ಹುಡುಗಾಟಿಕೆ: ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವುದು ಹೇಗೆ; ನಾಳೆಗಳ ಸವಾಲಿಗೆ ಇಂದೇ ಸಿದ್ಧರಾಗಿ
Adolescence: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ಸವಾಲುಗಳು ಬದುಕಿನಲ್ಲಿ ಆಗಾಗ ಬಂದು ಹೋಗುವ ಅಧ್ಯಾಯ. ಇಂದಿನಂತೆ ನಾಳೆ ಇರಬೇಕೆಂದಿಲ್ಲ, ಇರುವುದೂ ಇಲ್ಲ. ಪ್ರತಿಕ್ಷಣವನ್ನೂ ಅಂದಾಜಿಸಿ, ಯೋಜಿಸಿ, ಆ ಯೋಜನೆಯಂತೆ ನಾಳೆಗಳಿಗೊಂದು ರೂಪುರೇಷೆ ಹಾಕುವುದು ಕಷ್ಟಸಾಧ್ಯ. ಎಷ್ಟೋ ಬಾರಿ ಲೆಕ್ಕಾಚಾರಗಳು ಕೈಮೀರಿ ಹೋಗಿ ನಾವು ಅಂದುಕೊಂಡಿದ್ದಕ್ಕೆ ಮಿಗಿಲಾಗಿ ಬೇರೊಂದು ಘಟಿಸಬಹುದು. ಇವೆಲ್ಲಾ ಬದುಕಿನ ಭಾಗ. ಅನಿರೀಕ್ಷಿತ ವಿದ್ಯಮಾನಗಳಿಗೆ, ಹೊಸ ಹೊಸ ಸವಾಲುಗಳಿಗೆ ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಸಿದ್ಧರಿರುವುದು ಈಗಿನ ಅಗತ್ಯತೆ. ಸವಾಲು, ಸಮಸ್ಯೆ ಹಾಗೂ ಸಂಕಷ್ಟಗಳಿಗೆ ವಯಸ್ಸಿನ ಭೇದವಿಲ್ಲ. ಹೀಗಾಗಿ ಯಾರೇ ಆದರೂ ಸಂದರ್ಭದ ಕೈಗೊಂಬೆಯಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಒದ್ದಾಡಬೇಕಾಗಬಹುದು. ಅದಕ್ಕೆ ಕನಿಷ್ಠ ಮಾನಸಿಕ ಸಿದ್ಧತೆ ಇದ್ದರೆ, ಬಂದ ಸವಾಲುಗಳನ್ನು ದಿಟ್ಟವಾಗಿ ಎದುರಿಸಲಾಗದಿದ್ದರೂ ಹಾಗೋ ಹೀಗೋ ಧೈರ್ಯದಿಂದ ಮುನ್ನಡೆಯಬಹುದು.
ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಗಟ್ಟಿತನವೇ ಹೆಚ್ಚಿನ ಸಂದರ್ಭಗಳಲ್ಲಿ ಸಮಾಜವನ್ನು ಎದುರಿಸಲು ನಮಗೆ ನೆರವಾಗುತ್ತದೆ. ಎಲ್ಲವೂ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎನ್ನುವಷ್ಟರಲ್ಲಿ ಅಡ್ಡಿಯೊಂದು ಎದುರಾಗಬಹುದು. ಅದು ನಿರೀಕ್ಷೆಗಳನ್ನು ಮೀರಿ ಬರುವ ವಿಘ್ನ. ಆ ಬಗ್ಗೆ ನಮಗೆ ಕನಿಷ್ಠ ಸುಳಿವು ಕೂಡಾ ಇಲ್ಲದೇ ಇರಬಹುದು. ಹೀಗಾಗಿ ಅದನ್ನು ಎದುರಿಸಲು ತಯಾರಿ ನಡೆಸುವಷ್ಟು ಸಮಯವೇ ಇರುವುದಿಲ್ಲ. ಇಂಥ ಸನ್ನಿವೇಶಗಳು ಎದುರಾದಾಗ 'ನನ್ನಿಂದ ಅದನ್ನು ಎದುರಿಸಲು ಸಾಧ್ಯವಿಲ್ಲ' ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅವಕಾಶವೂ ಇರುವುದಿಲ್ಲ. ಆಗ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಆ ಸವಾಲನ್ನು ಸ್ವೀಕರಿಸಲೇ ಬೇಕು. ಅದು ಯಾವ ರೀತಿಯ ಸಂದರ್ಭವೇ ಇರಬಹುದು. ಆದರೆ, ಎದುರಿಸಲೇ ಬೇಕಾದ ಸನ್ನಿವೇಶವದು. ಇಂಥ ಅನಿರೀಕ್ಷಿತ ಸವಾಲುಗಳಿಗೆ ಮಾನಸಿಕವಾಗಿ ಸಿದ್ಧರಿರಬೇಕು.
ಇದನ್ನೂ ಓದಿ | Adolescence: ಹುಡುಗಾಟಿಕೆ; ಈ ವಯಸ್ಸಿನ ಆಸೆ ಹೀಗಿದ್ದರೆ, ವರ್ತನೆ ಹಾಗಿದ್ದರೆ ಚೆನ್ನ; ದೊಡ್ಡವರೇ ಇವಿಷ್ಟೂ ನಿಮಗೂ ಅರ್ಥವಾಗಬೇಕು
ಹುಡುಗಾಟಿಕೆ ಅಂಕಣಕ್ಕೂ, ಇಂದಿನ ವಿಷಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮದಿರಬಹುದು. ನಾನು ಮೇಲ್ಗಡೆ ಪ್ರಸ್ತಾಪಿಸಿರುವಂತೆ, ಸವಾಲು, ಸಂಕಟಗಳು ವಯಸ್ಸಿನ ಭೇದವಿಲ್ಲದೆ ಸುಳಿಯುತ್ತವೆ. ಹಾಗಂತ ಎದುರಿಸದೆ ಬೇರೆ ದಾರಿ ಇರುವುದಿಲ್ಲ. ಹದಿಹರೆಯದಲ್ಲಿ ಜವಾಬ್ದಾರಿ ಎಂಬ ಹೊರೆ ಇರುವುದಿಲ್ಲ. ಹಾಗಂತಾ ಕೆಲವೊಮ್ಮೆ ಪರಿಸ್ಥಿತಿ ಎಲ್ಲವನ್ನೂ ಮೀರಿ ಇಲ್ಲದ ಹೊರೆ ತಲೆ ಮೇಲೆ ಬರುವಂತೆ ಮಾಡಿಬಿಡುತ್ತದೆ. ಇಂಥ ಸಂದರ್ಭದಲ್ಲಿ ಎಲ್ಲವೂ ಗೌಣ. ಆದರೆ ಗಡಿಯಾರದ ಮುಳ್ಳುಗಳಂತೆ ನಮ್ಮ ಹೆಜ್ಜೆ ಸಾಗಲೇಬೇಕು.
ನಾಳೆಗಳು ನಮ್ಮ ಹತೋಟಿಯಲ್ಲಿಲ್ಲ
ಇಂದು ನಾವಂದುಕೊಂಡಂತೆ ಎಲ್ಲಾ ನಡೆದರೂ, ನಾಳೆ ಬೇರೆ ಏನಾದರೂ ಸಂಭವಿಸಬಹುದು. ಅದನ್ನು ಇಂದೇ ಪ್ರೆಡಿಕ್ಟ್ ಮಾಡುವುದು ಅಸಾಧ್ಯ. ನಾಳೆಗಳನ್ನು ನಿರ್ಧರಿಸುವವರು ನಾವಲ್ಲ. ಹೀಗಾಗಿ ಮಿತಿಮೀರಿದ ಫ್ಯೂಚರ್ ಪ್ಲಾನಿಂಗ್ ಮಾಡುವುದು ಬೇಡ. ಯೋಜಿಸಿ ಬದುಕಬೇಕು ನಿಜ. ಹೆಚ್ಚಿನ ಬಾರಿ ಯೋಜನೆಗಳು ವಿಫಲವಾಗುವುದೇ ಹೆಚ್ಚು. ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟ ನಾಳೆಗಳಿಗೆ ಸಿದ್ಧರಾಗುವುದೇ ಈಗಿನ ಅನಿವಾರ್ಯ.
ನೋವನ್ನು ಮರೆತು, ಖುಷಿಯಿಂದಿರಿ
ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ, ಆಗಬಾರದ್ದು ಆಗಿಬಿಡಬಹುದು. ಅದು ಮನಸಿಗೆ ವಿಪರೀತ ನೋವು ಕೊಡಬಹುದು. ಅಪಘಾತಗಳಿರಬಹುದು, ನಮ್ಮವರು ಅಥವಾ ಆತ್ಮೀಯರನ್ನು ಕಳೆದುಕೊಂಡ ನೋವಿರಬಹುದು, ಮನಸಿನಿಂದ ಬೇಗನೆ ಮಾಸುವುದು ಕಷ್ಟ. ಮರೆಯುವ ಪ್ರಯತ್ನ ಮಾಡಿದರೂ, ನೆನಪುಗಳು ಉಳಿಯುತ್ತವೆ. ಅಂಥ ನೋವನ್ನು ಮರೆಯುವ ಪ್ರಯತ್ನ ಮಾಡಿ. ಹಚ್ಚು ಹೆಚ್ಚು ಜನರೊಂದಿಗೆ, ನಿಮ್ಮ ಆತ್ಮೀಯರೊಂದಿಗೆ ಬೆರೆಯಿರಿ. ನೋವಿನ ಕ್ಷಣ ನೆನಪಾಗದಂತೆ ಬೇರೇನಾದರೂ ಯೋಚಿಸಿ. ಮನಸ್ಸನ್ನು ಬೇರೆ ಕೆಲಸಗಳತ್ತ ವರ್ಗಾಯಿಸಿ.
ಖುಷಿಯ ನಾಳೆಗಿಂತ, ಸವಾಲಿನ ನಾಳೆಗೆ ಸಿದ್ಧರಾಗಿ
ಈ ದಿನದ ಖುಷಿಯ ಕ್ಷಣಗಳನ್ನು ಖುಷಿಯಿಂದ ಸ್ವಾಗತಿಸಿ ಮತ್ತು ಅನುಭವಿಸಿ. ನಾಳೆ ಅದೇ ಸಂತೋಷ ಮುಂದುವರೆಯುತ್ತದೆ ಎನ್ನುವಂತಿಲ್ಲ. ಹಾಗಂತ ಪಾಸಿಟಿವ್ ಯೋಚನೆ ಕೈಬಿಡಬೇಡಿ. ಅದರ ಜೊತೆಗೆ ನಾಳೆಗಳು ಏನಾದರೂ ಆಗಬಹುದೆಂಬ ಎಚ್ಚರಿಕೆಯ ಸುಳಿವೂ ನಿಮಗಿರಲಿ. ಏನೇ ಸವಾಲು ಬಂದರೂ ಎದುರಿಸಲು ಸಿದ್ಧರಿರಿ.
ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಮತ್ತು ಧೈರ್ಯದಿಂದಿರಿ
ಮನುಷ್ಯ ಜೀವನದಲ್ಲಿ ಎಲ್ಲಾ ದಿನಗಳು ಒಂದೇ ರೀತಿ ಇರಬೇಕೆಂದೇನಿಲ್ಲ. ಹೊಸ ಹೊಸ ಸವಾಲುಗಳು, ಕಷ್ಟ ಕೋಟಲೆಗಳು ಇಲ್ಲದ ಜೀವಿಯೇ ಇಲ್ಲ. ಹೀಗಾಗಿ ಏನೇ ಕಷ್ಟ ಬಂದರೂ, ಸವಾಲುಗಳು ಎದುರಾದರೂ ಧೈರ್ಯದಿಂದ ಎದುರಿಸಿ. ನಿಮಗೆ ನೀವೇ ಧೈರ್ಯ ತಂದುಕೊಳ್ಳಿ. ನಿಮ್ಮವರಿಗೂ ಧೈರ್ಯ ತುಂಬಿ. ಸಿಹಿ ಕಹಿಗಳು ಬದುಕಿನ ಭಾಗ ಎಂಬುದು ಮನದಲ್ಲಿರಲಿ.
ಇದನ್ನೂ ಓದಿ | ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗುತ್ತಿದೆ ಕಡಲುಗಳ್ಳರ ಉಪಟಳ; ನೌಕಾಪಡೆಯ ಎದುರಿಗಿದೆ ಸವಾಲು, ಸಾಮರ್ಥ್ಯ ವೃದ್ಧಿ ಚಿಂತನೆಗಿದು ಸಕಾಲ -ಸಂಪಾದಕೀಯ
ಸದಾ ಗೆಲುವಾಗಿರಿ, ಮುಖದಲ್ಲಿ ನಗು ಇರಲಿ
ಸಂಕಷ್ಟಗಳು ಎದುರಾದಾಗ ಮುಖ ಕಳೆ ಕಳೆದುಕೊಳ್ಳುತ್ತದೆ, ನಗು ಮಾಯವಾಗುತ್ತದೆ. ಅದಕ್ಕೆ ಅವಕಾಶ ಕೊಡದಿರಿ. ನಿಮ್ಮ ನೋವು ಹತಾಷೆಗಳನ್ನು ಎಲ್ಲಾ ಸಮಯದಲ್ಲಿ ಎಲ್ಲರೊಂದಿಗೆ ತೋರಿಸಿಕೊಳ್ಳಬೇಡಿ. ನೋವಿನಲ್ಲೂ ಮುಖದಲ್ಲಿ ಮಂದಹಾಸ ಉಳಿಸಿಕೊಳ್ಳುವುದು ಕಷ್ಟ. ಹೀಗಾಗಿ ನಾಟಕೀಯ ಎಂದು ನಿಮಗೆ ಭಾಸವಾದರೂ ಸರಿ. ಮುಖದಲ್ಲಿ ನಗು ಇರಲಿ. ಎಲ್ಲರೊಂದಿಗೂ ನಗುತ್ತಲೇ ಮಾತನಾಡಿ. ನೀವು ಸೋತರೂ, ಸೋಲಿನ ಭಾವ ನಿಮ್ಮ ಮುಖದಲ್ಲಿ ಕಾಣಬಾರದು. ಏಕೆಂದರೆ ನೀವಾಗಿ ಸೋತೇ ಇಲ್ಲ. ಪರಿಸ್ಥಿತಿ ನಿಮ್ಮನ್ನು ಸೋಲಿಸಿರುತ್ತದೆ. ಹಾಗಂತ ಪರಿಸ್ಥಿತಿಯ ಮುಂದೆ ನೀವು ಶರಣಾಗಬೇಡಿ. ನಿಮ್ಮ ನಗು, ಉಲ್ಲಾಸ ನೋಡಿ ಪರಿಸ್ಥಿತಿಗೆ ಸೋಲಾಗಬೇಕು. ಹಾಗೆ ಬದುಕಿ ತೋರಿಸಿ. ಸಮಾಜದ ಮುಂದೆ ಸಪ್ಪೆ ಮೋರೆ ಹಾಕಿ ಓಡಾಡಬೇಡಿ. ಸದಾ ಗೆಲುವಾಗಿಯೇ ಇರಿ. ನಿಮ್ಮ ನಿಸ್ತೇಜ ಮೋರೆ ನಾಲ್ಕು ಮಂದಿಯನ್ನು ಕಾಡಬಾರದು. ನಿಮ್ಮ ನಗು ಕನಿಷ್ಠ ನಾಲ್ವರ ಖುಷಿಗೆ ಕಾರಣವಾದರೂ ನೀವು ಗೆದ್ದಂತೆಯೇ.
ನಿಮಗಿಂತ ಕಷ್ಟದಲ್ಲಿ ಇರುವವರನ್ನು ಒಮ್ಮೆ ನೆನಪಿಸಿಕೊಳ್ಳಿ
ಕೆಲವೊಮ್ಮೆ ಸಣ್ಣ ಸವಾಲು ಎದುರಾದರೂ, ಹೆಚ್ಚಿನವರು ಕೈಕಾಲು ಬಿಡುತ್ತಾರೆ. ಎಲ್ಲವೂ ಮುಗಿಯಿತು, ಮುಂದೆ ಬದುಕುವ ಒಂದೇ ಒಂದು ದಾರಿಯೂ ಇಲ್ಲ ಎಂದು ಕೈಚೆಲ್ಲುತ್ತಾರೆ. ಇದು ಸರಿಯಲ್ಲ. ನಮಗಿಂತ ಕಷ್ಟದಲ್ಲಿ ಇರುವವರು ಖಂಡಿತಾ ನಮ್ಮ ಅರಿವಿನ ಬಳಗದಲ್ಲೇ ಇರುತ್ತಾರೆ. ಅವರನ್ನೊಮ್ಮೆ ನೆನಪಿಸಿಕೊಳ್ಳಿ ಸಾಕು. ನಮ್ಮ ಕಷ್ಟ ಅವರ ಮುಂದೆ ಏನೂ ಅಲ್ಲ ಎಂದು ಖಂಡಿತಾ ಅನಿಸುತ್ತದೆ.
ನಿಮ್ಮವರೊಂದಿಗೆ ಬೆರೆಯಿರಿ, ಮನಸು ಹಗುರ ಆಗುವವರೆಗೂ ಮಾತನಾಡಿ
ಕೆಲವೊಮ್ಮೆ ಮನಸಿನ ನೋವು ಹಾಗೂ ಭಾರವನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡಾಗಗ ಮನಸು ಹಗುರವಾಗುತ್ತದೆ. ಹೀಗಾಗಿ ನೀವು ಇಷ್ಟಪಡುವ ಅಥವಾ ನಿಮ್ಮನ್ನು ಇಷ್ಟಪಡುವ ಆತ್ಮೀಯರೊಂದಿಗೆ ಮನಸು ಬಿಚ್ಚಿ ಮಾತನಾಡಿ. ಆ ಸಮಯದಲ್ಲಿ ಭಾವನೆಗಳನ್ನು ಅದುಮಿಟ್ಟುಕೊಳ್ಳುವ ಪ್ರಯತ್ನ ಬೇಡ. ನಿಮಗೆ ಏನೆಲ್ಲಾ ಹೇಳಬೇಕು ಅನಿಸುತ್ತದೆಯೋ, ಅದನ್ನೆಲ್ಲಾ ಹೇಳಿಬಿಡಿ. ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡು ಪ್ರತಿಕ್ರಿಯೆ ಕೊಡುವ ವ್ಯಕ್ತಿಗಳೊಂದಿಗೆ ಮಾತ್ರ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ. ಆಗ ಅವರಿಂದ ಸಮಾಧಾನದ, ಸಾಂತ್ವನದ ಮಾತುಗಳು ಬಂದೇ ಬರುತ್ತದೆ. ಅದು ಭೂಮಿ ಮೇಲೆ ನೋವಿನ ಸಮಯದಲ್ಲಿ ಸಿಗುವ ಸ್ವರ್ಗಸುಖ.
ಹೊಸತನದತ್ತ ತೆರೆದುಕೊಳ್ಳಿ
ಅನಾಹುತಗಳು ಆದ ಬಳಿಕ ಮನಸು ಏಕಾಗ್ರತೆ ಕಳೆದುಕೊಳ್ಳುತ್ತದೆ. ಯಾವುದೇ ಕೆಲಸ ಕಾರ್ಯಗಳಿಗೂ ಆಸಕ್ತಿ ಇರುವುದಿಲ್ಲ. ಇಂಥಾ ಸಂದರ್ಭದಲ್ಲಿ ಮನಸ್ಸನ್ನು ತಾಜಾತಾನದಿಂದ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಮನಸನ್ನು ಹೊಸತನದತ್ತ ಕೊಡೊಯ್ಯಿರಿ. ಹೊಸ ವಾತಾವರಣವನ್ನು ಆಸ್ವಾದಿಸಿ. ಜನರೊಂದಿಗೆ ಹೆಚ್ಚು ಬೆರೆಯಿರಿ. ಒಂಟಿಯಾಗಿರಬೇಡಿ. ನಿಮಗೆ ಹೆಚ್ಚು ಖುಷಿ ಕೊಡುವ ಕೆಲಸ ಮಾಡಿ. ಪ್ರವಾಸ, ಟ್ರೆಕಿಂಗ್ ಹೀಗೆ ಮೋಜಿನ ಸಮಯ ಕಳೆಯಿರಿ. ನೋವಾದಾಗ ಮನಸ್ಸು ಬಿಚ್ಚಿ ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಪುಸ್ತಕಗಳನ್ನು ಓದಿ, ಚಿತ್ರ ಬಿಡಿಸಿ, ಹೊಸ ಹೊಸ ಕಲೆಗಳನ್ನು ಕಲಿಯಿರಿ. ದೇಹ ಮತ್ತು ಮನಸ್ಸಿಗೆ ಏನಾದರೂ ಕೆಲಸ ಕೊಡುತ್ತಿರಿ. ಆಗ ನಿಧಾನವಾಗಿ ಮನಸು ಸಹಜ ಭಾವನೆಯತ್ತ ವಾಲುತ್ತದೆ.
ಇದನ್ನೂ ಓದಿ | ಕರ್ನಾಟಕ ರಾಜ್ಯ ಪಕ್ಷಿ ನೀಲಕಂಠನಿಗೆ ರಾಮಮಂದಿರ ಉದ್ಘಾಟನೆ ದಿನ ನಮನ, ಚಂಬಲ್ ಕಣಿವೆ ಕಾಡಲ್ಲಿ ಗೌರವ, ರಾಮಾಯಣಕ್ಕೂ ಉಂಟು ನಂಟು -Forest Tales
ಮಿಂಚಿ ಹೋದ ಕಾಲವನ್ನು ಎಂದಿಗೂ ಚಿಂತಿಸಿ ಫಲವಿಲ್ಲ. ಹೊಸ ನಾಳೆಗಳಿಗೆ ಬದುಕು ಹಸನಾಗಿರಬೇಕು. ನೋವನ್ನು ಮರೆತು ನಗುತ್ತಾ ದಿನ ದಿನವನ್ನು ಸವಿಯಬೇಕು.
-ಜಯರಾಜ್ ಅಮಿನ್
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್ ಮಾಡಿ.
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.