Adolescence: 16ರ ವಯಸ್ಸಿಗೆ ಲೈಫು ಬೋರಿಂಗ್ ಅಂದ್ರೆ ಹೇಗೆ; ಸಪ್ಪೆ ದಿನಚರಿಗೆ ಬದಲಾವಣೆಯ ಟಾನಿಕ್ ಕೊಟ್ಟು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Adolescence: 16ರ ವಯಸ್ಸಿಗೆ ಲೈಫು ಬೋರಿಂಗ್ ಅಂದ್ರೆ ಹೇಗೆ; ಸಪ್ಪೆ ದಿನಚರಿಗೆ ಬದಲಾವಣೆಯ ಟಾನಿಕ್ ಕೊಟ್ಟು ನೋಡಿ

Adolescence: 16ರ ವಯಸ್ಸಿಗೆ ಲೈಫು ಬೋರಿಂಗ್ ಅಂದ್ರೆ ಹೇಗೆ; ಸಪ್ಪೆ ದಿನಚರಿಗೆ ಬದಲಾವಣೆಯ ಟಾನಿಕ್ ಕೊಟ್ಟು ನೋಡಿ

Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.

ಹುಡುಗಾಟಿಕೆ ಅಂಕಣ
ಹುಡುಗಾಟಿಕೆ ಅಂಕಣ

'ಫುಲ್‌ ಬೋರ್(boring) ಆಗ್ತಿದೆ ಕಣೊ, ಏನ್ ಮಡೋದಿಕ್ಕೂ ಮನಸ್ಸಿನಲ್ಲ. ಮನೆಯಲ್ಲಂತೂ ಇರೋಕೆ ಆಗ್ತಾನೆ ಇಲ್ಲ, ಏನ್ ಮಾಡಿದ್ರೂ ಸಮಯಾನೇ ಹೋಗ್ತಿಲ್ಲ. ನನಗಂತೂ ಸಾಕಾಗಿಬಿಟ್ಟಿದೆ ಜೀವನ...' ಇಂತಹ ಮಾತುಗಳು ಈಗಿನ ಯುವಜನತೆಯ ಬಾಯಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಅಷ್ಟಕ್ಕೂ ಬರೀ 16ರ ವಯಸ್ಸಿಗೆ ಇಂತಹ ಮಾತುಗಳು ಹದಿಹರೆಯದವರ ಬಾಯಿಂದ ಹೊರಬರುತ್ತಿದೆ ಎಂದರೆ, ಎಂತಹ ತಾಂತ್ರಿಕ ಬದುಕು ನಮ್ಮದಾಗುತ್ತಿದೆ ಎಂಬ ಪ್ರಶ್ನೆ ತಲೆಯ ಉದ್ದಗಲಕ್ಕೂ ಹುಟ್ಟುತ್ತದೆ.

ನಿತ್ಯ ಬದುಕಿನಲ್ಲಿ ಏನೇ ಕೆಲಸ ಕಾರ್ಯ ಮಾಡಲು ಮನಸ್ಸು ಒಪ್ಪದಿರುವುದು, ಓದುವ ಹಾಗೂ ಬರೆಯುವ ಆಸಕ್ತಿ ಕುಂದುವುದು ಇದೆಲ್ಲಾ ಸಾಮಾನ್ಯ. ಆದ್ರೆ, ನಿತ್ಯದ ಬದುಕು ನೀರಸ ಅನಿಸಿ ಬೇಜಾರಾಗುವುದು ಅಥವಾ ಸಾಮಾನ್ಯವಾಗಿ ಹೆಚ್ಚಿನ ಜನರ ಬಾಯಲ್ಲಿ 'ಬೋರಿಂಗ್‌‌' ಅಥವಾ 'ಬೋರ್ ಆಗುವುದು' ಎಂಬ ಪದಗಳು ಮತ್ತೆ ಮತ್ತೆ ಕೇಳಿಬರುತ್ತಿದೆ ಎಂದರೆ ಅವರ ದಿನಚರಿಯೇ ಯೋಜಿತ ರೀತಿಯಲ್ಲಿ ಇಲ್ಲ ಎಂದರ್ಥ. ಅಥವಾ ದಿನದ ಬಹುಪಾಲು ಸಮಯವನ್ನು ಕಾಲಹರಣದಲ್ಲೇ ಕಳೆಯುತ್ತಾರೆ ಎಂಬುದಂತೂ ಸತ್ಯ.

ಹದಿಹರೆಯವು ಶಾಪವಲ್ಲ, ವರ ಎಂಬುದನ್ನು ಈ ಹಿಂದೆಯೇ ಹೇಳಿದ್ದೆ. ಬದುಕನ್ನು ಸವಿಯಲು, ಆನಂದಿಸಲು ಹಾಗೂ ಎಂಜಾಯ್‌ಮೆಂಟ್‌ಗೆ ಹೇಳಿಮಾಡಿಸಿದ ವಯಸ್ಸಿದು. ಹರೆಯ ಮುಗಿದ ಮೇಲೆ ಮದುವೆ, ಮಕ್ಕಳು, ಸಂಸಾರ ಜವಾಬ್ದಾರಿ ಎಂಬ ಬುಟ್ಟಿ ಹೊತ್ತು ಓಡಾಡುವುದು ಇದ್ದೇ ಇದೆ. ಆಗ ಈ ಬವಾಬ್ದಾರಿಯ ಹೊರೆ, ಒತ್ತಡ, ಹಣಕಾಸಿನ ಸಮಸ್ಯೆ, ಕುಟುಂಬ ನಿರ್ವಹಣೆ ಹೀಗೆ ಒಂದಲ್ಲಾ ಒಂದು ಸಮಸ್ಯೆಗಳಿಂದಾಗಿ 'ಬದುಕು ಸಾಕಾಗಿದೆ, ಬೇಜಾರು ಅನಿಸ್ತಿದೆ' ಎಂಬ ಡೈಲಾಗ್‌ಗಳು ಬಂದುಬಿಡಬಹುದು. ಆದರೆ ಹದಿಹರೆಯದಲ್ಲಿಯೇ ಇಂತಹ ಉದ್ದುದ್ದದ ವಾಕ್ಯಗಳು ತರುಣರ ನಾಲಿಗೆಯಲ್ಲಿ ನುಲಿಯುತ್ತದೆ ಎಂದರೆ, ವಯಸ್ಸು ಹಾಗೂ ಬದುಕನ್ನು ಸವಿಯುವ ಪ್ರಯತ್ನವನ್ನೇ ನೀವು ಮಾಡಿಲ್ಲ ಎಂದರ್ಥ.

ಹದಿಹರೆಯದಲ್ಲೇ ಬದುಕಿಗೆ ಬೋರಿಂಗ್ ಅನ್ನೋ ಪರಕೀಯ ನುಸುಳಿದ್ದಾನೆ ಅಂದರೆ, ಅವನ ಮೇಲೆ ದಂಗೆ ಎದ್ದು ಓಡಿಸಲೇ ಬೇಕು. ಅಷ್ಟಕ್ಕೂ ಬದುಕು ರುಚಿಸದಿರಲು, ನೀರಸ ಅನಿಸಲು ಮುಖ್ಯ ಕಾರಣವೊಂದಿದೆ. ಅದುವೇ ಎಲ್ಲಾ ಸಮಯದಲ್ಲಿ ಕಾಲಹರಣ ಮಾಡುವುದು. ನಾವು ಒಂದಲ್ಲ ಒಂದು ಕೆಲಸ ಕಾರ್ಯದಲ್ಲಿ ನಿರತರಾಗಿದ್ರೆ ಕಾಲಹರಣಕ್ಕೆ ಸಮಯವೇ ಇರುವುದಿಲ್ಲ. ಇನ್ನು ಬೋರಿಂಗ್ ಅನ್ನೋದು ಹೇಗೆ ನಮ್ಮೊಳಗೆ ನುಸುಳೋಕೆ ಸಾಧ್ಯ? ನಾವು ಓದು ಬರವಣಿಗೆಯ ಕಡೆ ತಲೆಯೂ ಹಾಕದೆ, ಯಾವುದೇ ಕೆಲಸ ಕಾರ್ಯವನ್ನೂ ಮಾಡದೆ ಮನೆಯಲ್ಲಿಯೇ ನೊಣ ಓಡಿಸುತ್ತಾ ಕುಳಿತರೆ; ಜೀವನದೊಳಗೆ ನವರಸಗಳ ಸವಿ ಅದೆಲ್ಲಿಂದ ಸಿಗಬೇಕು?

ನಿತ್ಯದ ದಿನಚರಿಯಲ್ಲಿ ಸದಾ ಚುರುಕಾಗಿರಲು, ಬೇಜಾರು ಎಂಬ ಪದದ ಅರ್ಥವೇ ತಿಳಿಯದಂತೆ ಬದುಕಲು ಕೈತುಂಬಾ ದುಡ್ಡು ಬೇಡವೇ ಬೇಡ. ನಮ್ಮ ನಿತ್ಯದ ಬದುಕನ್ನು ಅಚ್ಚುಕಟ್ಟಾಗಿ ಯೋಜಿಸಿದರೆ ಸಾಕು. ಬೋರಿಂಗ್‌ ಅನುಭವ ಆಗದಂತೆ ಸದಾ ಖುಷಿಯಿಂದರಲು ಒಂದಷ್ಟು ಸಲಹೆಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ.

ನಿಮ್ಮನ್ನು ನೀವು ಬ್ಯುಸಿ ಇಟ್ಟುಕೊಳ್ಳಿ

ಜೀವನ ಬರೀ ಸಪ್ಪೆ ಅನಿಸಲು ಇದು ಪ್ರಮುಖ ಕಾರಣ. ಏನೂ ಕೆಲಸವಿಲ್ಲದೆ ಖಾಲಿ ಕೂತರೆ ಎಂಥವರಿಗೂ ಬೇಜಾರು ಬಂದುಬಿಡುತ್ತದೆ. ಏನಾದರೂ ಕೆಲಸ ಕಾರ್ಯ, ಓದು-ಬರವಣಿಗೆಯಲ್ಲಿ ತೊಡಗಿಕೊಂಡರೆ ಸಮಯದ ಸದುಪಯೋಗವಾಗುತ್ತದೆ. ಹೆಚ್ಚು ಕಾಲ ಓದಿ ಬರೆಯುವ ಆಸಕ್ತಿ ಇಲ್ಲದಿದ್ದರೆ, ಇಷ್ಟವಾಗುವ ಬೇರೆ ಏನಾದರೂ ಕೆಲಸ ಮಾಡಬಹುದು. ಅಂತೂ ಒಂದು ಸೆಕೆಂಡ್ ಕೂಡಾ ಖಾಲಿ ಕೂರಬಾರದು. ಕೆಲಸವಿಲ್ಲದಿದ್ದರೆ ಮೆದುಳು ಅನಗತ್ಯ ಯೋಚನೆಗೆ ಕೂರುತ್ತದೆ. ಮೆದುಳಿಗೆ ಏನಾದ್ರೂ ಉಪಯುಕ್ತ ಕೆಲಸ ಕೊಡಿ.

ಮೊಬೈಲ್‌ನಿಂದ ದೂರವಿರಿ, ಸ್ಕ್ರೀನಿಂಗ್‌ ಸಮಯ ಕಡಿಮೆ ಮಾಡಿ

ಇದು ಬಹುಪಾಲು ಹದಿಹರೆಯದವರ ಗೋಳು. ದಿನದ ಬಹುಪಾಲು ಅಮೂಲ್ಯ ಸಮಯವನ್ನು ಮೊಬೈಲ್‌ನಲ್ಲೇ ಕಳೆಯುವರು ಹಲವರಿದ್ದಾರೆ. ಸ್ಕ್ರೀನ್‌ ಸ್ಕ್ರಾಲ್‌ ಮಾಡುತ್ತಾ ಮೈಮರೆಯುತ್ತಾರೆ. ಆಗ ಒಂದು ಗಂಟೆ ಒಂದು ನಿಮಿಷದಂತೆ ಕಣ್ಣು ಮಿಟುಕಿಸುವುದರೊಳಗೆ ಮುಗಿದುಬಿಡುತ್ತದೆ. ಆದೇ ಮೊಬೈಲ್‌ ಬ್ಯಾಟರಿ ಖಾಲಿಯಾದ್ರೆ ಸಾಕು, ಮತ್ತೆ ಬೋರಿಂಗ್‌ ಬದುಕು ರಪ್‌ ಅಂತ ಕಣ್ಣ ಮುಂದೆ ಬಂದು ಬಿಡುತ್ತದೆ. ಆ ಸಮಯ ಮಾತ್ರ ಒಂದೊಂದು ನಿಮಿಷವೂ ಕಷ್ಟ ಕಷ್ಟ. ಗಡಿಯಾರ ನಿಂತೇ ಬಿಟ್ಟಿತೇನೋ ಎಂಬಂತೆ ಸಮಯ ಸಾಗುವುದೇ ಇಲ್ಲ. ಹೀಗಾಗಿ ಮೊಬೈಲ್‌ ಹೊರತಾಗಿಯೂ ಒಂದು ಪ್ರಪಂಚವಿದೆ ಎಂಬುದನ್ನು ಅರಿತು ಬಾಳಬೇಕು. ಮೊಬೈಲ್ ಇಲ್ಲದೆಯೂ ಸಮಯ ಸದುಪಯೋಗಪಡಿಸುವ ದಾರಿ ಕಂಡುಕೊಳ್ಳಬೇಕು.

ಪುಸ್ತಕಗಳನ್ನು ಪ್ರೀತಿಸಿ

ಬೋರಿಂಗ್ ಅನಿಸಿದಾಗ ಪುಸ್ತಕಗಳನ್ನು ಓದುವ ಹವ್ಯಾಸ ಭಾರಿ ಒಳ್ಳೆಯದು. ಜ್ಞಾನ ವೃದ್ಧಿಯ ಜೊತೆಗೆ ಸಮಯ ಸದುಪಯೋಗಕ್ಕೆ ಬಲುದೊಡ್ಡ ಆಯ್ಕೆ ಇದು. ಪುಸ್ತಕ ಓದುತ್ತಾ ಕುಳಿತರೆ ಸಮಯ ಸಾಗುವುದೇ ಗೊತ್ತಾಗದು. ಈ ಹವ್ಯಾಸ ಒಮ್ಮೆ ರೂಢಿಸಿಕೊಂಡರೆ, ಬೇಜಾರು ಭಾವನೆ ನಿಮ್ಮ ಹತ್ತಿರವೇ ಸೋಕದು.

ಮನೆಯವರೊಂದಿಗೆ ಕಾಲ ಕಳೆಯಿರಿ

ಮನೆತುಂಬಾ ಸದಸ್ಯರಿದ್ದರೂ ಒಂಟಿ ಎಂಬ ಭಾವನೆಗೆ ಅಂಟಿಕೊಳ್ಳುವವರು ಬಹಳಷ್ಟು ಮಂದಿ. ಖಾಲಿ ಕೂತು ಕೂತು ಬೇಜಾರಾದ್ರೂ ಮನೆಯವರೊಂದಿಗೆ ಸಮಯ ಕಳೆಯುವ ಯೋಚನೆಯೇ ಹಲವು ಹದಿಹರೆಯರಿಗಿಲ್ಲ. ಮನೆಯವರ ಜೊತೆಗೆ ಕುಳಿತು ಕಷ್ಟಸುಖವೇ ಮಾತನಾಡಬೇಕೆಂದಿಲ್ಲ. ಹರಟೆ ಹೊಡೆಯುವುದು, ಆಟ ಆಡುವುದು, ಜೊತೆಗೆ ಕುಳಿತು ಊಟ ಮಾಡುವುದು, ಸಿನಿಮಾ ನೋಡುವುದು, ಹೊರಗಡೆ ಹೋಗುವುದು ಹೀಗೆ ಹತ್ತಾರು ಆಯ್ಕೆಗಳಿವೆ. ಹೀಗೆ ಮಾಡಿದ್ರೆ ಒಂದು ಕ್ಷಣವೂ ನೀವು ಖಾಲಿ ಕೂರಲು ಸಾಧ್ಯವಿಲ್ಲ. ಹೀಗಾಗಿ ಬೇಜಾರಾಗುವ ಅವಕಾಶವೇ ಬರಲಾರದು.

ಲೆಟ್ಸ್ ಎಕ್ಸ್‌ಪ್ಲೋರ್

ಮನೆಯವರು ಅಥವಾ ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡುವುದು, ಸಿನಿಮಾ ನೋಡಲು ಹೋಗುವುದು ಹೀಗೆ ಹೊಸ ಹೊಸ ಜಾಗಗಳನ್ನು ಅನ್ವೇಷಿಸಿ. ಫ್ರೀ ಇದ್ದಾಗೆಲ್ಲಾ ಏನಾದರೂ ಒಂದು ಅನ್ವೇಷಣೆಗೆ ಮುಂದಾಗಿ. ಸಾಹಸಕ್ಕೆ ಕೈಹಾಕಿ. ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿ. ಒಮ್ಮೆಲೇ ರೆಕ್ಕೆ ಕಾಟ್ಟಿದ ತಕ್ಷಣ ಹಾರಲು ಸಾಧ್ಯವಾಗದಿರಬಹುದು. ಆದ್ರೆ ಪ್ರಯತ್ನ ಮಾಡಿದ್ರೆ ಎಲ್ಲವೂ ಸಾಧ್ಯ. ಇದು ಪ್ರಯತ್ನ ಮತ್ತು ಪ್ರಯೋಗದಿಂದ ಸಾಧ್ಯ. ಆ ರೀತಿಯಾದರೂ ಕಾಲಹಾರಣಕ್ಕೆ ಮಂಗಳ ಹಾಡಿ.

ಕಂಫರ್ಟ್ ಝೋನ್‌ನಿಂದ ಹೊರಬನ್ನಿ

ಹದಿಹರೆಯರು ಸೇರಿದಂತೆ ಬಹುತೇಕರು ಒಂದು ಚೌಕಟ್ಟಿನೊಳಗೆ ಜೀವಿಸುತ್ತಾರೆ. ಅದು ವ್ಯವಸ್ಥಿತ ಎನ್ನುವುದಕ್ಕಿಂತ ಆರಾಮದಾಯಕ ಚೌಕಟ್ಟು. ಅಲ್ಲಿ ಎಲ್ಲವೂ ಇರುತ್ತದೆ. ಆದರೆ ಆ ಆರಾಮದಾಯಕ ಬೌಂಡರಿಯಿಂದ ಹೊರಬಂದರೆ ಅಲ್ಲಿ ಎಲ್ಲವೂ ನೀರಸ. ಹೀಗಾಗಿ ಎಲ್ಲಾ ಸೌಕರ್ಯಗಳಿದ್ದು ದಿನಕಳೆಯುವ ಅಭ್ಯಾಸ ರೂಢಿಸಿರುವವರು ಅಂತಹ ಸೌಕರ್ಯಗಳಿಲ್ಲದೆಯೂ ಖುಷಿಯಿಂದ ಬದುಕುವ ಹಂತಕ್ಕೆ ಬರಬೇಕು. ಇಂತಹ ಅಭ್ಯಾಸಗಳು ಬೋರಿಂಗ್ ಎಂದು ಉದ್ಘಾರವೆಳೆಯುವ ಸಮಯಕ್ಕೆ ಖಂಡಿತಾ ನೆರವಾಗುತ್ತದೆ.

ಮಾತು ಮರೆಯಬೇಡಿ

ಮಾತನಾಡಿದಷ್ಟೂ ದೇಹಕ್ಕೆ ಒಳ್ಳೆಯದು. ಬೇರೆ ಏನೂ ಕೆಲಸ ಇಲ್ಲ ಎಂದ ಮೇಲೆ ನಿಮ್ಮವರೊಂದಿಗೆ ಮಾತನಾಡಿ. ಮನೆಯವರು, ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ಜೊತೆಗೆ ಯಾರೂ ಇರದಿದ್ದರೆ ಫೋನ್‌ ಕಾಲ್‌, ಚಾಟಿಂಗ್‌ ಮೂಲಕ ಹರಟೆ ಹೊಡೆಯಿರಿ. ಆಪ್ತ ಸ್ನೇಹಿತರೊಂದಿಗೆ ಇಂತಿಷ್ಟು ದಿನಕ್ಕೊಮ್ಮೆಯಾದರೂ ಮಾತನಾಡಿ. ನಿಮ್ಮನ್ನು ಇಷ್ಟಪಡುವವರೊಂದಿಗೆ ಅಂತರ ಕಾಯ್ದುಕೊಳ್ಳಬೇಡಿ. ಕರೆ ಮಾಡಿದವರಿಗೆ ಬೇಸರವಾಗುವಂತೆ ಮಾತನಾಡದೆ ಕೂರಬೇಡಿ. ನಿಮಗಾಗಿ ಸಮಯ ಕೊಡಲು ಸಿದ್ಧರಿರುವವರಿಗೆ ಖಂಡಿತಾ ನಿಮ್ಮ ಸಮಯವನ್ನೂ ಮೀಸಲಿಡಿ.

ಈ ಎಲ್ಲಾ ಸಲಹೆಗಳು ತೀರಾ ಸರಳವಾದುದು. ಯಾವುದಕ್ಕೂ ಹೆಚ್ಚು ಸಮಯ ಬೇಕಿಲ್ಲ, ದುಡೂ ಬೇಕಿಲ್ಲ. ಖುಷಿಗಾಗಿ ಸಣ್ಣ ಬದಲಾವಣೆ ಸಾಕು. ವಾಸ್ತವದಲ್ಲಿದ್ದು ವಾಸ್ತವವನ್ನು ಆನಂದಿಸಿ ಅಷ್ಟೇ.

-ಜಯರಾಜ್

ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ

ಇ-ಮೇಲ್‌: ht.kannada@htdigital.in

ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner