Adolescence: ಹುಡುಗಾಟಿಕೆ; ಹರೆಯ ಮತ್ತು ಚಂಚಲ ಮನಸ್ಸು; ಏಕಾಗ್ರತೆಯ ನೆಂಟಸ್ಥಿಕೆಗೆ ಇಲ್ಲಿದೆ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Adolescence: ಹುಡುಗಾಟಿಕೆ; ಹರೆಯ ಮತ್ತು ಚಂಚಲ ಮನಸ್ಸು; ಏಕಾಗ್ರತೆಯ ನೆಂಟಸ್ಥಿಕೆಗೆ ಇಲ್ಲಿದೆ ಸಲಹೆ

Adolescence: ಹುಡುಗಾಟಿಕೆ; ಹರೆಯ ಮತ್ತು ಚಂಚಲ ಮನಸ್ಸು; ಏಕಾಗ್ರತೆಯ ನೆಂಟಸ್ಥಿಕೆಗೆ ಇಲ್ಲಿದೆ ಸಲಹೆ

Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.

ಹರೆಯ ಮತ್ತು ಚಂಚಲ ಮನಸ್ಸು
ಹರೆಯ ಮತ್ತು ಚಂಚಲ ಮನಸ್ಸು

ಹರೆಯದಲ್ಲಾಗುವ ದೈಹಿಕ ಬದಲಾವಣೆಯು ಮಾನಸಿಕ ಆರೋಗ್ಯದ ಮೇಲೂ ಸಹಜವಾಗಿ ಪ್ರಭಾವ ಬೀರುತ್ತದೆ. ದೈಹಿಕ ಬದಲಾವಣೆಗೆ ದೇಹ ಒಗ್ಗಿಕೊಳ್ಳುವ ಹಂತದಲ್ಲಿ ಗೊಂದಲಗಳು ಸಹಜ. ಅಲ್ಲದೆ ಹಾರ್ಮೋನುಗಳಲ್ಲಿನ ವ್ಯತ್ಯಾಸಗಳಿಂದಾಗಿ ಚಂಚಲ ಮನಸು ಬೇಗನೆ ವಿಚಲಿತಗೊಳ್ಳುತ್ತದೆ. ದೇಹ ಮತ್ತು ಮನಸಿನ ನಡುವೆ‌ ಹಿಡಿತ ಸಾಧಿಸಲಾಗದೆ ಓದಿನತ್ತ ಗಮನ ಹರಿಸುವುದು ಮತ್ತು ಏಕಾಗ್ರತೆ ಸಾಧಿಸುವುದು ಹರೆಯರಿಗೊಂದು ಸವಾಲು. ಇದು ಈ ವಯಸ್ಸಿನ ಸಾಮಾನ್ಯ ಮತ್ತು ಸಹಜ ಲಕ್ಷಣ. ಹೀಗಾಗಿ ಇದನ್ನು ಸಮಸ್ಯೆ ಎಂದುಕೊಳ್ಳುವಂತಿಲ್ಲ.

ಇಂದಿನ ಅಂಕಣದಲ್ಲಿ ಹರೆಯರ ಗಮನ ಅಥವಾ ಏಕಾಗ್ರತೆ ವೃದ್ಧಿಸಲು ಒಂದಷ್ಟು ಸಲಹೆಗಳನ್ನು ಕೊಡುವ ಪಯತ್ನ ಮಾಡುತ್ತೇನೆ. ಈ ಹಿಂದಿನ ಅಂಕಣಗಳನ್ನು ಓದಿದ ಹಲವರು ಈ ವಿಷಯದ ಬಗ್ಗೆ ಬರೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಇಂದಿನ ವಿಷಯ ಹರೆಯ ಮತ್ತು ಏಕಾಗ್ರತೆ.

ದೈಹಿಕ ಬದಲಾವಣೆ, ಹಾರ್ಮೋನು ವ್ಯತ್ಯಾಸ, ನಾವು ಬೆರೆಯುವ ಜನರು, ಮನೆ ಅಥವಾ ಶಾಲೆ-ಕಾಲೇಜಿನ ವಾತಾವರಣ, ಬಾಹ್ಯ ಆಕರ್ಷಣೆ, ಸುತ್ತಮುತ್ತಲಿನ ಪರಿಸರ ಹಾಗೂ ಪ್ರಬುದ್ಧ ಮನಸ್ಸು ಜಾಗೃತವಾಗುವ ಕಾರಣಗಳಿಂದ ಹರೆಯರು ವಿಚಲಿತರಾಗುತ್ತಾರೆ. ಅದಕ್ಕೂ ಮಿಗಿಲಾಗಿ ಹರೆಯ ಎಂಬ ಹೊಸತನಕ್ಕೆ ಒಗ್ಗಿಕೊಳ್ಳಲು ಮನಸು ಮತ್ತು ದೇಹ ಸಮಯ ತೆಗೆದುಕೊಳ್ಳುವುದರಿಂದ ಆರಂಭದಲ್ಲಿ ಏಕಾಗ್ರತೆ ಸಾಧಿಸುವುದು ಕಷ್ವ. ಇದನ್ನು ಸಹಜ ಸ್ಥಿತಿಗೆ ತರಲು ಒಂದಷ್ಟು ಮಾರ್ಗಗಳಿವೆ.

ಹರೆಯ ಶಾಪವಲ್ಲ, ಮತ್ತೆ ಮುಜುಗರವೇಕೆ?

ಹರೆಯದ ದೈಹಿಕ ಬದಲಾವಣೆಗಳಿಗೆ ಬಹುತೇಕರು ಮುಜುಗರಪಡುತ್ತಾರೆ. ಅದರಲ್ಲೂ ಮುಖ್ಯವಾಗಿ ಯುವತಿಯರು. ದೇಹದಲ್ಲಿ ಏನೇನೋ ಹೊಸ ಬದಲಾವಣೆಗಳು ಆಗುತ್ತಿವೆ ಎನ್ನುವ ಬಗ್ಗೆ ಯಾರಲ್ಲೂ ಹೇಳಿಕೊಳ್ಳುವ ವಾತಾವರಣ ಅವರಿಗೆ ಇರುವುದಿಲ್ಲ. ಇದು ಅವರ ಓದು, ಕೆಲಸ ಕಾರ್ಯಗಳ ಮೇಲೆ ಗಮನ ಹರಿಸಲು ಅಡ್ಡಿಪಡಿಸುತ್ತವೆ. ಹರೆಯವೆಂದರೆ ಮುಜುಗರ, ಅಸಹ್ಯ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಇದಕ್ಕೆ ಹರೆಯರು ಮತ್ತು ಅವರ ಪೋಷಕರು ಅವಕಾಶ ನೀಡಬಾರದು. ಮೊದಲನೆಯದಾಗಿ, ಹರೆಯ ಮನುಷ್ಯ ಜೀವಿಯ ದೈಹಿಕ ಬೆಳವಣಿಗೆಯ ಸಹಜ ಹಂತ ಎಂಬ ಅರಿವಿರಬೇಕು. ಎರಡನೆಯದು, ಇದು ಪ್ರಬುದ್ಧರಾಗುವ ಸೂಚನೆ ಎಂಬ ಕಾರಣಕ್ಕೆ ಖುಷಿಪಡಬೇಕು. ಒಟ್ಟಾರೆಯಾಗಿ ಹರೆಯ ಎಂದರೆ ಸಂಭ್ರಮಿಸುವ ಹಂತ ಎಂಬ ಅಭಿಪ್ರಾಯ ಬರಬೇಕು.

ಮನಸು ವಿಚಲಿತವಾಗುವುದು, ಏಕಾಗ್ರತೆ ಕಳೆದುಕೊಳ್ಳುವುದು ಯಾವಾಗ ಮತ್ತು ಯಾಕೆ?

ಮುಖ್ಯವಾಗಿ ಹರೆಯದಲ್ಲಿ ಒಂದು ನಿರ್ದಿಷ್ಟ ವಿಷಯದ ಮೇಲೆ ಗಮನ ಹರಿಸಲು ಆಗದಿರಲು ಕೆಲವೊಂದು ಕಾರಣಗಳಿವೆ. ಪ್ರಮುಖವಾಗಿ ಹರೆಯವನ್ನು ಮುಜುಗರ ಎಂಬಂತೆ ಭಾವಿಸುವುದು. ಉಳಿದಂತೆ ಮನಸಿನ ಭಾವನೆಯನ್ನು ಮುಕ್ತವಾಗಿ ಯಾರಲ್ಲೂ ಹೇಳಿಕೊಳ್ಳಲು ಸಾಧ್ಯವಾಗದಿರುವುದು, ಒಂಟಿ ಎಂಬ ಭಾವನೆ ತುಂಬಿಕೊಂಡಾಗ, ಮನಸ್ಸಿನಲ್ಲಿರುವ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರ ದೊರಕದಿದ್ದಾಗ ಓದು ಅಥವಾ ಮಾಡುವ ಕೆಲಸದ ಮೇಲಿನ ಏಕಾಗ್ರತೆ ಕಳೆದುಕೊಳ್ಳುತ್ತೇವೆ. ಉಳಿದಂತೆ ಮನಸಿನ ಆಕರ್ಷಣೆ, ಕೌಟುಂಬಿಕ ಸಮಸ್ಯೆಗಳು, ಸದ್ದು ಗದ್ದಲಗಳಿಂದಾಗಿಯೂ ಗಮನ ಬೇರೆಡೆ ಹರಿಯುತ್ತದೆ.

ಬಾಹ್ಯ ಆಕರ್ಷಣೆಯತ್ತ ವಾಲದಿರಿ

ಮನಸು ಚಂಚಲವಾಗಲು, ಏಕಾಗ್ರತೆ ಕಳೆದುಕೊಳ್ಳಲು ಪ್ರಮುಖ ಕಾರಣ ಬಾಹ್ಯ ಆಕರ್ಷಣೆ. ಹರೆಯದ ಬದಲಾವಣೆಗಳು ಬಾಹ್ಯ ಪ್ರಪಂಚದತ್ತ ಮನಸ್ಸನ್ನು ಸೆಳೆಯುತ್ತದೆ. ಗಂಡು ಹೆಣ್ಣಿನ ಆಕರ್ಷಣೆ ಪ್ರಕೃತಿ ಸಹಜ ಗುಣ. ಇದು ತಪ್ಪು ನಡವಳಿಕೆ ಅಲ್ಲ. ಮನಸು ಮನಸುಗಳ ಆಕರ್ಷಣೆಯಾದಾಗ ಅದನ್ನು ಯೋಚಿಸಿ ತಪ್ಪೆಂಬ ಅಭಿಪ್ರಾಯಕ್ಕೆ ಖಂಡಿತಾ ಬರಬೇಡಿ. ಅಂತಹ ಭಾವನೆ ಬಂದರೆ ಪಶ್ಚಾತ್ತಾಪದ ಭಾವನೆಯೂ ಬರುವುದು ಬೇಡ. ಹಾಗಂತಾ ಹರೆಯದ ವಯಸ್ಸಿನ ಸಾಮಾನ್ಯ ಆಕರ್ಷಣೆಗೆ ಪ್ರೀತಿಯ ಬಣ್ಣ ಹಚ್ಚುವುದು ಸರಿಯಲ್ಲ. ಕಣ್ಣಿಗೆ ಆಕರ್ಷಣೆಯಾಗುವ ದೇಹ ಮನಸಿನ ಆಕರ್ಷಣೆಗೆ ಒಳಗಾಗುವುದು ಮುಖ್ಯ. ಇವೆರಡೆರ ನಡುವಿನ ವ್ಯತ್ಯಾಸ ಅರ್ಥವಾಗಬೇಕು. ಈ ವಯಸ್ಸಿನಲ್ಲಿ ಮನಸ್ಸು ಒಳ್ಳೆಯದು ಕೆಟ್ಟದು ಎರಡನ್ನೂ ಯೋಚಿಸುತ್ತದೆ. ಅಲ್ಲದೆ ಅವೆರಡರ ವ್ಯತ್ಯಾಸ ಕೂಡಾ ನಿಮಗೆ ಖಚಿತವಾಗಿ ತಿಳಿಯುತ್ತದೆ. ಇದು ಈ ವಯಸ್ಸಲ್ಲಿ ಸಹಜ. ಯಾವುದು ಒಳ್ಳೆಯದು ಎಂದು ನಿಮ್ಮ ಮನಸಿಗೆ ತೋಚುವುದೋ ಅದನ್ನು ನಿಸ್ಸಂದೇಹವಾಗಿ ಮಾಡಿ. ತಪ್ಪು ಎನಿಸಿದ್ದನ್ನು ಮಾಡಬೇಡಿ. ಆ ಭಾವನೆಗೆ ಬೇಲಿ ನೀವೇ ಹಾಕಬೇಕು. ಯಾರೊಂದಿಗೆ ಮಾತನಾಡಬೇಕು, ಬೆರೆಯಬೇಕು, ಒಡನಾಡಬೇಕು ಎನಿಸುವುದೋ ಅವರೊಂದಿಗೆ ಗೆಳೆತನ ಬೆಳೆಸಿ. ಅವರೊಂದಿಗೆ ಮಾತನಾಡಿ, ಭಾವನೆಗಳನ್ನು ಹಂಚಿಕೊಳ್ಳಿ. ಇದು ಸಾಧ್ಯ ಇಲ್ಲ ಎಂದಾದರೆ, ಅವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಇಂತಹ ಯೋಚನೆಗಳಿಂದ ನಿಮ್ಮ ಏಕಾಗ್ರತೆ ಕಡಿಮೆಯಾಗುತ್ತದೆ. ಅದಕ್ಕೆ ಅವಕಾಶ ಕೊಡದಿರಿ.

ನಿಮ್ಮವರನ್ನು ಹುಡುಕಿ, ಭಾವನೆಗಳನ್ನು ಹಂಚಿಕೊಳ್ಳಿ

ಪ್ರತಿಯೊಬ್ಬ ಮನುಷ್ಯ ಕೂಡಾ ಭಾವಜೀವಿ. ಮನಸಿನ ಭಾವನೆಗಳನ್ನು ಹಂಚಿಕೊಳ್ಳಲು ಮತ್ತೊಂದು ಭಾವಜೀವಿಯ ಅನ್ವೇಷಣೆಗೆ ಪ್ರತಿಯೊಬ್ಬರೂ ಬಯಸುತ್ತಾರೆ. ಆ ನಮ್ಮವರು ಸಿಕ್ಕರೆ ಮನಸು ಹಗುರವಾಗುತ್ತದೆ. ನಿಮಗೆ ಇಷ್ಟವಾಗುವ ಜೀವಗಳೊಂದಿಗೆ ಮುಕ್ತವಾಗಿ ಮಾತನಾಡಿ. ಹಾಗಿದ್ದರೆ ನಮ್ಮವರು ಯಾರು ಎಂಬುದನ್ನು ತಿಳಿಯುವುದು ಹೇಗೆ ಎಂಬುವುದು ನಿಮ್ಮ ಪ್ರಶ್ನೆಯಾಗಿರಬಹುದು. ನಿಮ್ಮ ಮಾತನ್ನು ತಾಳ್ಮೆಯಿಂದ ಆಲಿಸುವ ಮತ್ತು ಪ್ರತಿಯೊಂದು ಮಾತನ್ನೂ ಕಿವಿಗೆ ಹಾಕಿಕೊಂಡು ಅದಕ್ಕೆ ಪ್ರತಿಕ್ರಿಯೆ ನೀಡುವ ಸಹನೆ ಯಾರಲ್ಲಿದೆಯೋ ಅವರೇ ನಿಮ್ಮವರು. ಇದಕ್ಕೆ ವಯಸ್ಸು ಹಾಗೂ ಲಿಂಗದ ಪರಿಧಿಯಿಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುವ ಪ್ರತಿಯೊಬ್ಬರೂ ನಿಮ್ಮವರೇ. ಅದು ಸ್ನೇಹಿತ ಅಥವಾ ಸ್ನೇಹಿತೆ ಇರಬಹುದು, ಸಹೋದರ ಅಥವಾ ಸಹೋದರನೇ ಇರಬಹುದು, ಅಪ್ಪ ಅಮ್ಮನಿರಬಹುದು, ನೆರೆಮನೆಯವರಿರಬಹುದು, ಅಥವಾ ಇನ್ಯಾರೇ ಪರಿಚಿತ ವ್ಯಕ್ತಿಗಳಿರಬಹುದು. ಅವರೊಂದಿಗೆ ಬೆರೆಯಿರಿ. ಮನಸಿನ ಮಾತನ್ನು ಹೇಳಿಕೊಳ್ಳಿ. ಮನಸು ಹಗುರವಾದಾಗ, ಮನಸಿನ ಮಾತನ್ನು ಬೇರೆಯವರೊಂದಿಗೆ ಹಂಚಿಕೊಂಡಾಗ ಮನಸು ಖುಷಿಯಿಂದ ಕುಣಿಯುತ್ತದೆ. ಏಕಾಗ್ರತೆ ತಾನಾಗಿಯೇ ಹೆಚ್ಚುತ್ತದೆ.

ಒಂಟಿಯಾಗಿರಬೇಡಿ

ಮನಸ್ಸು ಗೊಂದಲಕ್ಕೊಳಗಾದಾಗ ಮತ್ತು ಅನಗತ್ಯ ಆಲೋಚನೆಗಳು ಮನಸಿನ ಒಳಹೊಕ್ಕಾಗ ಮಾತ್ರ ಒಂದು ಕಡೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಒಂಟಿಯಾಗಿದ್ದರೆ, ಮತ್ತಷ್ಟು ಯೋಚನೆಗಳು, ಇಲ್ಲಸಲ್ಲದ ಭಾವನೆಗಳು ತಲೆಯ ಒಳಕ್ಕೆ ನುಸುಳಬಹುದು. ಹೀಗಾಗಿ ಜನರೊಂದಿಗೆ ಬೆರೆಯಿರಿ. ಸ್ನೇಹಿತರೊಂದಿಗೆ ಹರಟೆ ಹೊಡೆಯಿರಿ. ಏನಾದರೂ ಗೊಂದಲವಿದ್ದರೆ ಅದನ್ನು ಬಗೆಹರಿಸುವ ಮಾರ್ಗಗಳ ಬಗ್ಗೆ ಯೋಚಿಸಿ. ಯಾರೊಂದಿಗೆ ಆ ಬಗ್ಗೆ ಮಾತನಾಡಿದರೆ ಅಥವಾ ಚರ್ಚಿಸಿದರೆ ಬಗೆಯಹರಿಯಬಹುದೋ ಅವರೊಂದಿಗೆ ಚರ್ಚಿಸಿ. ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಸಮಸ್ಯೆಯ ಬಗ್ಗೆ ಗಂಭೀರವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಿ. ಆ ಬಳಿಕ ಮತ್ತೆ ಹಗುರ ಮನಸಿಂದ ಸಹಜವಾಗಿರಿ.

ಹಾದಿಯಲ್ಲಿರುವ ಕಲ್ಲನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ

ಅಗತ್ಯವೇ ಇಲ್ಲದ ಒತ್ತಡ, ಕೆಲಸದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ. ನಿಮ್ಮ ಸಾಮರ್ಥ್ಯವೇನು ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕನಾಗಿ ವರ್ತಿಸಿ. ಹೊಸ ಜವಾಬ್ದಾರಿ ಅಥವಾ ಸವಾಲನ್ನು ತೆಗೆದುಕೊಳ್ಳುವುದು ಒಳ್ಳೆಯದೇ. ಇದಕ್ಕೆ ನಿಮ್ಮ ಮೇಲೆ ನಿಮಗೆ ವಿಶ್ವಾಸ ಬೇಕು. ಆ ವಿಶ್ವಾಸವಿದ್ದರೆ ಕೆಲಸ ಸುಲಭ. ಅದರ ಹೊರತಾಗಿ, ಅದು ಮನಸಿನ ಮೇಲೆ ಒತ್ತಡ ಹೇರುವಂತಿದ್ದರೆ ಅಂತಹ ಜವಾಬ್ದಾರಿ ಹೊರಬೇಡಿ. ಇಲ್ಲವಾದಲ್ಲಿ ನಿಮ್ಮ ಗಮನ ಕೇಂದ್ರೀಕರಿಸುವುದು ಕಷ್ಟವಾಗಬಹುದು. ಹೀಗಾಗಿ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡುವುದು ಒಳ್ಳೆಯದು.

ಎಲ್ಲಿ ಹೇಗಿರಬೇಕೋ ಹಾಗೆಯೇ ಇರಿ

ಇದು ಹಲವು ಹರೆಯರು ಮಾಡುವ ತಪ್ಪು. ಮನೆಯಲ್ಲಿ ಮನೆಯ ಸದಸ್ಯರಾಗಿಯೇ ಇರಬೇಕು. ಮನೆಯವರೊಂದಿಗೆ ಮಾತು ಹಾಗೂ ಹರಟೆಗೆ ಸಮಯ ನಿಗದಿಪಡಿಸಬೇಕು. ಅಪ್ಪ ಅಮ್ಮ ಹಾಗೂ ಮನೆಯ ಸದಸ್ಯರೊಂದಿಗೆ ಕುಳಿತು ಊಟ ಮಾಡುವುದು, ಒಂದಷ್ಟು ಹೊತ್ತು ವಿಷಯಾಧರಿತ ಮಾತುಗಳನ್ನಾಡುವುದು, ಮನೆಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳ ಬಗ್ಗೆ ಒಟ್ಟಾಗಿ ಚರ್ಚೆ ನಡೆಸುವುದರಲ್ಲಿ ನೀವೂ ಪಾಲ್ಗೊಳ್ಳಿ. ಪ್ರತಿನಿತ್ಯ ಮೊಬೈಲ್‌ ಹಾಗೂ ಟಿವಿ ಮುಂದೆ ಕೂರಬೇಡಿ. ಸ್ಕ್ರೀನಿಂಗ್‌ಗಾಗಿ ಸಮಯ ನಿಗದಿಪಡಿಸಿ. ಅದರ ಹೊರತಾಗಿ ಓದು ಹಾಗೂ ಬರವಣಿಗೆಗೆ ಸಮಯ ಕೊಡಿ. ಹಾಗಂತ ಮನೆಯಲ್ಲಿ ಇರುವ ಎಲ್ಲಾ ಹೊತ್ತು ಪುಸ್ತಕದ ಮುಂದೆ ಕೂರಲೇ ಬೇಡಿ. ಮನೆಯವರೊಂದಿಗೆ ಮನರಂಜನೆಗೆ ಮಹತ್ವ ಕೊಡಿ. ಓದು ಬರವಣಿಗೆಗೆ ಸಮಯ ನಿಗದಿಪಡಿಸಿದಂತೆ ಮನರಂಜನೆಗೂ ಸಮಯ ನಿಗದಿಪಡಿಸಿ. ಇದು ತುಂಬಾ ಮುಖ್ಯ.

ಮನೆಯವರೊಂದಿಗೆ ಸೇರಿ ನಿತ್ಯವೂ ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ ಮಾಡಿ

ಮನಸ್ಸು ಮತ್ತು ದೇಹಕ್ಕೆ ಎಲ್ಲಕ್ಕಿಂತ ಉತ್ತಮ ಮದ್ದು ಯೋಗ. ಇದು ವಿಶ್ವಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆ. ನಿತ್ಯವೂ ಯೋಗಾಭ್ಯಾಸ ಮಾಡಿದರೆ ಎಲ್ಲಾ ರೀತಿಯ ಆರೋಗ್ಯಕ್ಕೂ ಒಳ್ಳೆಯದು. ಆಸನಗಳನ್ನು ಮಾಡುವುದು ಕಷ್ಟವಾದರೆ, ಮನೆಯ ಎಲ್ಲಾ ಸದಸ್ಯರೊಂದಿಗೆ ಪ್ರಾಣಾಯಾಮ ಅಭ್ಯಾಸ ಮಾಡಿ. ಸೂರ್ಯನಮಸ್ಕಾರ ಮಾಡಿ. ಮುಂಜಾನೆ ಎದ್ದು ಸುಮ್ಮನೆ ಕುಳಿತು ಧ್ಯಾನ ಮಾಡಿ. ಇದು ಏಕಾಗ್ರತೆ ಹೆಚ್ಚಿಸಿಕೊಳ್ಳಲು ತುಂಬಾ ಪರಿಣಾಮಕಾರಿ.

ಓದು, ಬರವಣಿಗೆ ಸಮಯದಲ್ಲಿ ಏಕಾಗ್ರತೆ ಹೆಚ್ಚಿಸಲು ಈ ಅಂಶಗಳನ್ನು ಪಾಲಿಸಿ

  • ಓದುವ ಸಮಯದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ.
  • ಕುಳಿತುಕೊಳ್ಳುವ ಸ್ಥಳ ಶುಭ್ರವಾಗಿರಲಿ.
  • ಸೋಫಾ, ಮಂಚ, ಬೆಡ್‌ ಮೇಲೆ ಓದು ಹಾಗೂ ಬರವಣಿಗೆ ಬೇಡ. ಅದು ಓದುವ ಸ್ಥಳವಲ್ಲ.
  • ಓದು ಹಾಗೂ ಬರವಣಿಗೆಗೆ ಗಟ್ಟಿಯಾದ ಕುರ್ಚಿಯಲ್ಲಿ ಕುಳಿತುಕೊಳ್ಳಿ. ಮರ, ಫೈಬರ್‌ ಚೇರ್‌ ಹೀಗೆ ಗಟ್ಟಿಯಾದ ಆಸನ ಒಳ್ಳೆಯದು.
  • ಕಿಟಕಿ ಪಕ್ಕದಲ್ಲಿ ಕುಳಿತರೆ ಗಮನ ಬೇರೆಡೆ ಹರಿಯಬಹುದು. ಹೀಗಾಗಿ ನಿಮ್ಮ ಎದುರುಗಡೆ ಗೋಡೆಯಂತಹ ವಸ್ತು ಇದ್ದರೆ ಒಳ್ಳೆಯದು.
  • ಕೆಲವೊಬ್ಬರಿಗೆ ತೆರೆದ ಜಾಗದಲ್ಲಿ ಓದು, ಬರವಣಿಗೆ ಇಷ್ಟವಾಗಬಹುದು. ಅಂಥವರು ನಿಮ್ಮಿಚ್ಛೆಯ ಜಾಗದಲ್ಲೇ ಕುಳಿತುಕೊಂಡು ಓದಿ.
  • ಓದುವಾಗ ಮೊಬೈಲ್‌, ಟಿವಿ ಬಳಕೆ ಬೇಡ.
  • ಮನೆಯೊಳಗಿದ್ದರೂ ನೆರೆಮನೆ ಅಥವಾ ರಸ್ತೆಯ ವಾಹನಗಳ ಸದ್ದು ಕಿವಿಗೆ ಬಡಿದರೆ ಇಯರ್‌ಫೋನ್‌ ಅಥವಾ ಹೆಡ್‌ಫೋನ್‌ ಕಿವಿಗೆ ಹಾಕಿಕೊಂಡು ಓದಿ.
  • ಓದುವ ಸಮಯದಲ್ಲಿ ಓದಿನ ಬಗ್ಗೆಯೇ ಯೋಚಿಸಿ. ಅದು ಒಂದು ಕೆಲಸ ಎಂಬಂತೆ ಭಾವಿಸುವುದು ಬೇಡ.
  • ಖುಷಿಯಿಂದ, ಆಸಕ್ತಿಯಿಂದ ಇಷ್ಟಪಟ್ಟು ಓದಿ. ಅರ್ಥಮಾಡಿಕೊಂಡು ಓದಿ. ವಿಷಯ ಅರ್ಥವಾಗದೆ ಕಂಠಪಾಠ ಮಾಡಿ ಪ್ರಯೋಜನವಿಲ್ಲ.
  • ಎಷ್ಟೇ ಪ್ರಯತ್ನಿಸಿದರೂ ಏಕಾಗ್ರತೆ ಬರುತ್ತಿಲ್ಲ ಎಂದಾದರೆ, ಕೆಲಕಾಲ ನಿಮಗೆ ಖುಷಿಕೊಡುವ ಚಟುವಟಿಕೆ ಮಾಡಿ. ಹೊರಗಡೆ ಓಡಾಡಿ ಮನಸನ್ನು ರೀಫ್ರೆಶ್‌ ಮಾಡಿ ಮತ್ತೆ ನಿಮ್ಮ ಕೆಲಸ ಕಾರ್ಯ ಆರಂಭಿಸಿ.

ಓದು, ಬರವಣಿಗೆ ಹಾಗೂ ಕೆಲಸ ಕಾರ್ಯಗಳಿಗೆ ಸಮಯ ನಿಗದಿಪಡಿಸಿದಂತೆ ಮನಸಿನ ಆರೋಗ್ಯ ಹಾಗೂ ಖುಷಿಗಾಗಿ ಸಮಯ ಕೊಡಿ. ಒಟ್ಟಿನಲ್ಲಿ ಪ್ರತಿಕ್ಷಣವನ್ನೂ ಸಂಭ್ರಮಿಸಿ.

-ಜಯರಾಜ್ ಅಮಿನ್

ಈ ಬರಹದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ. ಇ-ಮೇಲ್‌: ht.kannada@htdigital.in

ಇಂತಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner