಗ್ಗಿ ವ್ಯವಹರಿಸುವ ಹಂತಕ್ಕೆ ಹೋಗದಿದ್ರೆ ಒಳ್ಳೇದು. ಯಾಕೆಂದ್ರೆ ಮೊಬೈಲ್ ತುಂಬಾ ಸಣ್ಣದು ನೋಡಿ. ನೀವೇ ಅದರ ಒಳ ಹೊಕ್ಕರೆ ಅದೆಲ್ಲಿ ಸಹಿಸಿಕೊಳ್ಳುತ್ತೆ. ನಾಳೆಗೂ ಅದೇ ಫೋನ್ ಬೇಕಲ್ವಾ.
ಒಂದೊಳ್ಳೆ ಸ್ನೇಹಿತ, ಮಾತುಗಳನ್ನು ಆಲಿಸುವ ಸಹನೆಯಿರುವ ಜೊತೆಗಾರನ ಹುಡುಕಾಟ ಆಗ್ಲೇಬೇಕು. ಕೆಲವೊಮ್ಮೆ ಮಾತಿಗೆ ಸಿಗದಿದ್ದರೂ ಜಗಳಕ್ಕಾದರೂ ಬೇಕು. ಕೆಲವೊಮ್ಮೆ ಬರೆಯೋ ಹೊರೆ ಹೆಚ್ಚಾದಾಗ ಅಸೈನ್‌ಮೆಂಟ್ ಬರೆಸುವುದಕ್ಕಾದರೂ ಜನ ಬೇಕಲ್ಲಾ. ಒಂದು ಚಾಕೊಲೆಟ್, ಒಂದು ಹೊತ್ತಿನ ಲಂಚ್. ಇಷ್ಟಕ್ಕೆ ಡೀಲ್. ಒಂದು ಅಸೈನ್‌ಮೆಂಟ್ ಬರೆಸಿ, ಒಂದೈದು ಬಿಟ್ಟಿ ಮಾರ್ಕ್ ತಗೊಂಡು ಅದೆಂಥಾ ಖುಷಿ ಅನುಭವಿಸುವ ಜೀವಗಳಿವೆ. ನಿಜಾರ್ಥದಲ್ಲಿ ಇದು ತಪ್ಪು. ಆದ್ರೆ ಪ್ರಮಾದವಂತೂ ಅಲ್ಲ. ಬಹುತೇಕರು ಹರೆಯದಲ್ಲಿ ಇದನ್ನು ಎಂಜಾಯ್ ಮಾಡ್ತಾರೆ. ಆದ್ರೆ ನಿಮ್ಮ ಕೆಲಸವನ್ನು ನೀವೇ ಮಾಡಿದ್ರೆ ಉತ್ತಮ. ಸ್ನೇಹಿತ ಅಥವಾ ಒಡನಾಡಿ ಅಂದ್ರೆ ಖುಷಿಗೆ ಮಾತ್ರ ಅಲ್ಲ. ಜಗಳದಲ್ಲೂ ಇರ್ಬೇಕು. ಎಲ್ಲಾ ಸಮಯದಲ್ಲಿ ಮನಸು ಮಾತನ್ನೇ ಬಯಸುವುದಿಲ್ಲ. ಹತೋಟಿಗೆ ಸಿಗದ ಚಂಚಲ ಮನಸು ಆಗೊಂದು ಈಗೊಂದು ಹೊಸ ಹುಡುಕಾಟ ಹಾಗೂ ಗೊಂದಲದಲ್ಲೇ ಇರುತ್ತದೆ. ಅದಕ್ಕೆ ಒಂದೊಳ್ಳೆ ಟಾನಿಕ್ ಅಂದ್ರೆ ಹರಟೆ ಮತ್ತು ಮುಕ್ತ ಮಾತು.
ಕಾಲೇಜು ಹಂತದಲ್ಲಿ ಕ್ಲಾಸ್‌ಬಂಕ್ ಮಾಡೋದು ತಪ್ಪು. ಆದರೆ ಇದು ಹರೆಯದ ಎಂಜಾಯ್‌ಮೆಂಟ್‌ನ ಒಂದು ಭಾಗ. ಹಾಗಂತಾ ದಿನಾ ತರಗತಿಗೆ ಬಂಕ್ ಹೊಡೆದ್ರೆ ಲೆಕ್ಚರರ್ ಕೈಯಿಂದ ಹೇಳಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ತೀರಾ ಅನಿವಾರ್ಯ ಸಂದರ್ಭ ಬಂದಾಗ ಮಾತ್ರ ಬಂಕ್ ಮಾಡಿ. ಅದನ್ನೇ ರೂಡಿ ಮಾಡಿಕೊಂಡ್ರೆ, ಅದು ಅಪರೂಪ್ ಫನ್ ಬದಲಾಗಿ ಕೆಟ್ಟ ಹವ್ಯಾಸವಾಗಿಬಿಡಬಹುದು.
ಕಾಲಕಾಲಕ್ಕೆ ಸಣ್ಣ ಸಣ್ಣ ಟ್ರಿಪ್, ಬೈಕ್ ರೈಡ್, ಲಾಂಗ್ ಡ್ರೈವ್, ಟ್ರೆಕಿಂಗ್ ಸೇರಿದಂತೆ ಹೊಸ ಹೊಸ ಅನ್ವೇಷಣೆ ಇಲ್ಲದಿದ್ದರೆ ಈ ವಯಸ್ಸೇ ವ್ಯರ್ಥ. ತಮಾಷೆ, ಗೆಳೆಯರನ್ನು ರೇಗಿಸುವುದು ಇವೆಲ್ಲಾ ಇದ್ದರೇನೇ ಚೆಂದ. ಹಾಗಂತಾ ಯಾವುದೂ ಅತಿರೇಕಕ್ಕೆ ಹೋಗಬಾರದು.
ಪರೀಕ್ಷೆ, ಸೆಮಿನಾರ್, ಅಸೈನ್‌ಮೆಂಟ್, ಆಂತರಿಕ ಹಾಗೂ ಅಂತರ್‌ಕಾಲೇಜು ಸ್ಪರ್ಧೆಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗೋದು ಮನರಂಜನೆಯ ಪ್ರಮುಖ ಭಾಗ. ಇದು ವಿದ್ಯಾರ್ಥಿಗಳ ಮನಸ್ಥಿತಿ ಮೇಲೆ ಡಿಪೆಂಡ್. ಹೆಚ್ಚಿನ ಹರೆಯರಿಗೆ ಇದೊಂದು ಹೊರೆ. ಆದರೆ, ಕೆಲವೊಬ್ಬರಿಗೆ ಇದು ಭಾರಿ ಅಚ್ಚುಮೆಚ್ಚು. ಪಠ್ಯಕ್ಕಿಂತ ಅವರ ಒತ್ತು ಪಠ್ಯೇತರ ಚಟುವಟಿಕೆಗಳಲ್ಲಿ. ಹೀಗಿದ್ದರೆ ಅವರ ಹರೆಯದೊಂದಿಗೆ ಭವಿಷ್ಯವೂ ಚೆನ್ನಾಗಿರುತ್ತದೆ.
ಇಂದು ಜಗತ್ತು ತುಂಬಾ ವಿಶಾಲವಾಗಿ ತೆರೆದುಕೊಡಿದೆ. ಡಿಜಿಟಲ್ ಜಗತ್ತು ಅಂಗೈಯೊಳಗೆ ಲಭ್ಯವಿದೆ. ಫನ್ ಅನುಭವಿಸಲು ಹರೆಯ ಹೇಳಿ ಮಾಡಿದ ವಯಸ್ಸು. ಅದು ಮತ್ತೆ ಸಿಗಲಾರದು. ಸಾಧ್ಯವಿರುವಷ್ಟೂ ಎಂಜಾಯ್ ಮಾಡಬೇಕು. ಹಾಗಂತ ಮಿತಿ ಮೀರಿದ ಮನರಂಜನೆಯೇ ಬೇಡ. ಮನಸಿನ ಉತ್ತಮ ಯೋಚನೆಗಳಿಗೆ ಸೊಪ್ಪು ಹಾಕಿ. ಅದು ಇನ್ನೊಬ್ಬರ ಬದುಕು ಹಾಗೂ ಭಾವನೆಗಳೊಂದಿಗೆ ಆಟವಾಡುವಂತಿರಬಾರದು. ಯಾರಿಗೂ ನೋವಾಗಲೂ ಬಾರದು. ನಿಮ್ಮ ನಗು ಹಾಗೂ ನಡವಳಿಕೆಯು ಇನ್ನೊಂದಷ್ಟು ಜನರ ನಗುವಿಗೆ ಖುಷಿಗೆ, ಲವಲವಿಕೆಗೆ ಕಾರಣವಾಗುತ್ತದೆ. ಅದರಿಂದ ಮೂರನೇ ವ್ಯಕ್ತಿಗೆ ಯಾವುದೇ ಸಮಸ್ಯೆ ಇಲ್ಲ ಎಂದಾದರೆ ಈ ಪ್ರಪಂಚ ನಿಮ್ಮದೆ.
-ಜಯರಾಜ್ ಅಮಿನ್
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್ ಮಾಡಿ.
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.