ಕನ್ನಡ ಸುದ್ದಿ  /  ಜೀವನಶೈಲಿ  /  ಆ ದೇಶದಲ್ಲಿ ಆರೋಪಿಯ ಚಿತ್ರ ತೋರಿಸಿ ಪೊಲೀಸರ ಮುಖ ಬ್ಲರ್ ಮಾಡ್ತಾರೆ, ಅದಕ್ಕೊಂದು ಕಾರಣವೂ ಇದೆ, ಆದರೆ ನಮ್ಮಲ್ಲಿ ಏನಾಗ್ತಿದೆ -ರಂಗ ನೋಟ

ಆ ದೇಶದಲ್ಲಿ ಆರೋಪಿಯ ಚಿತ್ರ ತೋರಿಸಿ ಪೊಲೀಸರ ಮುಖ ಬ್ಲರ್ ಮಾಡ್ತಾರೆ, ಅದಕ್ಕೊಂದು ಕಾರಣವೂ ಇದೆ, ಆದರೆ ನಮ್ಮಲ್ಲಿ ಏನಾಗ್ತಿದೆ -ರಂಗ ನೋಟ

Education System: ಸ್ಪೇನ್‌ ಸೇರಿದಂತೆ ಹಲವು ದೇಶಗಳಲ್ಲಿ ಮಗುವಿನ ಶಾಲೆಯ ಸಮೀಪವೇ ಪೋಷಕರ ಮನೆ ಇರಬೇಕೆಂಬ ಕಾನೂನು ಇದೆ. ಅಲ್ಲಿನ ಮಾಧ್ಯಮಗಳು ಆರೋಪಿಗಳ ಮುಖ ತೋರಿಸಿದರೆ, ಪೊಲೀಸರ ಮುಖ ಬ್ಲರ್ ಮಾಡುತ್ತವೆ. ಈ ಎರಡೂ ವಿದ್ಯಮಾನಗಳಿಗೆ ಹಲವು ಕಾರಣಗಳಿವೆ. -ರಂಗಸ್ವಾಮಿ ಮೂಕನಹಳ್ಳಿ ಬರಹ

ರಂಗ ನೋಟ ಅಂಕಣ
ರಂಗ ನೋಟ ಅಂಕಣ (Rangaswamy Mookanahalli)

ಬೆಂಗಳೂರಿನಲ್ಲಿ ಮಕ್ಕಳು ಶಾಲೆಗೆ ಹೋಗಲು ಬೆಳಿಗ್ಗೆ ಏಳಕ್ಕೆಲ್ಲ ಸ್ಕೂಲ್ ಬಸ್ ಕಾಯುತ್ತಾ ನಿಂತಿರುವುದು ಸಾಮಾನ್ಯ ದೃಶ್ಯ. ಪಕ್ಕದಲ್ಲಿ ಇರುವ ಶಾಲೆ ಸರಿಯಿಲ್ಲ ಎನ್ನುವ ಕಾರಣ ಕೊಡುವ ಪೋಷಕರು ಮಕ್ಕಳನ್ನು 10 ರಿಂದ 12 ಕಿಮೀ ದೂರದಲ್ಲಿರುವ ಶಾಲೆಗೆ ಕಳಿಸುತ್ತಾರೆ. ವಿಜಯನಗರದಲ್ಲಿ ಇರುವ ಮಗು ಅಲ್ಲೇ ಇರುವ ಶಾಲೆಗೆ ಹೋಗದೆ (ಕಳಿಸದೆ ) ನಾಗರಬಾವಿ ಶಾಲೆಗೆ ಬರುತ್ತೆ. ನಾಗರಬಾವಿಯಲ್ಲಿರುವ ಮಗು ವಿಜಯನಗರದ ಶಾಲೆಗೆ! ಇದೊಂದು ಉದಾಹರಣೆ ಮಾತ್ರ, ಭಾರತದ ಬಹುತೇಕ ನಗರಗಳಲ್ಲಿ ಇದು ಸಾಮಾನ್ಯ. ಪೋಷಕರು ಯೋಚನಾ ಲಹರಿ ದೇಶದ ಎಲ್ಲಾ ಭಾಗದಲ್ಲೂ ಸೇಮ್.

ಟ್ರೆಂಡಿಂಗ್​ ಸುದ್ದಿ

ಸ್ಪೇನ್ ಸೇರಿದಂತೆ ಯೂರೋಪಿನ ಬಹುತೇಕ ದೇಶಗಳಲ್ಲಿ ಬೆಳಗಿನ ತಿಂಡಿ ಮಿಸ್ ಮಾಡಬೇಡಿ ಎಂದು ಕೋಟ್ಯಂತರ ಯುರೋ ಖರ್ಚು ಮಾಡಿ ಜಾಹಿರಾತು ನೀಡುತ್ತಿವೆ. ಅಲ್ಲಿನ ಮಕ್ಕಳು ಹೆಚ್ಚೆಂದರೆ ವಾಸಿಸುವ ಮನೆಯಿಂದ 3 ಕಿಲೋಮೀಟರ್ ಅಂತರದಲ್ಲಿ ಇರುವ ಶಾಲೆ ಸೇರಬಹುದು. ದೂರದ ಶಾಲೆ ಸೇರಲು ಬಯಸಿದರೆ ಮನೆ ಅಲ್ಲೇ ಮಾಡಬೇಕು. ಇದು ಅಲ್ಲಿ ಸರಕಾರ ಮಾಡಿರುವ ನಿಯಮ. ಮಕ್ಕಳು ಶಾಲೆಯಿಂದ ಮತ್ತು ಮನೆಯಿಂದ ಬಹುದೂರ ಇರುವುದು ಒಳ್ಳೆಯದಲ್ಲ ಎನ್ನುವುದು ಯೂರೋಪಿನ ಸರ್ಕಾರಗಳ ಯೋಚನೆ. ಇದು ಸರ್ಕಾರಗಳು ಒಮ್ಮುಖವಾಗಿ ತೆಗೆದುಕೊಂಡ ನಿರ್ಧಾರ ಎಂದುಕೊಂಡರೆ ಅದು ತಪ್ಪು. ಹತ್ತಾರು ಕಮಿಟಿಗಳು, ಮನಃಶಾಸ್ತ್ರಜ್ಞರು ಕುಳಿತು ಸಾಧಕ ಭಾದಕಗಳನ್ನು ಚರ್ಚಿಸಿ ಸರ್ಕಾರಕ್ಕೆ ನೀಡಿದ ಸಲಹೆ ಮೇರೆಗೆ ತೆಗದುಕೊಂಡ ತೀರ್ಮಾನ. ಮೊದಲೇ ಹೇಳಿದಂತೆ ಇದು ಕೇವಲ ಸ್ಪೇನ್ ಒಂದೇ ಅಂತಲ್ಲ , ಬಹುತೇಕ ಯೂರೋಪಿಯನ್ ದೇಶಗಳಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ.

ಸ್ಪೇನ್‌ ಮಕ್ಕಳು ಇಂಗ್ಲಿಷ್ ಕಲಿಯುವುದು ಹೀಗೆ

ಸ್ಪೇನ್‌ನ ಬಾರ್ಸಿಲೋನಾದಿಂದ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ಗೆ ಸರಿಸುಮಾರು 1 ಘಂಟೆ 40 ನಿಮಿಷದ ವಿಮಾನ ಪ್ರಯಾಣ. ಇಂಗ್ಲೆಂಡ್ ದೇಶಕ್ಕೆ, ಲಂಡನ್ ನಗರಕ್ಕೆ ಇಷ್ಟು ಹತ್ತಿರವಿದ್ದೂ ಬಾರ್ಸಿಲೋನಾದಲ್ಲಿ ಇಂಗ್ಲಿಷ್‌ಗೆ ಬೆಲೆ ಇಲ್ಲ! ಇಲ್ಲಿನ ಬಹುಪಾಲು ಮಕ್ಕಳು ಅಂದರೆ ತೊಂಬತ್ತು ಪ್ರತಿಶತಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ. ಸರ್ಕಾರಿ ಶಾಲೆಯಲ್ಲಿ ಸ್ಪ್ಯಾನಿಷ್ ಅಥವಾ ಕತಲಾನ್ ಭಾಷೆಯಲ್ಲಿ ಬೋಧಿಸಲಾಗುತ್ತದೆ. ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಹೀಗಾಗಿ ಇಲ್ಲಿನ ಜನತೆಗೆ ಇಂಗ್ಲಿಷ್ ಭಾಷೆಯ ಜ್ಞಾನ ಅಷ್ಟಕಷ್ಟೇ. ಕೆಲವೇ ಕೆಲವು ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತವೆ. ಖಾಸಗಿ ಶಾಲೆಯಲ್ಲಿ ಶುಲ್ಕ ಅತಿ ಹೆಚ್ಚು. ಸಾಮಾನ್ಯ ಜನರು ಇದನ್ನ ಭರಿಸಲು ಸಾಧ್ಯವಿಲ್ಲ. ಇಂಗ್ಲಿಷ್ ಭಾಷೆಯ ಮಹತ್ವ ಇತ್ತೀಚಿಗೆ ಸ್ಪ್ಯಾನಿಷ್ ಜನಕ್ಕೂ ಗೊತ್ತಾಗುತ್ತಿದೆ. ನಾನು ದೇಶ ಬಿಟ್ಟು ಹೋಗುವುದಿಲ್ಲ ಎನ್ನುವುದಾದರೆ ಸ್ಪ್ಯಾನಿಷ್ ಸಾಕು, ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹೋಗಿ ಬದುಕುತ್ತೇನೆ ಎನ್ನುವುದಾದರೆ ಇಂಗ್ಲಿಷ್ ಬೇಕು ಎನ್ನುವ ಪರಿಜ್ಞಾನ ಅವರಿಗೂ ಬಂದಿದೆ.

ಹೀಗಾಗಿ ಇತ್ತೀಚಿಗೆ ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲಿ ಎನ್ನುವ ಆಸೆ ಹೊಸ ತಂದೆ ತಾಯಿಯರದು. ಆದರೆ ಅದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಖರ್ಚಿಲ್ಲದೆ ಇದನ್ನು ಸಾಧ್ಯವಾಗಿಸುವ ಬಗೆಯನ್ನ ಒಂದಷ್ಟು ಕಮ್ಯುನಿಟಿ ಗ್ರೂಪ್ ಗಳು ಕಂಡು ಕೊಂಡಿವೆ. ಲಂಡನ್ ನಲ್ಲಿ ಯಾರೊ ತಂದೆ ತಾಯಿಯರು ತಮ್ಮ ಮಕ್ಕಳು ಸ್ಪ್ಯಾನಿಷ್ ಕಲಿಯಲಿ ಅನ್ನುವ ಆಸೆ ಹೊಂದಿರುತ್ತಾರೆ. ಸರಿ ಲಂಡನ್‌ನ ಮಕ್ಕಳು ಬಾರ್ಸಿಲೋನಾಗೆ, ಇಲ್ಲಿನ ಮಕ್ಕಳು ಅಲ್ಲಿಗೆ... ಹೀಗೆ ಬೇಸಿಗೆ ರಜೆಯಲ್ಲಿ ಪೂರ್ಣ ಎರಡು ತಿಂಗಳು ಸ್ಥಾನ ಬದಲಾಯಿಸಿಕೊಳ್ಳುತ್ತಾರೆ. ಅಲ್ಲಿನ ರೀತಿನೀತಿಗೆ ಹೊಂದಿಕೊಂಡು, ಆ ಮನೆಯ ಕಟ್ಟಳೆಗಳನ್ನು ಒಪ್ಪಿಕೊಂಡು ಮಕ್ಕಳು ಇರಬೇಕಾಗುತ್ತದೆ.

ಇದರಿಂದ ಸ್ಪ್ಯಾನಿಷ್ ಬಾರದ ಮಕ್ಕಳು ಸ್ಥಳೀಯ ಸ್ಪಾನಿಷರಿಂದ ಸ್ಪ್ಯಾನಿಷ್ ಕಲಿಯುತ್ತಾರೆ. ಇಂಗ್ಲಿಷ್ ಬಾರದ ಮಕ್ಕಳು ಸ್ಥಳೀಯ ಬ್ರಿಟಿಷರಿಂದ ಇಂಗ್ಲಿಷ್ ಕಲಿಯುತ್ತವೆ. ಎರಡೂ ಕಡೆಯ ಪೋಷಕರಿಗೆ ಹೊಸದಾಗಿ ಹಣ ವೆಚ್ಚವಾಗಿದ್ದು ಕೇವಲ ಏರ್ ಟಿಕೆಟ್ ಹಣ ಮಾತ್ರ! ಗಮನಿಸಿ ಈ ರೀತಿಯ ಎಕ್ಸ್‌ಚೇಂಜ್ ಪ್ರೋಗ್ರಾಮ್‌ನಲ್ಲಿ ಭಾಗವಹಿಸುವರು ನೆಂಟರಲ್ಲ. ಹೋಗಲಿ ತೀರಾ ಪರಿಚಯದವರೂ ಅಲ್ಲ. ಆದರೆ ಈ ರೀತಿಯ ಒಂದು ಹೊಸ ಸಂಬಂಧ ಬೆಳೆಯುತ್ತೆ. ಮಗು ಹೆಣ್ಣು ಅಥವಾ ಗಂಡು ಎನ್ನುವ ಭೇದಭಾವ ಕೂಡ ಇಲ್ಲ. ಇಷ್ಟಲ್ಲ ಆಗುವುದು ನಂಬಿಕೆಯಿಂದ, ಜಗತ್ತು ನಡೆಯುತ್ತಿರುವುದು ನಂಬಿಕೆಯಿಂದ, ನಂಬಿಕೆಗೆ ತತ್ವಾರ ಬಂದರೆ? ಯಾವುದೇ ದೇಶವನ್ನಾಗಲಿ ಅಥವಾ ಆಯಾ ದೇಶದ ರೀತಿ ನೀತಿಗಳನ್ನು ತುಲನೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ನಂಬಿಕೆ.

ಅತ್ಯಾಚಾರದ ಆರೋಪಿಗಳನ್ನು ನಿರ್ಭಿಡೆಯಿಂದ ತೋರಿಸುತ್ತಾರೆ

ಇನ್ನೊಂದು ಅಚ್ಚರಿ ತರಿಸುವ ಮತ್ತು ನಾವು ಬದಲಾಗಬೇಕು ಎನ್ನಿಸುವ ವಿಷಯವನ್ನು ಕೂಡ ಇಲ್ಲಿ ಹಂಚಿಕೊಳ್ಳುವೆ. ಸ್ಪೇನ್‌ನಲ್ಲಿ ಅತ್ಯಾಚಾರ ಪ್ರಕರಣಗಳು ಇಲ್ಲವೆಂದಲ್ಲ. ಅಲ್ಲಿಯೂ ಇಂತಹ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತವೆ. ಆದರೆ ಅಲ್ಲಿ ಹೆಣ್ಣನ್ನು ಮಾತ್ರ ಪ್ರಶ್ನಿಸುವುದಿಲ್ಲ. ಅದ್ಯಾಕೆ ಆ ವೇಳೆಯಲ್ಲಿ ಹೋಗಿದ್ದೆ? ಅಂತಹ ಡ್ರೆಸ್ ಯಾಕೆ ಹಾಕಿದ್ದೆ? ಇತ್ಯಾದಿ ಪ್ರಶ್ನೆಗಳನ್ನು ಸಮಾಜ ಕೇಳುವುದಿಲ್ಲ. ಅದಕ್ಕೆಂದು ನ್ಯಾಯಾಲಯವಿದೆ. ಜನ ತೀರ್ಪು ಕೊಡುವುದಿಲ್ಲ. ಹೀಗೆ ಅತ್ಯಾಚಾರ ಇರಬಹುದು ಅಥವಾ ಟೆರರಿಸಂ ಅಥವಾ ಇನ್ನ್ಯಾವುದೇ ಆರೋಪವನ್ನ ಹೊತ್ತ ವ್ಯಕ್ತಿಯ ಮುಖವನ್ನು ರಾಜಾರೋಷವಾಗಿ ಮಾಧ್ಯಮಗಳು ಬಿತ್ತರಿಸುತ್ತವೆ. ಅಚ್ಚರಿ ಎನ್ನಿಸುವಂತೆ ಆರೋಪಿಯ ಪಕ್ಕದಲ್ಲಿ ನಿಂತ ಪೋಲೀಸರ ಮುಖವನ್ನ ಬ್ಲರ್ ಮಾಡಿ ತೋರಿಸುತ್ತವೆ. ಫೋಟೊ ಇರಬಹದು ಅಥವಾ ವಿಡಿಯೋ ಇದು ಇಲ್ಲಿನ ಮಾಧ್ಯಮಗಳು ನಡೆಸಿಕೊಂಡು ಬಂದಿರುವ ಪರಿಯಿದು. ಇವರ ಲೆಕ್ಕಾಚಾರ ಬಹಳ ಸರಳ, ಆರೋಪಿಯ ಮುಖ ಜನರಿಗೆ ತಿಳಿದಿರಬೇಕು. ಹೀಗಾಗಿ ಆತ ಮತ್ತೊಮ್ಮೆ ಅಂತಹ ಅಪರಾಧ ಮಾಡಲು ಸಾಧ್ಯವಿಲ್ಲ ಎನ್ನುವುದು, ಇನ್ನು ಪೋಲೀಸರ ಮುಖವಮ್ಮಿ ಬ್ಲರ್ ಮಾಡುವುದು ಮುಂದಿನ ದಿನದಲ್ಲಿ ಆರೋಪಿಯ ಮನೆಯವರು ಅಥವಾ ಬೇರೆ ಯಾರಾದರೂ ಅವರ ಮೇಲೆ ದ್ವೇಷ ಸಾಧನೆ ಮಾಡದಿರಲಿ ಎನ್ನುವ ಉದ್ದೇಶ.

ನಮ್ಮಲ್ಲಿ ಇದಕ್ಕೆ ತದ್ವಿರುದ್ದ! ಆರೋಪಿಗಳ ಹೆಸರು ಕೂಡ ಹೇಳಲು ನಮ್ಮ ವ್ಯವಸ್ಥೆ ತಿಣುಕುತ್ತದೆ. ಅಲ್ಲಿ ಕೂಡ ಜಾತಿ, ಧರ್ಮ ಇತ್ಯಾದಿಗಳ ಲೆಕ್ಕಾಚಾರ ಶುರುವಾಗುತ್ತದೆ. ಆರೋಪಿಗೆ ಯಾವುದೇ ಧರ್ಮ ಅಥವಾ ಜಾತಿಯಿಲ್ಲ, ಆತ ಕೇವಲ ದುಷ್ಟ ಎಂದು ಮತ್ತೆ ಪ್ರಲಾಪ ಕೂಡ ಶುರುವಿಟ್ಟುಕೊಳ್ಳುತ್ತದೆ. ಎಲ್ಲಿಯವರೆಗೆ ನಾವು ಢಾಂಬಿಕತೆಯನ್ನು ಬಿಡುವುದಿಲ್ಲವೋ ಅಲ್ಲಿಯವರೆಗೆ ನಾವು ಸಮಾಜವಾಗಿ ಉದ್ದಾರವಾಗುವುದು ಸಾಧ್ಯವಿಲ್ಲದ ಮಾತು. ಹೀಗೆ ಆರೋಪಿಯ ಹೆಸರನ್ನು ಕೂಡ ಹೇಳದ ವ್ಯವಸ್ಥೆ, ಕೇಳದ ಜನ ಮಾತ್ರ ಹೆಣ್ಣು ಮಗಳ ಕುಲ, ಗೋತ್ರ, ಜಾತಕ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಅದು ಅವರ ಹಕ್ಕು ಎನ್ನುವಂತೆ ವರ್ತಿಸುತ್ತಾರೆ. ಎಲ್ಲ ಪ್ರಶ್ನೆಗಳೂ ನೋವು ತಿಂದ ಆ ಹೆಣ್ಣು ಮಗಳಿಗೆ ಮಾತ್ರ. ಇದು ನಮ್ಮ ಸಮಾಜ.

ಆರೋಪಿಯ ಹಿನ್ನೆಲೆ ಗಮನಿಸಿ ರಕ್ಷಣೆಗೆ ಮುಂದಾದರೆ ಸಮಾಜ ಹದಗೆಡುತ್ತೆ

ಆರೋಪಿಯ ಐಡೆಂಟಿಟಿ ಮುಚ್ಚಿಡುವುದು, ಜನ ಸಮಾಜಕ್ಕೆ ಹೆದರಿ ಕೇಸು ದಾಖಲಿಸದೆ ಇರುವುದು ಇನ್ನಷ್ಟು ಅಪರಾಧಕ್ಕೆ ಕಾರಣವಾಗುತ್ತದೆ. ಸಮಾಜವನ್ನು ದೊಷಿಸುವ ಮುನ್ನ ಒಂದಷ್ಟು ಯೋಚಿಸಿ ನೋಡಿ . ಇದಾಗಿದ್ದು ನಮ್ಮಿಂದ! ಹೌದಲ್ಲವೇ? ನಾವು ಶೀಲವೆಂದರೆ ಅದು ಕೇವಲ ಹೆಣ್ಣಿಗೆ ಎನ್ನುವ ಭಾವನೆ ಬಿತ್ತಿರುವುದು ಇದಕ್ಕೆ ಕಾರಣ. ಯಾರನ್ನಾದರೂ ನಿಂದಿಸುವ ಮುನ್ನ ಯೋಚಿಸಿ. ಕೇವಲ ನಮ್ಮ ಪರಿಧಿಯಲ್ಲಿ ಬರುವರು ಮಾತ್ರ ನಮ್ಮವರಲ್ಲ. ಬೇರೆಯವರು ಕೂಡ ನಮ್ಮವರೇ ಆಗಿರುತ್ತಾರೆ ಅಲ್ಲವೇ ? ನಮ್ಮ ಪರಿಧಿಯಲ್ಲಿ ಇರುವಂತೆ ಆಕೆ ಯಾರಿಗೋ ತಂಗಿ, ಅಕ್ಕ, ಅಮ್ಮ, ಮಗಳು, ಗೆಳತಿ, ಹೆಂಡತಿ ಆಗಿರುತ್ತಾಳೆ. ಇಷ್ಟು ಸಾಮಾನ್ಯ ಜ್ಞಾನ ನಮಗಿರಬೇಕು ಅಷ್ಟೇ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)